ಮಾಧ್ಯಮಗಳು ಕಟ್ಟಿದ ಹಣೆಪಟ್ಟಿಯಿಂದಾಗಿ, ಭಾರತದಲ್ಲಿ ಯುಎಪಿಎ ಅಡಿ ಸುಮಾರು 8,000 ಮಂದಿ ಆರೋಪ ಎದುರಿಸುತ್ತಿದ್ದಾರೆ. ನ್ಯಾಯಾಲಯವು ತೀರ್ಪು ನೀಡುವ ಮೊದಲೇ ಮಾಧ್ಯಮಗಳು ಅವರನ್ನು ಭಯೋತ್ಪಾದಕರು ಎಂದು ಬ್ರ್ಯಾಂಡ್ ಮಾಡುವುದು ಒಬ್ಬ ವ್ಯಕ್ತಿಯ ಜೀವನವನ್ನು ಶಾಶ್ವತವಾಗಿ ನಾಶ ಮಾಡಿಬಿಡುತ್ತದೆ.
“ಜಮ್‌ಶೀದ್ ಜಹೂರ್ ಪಾಲ್ ತನ್ನ ವಿರುದ್ಧದ ಆರೋಪಗಳಿಂದ ಹೊರಬರುತ್ತೇನೆಂಬ ಭರವಸೆಯನ್ನೇ ಕಳೆದುಕೊಂಡಿದ್ದ” ಎಂದು ಆತನ ಪರ ವಕೀಲರು ಹೇಳಿದ್ದಾರೆ. ಪಾಲ್ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಅಧಿಕಾರಿಯ ಮಗ. ಆತನನ್ನು 1959ರ ಶಸ್ತ್ರಾಸ್ತ್ರ ಕಾಯ್ದೆ ಮತ್ತು 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ (UAPA) 2018ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ಬರೋಬ್ಬರಿ 8 ವರ್ಷಗಳ ಜೈಲು ಶಿಕ್ಷೆ ಬಳಿಕ, ಪಾಲ್ ಮತ್ತು ಆತನ ಸಹ-ಆರೋಪಿ ಪರ್ವೈಜ್ ರಶೀದ್‌ನನ್ನು ನಿರ್ದೋಷಿ ಎಂದು ಮಾರ್ಚ್ 19ರಂದು ದೆಹಲಿ ನ್ಯಾಯಾಲಯ ಘೋಷಿಸಿದೆ. ಬಿಡುಗಡೆ ಮಾಡಿದೆ.
ಪ್ರಸ್ತುತ, 26 ವರ್ಷದ ಪಾಲ್, ಮಾಡದ ತಪ್ಪಿಗೆ ತನ್ನ ಯುವ ವಯಸ್ಸಿನ 8 ವರ್ಷಗಳನ್ನು ಜೈಲಿನಲ್ಲಿ ಕಳೆದುಕೊಂಡಿದ್ದಾರೆ. ಅವರು ಜೈಲಿನಲ್ಲಿದ್ದಾಗ, ತನ್ನ ವಕೀಲರಾದ ಅಹ್ಮದ್ ಇಬ್ರಾಹಿಂ ಮತ್ತು ತಮನ್ನಾ ಪಂಕಜ್ ಅವರ ಬಳಿ, “ನನ್ನ ಕುಟುಂಬದ ಪ್ರತಿಯೊಬ್ಬರೂ ಸರ್ಕಾರಿ ಸೇವೆಯಲ್ಲಿದ್ದರು; ಹೀಗಿರುವಾಗ ಇಂತಹ (ಭಯೋತ್ಪಾದಕ) ಕೆಲಸ ಮಾಡುವ ಬಗ್ಗೆ ನಾನು ಕನಸಿನಲ್ಲೂ ಯೋಚಿಸಲು ಸಾಧ್ಯವಿಲ್ಲ” ಎಂದು ಆಗಾಗ್ಗೆ ಹೇಳಿಕೊಳ್ಳುತ್ತಿದ್ದರು.
ಪಾಲ್ ಕುರಿತು ಮಾತನಾಡಿರುವ ವಕೀಲ ಅಹ್ಮದ್, “2018ರಲ್ಲಿ, ಈ ಇಬ್ಬರು ಹುಡುಗರನ್ನು (ಆಗ ಅವರಿಗೆ 19 ಮತ್ತು 24 ವರ್ಷ ವಯಸ್ಸು) ವಶಕ್ಕೆ ಪಡೆದಾಗ, ಸುದ್ದಿ ಸಂಸ್ಥೆಗಳು ‘ಕೆಂಪು ಕೋಟೆಯ ಬಳಿ ಇಬ್ಬರು ಅತ್ಯಂತ ತೀವ್ರಗಾಮಿ ಐಸಿಸ್ (ISIS) ಭಯೋತ್ಪಾದಕರ ಬಂಧನ’ ಎಂಬಂತಹ ಕಥೆಗಳನ್ನು ಕಟ್ಟಿ ನಿರಂತರವಾಗಿ ಪ್ರಸಾರ ಮಾಡಿದವು. ಆ ವರದಿಗಳಿಂದ ಅವರೆಷ್ಟು ಹಿಂಸೆಗೊಳಗಾದರು ಎಂಬುದು ಅವರಿಗಷ್ಟೇ ಗೊತ್ತಿರುವ ಸತ್ಯ” ಎಂದಿದ್ದಾರೆ.
ಅಹ್ಮದ್ ಹೇಳಿಕೆ ಅಕ್ಷರಶಃ ಸತ್ಯ. ಯಾಕೆಂದರೆ, ಪ್ರಸ್ತುತ ಸಂದರ್ಭದಲ್ಲಿ, ಅಂತಹ ಸುದ್ದಿಗಳು, ಕಟ್ಟುಕತೆಗಳು ಕಳೆದುಹೋಗುವುದಿಲ್ಲ. ಅಂತರ್ಜಾಲದಲ್ಲಿ ಲಭ್ಯವಾಗುತ್ತವೆ. ಸಾಮಾಜಿಕ ಮಾಧ್ಯಮದಲ್ಲಿನ ಹುಡುಕಾಟದಲ್ಲಿ, 2018ರಲ್ಲಿ ಈ ಇಬ್ಬರು ಯುವಕರ ವಿರುದ್ಧದ ಹಲವಾರು ಸುದ್ದಿ ವರದಿಗಳು ದೊರೆತಿವೆ. ಆ ವರದಿಗಳು ಪಾಲ್ ಮತ್ತು ರಶೀದ್ ಮೇಲೆ ಆಧಾರರಹಿತ ಆರೋಪಗಳನ್ನು ಅಪರಾಧಗಳಾಗಿ ಹಣೆಪಟ್ಟಿ ಕಟ್ಟಿದ್ದವು ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
‘ಐಸಿಸ್ ವ್ಯಕ್ತಿಗಳು’, ‘ಭಯೋತ್ಪಾದಕರು’ ಮತ್ತು ಇನ್ನಷ್ಟು
2018ರ ಸೆಪ್ಟೆಂಬರ್ 8ರಂದು ‘ಇಂಡಿಯಾ ಟುಡೇ’ ಸುದ್ದಿವಾಹಿನಿಯ ಶೀರ್ಷಿಕೆಯು ‘ದೆಹಲಿಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಇಬ್ಬರು ಐಸಿಸ್ ವ್ಯಕ್ತಿಗಳ ಬಂಧನ’ ಎಂದು ಬರೆದಿತ್ತು. ಅದರಲ್ಲಿ ‘ಆರೋಪಿತ’, ‘ಶಂಕಿತ’ ಅಥವಾ ‘ದೆಹಲಿ ಪೊಲೀಸರ ಪ್ರಕಾರ’ ಎಂಬ ಯಾವುದೇ ಕನಿಷ್ಠ ಉಲ್ಲೇಖವೂ ಇರಲಿಲ್ಲ.
ಅಪರಾಧ ಸಾಬೀತಾಗುವವರೆಗೆ ಒಬ್ಬ ವ್ಯಕ್ತಿ ನಿರಪರಾಧಿ ಮತ್ತು ಆರೋಪಿಯಷ್ಟೇ ಎಂಬುದು ಸಾಮಾನ್ಯ ಜ್ಞಾನದ ಅತಿ ಮುಖ್ಯ ಭಾಗ. ಆದರೆ, ಅಷ್ಟೇ ಸುಲಭವಾಗಿ ಮರೆತುಹೋಗುವ ವಿಷಯ. ಮಾಧ್ಯಮಗಳ ನೈತಿಕತೆಯ ಪಾಠವೂ ಹೇಳುವುದೇನೆಂದರೆ, ”ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವವರೆಗೆ ‘ಆರೋಪಿ’ ಎಂಬ ಪದವನ್ನು ಬಳಸಬೇಕು”. ಆದರೆ ಪಾಲ್ ಮತ್ತು ರಶೀದ್ ಪ್ರಕರಣದಲ್ಲಿ, ನ್ಯಾಯಾಲಯವು ತೀರ್ಪು ನೀಡಲು ಹಲವು ವರ್ಷಗಳೇ ಬೇಕಾಯಿತು. ಆದರೂ, ‘ಇಂಡಿಯಾ ಟುಡೇ’ ತನ್ನ ವರದಿಯಲ್ಲಿ ಅವರ ಬಂಧನವಾದ ಕೆಲವೇ ದಿನಗಳಲ್ಲಿ ಅವರನ್ನು ಅಪರಾಧಿಗಳೆಂದು ನಿರ್ಧರಿಸಿಬಿಟ್ಟಿತ್ತು. ಅದೇ ವರದಿಯಲ್ಲಿ, ದೆಹಲಿ ಪೊಲೀಸರ ವಿಶೇಷ ವಿಭಾಗವು ‘ಇಸ್ಲಾಮಿಕ್ ಸ್ಟೇಟ್ ಜಮ್ಮು ಮತ್ತು ಕಾಶ್ಮೀರ’ದ (IS-JK) ಇಬ್ಬರು ಕಟ್ಟಾ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಕೂಡ ಬರೆದಿತ್ತು.
ವರದಿಯ ಒಳಗಿನ ಪ್ಯಾರಾಗ್ರಾಫ್‌ನಲ್ಲಿ ಪಾಲ್ ಮತ್ತು ರಶೀದ್‌ನನ್ನು ‘ಆರೋಪಿಗಳು’ ಎಂದು ಕರೆದಿದ್ದರೂ, ಅವರು ಐಸಿಸ್‌ನ ಭಾಗವಾಗಿದ್ದಾರೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಎನ್‌ಕ್ರಿಪ್ಟ್ ಮಾಡಲಾದ ಸಂದೇಶ ವೇದಿಕೆಗಳನ್ನು ಬಳಸುತ್ತಿದ್ದಾರೆ ಎಂಬ ಅಂಶಗಳನ್ನು ಯಾವುದೇ ಆಧಾರವಿಲ್ಲದೆ ಖಚಿತವಾದ ಸತ್ಯಗಳಂತೆ ಮಂಡಿಸಲಾಗಿತ್ತು. ಇಂತಹ ವರದಿಗಾರಿಕೆಯು ಬಂಧಿತ ಯುವಕರ ನೈಜ ಗುರುತನ್ನು ಮರೆಮಾಚುತ್ತದೆ.


ಸುದ್ದಿ ಸಂಸ್ಥೆಗಳು ಒಬ್ಬ ವ್ಯಕ್ತಿಯ ಗುರುತನ್ನು ಹೇಗೆ ಬಿಂಬಿಸುತ್ತವೆ ಎಂಬುದು ಬಹಳ ಮುಖ್ಯ. ಸಾಂಸ್ಕೃತಿಕ ಸಿದ್ಧಾಂತಿ ಸ್ಟುವರ್ಟ್ ಹಾಲ್ ಅವರು 1973ರಲ್ಲೇ ಗಮನಿಸಿದಂತೆ, ”ಮಾಧ್ಯಮಗಳು ಕೆಲವು ವಿಷಯಗಳನ್ನು ಎತ್ತಿ ತೋರಿಸುವ ಮೂಲಕ ಇನ್ನು ಕೆಲವು ವಿಷಯಗಳನ್ನು ಸಂಪೂರ್ಣವಾಗಿ ಅದೃಶ್ಯಗೊಳಿಸುತ್ತವೆ.” ಪಾಲ್ ಮತ್ತು ರಶೀದ್ ಪ್ರಕರಣದಲ್ಲಿ, ಅವರು ‘ಕಟ್ಟಾ ಭಯೋತ್ಪಾದಕರು’ ಎಂಬ ಚಿತ್ರಣವು ಅವರ ನಿಜವಾದ ಗುರುತನ್ನು ಅಳಿಸಿಹಾಕಿತು. ನ್ಯಾಯಾಲಯವು ಅಂತಿಮವಾಗಿ ‘ಸಾಬೀತಾಗದ ಆರೋಪಗಳು’ ಎಂದು ತೀರ್ಪು ನೀಡಿದಾಗ ಮಾತ್ರ, ಅವರು ಕಾಶ್ಮೀರದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂಬುದು ಬೆಳಕಿಗೆ ಬಂದಿತು.

ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತ್ ಬನ್ಸಾಲ್ ಅವರು ತಮ್ಮ ಆದೇಶದಲ್ಲಿ, ”ಪ್ರಾಸಿಕ್ಯೂಷನ್ ಆರೋಪಿಗಳ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ” ಎಂದು ಹೇಳಿದೆ. ಜೊತೆಗೆ, ಅಧಿಕಾರಿಗಳು ಸ್ವತಂತ್ರ ಸಾಕ್ಷಿಗಳನ್ನು ಸೇರಿಸಿಕೊಳ್ಳದಿರುವುದು ಮತ್ತು ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳನ್ನು ಸುಮಾರು ಎರಡು ತಿಂಗಳ ಕಾಲ ಸೀಲ್ ಮಾಡದೆ ತನಿಖಾಧಿಕಾರಿಗಳ ಬಳಿಯೇ ಇಟ್ಟುಕೊಂಡಿರುವುದನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ.

ಪೂರ್ವಗ್ರಹ ಪೀಡಿತ ವರದಿ ಮತ್ತು ಅದರ ಅಪಾಯ
ವಕೀಲ ಅಹ್ಮದ್ ಅವರ ಪ್ರಕಾರ, ಇಂತಹ ಸುದ್ದಿ ವರದಿಗಳು ತನಿಖಾಧಿಕಾರಿಗಳು, ವಕೀಲರು ಹಾಗೂ ನ್ಯಾಯಾಧೀಶರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ವಿಚಾರಣೆಗೂ ಮೊದಲೇ ಇಬ್ಬರನ್ನು ಭಯೋತ್ಪಾದಕರು ಎಂದು ಬಿಂಬಿಸಿದರೆ, ನಂತರ ಜನರಿಗೆ ಪ್ರಕರಣದ ಅರ್ಹತೆ ಅಥವಾ ಸಾಕ್ಷ್ಯಗಳ ಬಗ್ಗೆ ಕಾಳಜಿ ಇರುವುದಿಲ್ಲ. ಇದು ವ್ಯಕ್ತಿಯ ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಕಿತ್ತುಕೊಳ್ಳುತ್ತದೆ.
ಈ ಲೇಖನ ಓದಿದ್ದೀರಾ?: ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!
ಕೆಲವೊಮ್ಮೆ ಇಂತಹ ಪ್ರಕರಣಗಳಲ್ಲಿ ಸಿಲುಕಿದವರು ಭರವಸೆ ಕಳೆದುಕೊಂಡುಬಿಡುತ್ತಾರೆ. ಬೇಗ ಬಿಡುಗಡೆಯಾಗುವ ಆಸೆಯಿಂದ ಮಾಡದ ಅಪರಾಧವನ್ನು ಒಪ್ಪಿಕೊಳ್ಳಲು ಮುಂದಾಗುತ್ತಾರೆ. ಆದರೆ, ಪಾಲ್ ಮತ್ತು ರಶೀದ್ ಪ್ರಕರಣದಲ್ಲಿ ವಕೀಲರು ಅವರಿಗೆ ಧೈರ್ಯ ತುಂಬಿದರು. ಒಂದು ವೇಳೆ ಅಪರಾಧ ಒಪ್ಪಿಕೊಂಡು ಬಿಡುಗಡೆಯಾದರೂ, ಜೀವನ ಪರ್ಯಂತ ‘ಭಯೋತ್ಪಾದಕ’ ಎಂಬ ಕಳಂಕದ ನೆರಳಿನಲ್ಲಿ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಬಂಧನದಲ್ಲಿರುವ ಇತರರ ಗತಿಯೇನು?
ಜನಪ್ರಿಯ ಮಾಧ್ಯಮಗಳು ನೀಡುವ ಪೂರ್ವಗ್ರಹ ಪೀಡಿತ ಮಾಹಿತಿಯು ಜನರ ಜೀವನವನ್ನೇ ಧ್ವಂಸಗೊಳಿಸಬಹುದು. ಭಯೋತ್ಪಾದನೆಯ ಆರೋಪವು ಸಣ್ಣ ವಿಷಯವಲ್ಲ; ಅದು ವ್ಯಕ್ತಿಯ ಸ್ವಾತಂತ್ರ್ಯ, ಕುಟುಂಬ, ಸಮುದಾಯ ಹಾಗೂ ಭವಿಷ್ಯದ ಮೇಲೆ ಭೀಕರ ಪರಿಣಾಮ ಬೀರುತ್ತದೆ. ನ್ಯಾಯಾಲಯದಿಂದ ಖುಲಾಸೆಗೊಂಡರೂ, ಕಳೆದುಹೋದ ಆ ಅಮೂಲ್ಯ ವರ್ಷಗಳನ್ನು ಮತ್ತು ಸಮಾಜದಲ್ಲಿನ ಗೌರವವನ್ನು ಮರಳಿ ಪಡೆಯುವುದು ಕಷ್ಟ.
ನಮ್ಮ ನಡುವೆ ಇಂತಹ ಎಷ್ಟೋ ಹರೆಯದ ಯುವಕರು ಮಾಧ್ಯಮಗಳ ಧಾವಂತದ ವರದಿಗಾರಿಕೆಯಿಂದಾಗಿ ಸಮಾಜದಿಂದ ಬಹಿಷ್ಕರಿಸಲ್ಪಟ್ಟಿದ್ದಾರೆ. ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ನ್ಯಾಯಾಲಯವು ತೀರ್ಪು ನೀಡುವ ಮೊದಲೇ ಮಾಧ್ಯಮಗಳು ಅವರನ್ನು ಭಯೋತ್ಪಾದಕರು ಎಂದು ಬ್ರ್ಯಾಂಡ್ ಮಾಡುವುದು ಒಬ್ಬ ವ್ಯಕ್ತಿಯ ಜೀವನವನ್ನು ಶಾಶ್ವತವಾಗಿ ಬದಲಿಸಿಬಿಡುತ್ತದೆ.
ಈ ರೀತಿಯಲ್ಲಿ ಮಾಧ್ಯಮಗಳು ಕಟ್ಟಿದ ಹಣೆಪಟ್ಟಿಯಿಂದಾಗಿ, ಭಾರತದಲ್ಲಿ ಯುಎಪಿಎ ಅಡಿ ಸುಮಾರು 8,000 ಮಂದಿ ಆರೋಪ ಎದುರಿಸುತ್ತಿದ್ದಾರೆ. ಅವರಲ್ಲಿ, 2020ರ ದೆಹಲಿ ಗಲಭೆಗೆ ಪಿತೂರಿ ರೂಪಿಸಿದ್ದರೆಂಬ ಆಧಾರರಹಿತ ಆರೋಪದಲ್ಲಿ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ-ಉರ್-ರೆಹ್ಮಾನ್, ಖಾಲಿದ್ ಸೈಫಿ, ಶದಾಬ್ ಅಹ್ಮದ್ ಎಂಬ ಯುವ ಹೋರಾಟಗಾರರು ಇದ್ದಾರೆ. ಇವರ ಪೈಕಿ, ಐದು ಮಂದಿಗೆ ಇತ್ತೀಚೆಗೆ ನ್ಯಾಯಾಲಯವು ಜಾಮೀನು ನೀಡಿದೆ. ಆದರೆ, ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದೆ. 2020ರಿಂದ ಈ ಇಬ್ಬರು ಜೈಲಿನಲ್ಲಿ ದಿನಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಮೂಲ: ದಿ ವೈರ್



