ಮುಂಬರುವ 2027ರ ಗೋವಾ ವಿಧಾನಸಭೆ ಚುನಾವಣೆಗೆ ರಾಜ್ಯ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ಆಮ್ ಆದ್ಮಿ ಪಾರ್ಟಿ (ಎಎಪಿ) ಮತ್ತು ಸ್ಥಳೀಯ ಪ್ರಾದೇಶಿಕ ಪಕ್ಷವಾದ ‘ಗೋವಾ ಫಾರ್ವರ್ಡ್ ಪಾರ್ಟಿ’ (ಜಿಎಫ್‌ಪಿ) ಚುನಾವಣಾ ಪೂರ್ವ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿವೆ.
ಭಾನುವಾರ ಪಣಜಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹಾಗೂ ಜಿಎಫ್‌ಪಿ ಅಧ್ಯಕ್ಷ ವಿಜಯ್ ಸರ್ದೇಸಾಯಿ, ಈ ಮೈತ್ರಿಗೆ “ಗೋವಾ ಫಸ್ಟ್” ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಗುಜರಾತ್ | ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಎಎಪಿ ಮೈತ್ರಿ
ಗೋವಾ ಜನತೆಗೆ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ಗೆ ಹೊರತಾಗಿ ಹೊಸ ಹಾಗೂ ಸಶಕ್ತ ಪರ್ಯಾಯವನ್ನು ನೀಡುವುದು ಈ ಮೈತ್ರಿಯ ಮುಖ್ಯ ಉದ್ದೇಶವಾಗಿದೆ ಎಂದು ನಾಯಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, “ಗೋವಾದ ಜನರು ಬಿಜೆಪಿಯ ಆಡಳಿತದಿಂದ ಬೇಸತ್ತಿದ್ದಾರೆ ಹಾಗೂ ಕಾಂಗ್ರೆಸ್‌ನಿಂದಲೂ ನಿರಾಸೆಗೊಂಡಿದ್ದಾರೆ. ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಬಹುತೇಕ ಮಂದಿ ಮಾಜಿ ಕಾಂಗ್ರೆಸ್ ನಾಯಕರೇ ಇದ್ದು, ಇದು ಸಿದ್ಧಾಂತವಿಲ್ಲದ ಹಣ ಮತ್ತು ಮಾಫಿಯಾ ರಾಜಕೀಯದ ಸರ್ಕಾರವಾಗಿದೆ. ಈ ಚುನಾವಣೆಯಲ್ಲಿ ‘ಗೋವಾ ಫಸ್ಟ್’ ಮೈತ್ರಿಕೂಟವು ಜನರ ಬೆಂಬಲದೊಂದಿಗೆ ಸ್ವಂತ ಬಲದಲ್ಲಿ ಸರ್ಕಾರ ರಚಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ಪ್ರಸ್ತುತ ಇಬ್ಬರು ಶಾಸಕರನ್ನು (ಬೆನೌಲಿಮ್ ಮತ್ತು ವೆಲಿಮ್ ಕ್ಷೇತ್ರಗಳು) ಹೊಂದಿದೆ. ಇತ್ತ ಗೋವಾ ಫಾರ್ವರ್ಡ್ ಪಾರ್ಟಿಯ ಅಧ್ಯಕ್ಷ ವಿಜಯ್ ಸರ್ದೇಸಾಯಿ ಪಕ್ಷದ ಏಕೈಕ ಶಾಸಕರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ಜಿಎಫ್‌ಪಿ, ಈ ಬಾರಿ ಎಎಪಿ ಜೊತೆಗೂಡಿ ಹೊಸ ರಾಜಕೀಯ ರಂಗವನ್ನು ನಿರ್ಮಿಸಲು ಹೆಜ್ಜೆ ಇಟ್ಟಿದೆ.
ಸದ್ಯಕ್ಕೆ ಈ ಮೈತ್ರಿಯು ಎಎಪಿ ಮತ್ತು ಜಿಎಫ್‌ಪಿ ನಡುವೆ ಸ್ಪಷ್ಟವಾಗಿದ್ದು, ಸಮಾನ ಮನಸ್ಕ ರಾಜಕೀಯ ಪಕ್ಷಗಳಿಗೆ ಬಾಗಿಲು ತೆರೆದಿರುತ್ತದೆ ಎಂದು ಜಿಎಫ್‌ಪಿ ಮುಖ್ಯಸ್ಥ ವಿಜಯ್ ಸರ್ದೇಸಾಯಿ ತಿಳಿಸಿದ್ದಾರೆ.





