2021ರಿಂದ 2026ರ ಜುಲೈವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ 77 ವಿದೇಶ ಪ್ರವಾಸಗಳಿಗೆ ಕೇಂದ್ರ ಸರ್ಕಾರ ಒಟ್ಟು ₹557.51 ಕೋಟಿ ವೆಚ್ಚ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ.
ಸಿಪಿಐ(ಎಂ) ಸದಸ್ಯ ವಿ. ಶಿವದಾಸನ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ, ಈ ಅವಧಿಯಲ್ಲಿ ಪ್ರಧಾನಿ ಮೋದಿ 77 ದೇಶಗಳಿಗೆ ಭೇಟಿ ನೀಡಿದ್ದು, ಆ ಪ್ರವಾಸಗಳ ವೇಳೆ ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ತಿಳಿವಳಿಕೆ ಒಪ್ಪಂದಗಳು (MoUs) ವಿವಿಧ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ಬಲಪಡಿಸಲು ನೆರವಾಗಿವೆ ಎಂದು ತಿಳಿಸಿದ್ದಾರೆ.
ರಾಜ್ಯಸಭೆಗೆ ಸಲ್ಲಿಸಲಾದ 35 ಪುಟಗಳ ಉತ್ತರದಲ್ಲಿ ಪ್ರಧಾನಿ ಮೋದಿ ಅವರ ವಿವಿಧ ವಿದೇಶ ಪ್ರವಾಸಗಳ ವೆಚ್ಚದ ವಿವರಗಳನ್ನೂ ನೀಡಲಾಗಿದೆ. ಅದರ ಪ್ರಕಾರ, 2026ರ ಫೆಬ್ರವರಿ 25-26ರಂದು ನಡೆದ ಇಸ್ರೇಲ್ ಪ್ರವಾಸಕ್ಕೆ ₹11.92 ಕೋಟಿ, 2026ರ ಮೇ 15-20ರಂದು ಫ್ರಾನ್ಸ್ ಹಾಗೂ ಸ್ಲೋವಾಕ್ ಗಣರಾಜ್ಯ ಪ್ರವಾಸಕ್ಕೆ ₹4.77 ಕೋಟಿ, ಹಾಗೂ 2026ರ ಜೂನ್ 27-29ರಂದು ಸೀಶೆಲ್ಸ್ ಪ್ರವಾಸಕ್ಕೆ ₹8.22 ಕೋಟಿ ವೆಚ್ಚವಾಗಿದೆ ಎಂದು ತಿಳಿಸಲಾಗಿದೆ.
ಇದೇ ಅವಧಿಯಲ್ಲಿ ಭಾರತವು ವಿವಿಧ ದೇಶಗಳೊಂದಿಗೆ 316 ತಿಳಿವಳಿಕೆ ಒಪ್ಪಂದಗಳಿಗೆ (MoUs) ಸಹಿ ಹಾಕಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ಭಾರತಕ್ಕೆ 381.8 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ (FDI) ಹರಿದು ಬಂದಿದೆ ಎಂದು ಸಹ ಉತ್ತರದಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು 316 ಒಪ್ಪಂದಗಳ ಪೈಕಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜೊತೆ 44, ಫ್ರಾನ್ಸ್ ಜೊತೆ 33, ಇಸ್ರೇಲ್ ಜೊತೆ 16 ಹಾಗೂ ಅಮೆರಿಕ ಜೊತೆ 8 ಒಪ್ಪಂದಗಳು ನಡೆದಿವೆ. ಇಸ್ರೇಲ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳಲ್ಲಿ ಇಸ್ರೇಲ್ ಭದ್ರತಾ ಸೇವೆಯೊಂದಿಗೆ ಸಹಕಾರ ಹಾಗೂ MASAV ವೇದಿಕೆಯಲ್ಲಿ ಯುಪಿಐ (UPI) ಜಾರಿಗೆ ಸಂಬಂಧಿಸಿದ ಒಪ್ಪಂದಗಳೂ ಸೇರಿವೆ ಎಂದು ಶಿವದಾಸನ್ ಮಾಹಿತಿ ನೀಡಿದ್ದಾರೆ.
ಪ್ರಧಾನಿಯ ವಿದೇಶ ಪ್ರವಾಸಗಳ ಯಶಸ್ಸನ್ನು ಭೇಟಿ ನೀಡಿದ ದೇಶಗಳ ಸಂಖ್ಯೆ ಅಥವಾ ಮಾಡಿಕೊಂಡಿರುವ ಒಪ್ಪಂದಗಳ ಸಂಖ್ಯೆಯಿಂದ ಅಳೆಯಬಾರದು. ಬದಲಾಗಿ, ಆ ಪ್ರವಾಸಗಳಿಂದ ಎಷ್ಟು ಯೋಜನೆಗಳು ಜಾರಿಗೆ ಬಂದವು, ಎಷ್ಟು ಹೂಡಿಕೆಗಳನ್ನು ಆಕರ್ಷಿಸಲಾಯಿತು, ಎಷ್ಟು ಉದ್ಯೋಗಗಳು ಸೃಷ್ಟಿಯಾದವು ಹಾಗೂ ಭಾರತದ ಜಾಗತಿಕ ಸ್ಥಾನಮಾನ ಎಷ್ಟರ ಮಟ್ಟಿಗೆ ಬಲವರ್ಧನೆಯಾಯಿತು ಎಂಬ ಸ್ಪಷ್ಟ ಫಲಿತಾಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂದು ಶಿವದಾಸನ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ, 2026ರ ಜೂನ್ 13ರಿಂದ 18ರವರೆಗೆ ನಡೆದ ಫ್ರಾನ್ಸ್ ಪ್ರವಾಸದ ವೆಚ್ಚದ ಲೆಕ್ಕಪತ್ರ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಆ ವೆಚ್ಚವನ್ನು ₹557.51 ಕೋಟಿ ಮೊತ್ತದಲ್ಲಿ ಸೇರಿಸಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ, 2026ರ ಕೆಲವು ಪ್ರವಾಸಗಳ ವೆಚ್ಚಗಳು ತಾತ್ಕಾಲಿಕ (ಪ್ರೊವಿಷನಲ್) ಅಂದಾಜಾಗಿದ್ದು, ಎಲ್ಲಾ ಬಿಲ್‌ಗಳ ಪಾವತಿ ಪೂರ್ಣಗೊಂಡ ನಂತರ ಅಂತಿಮ ಅಂಕಿ-ಅಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.
ರಾಜ್ಯಸಭೆಗೆ ಸಲ್ಲಿಸಲಾದ ಮಾಹಿತಿಯ ಪ್ರಕಾರ, ಹೆಚ್ಚು ವೆಚ್ಚವಾದ ಕೆಲವು ಪ್ರವಾಸಗಳು ಇಂತಿವೆ:
- 2025 ಫೆಬ್ರವರಿ – ಫ್ರಾನ್ಸ್: ₹25.59 ಕೋಟಿ
- 2023 – ಅಮೆರಿಕ: ₹22.90 ಕೋಟಿ
- 2021 – ಅಮೆರಿಕ: ₹19.63 ಕೋಟಿ
- 2025 – ಬ್ರೆಜಿಲ್: ₹17.72 ಕೋಟಿ
- 2023 – ಜಪಾನ್: ₹17.19 ಕೋಟಿ
- 2025 – ಅಮೆರಿಕ: ₹16.54 ಕೋಟಿ
- 2025 – ಸೌದಿ ಅರೇಬಿಯಾ: ₹15.54 ಕೋಟಿ
- 2024 – ಅಮೆರಿಕ: ₹15.33 ಕೋಟಿ
- 2022 – ಜರ್ಮನಿ (ಜೂನ್): ₹14.47 ಕೋಟಿ
- 2024 – ಇಟಲಿ: ₹14.36 ಕೋಟಿ
ವರ್ಷವಾರು ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸಗಳು
ಇದನ್ನೂ ಓದಿ: 6 ದಶಕದ ಸೇವೆ, 2 ಲಕ್ಷಕ್ಕೂ ಹೆಚ್ಚು ಹೆರಿಗೆ: 92ನೇ ವಯಸ್ಸಿನಲ್ಲೂ ದಿನವೂ ಶಸ್ತ್ರಚಿಕಿತ್ಸೆ ನಡೆಸುವ ವೈದ್ಯೆ ಡಾ. ಸೂರಿ ಶ್ರೀಮತಿ
2026: ಮಲೇಷ್ಯಾ, ಇಸ್ರೇಲ್, ಯುಎಇ, ನೆದರ್‌ಲ್ಯಾಂಡ್ಸ್, ಸ್ವೀಡನ್, ನಾರ್ವೆ, ಇಟಲಿ, ಫ್ರಾನ್ಸ್, ಸ್ಲೋವಾಕ್ ಗಣರಾಜ್ಯ, ಸೀಶೆಲ್ಸ್, ಇಂಡೋನೇಷ್ಯಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್.
2025: ಫ್ರಾನ್ಸ್, ಅಮೆರಿಕ, ಮಾರಿಷಸ್, ಥಾಯ್ಲೆಂಡ್, ಶ್ರೀಲಂಕಾ, ಸೌದಿ ಅರೇಬಿಯಾ, ಸೈಪ್ರಸ್, ಕೆನಡಾ, ಕ್ರೊಯೇಷ್ಯಾ, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟಿನಾ, ಬ್ರೆಜಿಲ್, ನಮೀಬಿಯಾ, ಬ್ರಿಟನ್, ಮಾಲ್ಡೀವ್ಸ್, ಚೀನಾ, ಜಪಾನ್, ಭೂತಾನ್, ದಕ್ಷಿಣ ಆಫ್ರಿಕಾ, ಜೋರ್ಡನ್, ಒಮಾನ್ ಹಾಗೂ ಇಥಿಯೋಪಿಯಾ.
2024: ಯುಎಇ, ಕತಾರ್, ಭೂತಾನ್, ಇಟಲಿ, ರಷ್ಯಾ, ಆಸ್ಟ್ರಿಯಾ, ಪೋಲೆಂಡ್, ಉಕ್ರೇನ್, ಬ್ರೂನಿ, ಸಿಂಗಾಪುರ, ಅಮೆರಿಕ, ಲಾವೋಸ್ (Lao PDR), ನೈಜೀರಿಯಾ, ಬ್ರೆಜಿಲ್, ಗಯಾನಾ ಹಾಗೂ ಕುವೈತ್.
2023: ಜಪಾನ್, ಆಸ್ಟ್ರೇಲಿಯಾ, ಪಪುವಾ ನ್ಯೂಗಿನಿಯಾ, ಅಮೆರಿಕ, ಈಜಿಪ್ಟ್, ಫ್ರಾನ್ಸ್, ಯುಎಇ, ದಕ್ಷಿಣ ಆಫ್ರಿಕಾ, ಗ್ರೀಸ್ ಹಾಗೂ ಇಂಡೋನೇಷ್ಯಾ.
2022: ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್, ನೇಪಾಳ, ಜಪಾನ್, ಯುಎಇ, ಉಜ್ಬೇಕಿಸ್ತಾನ್ ಹಾಗೂ ಇಂಡೋನೇಷ್ಯಾ.
2021: ಬಾಂಗ್ಲಾದೇಶ, ಅಮೆರಿಕ, ಇಟಲಿ ಹಾಗೂ ಬ್ರಿಟನ್. ಈ ವರ್ಷ ಅಮೆರಿಕ ಪ್ರವಾಸಕ್ಕೆ ₹19.63 ಕೋಟಿ ವೆಚ್ಚವಾಗಿದ್ದು, ನಾಲ್ಕು ಪ್ರವಾಸಗಳಲ್ಲಿ ಅತಿ ಹೆಚ್ಚು ವೆಚ್ಚದ ಪ್ರವಾಸವಾಗಿತ್ತು.
2021ರಿಂದ 2026ರವರೆಗೆ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸಗಳಿಗೆ ಖರ್ಚಾಗಿರುವ ₹557.51 ಕೋಟಿ ಮೊತ್ತವು, 2026-27ರ ಕೇಂದ್ರ ಬಜೆಟ್‌ನಲ್ಲಿ ಪ್ರಸಾರ ಮೂಲಸೌಕರ್ಯ ಅಭಿವೃದ್ಧಿಗಾಗಿ (BIND) ಮೀಸಲಿಟ್ಟಿರುವ ₹509.24 ಕೋಟಿಗಿಂತಲೂ ಹೆಚ್ಚಾಗಿದೆ.




