ದೇಶಾದ್ಯಂತ ಇರುವ 30.91 ಲಕ್ಷ ನಿಷ್ಕ್ರಿಯ ಇಪಿಎಫ್ (EPF) ಖಾತೆಗಳಲ್ಲಿ ಸುಮಾರು ₹9,330 ಕೋಟಿ ಹಣ ಕ್ಲೈಮ್ ಆಗದೇ ಹಾಗೆಯೇ ಉಳಿದಿದೆ ಎಂಬ ಆತಂಕಕಾರಿ ಅಂಶವನ್ನು ಆರ್‌ಟಿಐ (ಮಾಹಿತಿ ಹಕ್ಕು) ಅರ್ಜಿಯೊಂದರ ಉತ್ತರ ಬಹಿರಂಗಪಡಿಸಿದೆ.
ಕೇಂದ್ರ ಸರ್ಕಾರವು ಭವಿಷ್ಯನಿಧಿ ಚಂದಾದಾರರಿಗಾಗಿ ಹೊಸ ‘ಇಪಿಎಫ್ ಸ್ಕೀಮ್, 2026’ ಅನ್ನು ಜಾರಿಗೆ ತಂದಿರುವ ಹೊತ್ತಿನಲ್ಲಿಯೇ ಈ ಮಾಹಿತಿ ಹೊರಬಂದಿದೆ. ಹೊಸ ನಿಯಮವು ಜೂನ್ 29 ರಿಂದ ಜಾರಿಯಾಗಿದ್ದು, ಸುಮಾರು 8 ಕೋಟಿ ಸಕ್ರಿಯ ಇಪಿಎಫ್‌ಒ ಚಂದಾದಾರರಿಗೆ ಡಿಜಿಟಲ್ ಹಾಗೂ ಸರಳ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿದೆ. ಆದರೆ, ಹಲವು ವರ್ಷಗಳಿಂದ ಕಾರ್ಮಿಕರು ತಮ್ಮ ನಿವೃತ್ತಿ ಹಣವನ್ನು ಕ್ಲೈಮ್ ಮಾಡದೇ ಇರುವ ದೊಡ್ಡ ಸಮಸ್ಯೆಯನ್ನು ಈ ಆರ್‌ಟಿಐ ಮಾಹಿತಿ ತೋರುತ್ತಿದೆ.
ಇಪಿಎಫ್‌ಒ (Employees’ Provident Fund Organisation) ಮಾರ್ಚ್ 31, 2026 ರಕ್ಕೆ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ 30,91,862 ನಿಷ್ಕ್ರಿಯ ಇಪಿಎಫ್ ಖಾತೆಗಳಿವೆ. ಈ ಖಾತೆಗಳಲ್ಲಿ ಯಾರು ಕೇಳುವವರಿಲ್ಲದೆ ಉಳಿದಿರುವ ಹಣದ ಮೊತ್ತ ಸುಮಾರು ₹9,330 ಕೋಟಿ. ಕಳೆದ ಆರ್ಥಿಕ ವರ್ಷಕ್ಕೆ (ಮಾರ್ಚ್ 31, 2025) ಹೋಲಿಸಿದರೆ ಇದು ಸ್ವಲ್ಪ ಕಡಿಮೆಯಾಗಿದೆ. 2025 ರಲ್ಲಿ 31.83 ಲಕ್ಷ ಖಾತೆಗಳಲ್ಲಿ ₹10,181 ಕೋಟಿ ಇತ್ತು. ಅಂದರೆ ಒಂದು ವರ್ಷದಲ್ಲಿ ಖಾತೆಗಳ ಸಂಖ್ಯೆ ಸುಮಾರು 92,000 ಹಾಗೂ ಹಣ 851 ಕೋಟಿ ರೂಪಾಯಿಯಷ್ಟು ಕಡಿಮೆಯಾಗಿದ್ದರೂ, 31 ಲಕ್ಷ ಖಾತೆಗಳಲ್ಲಿ ಇನ್ನೂ ಸಾವಿರಾರು ಕೋಟಿ ಹಣ ವಾರಸುದಾರರಿಲ್ಲದೇ ಯಥಾಸ್ಥಿತಿಯಲ್ಲಿ ಉಳಿದಿದೆ.
₹9,330 ಕೋಟಿಯಲ್ಲಿ ಏನೆಲ್ಲಾ ಮಾಡಬಹುದು?ಈ ಕ್ಲೈಮ್ ಆಗದ ಮೊತ್ತ ಎಷ್ಟು ದೊಡ್ಡದು ಎಂದರೆ, ಸರ್ಕಾರದ ದೊಡ್ಡ ದೊಡ್ಡ ಯೋಜನೆಗಳಿಗೆ ಇದನ್ನು ಹೋಲಿಸಬಹುದು. ಕೇಂದ್ರ ಸರ್ಕಾರ 2016 ರಿಂದ ‘ಉಡಾನ್’ (UDAN – ವಿಮಾನ ಸಂಪರ್ಕ) ಯೋಜನೆಗಾಗಿ ಖರ್ಚು ಮಾಡಿರುವ ಮೊತ್ತಕ್ಕೆ (₹10,169 ಕೋಟಿ) ಹಾಗೂ 2026-27 ನೇ ಸಾಲಿನ ಆಯುಷ್ಮಾನ್ ಭಾರತ್ (PM-JAY) ಯೋಜನೆಯ ಅನುದಾನಕ್ಕೆ ಈ ಹಣ ಹೆಚ್ಚುಕಡಿಮೆ ಸಮಾನವಾಗಿದೆ.
ಇನ್ನು ಗಮನಾರ್ಹ ವಿಚಾರವೆಂದರೆ, 2014 ರ ಅಂದಾಜಿನ ಪ್ರಕಾರ ಒಂದು ಐಐಟಿ (IIT) ನಿರ್ಮಿಸಲು ₹1,750 ಕೋಟಿ ಬೇಕಾಗಿತ್ತು. ಅದನ್ನು 2026 ರ ಹಣದುಬ್ಬರಕ್ಕೆ (Inflation) ಹೋಲಿಸಿದರೆ ಒಂದು ಐಐಟಿಗೆ ₹2,934 ಕೋಟಿ ಬೇಕು. ಅಂದರೆ ಈ ಉಳಿದಿರುವ ₹9,330 ಕೋಟಿ ಹಣದಲ್ಲಿ ದೇಶದಲ್ಲಿ ಹೊಸ 3 ಐಐಟಿಗಳನ್ನು ನಿರ್ಮಿಸಬಹುದು, ಮತ್ತು ಅದರ ನಂತರವೂ ₹500 ಕೋಟಿ ಹಣ ಮಿಗುತ್ತದೆ! ಇದು ಕಾರ್ಮಿಕರ ಕ್ಲೈಮ್ ಆಗದ ಹಣದ ಪ್ರಮಾಣವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಆರ್‌ಟಿಐಯಲ್ಲಿ ನಿರಾಕರಿಸಿದ ಮಾಹಿತಿಗಳುಆಧಾರ್ ಲಿಂಕ್ ಆಗಿರುವ ನಿಷ್ಕ್ರಿಯ ಖಾತೆಗಳು ಹಾಗೂ ಅವುಗಳ ಆಟೋ-ಸೆಟ್ಲ್‌ಮೆಂಟ್ (ಸ್ವಯಂ-ವಿಲೇವಾರಿ) ಬಗ್ಗೆ ಆರ್‌ಟಿಐಯಲ್ಲಿ ಕೇಳಿದ ಪ್ರಶ್ನೆಗೆ ಇಪಿಎಫ್‌ಒ ಮಾಹಿತಿ ನೀಡಲು ನಿರಾಕರಿಸಿದೆ. ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(e) ಅಡಿಯಲ್ಲಿ ಈ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹಾಗೆಯೇ ₹5 ಲಕ್ಷಕ್ಕೂ ಹೆಚ್ಚು ಹಣವಿರುವ ನಿಷ್ಕ್ರಿಯ ಖಾತೆಗಳ ಬಗ್ಗೆ ಪ್ರತ್ಯೇಕವಾಗಿ ಮಾಹಿತಿಯನ್ನು ನಿರ್ವಹಿಸುತ್ತಿಲ್ಲ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.




