ವಂಚನೆಯ ಉದ್ದೇಶವಿಲ್ಲದೆ, ಮದುವೆಯಾಗುವ ಭರವಸೆ ನೀಡಿ ಪರಸ್ಪರ ಸಮ್ಮತಿಯೊಂದಿಗೆ ಲೈಂಗಿಕ ಸಂಬಂಧ ಆರಂಭವಾಗಿದ್ದು, ನಂತರ ಕುಟುಂಬದ ವಿರೋಧ ಅಥವಾ ಅನಿವಾರ್ಯ ಪರಿಸ್ಥಿತಿಯಿಂದ ವಿವಾಹವಾಗದಿದ್ದರೆ, ಅದನ್ನು ಅತ್ಯಾಚಾರ ಅಥವಾ ವಂಚನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಳಿದೆ.
ಯುವತಿಯೊಬ್ಬರು ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಬಂಧ ಬೆಳೆಸಿ, ಈಗ ಮದುವೆಯಾಗದೆ ವಂಚಿಸಿದ್ದಾರೆ ಎಂದು ಆರೋಪಿ ಯುವಕ ಕುನಾಲ್ ರಮೇಶ್‌ಭಾಯಿ ಕಲ್ಯಾಣಿ ವಿರುದ್ಧ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ, ವಡೋದರಾದ ಸಯಾಜಿಗಂಜ್ ಪೊಲೀಸ್ ಠಾಣೆಯಲ್ಲಿ 2025ರ ಮೇ 20ರಂದು ಎಫ್‌ಐಆರ್ ದಾಖಲಾಗಿತ್ತು. ತಮ್ಮ ವಿರುದ್ಧದ ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕುನಾಲ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ವಿಚಾರಣೆ ನಡೆಸಿದೆ. ಆರೋಪಿ ಅರ್ಜಿದಾರನ ಮನವಿಯನ್ನು ಪುರಷ್ಕರಿಸಿದೆ. “ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 69ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಆರೋಪಿಯು ಮದುವೆಯಾಗುವುದಾಗಿ ಭರವಸೆ ನೀಡಿದ ಸಂದರ್ಭದಲ್ಲಿಯೇ ಆತನಿಗೆ ಅದನ್ನು ಈಡೇರಿಸುವ ಉದ್ದೇಶವೇ ಇರಲಿಲ್ಲ ಎಂಬುದು ಸಾಬೀತಾಗಬೇಕು” ಎಂದು ಸ್ಪಷ್ಟಪಡಿಸಿದೆ.
“ಮದುವೆಯ ಭರವಸೆಯನ್ನು ಆರಂಭದಲ್ಲಿ ಸದುದ್ದೇಶದಿಂದ ನೀಡಲ್ಪಟ್ಟಿದ್ದರೂ, ನಂತರ ಕುಟುಂಬದ ವಿರೋಧ, ಅನಿವಾರ್ಯ ಪರಿಸ್ಥಿತಿ ಅಥವಾ ತನ್ನ ನಿಯಂತ್ರಣದಾಚೆಯ ಕಾರಣಗಳಿಂದ ಮದುವೆ ಸಾಧ್ಯವಾಗದಿದ್ದರೆ, ಅದನ್ನು ಆರಂಭಿಕ ವಂಚನೆಯ ಉದ್ದೇಶವೆಂದು ಹೇಳಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಅರ್ಜಿದಾರ ಯುವಕ ಮತ್ತು ದೂರುದಾರ ಯುವತಿ – ಇಬ್ಬರೂ ಡಿಜಿಟಲ್ ವೇದಿಕೆಯ ಮೂಲಕ ಪರಿಚಿತರಾಗಿ ನಂತರ ಸ್ನೇಹ ಬೆಳೆಸಿಕೊಂಡಿದ್ದು, ಅದು ಪ್ರೇಮ ಸಂಬಂಧವಾಗಿ ಮಾರ್ಪಟ್ಟಿತ್ತು. ಇಬ್ಬರೂ 2024ರ ಫೆಬ್ರವರಿ 12ರಂದು ಮೊದಲ ಬಾರಿಗೆ ನೇರವಾಗಿ ಭೇಟಿಯಾಗಿದ್ದರು. ನಂತರ, 2024ರ ಏಪ್ರಿಲ್‌ನಲ್ಲಿ ಇಬ್ಬರೂ ಪರಸ್ಪರ ಸಮ್ಮತಿಯಿಂದ ದೈಹಿಕ ಸಂಬಂಧ ಹೊಂದಿದ್ದರು ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
ಯುವತಿಯ ದೂರಿನಲ್ಲೇ, ಮೊದಲ ನೇರ ಭೇಟಿಯ ವೇಳೆ ಆರೋಪಿ ಯುವಕ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದನು ಎಂಬುದನ್ನು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸಂಬಂಧವು ಪರಸ್ಪರ ಸಮ್ಮತಿಯದ್ದಾಗಿದ್ದು, ಆತನಿಗೆ ಆರಂಭದಿಂದಲೇ ವಂಚಿಸುವ ಉದ್ದೇಶವಿತ್ತು ಎಂಬುದಕ್ಕೆ ಸ್ಪಷ್ಟ ಆಧಾರ ಕಾಣುತ್ತಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
“ದೂರಿನಲ್ಲಿರುವ ಹೇಳಿಕೆಗಳು ಪರಸ್ಪರ ಸಮ್ಮತಿಯ ಸಂಬಂಧವನ್ನೇ ಸೂಚಿಸುತ್ತವೆ. ಮೋಸದ ನಡವಳಿಕೆಯನ್ನು ತೋರಿಸುವ ಯಾವುದೇ ಸ್ಪಷ್ಟ ಅಂಶ ನಮಗೆ ಕಾಣಿಸುತ್ತಿಲ್ಲ. ಆರೋಪಿ ಮದುವೆಯಾಗಲು ನಿರಾಕರಿಸಿದ ಕಾರಣ ಅವನ ತಾಯಿ ಒಪ್ಪದಿರುವುದು ಎಂಬುದನ್ನು ದೂರಿನಲ್ಲೇ ಹೇಳಲಾಗಿದೆ. ಇದರಿಂದ, ಆರಂಭದಲ್ಲಿ ನೀಡಲಾಗಿದ್ದ ಮದುವೆಯ ಭರವಸೆಯು ಸದುದ್ದೇಶದಿಂದಲೇ ನೀಡಲ್ಪಟ್ಟಿತ್ತು ಎಂಬುದೇ ಗೋಚರಿಸುತ್ತದೆ” ಎಂದು ಪೀಠ ಹೇಳಿದೆ.
ಆರೋಪಿ ಯುವಕನ ವಿರುದ್ಧದ ಎಫ್‌ಐಆರ್ ಮತ್ತು ಅದರ ಆಧಾರದ ಮೇಲಿನ ಕ್ರಿಮಿನಲ್ ಪ್ರಕರಣವನ್ನು ಕೋರ್ಟ್ ರದ್ದುಪಡಿಸಿದೆ.




