ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯವನ್ನು (CSAM) ಪ್ರಚೋದಿಸುವಂತಹ ಜಾಹೀರಾತುಗಳು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸಾರವಾಗುತ್ತಿರುವ ಕುರಿತು ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ಇನ್‌ಸ್ಟಾಗ್ರಾಮ್‌ನ ಮಾತೃಸಂಸ್ಥೆಯಾದ ‘ಮೆಟಾ’ಗೆ (Meta) ನೋಟಿಸ್ ಜಾರಿ ಮಾಡಿರುವ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY), ಇಂತಹ ಆಕ್ಷೇಪಾರ್ಹ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಬಿಬಿಸಿ (BBC) ಇತ್ತೀಚೆಗೆ ನಡೆಸಿದ ತನಿಖಾ ವರದಿಯೊಂದರಲ್ಲಿ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿತ್ತು. ಈ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು, ಮೆಟಾ ಸಂಸ್ಥೆಯ ಅಧಿಕಾರಿಗಳಿಗೆ ಸಮನ್ಸ್ ನೀಡಿದೆ. ಅತ್ಯಾಧುನಿಕ ‘ಕಂಟೆಂಟ್ ಮಾಡರೇಷನ್’ (ವಿಷಯ ಪರಿಶೀಲನೆ) ವ್ಯವಸ್ಥೆಯನ್ನು ಹೊಂದಿದ್ದರೂ, ಇಂತಹ ಗಂಭೀರ ಸ್ವರೂಪದ ಜಾಹೀರಾತುಗಳು ಕಣ್ತಪ್ಪಿಸಿ ಪ್ರಕಟವಾಗಿದ್ದು ಹೇಗೆ? ಎಂಬುದರ ಬಗ್ಗೆ ಏಳು ದಿನಗಳೊಳಗೆ ಸಮಗ್ರ ವಿವರಣೆ ನೀಡುವಂತೆ ಮೆಟಾ ಸಂಸ್ಥೆಗೆ ಸರ್ಕಾರ ಸೂಚಿಸಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್‌ಗಳನ್ನು ಹಂಚಿಕೊಳ್ಳುವುದು ಅಥವಾ ಅದಕ್ಕೆ ಪ್ರಚೋದನೆ ನೀಡುವುದನ್ನು ಭಾರತೀಯ ಕಾನೂನಿನಡಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಸಂಸ್ಥೆಯು ಆಕ್ಷೇಪಾರ್ಹ ಜಾಹೀರಾತುಗಳನ್ನು ನಿರ್ಬಂಧಿಸಲು ಮತ್ತು ಸೂಕ್ತ ವಿವರಣೆ ನೀಡಲು ವಿಫಲವಾದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (POCSO) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ನೋಟಿಸ್‌ನಲ್ಲಿ ಎಚ್ಚರಿಸಿದೆ.
ವರದಿಗಳ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸಾರವಾಗುತ್ತಿದ್ದ ಈ ಪಾವತಿಸಿದ ಜಾಹೀರಾತುಗಳು ಬಳಕೆದಾರರನ್ನು ಟೆಲಿಗ್ರಾಂ (Telegram) ಆ್ಯಪ್‌ನಂತಹ ಇತರ ವೇದಿಕೆಗಳಿಗೆ ಕರೆದೊಯ್ಯುತ್ತಿದ್ದವು. ಅಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ವಿಡಿಯೊಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮೆಟಾ ಸಂಸ್ಥೆಯ ವಕ್ತಾರರು, “ಮಕ್ಕಳ ಮೇಲಿನ ದೌರ್ಜನ್ಯವನ್ನು ಪ್ರಚೋದಿಸುವ ಯಾವುದೇ ಕಂಟೆಂಟ್ ಅಥವಾ ಜಾಹೀರಾತುಗಳಿಗೆ ನಮ್ಮ ವೇದಿಕೆಯಲ್ಲಿ ಕಿಂಚಿತ್ತೂ ಅವಕಾಶವಿಲ್ಲ . ನಮ್ಮ ನಿಯಮಗಳನ್ನು ಉಲ್ಲಂಘಿಸಿದ ಜಾಹೀರಾತುಗಳು ಮತ್ತು ಖಾತೆಗಳನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಇಂತಹ ಅಪರಾಧಗಳನ್ನು ತಡೆಯಲು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ನಿರಂತರವಾಗಿ ಬಳಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.




