ಚುನಾವಣಾ ಫಲಿತಾಂಶ ಹೊರಬರಲು ಇನ್ನು ಕೆಲವೇ ದಿನಗಳಿರುವಾಗ ಪಶ್ಚಿಮ ಬಂಗಾಳದಲ್ಲಿ ಇವಿಎಂ ಅಕ್ರಮದ ಆರೋಪಗಳು ಕೇಳಿಬಂದಿದೆ. ಸ್ಟ್ರಾಂಗ್ ರೂಮ್‌ನ ಸೀಲ್ ತೆಗೆದು ಬ್ಯಾಲೆಟ್ ಯುನಿಟ್ ತೆರೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಡುವೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಕ್ಷಿಣ ಕೋಲ್ಕತ್ತಾದ ಭಬಾನಿಪುರ ಕ್ಷೇತ್ರದ ಸಖಾವತ್ ಸ್ಮಾರಕ ಶಾಲೆಯ ಸ್ಟ್ರಾಂಗ್ ರೂಮ್‌ಗೆ ಭೇಟಿ ನೀಡಿದ್ದಾರೆ. ಮೂರು ಗಂಟೆಗಳಿಗೂ ಹೆಚ್ಚು ಕಾಲ ಅಲ್ಲೇ ಇದ್ದು ಪರಿಸ್ಥಿತಿ ಅವಲೋಕಿಸಿದ್ದಾರೆ.
ಸ್ಟ್ರಾಂಗ್ ರೂಮ್‌ನಿಂದ ನಿರ್ಗಮಿಸಿದ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, “ಇವಿಎಂಗಳನ್ನು ಇಡಲು ಸ್ಟ್ರಾಂಗ್ ರೂಮ್ ಇದೆ. ನಾನು ಅದನ್ನು ಟಿವಿಯಲ್ಲಿ ನೋಡಿದಾಗ, ನಾನು ಬರಬೇಕೆಂದು ಭಾವಿಸಿದೆ. ಕೇಂದ್ರ ಭದ್ರತಾ ಸಿಬ್ಬಂದಿ ಆರಂಭದಲ್ಲಿ ನನಗೆ ಪ್ರವೇಶಿಸಲು ಅವಕಾಶ ನೀಡಿಲ್ಲ. ಆದರೆ ಅಭ್ಯರ್ಥಿಯಾಗಿ ನನಗೆ ಪ್ರವೇಶದ ಹಕ್ಕಿದೆ ಎಂದು ಪ್ರತಿಪಾದಿಸಿದ ಬಳಿಕ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಂಗಾಳದಲ್ಲಿ ಚುನಾವಣಾ ಹೈಡ್ರಾಮಾ: ಸ್ಟ್ರಾಂಗ್ ರೂಮ್‌ನಲ್ಲಿ ನಡುರಾತ್ರಿ ನಡೆದಿದ್ದೇನು?
“ಚುನಾವಣಾ ನಿಯಮಗಳ ಪ್ರಕಾರ, ಅಭ್ಯರ್ಥಿಗಳನ್ನು ಸೀಲ್ ಮಾಡಿದ ಕೋಣೆಯ ಹೊರ ಪರಿಧಿಯವರೆಗೆ ಹೋಗಲು ಅವಕಾಶ ನೀಡಲಾಗುತ್ತದೆ. ಅದರ ಪ್ರಕಾರ ನನಗೆ ಅಲ್ಲಿಯವರೆಗೆ ಹೋಗಲು ಅವಕಾಶ ನೀಡಲಾಯಿತು” ಎಂದು ತಿಳಿಸಿದ್ದಾರೆ.
“ನಾನು ನನ್ನ ಜೀವಮಾನವಿಡೀ ಹೋರಾಡುತ್ತೇನೆ. ಇದು ಸಾವು ಬದುಕಿನ ಹೋರಾಟ. ಯಾವುದೇ ಅಕ್ರಮ ನಡೆದರೆ, ನಾವು ಹೋರಾಡುತ್ತೇವೆ. ಇವಿಎಂಗಳನ್ನು ತಿರುಚುವ ಯತ್ನ ಮಾಡಿದರೆ ತೀವ್ರ ಹೋರಾಟ ನಡೆಸಲಾಗುವುದು” ಮಮತಾ ಬ್ಯಾನರ್ಜಿ ಎಚ್ಚರಿಸಿದರು.




