ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಮ್ಮ ಭಾಷಣದ ಬಳಿಕ ವೇದಿಕೆಯನ್ನು ‘ಶುದ್ಧೀಕರಣ’ಗೊಳಿಸಿದ ಘಟನೆಯನ್ನು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ತೀವ್ರವಾಗಿ ಖಂಡಿಸಿದ್ದಾರೆ. ಮೇಲ್ಮನೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಭಾನಾಯಕ ಜೆ.ಪಿ. ನಡ್ಡಾ, ಇಂತಹ ಕೃತ್ಯಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಪ್ರಕರಣದ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಮುಂಗಾರು ಅಧಿವೇಶನದ ಕಲಾಪದ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ನಾನು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದೆ. ಆ ಸಂದರ್ಭದಲ್ಲಿ ನಾನು ಯಾವುದೇ ಸಮುದಾಯ ಅಥವಾ ಧರ್ಮದ ಹೆಸರನ್ನು ಪ್ರಸ್ತಾಪಿಸದೆ, ಕೇವಲ ಸರ್ಕಾರದ ನೀತಿಗಳ ಕುರಿತು ಮಾತನಾಡಿದ್ದೆ. ಆದರೆ, ನನ್ನ ಭಾಷಣ ಮುಗಿದ ನಂತರ, ಆ ವೇದಿಕೆಯನ್ನು ‘ಶುದ್ಧೀಕರಿಸಲು’ ಬಿಜೆಪಿ ಬೆಂಬಲಿಗರು ಅಲ್ಲಿ ಹೋಮ-ಹವನಗಳನ್ನು ಮಾಡಿದ್ದಾರೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
”ಪ್ರಜಾಪ್ರಭುತ್ವದಲ್ಲಿ ಕಾರ್ಯನಿರ್ವಹಿಸುವ ರೀತಿ ಇದೇನಾ? ನೀವು ಸಂವಿಧಾನವನ್ನು ಹೇಗೆ ರಕ್ಷಿಸುತ್ತಿದ್ದೀರಿ? ನಾನು ಈ ದೇಶದ ವಿರೋಧ ಪಕ್ಷದ ನಾಯಕನಾಗಿದ್ದೇನೆ. ದಲಿತರು ಮುಂದೆ ಬರುವುದಕ್ಕೆ ಈ ದೇಶದಲ್ಲಿ ಅವಕಾಶವಿಲ್ಲ ಎಂಬುದನ್ನೇ ಇದು ತೋರಿಸುತ್ತದೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಮತ್ತು ಜಾತಿ ಸಂಘರ್ಷಗಳನ್ನು ಸೃಷ್ಟಿಸುವ ಇವರ ಈ ಕೃತ್ಯ ಹಿಂದೂ ಧರ್ಮಕ್ಕೂ ವಿರುದ್ಧವಾದುದು. ನಾನು ಇದನ್ನು ಉಗ್ರವಾಗಿ ಖಂಡಿಸುತ್ತೇನೆ” ಎಂದು ಖರ್ಗೆ ಗುಡುಗಿದರು.
ಖರ್ಗೆ ಅವರ ಆರೋಪಗಳಿಗೆ ತಕ್ಷಣವೇ ಎದ್ದುನಿಂತು ಪ್ರತಿಕ್ರಿಯಿಸಿದ ರಾಜ್ಯಸಭಾ ನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು, ಈ ಘಟನೆಯನ್ನು ಖಂಡಿಸಿದರು. “ಖರ್ಗೆ ಜಿ ಅವರು ಹೇಳಿದ ಮಾತುಗಳು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ನಮ್ಮೆಲ್ಲರಿಗೂ ಅತೀವ ಬೇಸರ ತರಿಸಿದೆ. ಭಾರತೀಯ ಜನತಾ ಪಕ್ಷವು ಇಂತಹ ಚಟುವಟಿಕೆಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ನಾವು ಇಂತಹ ವಿಚಾರಗಳನ್ನು ಒಪ್ಪುವುದೂ ಇಲ್ಲ” ಎಂದು ಸ್ಪಷ್ಟನೆ ನೀಡಿದರು.
ಮುಂದುವರಿದು ಮಾತನಾಡಿದ ನಡ್ಡಾ, “ನಾನು ಈ ಘಟನೆಯನ್ನು ವೈಯಕ್ತಿಕವಾಗಿ ಖಂಡಿಸುತ್ತೇನೆ. ಈ ಕುರಿತು ಖಂಡಿತವಾಗಿಯೂ ತನಿಖೆ ನಡೆಸಲಾಗುವುದು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಲಿದ್ದಾರೆ. ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿರುವುದು ನಮ್ಮೆಲ್ಲರಿಗೂ ದೊಡ್ಡ ಮಟ್ಟದ ವಿಷಾದ ತಂದಿದೆ” ಎಂದು ಸದನಕ್ಕೆ ಮತ್ತು ಖರ್ಗೆಯವರಿಗೆ ಭರವಸೆ ನೀಡಿದರು.




