ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಪುತ್ರಿ ಮತ್ತು ಮಾಜಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಶನಿವಾರ ತೆಲಂಗಾಣ ರಾಷ್ಟ್ರ ಸೇನಾ (ಟಿಆರ್‌ಎಸ್) ಎಂಬ ತಮ್ಮದೇ ಆದ ಹೊಸ ಪಕ್ಷವನ್ನು ಪ್ರಾರಂಭಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮ್ಮ ತಂದೆ ಕೆಸಿಆರ್ ಸ್ಥಾಪಿಸಿದ್ದ ಬಿಆರ್‌ಎಸ್‌ನಿಂದ ಕವಿತಾ ಅಮಾನತುಗೊಂಡಿದ್ದರು. ಕಳೆದ ತಿಂಗಳು ತಮ್ಮದೇ ಆದ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.
ಇದನ್ನು ಓದಿದ್ದೀರಾ? ತೆಲಂಗಾಣ | ಮಾಜಿ ಸಿಎಂ ಕೆಸಿಆರ್ ಪುತ್ರಿ, ಬಿಆರ್‌ಎಸ್ ನಾಯಕಿ ಕವಿತಾ ಬಂಧನ
ಮಾರ್ಚ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕವಿತಾ, “ತಮ್ಮ ಪಕ್ಷವು ಸಾರ್ವತ್ರಿಕ ಉನ್ನತಿ ಮತ್ತು ಕಲ್ಯಾಣಕ್ಕಾಗಿ ನಿಲ್ಲುತ್ತದೆ. ಸಮಗ್ರ ಅಭಿವೃದ್ಧಿ ಮತ್ತು ಸ್ವಾವಲಂಬನೆಯನ್ನು ಅದರ ಮೂಲ ತತ್ವಗಳಾಗಿ ಹೊಂದಿದೆ. ತೆಲಂಗಾಣ ರಾಜ್ಯ ಸ್ಥಾನಮಾನ ಪಡೆದ ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ ತೆಲಂಗಾಣದ ಜನರ ಈಡೇರದ ಆಕಾಂಕ್ಷೆಗಳನ್ನು ಈಡೇರಿಸುವ ಗುರಿಯೊಂದಿಗೆ ಹೊಸ ರಾಜಕೀಯ ವೇದಿಕೆಯನ್ನು ರಚಿಸಲಾಗುವುದು” ಎಂದು ಹೇಳಿದ್ದರು.
“12 ವರ್ಷಗಳ ನಂತರವೂ, ತೆಲಂಗಾಣ ಚಳವಳಿಯ ಆಧಾರವಾಗಿದ್ದ ‘ನೀಲು, ನಿಧಿಗಳು, ನಿಯಮಕಲು’ (ನೀರು, ನಿಧಿಗಳು ಮತ್ತು ಉದ್ಯೋಗಗಳು) ಅನ್ನು ನಾವು ಸಾಧಿಸಿಲ್ಲ. ರಾಜ್ಯದಲ್ಲಿ ಸರ್ಕಾರಗಳು ರೈತರು, ಯುವಕರು, ಕೈಗಾರಿಕೋದ್ಯಮಿಗಳು ಮತ್ತು ಅಂಚಿನಲ್ಲಿರುವ ಸಮುದಾಯಗಳ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿವೆ” ಎಂದು ಆರೋಪಿಸಿದರು.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಪಕ್ಷದ ಸ್ಥಾಪಕ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಪುತ್ರಿ ಕೆ ಕವಿತಾ. 2014ರಿಂದ 2019ರವರೆಗೆ ನಿಜಾಮಾಬಾದ್ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. 2020ರಲ್ಲಿ ನಿಜಾಮಾಬಾದ್‌ನಿಂದ ವಿಧಾನ ಪರಿಷತ್ ಸದಸ್ಯೆಯಾಗಿ (MLC) ಆಯ್ಕೆಯಾಗಿದ್ದರು. ಆಂತರಿಕ ಭಿನ್ನಮತ ಮತ್ತು ಸಹೋದರ ಕೆ.ಟಿ. ರಾಮರಾವ್ ಅವರೊಂದಿಗಿನ ವೈಮನಸ್ಸಿನ ಕಾರಣದಿಂದ ಅವರನ್ನು ಬಿಆರ್‌ಎಸ್ ಪಕ್ಷದಿಂದ ಹೊರಹಾಕಲಾಗಿತ್ತು. ಈ ವರ್ಷದ ಜನವರಿ ತಮ್ಮ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.





