ಏಪ್ರಿಲ್ 20ರಿಂದ ವಿಮಾನಯಾನ ಸಂಸ್ಥೆಗಳು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ವಿಮಾನದಲ್ಲಿ ಕನಿಷ್ಠ ಶೇಕಡ 60ರಷ್ಟು ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಿದೆ. ಪಾರದರ್ಶಕ ಸೀಟು ಹಂಚಿಕೆ ನೀತಿಯನ್ನು ಕಾಯ್ದುಕೊಳ್ಳುತ್ತವೆ ಭಾರತದ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ತಿಳಿಸಿದೆ.
ಮಾರ್ಚ್ 18ರಂದು ನಾಗರಿಕ ವಿಮಾನಯಾನ ಸಚಿವಾಲಯವು, ಯಾವುದೇ ವಿಮಾನದಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಕನಿಷ್ಠ ಶೇ.60ರಷ್ಟು ಸೀಟುಗಳನ್ನು ಉಚಿತವಾಗಿ ಹಂಚಿಕೆ ಮಾಡಬೇಕು ಎಂದು ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಡಿಜಿಸಿಎಗೆ ನಿರ್ದೇಶನ ನೀಡಿರುವುದಾಗಿ ಘೋಷಿಸಿತ್ತು.
ಇದನ್ನು ಓದಿದ್ದೀರಾ? ಗುಪ್ತ ಶುಲ್ಕಗಳಿಗೆ ಕೇಂದ್ರದ ತಡೆ: ವಿಮಾನದಲ್ಲಿ ಶೇ.60ರಷ್ಟು ಸೀಟುಗಳ ಆಯ್ಕೆ ಸಂಪೂರ್ಣ ಉಚಿತ
ಈ ಸಂಬಂಧ ಮಾರ್ಚ್ 20ರಂದು ತಿದ್ದುಪಡಿ ಮಾಡಿದ ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆ ಏಪ್ರಿಲ್ 20ರಿಂದ ಜಾರಿಗೆ ಬರಲಿದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
“ವಿಮಾನಯಾನ ಸಂಸ್ಥೆಗಳು ಪಾರದರ್ಶಕ ಸೀಟು ಹಂಚಿಕೆ ನೀತಿಗಳನ್ನು ಕಾಯ್ದುಕೊಳ್ಳಬೇಕು. ಉಚಿತ ಸೀಟುಗಳ ಲಭ್ಯತೆ ಮತ್ತು ಅವುಗಳ ಬುಕಿಂಗ್ ವೇಳೆ ಅನ್ವಯವಾಗುವ ಷರತ್ತುಗಳನ್ನು ಸ್ಪಷ್ಟವಾಗಿ ತಿಳಿಸಬೇಕು” ಎಂದು ಮಾರ್ಚ್ 20ರ ಪರಿಷ್ಕೃತ ಸುತ್ತೋಲೆ ತಿಳಿಸಿದೆ.
ಹಾಗೆಯೇ ಒಂದೇ ಪಿಎನ್‌ಆರ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಹತ್ತಿರದಲ್ಲಿ ಸೀಟುಗಳನ್ನು ಹಂಚಿಕೆ ಮಾಡಬೇಕು. ಸಾಮಾನ್ಯವಾಗಿ ಒಂದೇ ಸಾಲಿನಲ್ಲಿ ಪಕ್ಕದ ಸೀಟುಗಳನ್ನು ನೀಡಬೇಕು ಎಂದು ಸುತ್ತೋಲೆ ಹೇಳುತ್ತದೆ. ಹೊಸ ನಿರ್ದೇಶನವನ್ನು ಜಾರಿಗೆ ತರಲು ವಿಮಾನಯಾನ ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಸ್ತುತ ಶೇಕಡ 20ರಷ್ಟು ಸೀಟುಗಳನ್ನು ಮಾತ್ರ ಉಚಿತವಾಗಿ ಆಯ್ಕೆ ಮಾಡಲು ಅವಕಾಶವಿದೆ. ಉಳಿದಂತೆ ಸೀಟುಗಳನ್ನು ಆಯ್ಕೆ ಮಾಡಲು ವಿಮಾನಯಾನ ಸಂಸ್ಥೆಗಳು 200 ರಿಂದ 2,100 ರೂ.ಗಳಷ್ಟು ಶುಲ್ಕವನ್ನು ವಿಧಿಸುತ್ತವೆ.




