ಕಾರ್ಮಿಕ ಕಾನೂನುಗಳ ಉಲ್ಲಂಘನೆ ಆರೋಪದ ಮೇಲೆ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ಜಿ ಮತ್ತು ಕಂಪನಿಯ ಇತರ ಹಿರಿಯ ಅಧಿಕಾರಿಗಳ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠ ಬುಧವಾರ ರದ್ದುಗೊಳಿಸಿದೆ.
ಪ್ರೇಮ್ಜಿ ಮತ್ತು ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಫೀರ್ ಅಹ್ಮದ್ ಅವರ ಪೀಠವು ಈ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ ಸಮನ್ಸ್ ಅನ್ನು ಸಹ ನ್ಯಾಯಾಲಯ ರದ್ದುಗೊಳಿಸಿದೆ.
ಇದನ್ನು ಓದಿದ್ದೀರಾ? ವಿಪ್ರೋ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ; ಸಿಎಂ ಮನವಿ ತಿರಸ್ಕರಿಸಿದ ಅಜೀಂ ಪ್ರೇಮ್ಜಿ
ವಿಪ್ರೋದ ಗಾಜಿಯಾಬಾದ್ ಕಚೇರಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಪಾಲಿಸದ ಆರೋಪದ ಮೇಲೆ ಕಾರ್ಮಿಕ ಇಲಾಖೆ ದೂರು ನೀಡಿತ್ತು. ದೂರಿನ ಮೇರೆಗೆ, ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರೇಮ್ಜಿ ಮತ್ತು ಇತರ ಕೆಲವು ಕಂಪನಿ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಪ್ರೇಮ್ಜಿ ಈ ಸಮನ್ಸ್ ಅನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಕಾರ್ಮಿಕ ಕಾನೂನುಗಳ ತಾಂತ್ರಿಕ ಉಲ್ಲಂಘನೆಗೆ ಸಂಬಂಧಿಸಿದ ವಿಷಯಗಳಲ್ಲಿ, ಕಂಪನಿಯ ಅಧ್ಯಕ್ಷರಂತಹ ಉನ್ನತ ಕಾರ್ಯನಿರ್ವಾಹಕರು ನೇರವಾಗಿ ಒಳಗೊಂಡಿರುವ ನಿರ್ದಿಷ್ಟ ಆರೋಪಗಳಿಲ್ಲದಿದ್ದರೆ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಕಂಪನಿಯ ದೈನಂದಿನ ಕಾರ್ಯಚಟುವಟಿಕೆಯಲ್ಲಿ ಅಥವಾ ಕಾರ್ಮಿಕ ಕಾನೂನು ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಅಧ್ಯಕ್ಷರ ಪಾತ್ರ ಏನಿದೆ ಎಂಬುದನ್ನು ದೂರಿನಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲ. ಸಮನ್ಸ್ ಜಾರಿಗೊಳಿಸುವ ಮೊದಲು ಮ್ಯಾಜಿಸ್ಟ್ರೇಟ್ ಪ್ರಕರಣದ ವಾಸ್ತವಿಕ ಅಂಶಗಳನ್ನು ಸರಿಯಾಗಿ ಪರಿಶೀಲಿಸಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.




