ವಿಜಯಪುರ ನಗರದಲ್ಲಿ ಬೆಳಗಿನ ಜಾವ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಲ್ತಾಪ್ ಮನಗೂಳಿ ಕೊಲೆಯಾದ ಯುವಕ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಮೃತ ಅಲ್ತಾಪ್ ಮನಗೂಳಿ ವಿರುದ್ಧ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಆತನ ಹೆಸರನ್ನು ಎಂ.ಒ.ಬಿ. (ಮಾದರಿ ಅಪರಾಧಿಗಳ ಪಟ್ಟಿ)ಯಲ್ಲಿ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗಾಂಧಿಚೌಕ್ ಪೊಲೀಸ್ ಠಾಣೆಯ ಸಿಪಿಐ ಹಾಗೂ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ಅಲ್ತಾಪ್ ಮನಗೂಳಿ ಹತ್ಯೆಗೆ ನಿಖರ ಕಾರಣವೇನು, ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: ವಿಜಯಪುರ | ‘ಜಲಜೀವನ್ ಮಿಷನ್’ ಕಾಮಗಾರಿ ಪೂರ್ಣಗೊಳಿಸಲು ಡಿಸೆಂಬರ್ ಗಡುವು
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಜಯಪುರ ನಗರದ ಶಾಹೂ ನಗರದ ಬಳಿ (ಶಿವಾಜಿ ವೃತ್ತದ ಹತ್ತಿರ) ಈ ಕೃತ್ಯ ನಡೆದಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಾಗೂ ಕಲ್ಲಿನಿಂದ ಜಜ್ಜಿ ಅಲ್ತಾಪ್ನನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗಾಂಧಿಚೌಕ್ ಪೊಲೀಸರು ತನಿಖೆ ನಡೆಸಿ, ಈ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು (ಮುರ್ತುಜಾ ಖಾದ್ರಿ ಮತ್ತು ಮೊಯಿನ್ ಶಂಕ್) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ಗುಂಪುಗಳ ನಡುವಿನ ಹಳೆ ವೈಷಮ್ಯ ಅಥವಾ ಸಣ್ಣಪುಟ್ಟ ಜಗಳವೇ ಈ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.




