ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸಲು ಅಕ್ಟೋಬರ್ 16ರಂದು ದೆಹಲಿಯ ಕನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ರಾಷ್ಟ್ರಧ್ವಜದೊಂದಿಗೆ ಸಮಾವೇಶಗೊಳ್ಳುವಂತೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಅವರು, ಸಿಜೆಪಿ ಮುಖಂಡರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಕೇವಲ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಜೈಲಿಗೆ ಕಳುಹಿಸಲಾಗಿದೆ. ರಾಷ್ಟ್ರಧ್ವಜವನ್ನು ಪ್ರೀತಿಸುವ ದೇಶಭಕ್ತರು ಶುಕ್ರವಾರ ಸಂಜೆ 5 ಗಂಟೆಗೆ ಕನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ಗೆ ಧ್ವಜದೊಂದಿಗೆ ಆಗಮಿಸಿ. ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಲ್ಲ ಎಂಬುದನ್ನು ನಾವು ತೋರಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.
ದೆಹಲಿಗೆ ಬರಲು ಸಾಧ್ಯವಾಗದವರು ತಮ್ಮ ತಮ್ಮ ನಗರಗಳಲ್ಲಿ ಸಂಜೆ ತ್ರಿವರ್ಣ ಧ್ವಜದ ಮೆರವಣಿಗೆ ನಡೆಸುವಂತೆ ದೀಪ್ಕೆ ಮನವಿ ಮಾಡಿದ್ದಾರೆ. ರಾಷ್ಟ್ರಧ್ವಜ ನಮ್ಮ ಹೆಮ್ಮೆ ಎಂಬುದನ್ನು ಎಲ್ಲರೂ ತೋರಿಸಬೇಕು. ಈ ಹೋರಾಟದ ಬಳಿಕ ನಮ್ಮನ್ನೂ ಜೈಲಿಗೆ ಕಳುಹಿಸುವ ಸಾಧ್ಯತೆಯಿದೆ. ಅದಕ್ಕೆ ತಾವು ಹೆದರುವುದಿಲ್ಲ. ತ್ರಿವರ್ಣ ಧ್ವಜ ನನ್ನ ಹೆಮ್ಮೆ. ನಾನು ಅದನ್ನು ಹಾರಿಸಿಯೇ ತೀರುತ್ತೇನೆ” ಎಂದು ಅವರು ಹೇಳಿದ್ದಾರೆ.
ಸಿಜೆಪಿ ಮುಖಂಡರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದಿದ್ದರು. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದ ಅವರು, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ದರು. ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ವಿಧಿಸಲಾಗಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿದ ಮತ್ತು ಶಾಂತಿ ಕಾಪಾಡುವ ಬಾಂಡ್ನ ಷರತ್ತುಗಳನ್ನು ಮೀರಿ ನಡೆದುಕೊಂಡ ಆರೋಪ ಅವರ ಮೇಲಿದೆ. ಬುಧವಾರ ಬೆಳಗ್ಗೆ ಇಬ್ಬರನ್ನೂ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಬಳಿಕ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ಈ ಪ್ರಕರಣದಲ್ಲಿ ಸಿಜೆಪಿ ಸದಸ್ಯರ ಸಹವರ್ತಿ ಅಜಿಂಕ್ಯ ಶಿಂಧೆ ಅವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರು ತಿಂಗಳ ಕಾಲ ಶಾಂತಿ ಕಾಪಾಡಿಕೊಂಡು ಉತ್ತಮ ನಡವಳಿಕೆಯಿಂದ ಇರುವಂತೆ ಸೂಚಿಸಿ ಅವರನ್ನು ಬಿಡುಗಡೆ ಮಾಡಲಾಗಿದೆ. ಶಿಂಧೆ ಅವರು ವೈಯಕ್ತಿಕ ಬಾಂಡ್ ಸಲ್ಲಿಸಿದ್ದು, 5,000 ರೂಪಾಯಿ ಮೊತ್ತದ ಜಾಮೀನು ಭದ್ರತೆಯನ್ನೂ ಒದಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರ ಬಂಧನವನ್ನು ವಿರೋಧಿಸಿ ಸಿಜೆಪಿ ಈಗ ದೆಹಲಿಯಲ್ಲಿ ತ್ರಿವರ್ಣ ಧ್ವಜದೊಂದಿಗೆ ಪ್ರತಿಭಟನೆ ನಡೆಸಲು ಮುಂದಾಗಿದೆ. ರಾಷ್ಟ್ರಧ್ವಜ ಹಾರಿಸುವುದು ಅಪರಾಧವಲ್ಲ ಎಂಬ ಸಂದೇಶವನ್ನು ಜನರಿಗೆ ತಲುಪಿಸುವುದು ಈ ಪ್ರತಿಭಟನೆಯ ಉದ್ದೇಶ ಎಂದು ದೀಪ್ಕೆ ಹೇಳಿದ್ದಾರೆ.
ಇದನ್ನೂ ಓದಿ: ಸಿಜೆಪಿ ನಾಯಕರ ಬಂಧನಕ್ಕೆ ಆಕ್ರೋಶ; ನಾಳೆ ದೆಹಲಿಯಲ್ಲಿ ತ್ರಿವರ್ಣ ಧ್ವಜ ಪ್ರತಿಭಟನೆಗೆ ದೀಪ್ಕೆ ಕರೆ
ಸಿಜೆಪಿ ನಾಯಕರ ಬಂಧನವು ಆರಂಭದಲ್ಲಿ ಜಂತರ್ ಮಂತರ್ನಲ್ಲಿ ನಿಷೇಧಾಜ್ಞೆ ಮತ್ತು ಶಾಂತಿ ಬಾಂಡ್ ಉಲ್ಲಂಘಿಸಿದ ಪ್ರಕರಣವಾಗಿತ್ತು. ಆದರೆ ಅಭಿಜೀತ್ ದೀಪ್ಕೆ ಕನಾಟ್ ಪ್ಲೇಸ್ನಲ್ಲಿ ರಾಷ್ಟ್ರಧ್ವಜದೊಂದಿಗೆ ಸಭೆ ಸೇರಲು ಕರೆ ನೀಡುವ ಮೂಲಕ ಹಾಗೂ ದೇಶಾದ್ಯಂತ ‘ತಿರಂಗಾ ಯಾತ್ರೆ’ ನಡೆಸಲು ಸೂಚಿಸುವ ಮೂಲಕ ಈ ಇಡೀ ಪ್ರತಿಭಟನೆಗೆ ಸಂಪೂರ್ಣ ಬೇರೆ ತಿರುವು ನೀಡಿದ್ದಾರೆ. ಕೇವಲ ದೆಹಲಿಗೆ ಸೀಮಿತವಾಗಿದ್ದ ಈ ಪ್ರತಿಭಟನೆಯನ್ನು ದೇಶದ ಇತರೆ ನಗರಗಳಿಗೂ ವಿಸ್ತರಿಸಲು ಕರೆ ನೀಡಿರುವುದು, ಸರ್ಕಾರದ ಧೋರಣೆಯನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡುವ ಮೂಲಕ ಹೋರಾಟಕ್ಕೆ ಸಿಜೆಪಿ ಹೊಸ ದಿಕ್ಕು ನೀಡಿದೆ. ಕನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ ದೆಹಲಿಯ ಅತ್ಯಂತ ಪ್ರಮುಖ ಹಾಗೂ ಗಣ್ಯ ವಾಣಿಜ್ಯ ಪ್ರದೇಶವಾಗಿರುವುದರಿಂದ, ಅಲ್ಲಿ ಸಾರ್ವಜನಿಕ ಸಮಾವೇಶಕ್ಕೆ ಕರೆ ನೀಡುವುದು ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ದಟ್ಟಣೆಯ ದೃಷ್ಟಿಯಿಂದ ದೆಹಲಿ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.




