ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ದೆಹಲಿಯಲ್ಲಿ ಹೋರಾಟದ ವೇಳೆ ಲಾಠಿಚಾರ್ಜ್ ನಡೆಸಿ ಬಂಧಿಸಲಾದ CPI(M) ಮುಖಂಡರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ, ವಿಜಯಪುರ ಜಿಲ್ಲಾ CPI(M) ಪಕ್ಷದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಮೇಣದಬತ್ತಿ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ನೀತಿಗಳು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುತ್ತಿವೆ ಮತ್ತು ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಎಸ್ಐಆರ್ ಪ್ರಕ್ರಿಯೆಯಿಂದ ಮತದಾನದ ಹಕ್ಕಿಗೆ ಧಕ್ಕೆಯಾಗುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಕೈಬಿಟ್ಟು ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ದೆಹಲಿಯಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಸಿಪಿಐ(ಎಂ) ಮುಖಂಡರ ಮೇಲೆ ಲಾಠಿಚಾರ್ಜ್ ನಡೆಸಿ ಬಂಧಿಸಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ಬಂಧಿತ ಮುಖಂಡರನ್ನು ಯಾವುದೇ ವಿಳಂಬವಿಲ್ಲದೆ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಸುರೇಖಾ ರಜಪೂತ, ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಗಾಗಿ ಜನರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ಜನರ ಹಕ್ಕುಗಳನ್ನು ರಕ್ಷಿಸಲು ಪ್ರಜಾಪ್ರಭುತ್ವದ ಪರ ಇರುವ ಶಕ್ತಿಗಳು ಒಂದಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ಪ್ಲಾಟ್ಫಾರ್ಮ್ ಮೇಲೆ ಹರಿವ ಚರಂಡಿ ನೀರು; ಪ್ರಯಾಣಿಕರ ಸಮಸ್ಯೆಗೆ ಅಧಿಕಾರಿಗಳು ಕುರುಡು!
ಈ ಸಂದರ್ಭದಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಶೇಖರ, ಸಾಬು ಗುಗದೊಡ್ಡಿ, ಲಕ್ಷ್ಮಣ ಆರ್. ಬೆಳ್ಳಪ್ಪನವರ, ರಾಜಾ ನದಾಫ್, ಮಲಿಕ್ ಸಾಬ್ ಬಾಗಲಕೋಟೆ, ಶಂಶಾದ್ದೀನ ಚಡಚಣ, ಲಾಲ್ಬಿ ವಾಲಿಕಾರ್, ಕುಸುಮ ಹಜಾರೆ, ನಾಗಪ್ಪ ಪೂಜಾರಿ, ರೇವಣಸಿದ್ದ ಪೂಜಾರಿ, ಮಹೇಶ್ ಶಿವಗದಗಿ, ಗೋಪಾಲ್ ಶಿವಗದಗಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.




