ತಮಿಳುನಾಡು ವಿಧಾನಸಭೆ ಚುನಾವಣೆ ನಡೆದ ಬಳಿಕ ಸರ್ಕಾರ ರಚನೆ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ. ಒಂದೆಡೆ ರಾಜ್ಯಪಾಲರು ಬಹುಮತ ಸಾಬೀತುಪಡಿಸಿದ ಬಳಿಕವೇ ನಟ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆಗೆ ಸರ್ಕಾರ ರಚಿಸಲು ಅವಕಾಶ ನೀಡುವುದು ಎಂದು ಹೇಳುತ್ತಿದ್ದಾರೆ. ಇದನ್ನು ಪ್ರಶ್ನಿಸಿ ಟಿವಿಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇವೆಲ್ಲವುದರ ನಡುವೆ ಸರ್ಕಾರ ರಚಿಸಲು ಎಐಎಡಿಎಂಕೆಯನ್ನು ಆಹ್ವಾನಿಸಿ ಎಂದು ಎಎಂಎಂಕೆ ಹೇಳಿದೆ. ಈ ಮೂಲಕ ಪರೋಕ್ಷವಾಗಿ ತನ್ನ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದೆ.
ಎಐಎಡಿಎಂಕೆಯ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವಂತೆ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ ಒತ್ತಾಯಿಸಿದ್ದಾರೆ. ಹಾಗೆಯೇ ಕುದುರೆ ವ್ಯಾಪಾರದ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಟಿವಿಕೆ ನಿರಾಕರಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿಜಯ್ ಅನಿರೀಕ್ಷಿತ ಗೆಲುವು- ದ್ರಾವಿಡ ದನಿ ಉಡುಗಿದ ದ್ಯೋತಕವೇ?
ಈ ಬಗ್ಗೆ ಲೋಕ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ದಿನಕರನ್, “ನಮ್ಮ ಪಕ್ಷದ ಚುನಾಯಿತ ಶಾಸಕ ಈಗ ನಾಪತ್ತೆಯಾಗಿದ್ದಾರೆ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಬಹುಮತದ ಕೊರತೆಯಿಂದಾಗಿ ಸರ್ಕಾರ ರಚಿಸುವ ಹತಾಶ ಪ್ರಯತ್ನದಲ್ಲಿರುವ ಟಿವಿಕೆ ಕುದುರೆ ವ್ಯಾಪಾರದಲ್ಲಿ ತೊಡಗಿರಬಹುದು ಎಂಬ ಅನುಮಾನ ನಮಗಿದೆ” ಎಂದು ದೂರಿದ್ದಾರೆ.
ಈ ಆರೋಪವನ್ನು ಟಿವಿಕೆ ನಿರಾಕರಿಸಿದೆ. ಜತೆಗೆ ಪಕ್ಷದ ನಾಯಕ ವಿಜಯ್ ಅಷ್ಟು ಕೆಳಮಟ್ಟಕ್ಕೆ ಇಳಿಯುವುದಿಲ್ಲ ಎಂದು ಹೇಳಿದೆ. ಹಾಗೆಯೇ ಕಾಮರಾಜ್ ಟಿವಿಕೆಗೆ ಬೆಂಬಲ ನೀಡುವ ಪತ್ರಕ್ಕೆ ಸಹಿ ಮಾಡುತ್ತಿರುವ ವಿಡಿಯೋವನ್ನೂ ಬಿಡುಗಡೆ ಮಾಡಿದೆ. ಆದರೆ ಕಾಮರಾಜ್ ಮಾತ್ರ ತಾನು ಬೆಂಬಲ ನೀಡಿಲ್ಲ ಎನ್ನುತ್ತಿದ್ದಾರೆ.
ನಿನ್ನೆ ರಾತ್ರಿ ಹಠಾತ್ತನೆ ಕಾಣಿಸಿಕೊಂಡ ಕಾಮರಾಜ್, ಎಐಎಡಿಎಂಕೆಯ ಹೊಸದಾಗಿ ಆಯ್ಕೆಯಾದ ಸದಸ್ಯರೊಂದಿಗೆ ಪುದುಚೇರಿಯ ರೆಸಾರ್ಟ್‌ನಲ್ಲಿ ತಂಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಟಿವಿಕೆಗೆ ಅವರು ನೀಡಿದ ಬೆಂಬಲ ಪತ್ರವನ್ನು ನಕಲಿ ಎಂದು ಆರೋಪಿಸಿದ್ದಾರೆ.




