ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದರೆ, ಅದು ಹೋಟೆಲ್ ಮತ್ತು ಕೈಗಾರಿಕೆಗಳೆಂಬ ಕಟ್ಟಡಗಳ ಮೇಲೆ ಪರಿಣಾಮ ಬೀರುವುದಿಲ್ಲ. ದೇಶವೆಂದರೆ ಜನರೇ ಹೊರತು ಕಟ್ಟಡಗಳಲ್ಲ. ಬೆಲೆ ಏರಿಕೆ ಎನ್ನುವುದು ಬಡವರನ್ನು ಬಿಕ್ಕಟ್ಟಿಗೆ ಸಿಲುಕಿಸದೆ ಇರುವುದಿಲ್ಲ. ಮನೆ-ಮಡದಿ-ಮಕ್ಕಳಿಲ್ಲದ ಮೋದಿಯವರಿಗೆ ಈ ಕಷ್ಟಗಳು ಅರ್ಥವಾಗುವುದಿಲ್ಲ.
ಮೇ 1ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏಕಾಏಕಿ 1,147 ರೂ. ಏರಿಸಲಾಗಿದೆ. ಇದರಿಂದಾಗಿ 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 3,154 ರೂ. ತಲುಪಿದೆ. ಕೇವಲ ಎರಡು ತಿಂಗಳ ಅಂತರದಲ್ಲಿ ಮೂರು ಸಲ ಬೆಲೆ ಏರಿಸುವ ಮೂಲಕ ದೇಶದ ಜನರ ಬದುಕನ್ನು ಬಿಕ್ಕಟ್ಟಿಗೆ ತಳ್ಳಲಾಗಿದೆ. ಮಾರ್ಚ್ 7ರಂದು 115, ಏಪ್ರಿಲ್ 1ರಂದು 218 ಮತ್ತು ಮೇ 1ರಂದು 1,147 ರೂ.ಗಳನ್ನು ಏರಿಸುವ ಮೂಲಕ ಕೇಂದ್ರ ಸರ್ಕಾರ ದುಬಾರಿ ದಾಖಲೆ ಬರೆದಿದೆ.
ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿನ ನಿರಂತರ ಏರಿಕೆಯು ಹೋಟೆಲ್ ಉದ್ಯಮ ಹಾಗೂ ಕೈಗಾರಿಕಾ ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರಿದೆ. ಅವುಗಳನ್ನು ಅವಲಂಬಿಸಿರುವ ವಿವಿಧ ಕ್ಷೇತ್ರಗಳ ಬೇಡಿಕೆ-ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾಗಿದೆ. ಆರ್ಥಿಕ ಸ್ಥಿತಿಗತಿ ಏರುಪೇರಾಗಿದೆ.
ಅದರಲ್ಲೂ ಹೋಟೆಲ್, ರೆಸ್ಟೋರೆಂಟ್, ಡಾಬಾ, ಕೆಫೆ, ಕ್ಯಾಂಟೀನ್, ಪಿಜಿ ಮತ್ತು ಬೇಕರಿಗಳಲ್ಲಿ ತಿಂಡಿ-ಊಟದ ದರಗಳು ಶೇ. 15ರಿಂದ 20ರಷ್ಟು ಹೆಚ್ಚಾಗಿವೆ. ಒಂದು ಕಪ್ ಕಾಫಿಯ ಬೆಲೆ 10ರಿಂದ 25 ರೂ.ಗಳವರೆಗೆ ಏರಿಕೆಯಾಗಿದೆ. ಅನೇಕ ಕಡೆ ಹೋಟೆಲ್ ಮಾಲೀಕರು ಆಹಾರದ ಪ್ರಮಾಣವನ್ನು- ಗಾತ್ರವನ್ನು ಕಡಿಮೆ ಮಾಡಿದ್ದಾರೆ. ರಸ್ತೆ ಬದಿಯ ತಳ್ಳುಗಾಡಿಗಳು, ಟೀ ಅಂಗಡಿಗಳು, ಸಣ್ಣ ಕ್ಯಾಂಟೀನ್‌ಗಳು ಈ ಭಾರೀ ಬೆಲೆಯನ್ನು ಭರಿಸಲಾಗದೆ ನಷ್ಟ ಅನುಭವಿಸುತ್ತಿವೆ. ಕೆಲವು ಮುಚ್ಚುತ್ತಿವೆ. ಈ ಬೆಲೆ ಏರಿಕೆಯಿಂದಾಗಿ ತಮಿಳುನಾಡಿನ ಸುಮಾರು 10 ಸಾವಿರಕ್ಕೂ ಹೆಚ್ಚು ಸಣ್ಣ ಕ್ಯಾಂಟೀನ್‌ಗಳು ಮುಚ್ಚಲ್ಪಟ್ಟಿವೆ ಎಂದು ವರದಿಯಾಗಿದೆ. ವ್ಯಾಪಾರ ಕುಂಠಿತಗೊಂಡ ಕಾರಣ ಅನೇಕ ಹೋಟೆಲ್‌ಗಳಲ್ಲಿ ದಿನಗೂಲಿ ನೌಕರರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಇದು ಬಡ ಮತ್ತು ಮಧ್ಯಮ ವರ್ಗದ ಕಾರ್ಮಿಕರ ಬದುಕಿನ ಮೇಲೆ ನೇರ ಪರಿಣಾಮ ಬೀರಿದೆ.
ಇದನ್ನು ಓದಿದ್ದೀರಾ?: ತಮಿಳುನಾಡು ರಾಜ್ಯಪಾಲರ ನಡೆ ಕೆಟ್ಟ ಪರಂಪರೆಯೊಂದರ ಮುಂದುವರಿಕೆ
ಇನ್ನು ಹೋಟೆಲ್‌ಗಳಿಂದ ಬೇಡಿಕೆ ಕಡಿಮೆಯಾದಂತೆ, ಅವುಗಳಿಗೆ ತರಕಾರಿ, ಹಣ್ಣು, ಹಾಲು ಮತ್ತು ದಿನಸಿ ವಸ್ತುಗಳನ್ನು ಪೂರೈಸುವ ಸಣ್ಣ ಉದ್ಯಮಗಳ ಮೇಲೆ ಹೊಡೆತ ಬಿದ್ದಿದೆ. ಸರಕು ಸಾಗಾಣಿಕೆಯನ್ನು ಅವಲಂಬಿಸಿರುವವರ ಆದಾಯ ಕುಸಿದಿದೆ. ಅಂದರೆ ಪೂರೈಕೆಯ ಸರಪಳಿ ಸಂಪೂರ್ಣ ವ್ಯತ್ಯಯವಾಗಿದೆ. ಹಾಗೆಯೇ ಹೋಟೆಲ್‌ಗಳ ಪಾರ್ಸೆಲ್ ಸೇವೆಗಳ ಮೇಲೆ ಅವಲಂಬಿತರಾಗಿದ್ದ ಗಿಗ್ ವರ್ಕರ್‍ಸ್‌ಗಳಿಗೆ ಕೆಲಸವಿಲ್ಲದಂತಾಗಿದೆ. ಅವರು ಅವಲಂಬಿಸಿದ್ದ ದಿನಗೂಲಿಯ ಮೇಲೆ ಹೊಡೆತ ಬಿದ್ದಿದೆ. ಇವರೆಲ್ಲರೂ ಬಡ-ಮಧ್ಯಮವರ್ಗದವರೇ ಆಗಿದ್ದು, ಅವರ ಬದುಕು ಕಷ್ಟಕ್ಕೆ ಸಿಲುಕಿದೆ.
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಕೆಲವರು ಪರ್ಯಾಯ ಇಂಧನದತ್ತ ಮುಖಮಾಡಿ ಮತ್ತೆ ಸೌದೆ ಅಥವಾ ಕಲ್ಲಿದ್ದಲಿನ ಮೊರೆ ಹೋಗುತ್ತಿದ್ದಾರೆ. ಅವುಗಳ ಬೆಲೆಯೂ ಏರಿಕೆಯಾಗಿ ಪೂರೈಕೆಯೂ ವ್ಯತ್ಯಯವಾಗಿದೆ. ಸರ್ಕಾರವು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆಗೆ ಉತ್ತೇಜನ ನೀಡುತ್ತಿದ್ದರೂ, ಸಣ್ಣ ವ್ಯಾಪಾರಿಗಳಿಗೆ ತಕ್ಷಣವೇ ಆ ವ್ಯವಸ್ಥೆಗೆ ಬದಲಾಗುವುದು ಕಷ್ಟವಾಗಿದೆ. ಅದು ಆರ್ಥಿಕ ಹೊರೆ ಎನಿಸಿದೆ.
ಇನ್ನು ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಅಂತಿಮವಾಗಿ ಅದು ಗ್ರಾಹಕರ ಮೇಲೆ ಬಿದ್ದಿದೆ. ಒಂದೆಡೆ ಜೀವನೋಪಾಯ ಕಷ್ಟವಾಗುತ್ತಿದ್ದರೆ, ಮತ್ತೊಂದೆಡೆ ದೈನಂದಿನ ಖರ್ಚುಗಳು ನಿಯಂತ್ರಣ ತಪ್ಪುತ್ತಿವೆ. ಹೀಗಾಗಿ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರಗಳಿಂದ ತತ್ತರಿಸಿರುವ ಬಡವರು ಬದುಕುವುದೇ ಕಷ್ಟವಾಗಿದೆ.
ವಿಪರ್ಯಾಸಕರ ಸಂಗತಿ ಎಂದರೆ, ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಲು ಅಥವಾ ಸಮಜಾಯಿಷಿ ನೀಡಲು ಕೇಂದ್ರ ಸರ್ಕಾರದ ಯಾವೊಬ್ಬ ಸಚಿವರೂ ಮುಂದೆ ಬಂದಿಲ್ಲ. ಬದಲಿಗೆ ಅಧಿಕಾರಿಗಳನ್ನು ಮುಂದೆ ಬಿಟ್ಟಿದ್ದಾರೆ. ಮೇ 8ರಂದು ಪೆಟ್ರೋಲಿಯಂ ಸಚಿವಾಲಯ ಜಂಟಿಕಾರ್ಯದರ್ಶಿ ಸುಜಾತಾ ಶರ್ಮ, ‘ನಾವು ಆಮದು ಮಾಡಿಕೊಳ್ಳುವ ಎಲ್‌ಪಿಜಿಯಲ್ಲಿ ಶೇ. 90ರಷ್ಟು ಮಧ್ಯಪ್ರಾಚ್ಯದಿಂದ ಬರುತ್ತದೆ. ಎರಡು ತಿಂಗಳುಗಳ ಹಿಂದೆ ಬ್ಯಾರೆಲ್‌ಗೆ ಸುಮಾರು 70 ಡಾಲರ್ ಇದ್ದ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಈಗ ಸುಮಾರು 120 ಡಾಲರ್‌ಗಳಿಗೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಲೆಗಳಲ್ಲಿ ಭಾರೀ ಅಸ್ಥಿರತೆ ಉಂಟಾಗಿದೆ. ಜೊತೆಗೆ ಸರಬರಾಜು ವ್ಯತ್ಯಯವಾಗಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳಿಗೆ ತಿಂಗಳಿಗೆ 30 ಸಾವಿರ ಕೋಟಿ ನಷ್ಟ ಉಂಟಾಗಿದೆ. ಸೀಮಾ ಸುಂಕ ಕಡಿತಗೊಳಿಸಿದ್ದರಿಂದ ಸರ್ಕಾರಕ್ಕೆ ತಿಂಗಳಿಗೆ 14 ಸಾವಿರ ಕೋಟಿ ಹೊರೆ ಬಿದ್ದಿದೆ’ ಎಂದು ಸಮಜಾಯಿಷಿ ನೀಡಿದ್ದಾರೆ.
ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ, ಪ್ರಮುಖ ಇಂಧನ ಕಾರಿಡಾರ್ ಆಗಿರುವ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವುದರಿಂದ ಜಾಗತಿಕ ತೈಲ ಬೆಲೆ ಶೇ. 50ರಷ್ಟು ಹೆಚ್ಚಾಗಿರುವುದು ನಿಜ. ಇದರ ಪರಿಣಾಮವಾಗಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆ ಏರಿಸಿರುವುದೂ ನಿಜ. ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಎಂಬ ಮೂರು ಮುಖ್ಯ ಕಂಪನಿಗಳು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ, ಡಾಲರ್ ಎದುರಿನ ರೂಪಾಯಿ ಮೌಲ್ಯ, ಸಾಗಣೆ ವೆಚ್ಚ, ತೆರಿಗೆಗಳು- ಈ ಅಂಶಗಳನ್ನು ಪರಿಗಣಿಸಿ ದರ ಏರಿಸಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇದು ಕೂಡ ನಿಜ, ಅನುಮಾನವಿಲ್ಲ.
ಆದರೆ, ಬೆಲೆ ಏರಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ನುಣುಚಿಕೊಳ್ಳಲು ಆಗುತ್ತದೆಯೇ? ಅಸಲಿಗೆ, ತಾಂತ್ರಿಕವಾಗಿ ದರ ಹೆಚ್ಚಿಸುವುದು ತೈಲ ಕಂಪನಿಗಳಾದರೂ, ಅದರ ಹಿಂದೆ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ, ತೆರಿಗೆ ನೀತಿ ಮತ್ತು ರಾಜಕೀಯ ನಿರ್ಧಾರಗಳು ಇರುವುದಿಲ್ಲವೇ? ಅವು ಪ್ರಭಾವ ಬೀರುವುದಿಲ್ಲವೇ?
2011ರಲ್ಲಿ ಯುಪಿಎ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕೇವಲ 50 ರೂಪಾಯಿ ಹೆಚ್ಚಿಸಿದಾಗ, ಇದೇ ಬಿಜೆಪಿ ಅಂದಿನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಜನರ ಜೀವಹಿಂಡುವ ಸರ್ಕಾರ ಎಂದು ಬೊಬ್ಬೆ ಹಾಕಿತ್ತು. ಆದರೆ, ಇಂದು ಕೇವಲ ಎರಡು ತಿಂಗಳ ಅಂತರದಲ್ಲಿ ಮೂರು ಸಲ ಬೆಲೆ ಏರಿಸಿದೆ.
ಇದನ್ನು ಓದಿದ್ದೀರಾ?: ಬಿಎಸ್‌ವೈ ಅಭಿಮಾನೋತ್ಸವ ಮತ್ತು ಬಳಸಿ ಬಿಸಾಡುವ ಬಿಜೆಪಿ ರಾಜಕಾರಣ
ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, ಬೆಲೆ ಏರಿಸುವಾಗ ಅಧಿಕಾರಿಗಳನ್ನು ಮುಂದೆ ಬಿಡುವುದು; ಸಬ್ಸಿಡಿ, ಬೆಲೆ ಇಳಿಕೆ, ರಿಯಾಯಿತಿ, ಸವಲತ್ತುಗಳನ್ನು ನೀಡುವಾಗ ಮೋದಿ ಮುಂದೆ ಬರುವುದು. ‘ಮೋದಿ ಐತೋ ಮುಮ್ಕಿನ್ ಹೈ’ ಎಂದು ಸಾರುವುದು. ಅದನ್ನು ಗೋದಿ ಮೀಡಿಯಾ, ಬೆಲೆ ಏರಿಕೆಯಾಗಿರುವುದು ವಾಣಿಜ್ಯ ಸಿಲಿಂಡರ್ ಮಾತ್ರ. ಆದರೆ ಗೃಹಬಳಕೆಯ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ. ಇದು 2014ರಿಂದ ನಿರಂತರವಾಗಿ ನಡೆಯುತ್ತಿರುವ ಬಿಜೆಪಿಯವರ ನಾಟಕ.
ಗೃಹಬಳಕೆಯ ಸಿಲಿಂಡರ್ ಬೆಲೆ ಏರಿಸದಿರುವುದು ಪ್ರಧಾನಿ ಮೋದಿಯವರ ಹೆಚ್ಚುಗಾರಿಕೆಯಲ್ಲ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದರೆ, ಅದು ಹೋಟೆಲ್ ಮತ್ತು ಕೈಗಾರಿಕೆಗಳೆಂಬ ಕಟ್ಟಡಗಳ ಮೇಲೆ ಪರಿಣಾಮ ಬೀರುವುದಿಲ್ಲ. ದೇಶವೆಂದರೆ ಜನರೇ ಹೊರತು ಕಟ್ಟಡಗಳಲ್ಲ. ಬೆಲೆ ಏರಿಕೆ ಎನ್ನುವುದು ಬಡವರನ್ನು ಬಿಕ್ಕಟ್ಟಿಗೆ ಸಿಲುಕಿಸದೆ ಇರುವುದಿಲ್ಲ. ಮನೆ-ಮಡದಿ-ಮಕ್ಕಳಿಲ್ಲದ ಮೋದಿಯವರಿಗೆ ಈ ಕಷ್ಟಗಳು ಅರ್ಥವಾಗುವುದಿಲ್ಲ.




