ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಶುಕ್ರವಾರ 127 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಒಟ್ಟು ಎಐಎಡಿಎಂಕೆ 150 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
23 ಅಭ್ಯರ್ಥಿಗಳ ಮೊದಲ ಪಟ್ಟಿ ಮತ್ತು 127 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಪಳನಿಸ್ವಾಮಿ 46 ಹಾಲಿ ಶಾಸಕರು, 26 ಮಾಜಿ ಶಾಸಕರು ಮತ್ತು ಆರು ಮಾಜಿ ಸಂಸದರಿಗೆ ಟಿಕೆಟ್ ನೀಡಿದ್ದಾರೆ. ಈ ಪೈಕಿ ಒಟ್ಟು 17 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಸಿದೆ.
ಇತ್ತೀಚೆಗೆ ಡಿಎಂಕೆಗೆ ಸೇರ್ಪಡೆಗೊಂಡ ಮಾಜಿ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ಅವರನ್ನು ಬೋಡಿನೈಕನೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂಬ ನಿರೀಕ್ಷೆ ಇದೆ. ಆ ಕ್ಷೇತ್ರಕ್ಕೆ ಎಐಎಡಿಎಂಕೆ ವಿಟಿ ನಾರಾಯಣಸಾಮಿ ಅವರನ್ನು ಕಣಕ್ಕಿಳಿಸಿದೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಆರ್ ವೈತಿಲಿಂಗಂ ಅವರನ್ನು ಗೆಲ್ಲಿಸಿದ್ದ ಒರಥನಾಡು ಕ್ಷೇತ್ರದಲ್ಲಿ, ಪಳನಿಸ್ವಾಮಿ ಎಂ ಶೇಖರ್ ಅವರಿಗೆ ಸ್ಥಾನವನ್ನು ನೀಡಿದ್ದಾರೆ. ಆರ್ ವೈತಿಲಿಂಗಂ ಅವರು ಈಗ ಡಿಎಂಕೆ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ಕೊಯಮತ್ತೂರು ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಪೈಕಿ, ಎಐಎಡಿಎಂಕೆ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಏಳು ಹಾಲಿ ಶಾಸಕರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಿದೆ.
ಈ ಬಾರಿ ಕೊಯಮತ್ತೂರು ಉತ್ತರ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿರುವುದರಿಂದ, ಈ ಹಿಂದೆ ಆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಮ್ಮನ್ ಕೆ. ಅರ್ಜುನನ್ ಈಗ ಕೊಯಮತ್ತೂರು ದಕ್ಷಿಣದಿಂದ ಸ್ಪರ್ಧಿಸಲಿದ್ದಾರೆ.
ಮಾಜಿ ಸಚಿವೆ ವಿ.ಎಂ. ರಾಜಲಕ್ಷ್ಮಿ ಅವರು ಈ ಬಾರಿ ಟಿಕೆಟ್ ವಂಚಿತರಾಗಿದ್ದಾರೆ. ಶಂಕರನ್ಕೋವಿಲ್ ಕ್ಷೇತ್ರಕ್ಕೆ ದಿಲೀಪನ್ ಜಯಶಂಕರ್ ಅವರನ್ನು ಕಣಕ್ಕಿಳಿಸಲಾಗಿದೆ.
ಐಜೆಕೆ ತೊರೆದು ಇತ್ತೀಚೆಗೆ ಎಐಎಡಿಎಂಕೆಗೆ ಸೇರಿದ ಲಾಟರಿ ಉದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ ಅವರ ಪತ್ನಿ ಲೀಮಾ ರೋಸ್ ಮಾರ್ಟಿನ್ ಅವರನ್ನು ಲಾಲ್ಗುಡಿ ಕ್ಷೇತ್ರದಿಂದ ಸ್ಪರ್ಧೆಗಿಳಿಸಿದೆ.
ಮುಖ್ಯವಾಗಿ, ಅವಿನಾಶಿಯ ಹಾಲಿ ಶಾಸಕಿ ಮಾಜಿ ವಿಧಾನಸಭಾ ಸ್ಪೀಕರ್ ಪಿ. ಧನಪಾಲ್ ಅವರಿಗೆ ಈ ಚುನಾವಣೆಯಲ್ಲಿ ಟಿಕೆಟ್ ನೀಡುವುದಕ್ಕೆ ನಿರಾಕರಿಸಲಾಗಿದೆ. 1989ರ ಚುನಾವಣೆಯನ್ನು ಹೊರತುಪಡಿಸಿ, ಎಂಟು ಬಾರಿ ರಾಜ್ಯ ವಿಧಾನಸಭೆಗೆ ಧನಪಾಲ್ ಆಯ್ಕೆಯಾಗಿದ್ದರು. ಈ ಬಾರಿ ಎಐಎಡಿಎಂಕೆ ಅವಿನಾಶಿ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ.
ಇದನ್ನೂ ಓದಿ : ಕೇರಳ ಚುನಾವಣೆ | ಪ್ರಗತಿಪರ ರಾಜ್ಯದಲ್ಲಿ ಮಹಿಳೆಯರಿಗಿಲ್ಲ ಟಿಕೆಟ್: ಪರಂಪರಾಗತ ಅನ್ಯಾಯ ಮುಂದುವರಿಕೆ




