ಈ ದಿನ ಸಂಪಾದಕೀಯ | ವಿಜಯ್ ಅನಿರೀಕ್ಷಿತ ಗೆಲುವು- ದ್ರಾವಿಡ ದನಿ ಉಡುಗಿದ ದ್ಯೋತಕವೇ?

Date:

ತಮಿಳುನಾಡಿನ ಜನ ನಟ ವಿಜಯ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ 1967ರಿಂದ ಆಳ್ವಿಕೆ ನಡೆಸಿದ ದ್ರಾವಿಡ ಪಕ್ಷಗಳನ್ನು ಹಿಂಬದಿಗೆ ಸರಿಸಿದ್ದಾರೆ. ಇದು ದ್ರಾವಿಡ ದನಿ ಉಡುಗಿದ ದ್ಯೋತಕವೇ ಇಲ್ಲ, ಮತ್ತೆ ಸಿನೆಮಾ-ರಾಜಕಾರಣ ಸಂಸ್ಕೃತಿಗೆ ತಲೆಬಾಗಿದ ಸಂಕೇತವೇ?

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿಯ ಚುನಾವಣೆಯಲ್ಲಿ ನಿಜಕ್ಕೂ ದೇಶದ ಜನರ ಕುತೂಹಲ ಕೆರಳಿಸಿದ್ದು ಪಶ್ಚಿಮ ಬಂಗಾಳ. ಆದರೆ, ಅಚ್ಚರಿಯ ಫಲಿತಾಂಶದ ಮೂಲಕ ದೇಶದ ಗಮನ ಸೆಳೆದದ್ದು ತಮಿಳುನಾಡು. ಎಕ್ಸಿಟ್ ಪೋಲ್‌ ನಲ್ಲಿ ಎಲ್ಲರೂ ಡಿಎಂಕೆ ಎಂದೇ ತೀರ್ಮಾನಿಸಿದ್ದರು. ‘ಆಕ್ಸಿಸ್‌ ಮೈ ಇಂಡಿಯಾ’ದವರು ಮಾತ್ರ ವಿಜಯ್‌ 98ರಿಂದ 120 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದಾಗ, ಅದು ಅತಿಶಯೋಕ್ತಿ ಎನಿಸಿತ್ತು. ಹೆಚ್ಚೆಂದರೆ 20-30 ಸೀಟ್‌ ಬರಬಹುದು. ಇಲ್ಲವೆಂದರೆ, ಕಿಂಗ್‌ ಮೇಕರ್‌ ಆಗಬಹುದು ಎನ್ನುವುದು ಎಲ್ಲರ ಅಂದಾಜು ಆಗಿತ್ತು. ಈಗ ನೋಡಿದರೆ ವಿಜಯ್‌ 108 ಸ್ಥಾನ ಗೆದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಾರೆ.

- Advertisement -

ತಮಿಳುನಾಡು ಹೇಳಿಕೇಳಿ ದ್ರಾವಿಡ ನೆಲ. ಪೆರಿಯಾರ್ ಅವರ ಶೂದ್ರಭೂಮಿ. ಅಲ್ಲಿ ದ್ರಾವಿಡ ಅಸ್ಮಿತೆಗೆ ಒತ್ತುಕೊಟ್ಟು ರಾಜಕಾರಣ ಮಾಡಿದ, 1967ರಿಂದ ಇಲ್ಲಿಯವರೆಗೆ ಆಳಿದ ಡಿಎಂಕೆ ಮತ್ತು ಅಣ್ಣಾಡಿಎಂಕೆಗಳದೇ ಪಾರುಪತ್ಯ. ಈ ಬಾರಿ ಆಡಳಿತಾರೂಢ ಡಿಎಂಕೆ, ಸೈದ್ಧಾಂತಿಕವಾಗಿ ಕೇಂದ್ರ ಸರ್ಕಾರದ ವಿರುದ್ಧವಿದ್ದರೆ; ಅಣ್ಣಾಡಿಎಂಕೆ ಅದೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ತಮಿಳುನಾಡಿನ ಜಾಯಮಾನದಂತೆ, ಈ ಬಾರಿ ಅಣ್ಣಾಡಿಎಂಕೆ ಅಧಿಕಾರಕ್ಕೇರುವ ಕನಸು ಕಂಡಿತ್ತು. ಆದರೆ, ಮುಖ್ಯಮಂತ್ರಿ ಸ್ಟ್ಯಾಲಿನ್, ಅಣ್ಣಾಡಿಎಂಕೆಯನ್ನೇ ಇಬ್ಭಾಗಿಸಿದ್ದರು. ಡಿಎಂಕೆಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಅದಕ್ಕೆ ಪೂರಕವಾಗಿ ನಟ ವಿಜಯ್‌ಗೆ ವಿರುದ್ಧವಾಗಿ ಸ್ಟ್ಯಾಲಿನ್ ಪುತ್ರ, ಚಿತ್ರನಟ ಉದಯನಿಧಿ ಸ್ಟ್ಯಾಲಿನ್ ಅವರನ್ನು ತಂದು ನಿಲ್ಲಿಸಿದ್ದರು. ಅವರ ‘ಜನ ನಾಯಗನ್’ಗೆ ವಿರುದ್ಧವಾಗಿ ‘ಶಿವಶಕ್ತಿ’ ಚಿತ್ರ ನಿರ್ಮಿಸಿದ್ದರು. ಇತ್ತ ಬಿಜೆಪಿ ಕೂಡ, ಕರೂರು ಕಾಲ್ತುಳಿತ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ವಿಚಾರಣೆಯ ಕಾಟ ಕೊಟ್ಟಿತ್ತು. ವಿಜಯ್ ಕೊನೆ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಅಡ್ಡಿಪಡಿಸಿತ್ತು. ಸಾಲದು ಎಂದು, ಇದೇ ಸಂದರ್ಭದಲ್ಲಿ ವಿಜಯ್ ಪತ್ನಿ ವಿಚ್ಛೇದನ ಪಡೆಯುವ ಸುದ್ದಿ, ಸದ್ದು ಮಾಡಿತ್ತು. ಇವೆಲ್ಲವೂ ವಿಜಯ್ ಮಾನಸಿಕವಾಗಿ ಕುಗ್ಗುವಂತೆ ನೋಡಿಕೊಂಡವು. ರಾಜಕಾರಣಕ್ಕೆ ಸಮಯ ಕೊಡಲು, ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ತೊಡಕುಂಟುಮಾಡಿದವು.

ಇದನ್ನು ಓದಿದ್ದೀರಾ?: ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!

ಆದರೆ, ಈ ಕಾಟಗಳು ಮತ್ತು ಕಾರಣಗಳೇ ವಿಜಯ್‌ಗೆ ಅನುಕೂಲಕರ ಹಾದಿ ನಿರ್ಮಿಸಿದವು. ವಿರೋಧಿಗಳ ನಿರೀಕ್ಷೆಯನ್ನು ಹುಸಿಗೊಳಿಸಿ, ಜೋಸೆಫ್ ಸಿ. ವಿಜಯ್ ಅವರ ಟಿವಿಕೆ 108 ಸ್ಥಾನಗಳನ್ನು ಗಳಿಸುವಂತೆ ನೋಡಿಕೊಂಡವು. ಹಾಗಾಗಿ ವಿಜಯ್ ಮುಖ್ಯಮಂತ್ರಿಯಾಗುವುದು ಖಾತ್ರಿಯಾಗಿದೆ. ಈಗ ತಮಿಳುನಾಡಿನಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಈ ಅನಿರೀಕ್ಷಿತ ಗೆಲುವಿನ ಬಗ್ಗೆ ಚರ್ಚೆಯಾಗುತ್ತಿದೆ. ಟಿವಿಕೆ ಗೆಲುವಿನ ಹಿಂದಿರುವ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ.

ತಮಿಳುನಾಡಿನ ರಾಜಕಾರಣವನ್ನು ಹತ್ತಿರದಿಂದ ಬಲ್ಲವರಿಗೆ ಸಹಜವಾಗಿಯೇ ಹಲವು ಕಾರಣಗಳು ಕಾಣಬಹುದು. ಅವುಗಳಲ್ಲಿ… ಆರು ದಶಕಗಳಿಂದ ದ್ರಾವಿಡ ರಾಜಕಾರಣವನ್ನು, ಎರಡು ಪಕ್ಷಗಳ ನಡುವಿನ ಅಧಿಕಾರ ಹಂಚಿಕೆಯನ್ನು ಕಂಡ ತಮಿಳುನಾಡಿನ ಜನಕ್ಕೆ ಹೊಸ ಮುಖ ಬೇಕೆನ್ನಿಸಿರಬಹುದು. ಇದಕ್ಕೆ ಡಿಎಂಕೆಯ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ದರ್ಪ-ದುರಂಹಕಾರದ ವರ್ತನೆ ಅಸಮಾಧಾನ ಹುಟ್ಟಿಸಿರಬಹುದು. ಟಿವಿಕೆ ಪಕ್ಷದ ಬಲವೇ ಅಭಿಮಾನಿಗಳು ಮತ್ತು ಯುವಜನತೆ. ರಾಜಕಾರಣದಿಂದ ದೂರ ಉಳಿದಿದ್ದ ಈ ವರ್ಗಕ್ಕೆ ಪರ್ಯಾಯ ರಾಜಕಾರಣ ಬೇಕೆನ್ನಿಸಿರಬಹುದು. ಅಭಿಮಾನಿಗಳನ್ನೇ ಪಕ್ಷದ ಕಾರ್ಯಕರ್ತರಂತೆ ಬಳಸಿದ ಎಂಜಿಆರ್ ಮತ್ತು ಜಯಲಲಿತಾ ಕಾಲದ ಮಾದರಿಯನ್ನು ವಿಜಯ್ ನಾಜೂಕಾಗಿ ಅಳವಡಿಸಿಕೊಂಡಿರಬಹುದು. ಹಾಗೆಯೇ ವಿಜಯ್, ಹೋದಲ್ಲಿ ಬಂದಲ್ಲಿ, ‘ಅನುಭವಕ್ಕಿಂತ ಸ್ವಚ್ಛತೆ ಮುಖ್ಯ’ ಎಂದು ಒತ್ತಿ ಹೇಳುತ್ತ, ‘ನಮಗೆ ಭ್ರಷ್ಟಾಚಾರದ ಅನುಭವವಿಲ್ಲ’ ಎಂಬ ಅವರ ಮಾತು ಝೆನ್ ಜಿ ವರ್ಗದವರನ್ನು ಸೆಳೆದಿರಬಹುದು. ಅದಕ್ಕಿಂತಲೂ ಹೆಚ್ಚಾಗಿ ಯುವಜನತೆಯನ್ನು ತಕ್ಷಣ ತಲುಪಬಲ್ಲ ಡಿಜಿಟಲ್ ಪ್ರಚಾರವನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡದ್ದು ಅನುಕೂಲವಾಗಿರಬಹುದು. ಚಿತ್ರಗಳಲ್ಲಿ ಸಾಮಾನ್ಯ ಜನರ ಪರ ಹೋರಾಡುವ ನಾಯಕನಾಗಿ ಕಡೆದು ನಿಲ್ಲಿಸಿದ್ದ ವಿಜಯ್ ಇಮೇಜ್, ರಾಜಕೀಯದಲ್ಲೂ ಕೆಲಸ ಮಾಡಿರಬಹುದು. ತಮಿಳುನಾಡಿನ ಸಿನೆಮಾ-ರಾಜಕೀಯ ಸಂಸ್ಕೃತಿಯಲ್ಲಿ ಇದು ಬಹುದೊಡ್ಡ ಪಾತ್ರ ವಹಿಸಿರಬಹುದು.

60ರ ದಶಕದಲ್ಲಿಯೇ ಸಿನೆಮಾ ಕ್ಷೇತ್ರದಿಂದ ರಾಜಕಾರಣಕ್ಕೆ ಬಂದ ಕರುಣಾನಿಧಿ, 19 ವರ್ಷಗಳ ಕಾಲ ತಮಿಳುನಾಡನ್ನು ಆಳಿದ್ದರು. ಇವರ ನಂತರ ಬಂದ ಜನಪ್ರಿಯ ನಟ ಎಂಜಿಆರ್, 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮೆರೆದರು. ಎಂಜಿಆರ್ ಪ್ರೇಯಸಿಯಾದ ಜಯಲಲಿತಾ, ಅವರ ನಿಧನಾನಂತರ ರಾಜಕಾರಣಕ್ಕೆ ಬಂದು 14 ವರ್ಷಗಳ ಕಾಲ ತಮಿಳುನಾಡನ್ನು ಆಳಿ ‘ಅಮ್ಮ’ನಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾದರು. ಅಂದರೆ, ತಮಿಳುನಾಡಿನ ಜನಜೀವನದಲ್ಲಿ ಸಿನೆಮಾ ಬೆರೆತುಹೋಗಿದೆ. ಚಿತ್ರರಂಗದ ನಟ-ನಟಿಯರು ನಾಯಕರಾಗಿ ಹೊರಹೊಮ್ಮಿ, ರಾಜಕಾರಣಕ್ಕೆ ಬಂದು ರಾಜ್ಯವಾಳಿರುವ ಇತಿಹಾಸವಿದೆ. ಇದನ್ನು ಅರಿತು ಅರಗಿಸಿಕೊಂಡಿರುವ ವಿಜಯ್, 2016ರಲ್ಲಿ ನಿಧನರಾದ ಜಯಲಲಿತಾ ನಂತರದ 10 ವರ್ಷಗಳ ನಾಯಕರ ನಿರ್ವಾತವನ್ನು ಜಾಣ್ಮೆಯಿಂದ ತುಂಬಿದ್ದಾರೆ. ತಮ್ಮದನ್ನಾಗಿಸಿಕೊಂಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, ತಮಿಳುನಾಡು ಎಂದರೆ ಶೂದ್ರರ ನಾಡು. ಬ್ರಾಹ್ಮಣ್ಯವನ್ನು ಪ್ರಬಲವಾಗಿ ವಿರೋಧಿಸಿದ ಪೆರಿಯಾರ್ ಅವರ ದ್ರಾವಿಡ ಬೀಡು. ಈ ಸೈದ್ಧಾಂತಿಕ ಬುನಾದಿಯ ಮೇಲೆ ಪಕ್ಷ ಕಟ್ಟಿ ಆಳ್ವಿಕೆ ಮಾಡಿದ ಅಣ್ಣಾ ದೊರೈ ಮತ್ತು ಕರುಣಾನಿಧಿ, ದ್ರಾವಿಡ ಅಸ್ಮಿತೆಯನ್ನು ಉಳಿಸಿ ಬೆಳೆಸಿದವರು. ಆದರೆ, ಅದೇ ಹಾದಿಯಲ್ಲಿ ಬಂದ ಎಂಜಿಆರ್ ಮತ್ತು ಜಯಲಲಿತಾ ಕಾಲಕ್ಕೆ ದ್ರಾವಿಡ ಅಸ್ಮಿತೆ ದುರ್ಬಲಗೊಂಡಿತ್ತು. ಸ್ಟ್ಯಾಲಿನ್ ಮತ್ತು ಪಳನೀಸ್ವಾಮಿಯವರ ಕಾಲಕ್ಕೆ ಅದು ಗೋಡೆ ಮೇಲಿನ ಪೋಸ್ಟರ್‍‌ಗಳಿಗೆ ಸೀಮಿತವಾಗಿತ್ತು. ಅದರಲ್ಲೂ ಕಳೆದ ಐದು ವರ್ಷಗಳ ಸ್ಟ್ಯಾಲಿನ್ ಆಡಳಿತದಲ್ಲಿ, ಸನಾತನಿಗಳ ವಿರುದ್ಧ ಸಡ್ಡುಹೊಡೆದು ನಿಂತರೂ, ಅದು ಅವಕಾಶವಾದಿ ರಾಜಕಾರಣವಾಗಿ ಕಂಡಿತ್ತು. ಇದರಿಂದ ಬೇಸತ್ತ ಹೊಸಗಾಲದ ಯುವಜನತೆಗೆ ಹಿಂದುತ್ವದ ಬಿಜೆಪಿ(ಅಣ್ಣಾಡಿಎಂಕೆ)ಯೂ ಬೇಡ, ದ್ರಾವಿಡ ಸಂಸ್ಕೃತಿ ಸಾರುವ ಡಿಎಂಕೆಯೂ ಬೇಡವೆನಿಸಿರಬಹುದು. ತಮಿಳುನಾಡಿನ ಜನಕ್ಕೂ ಈಗ ದ್ರಾವಿಡ ಅಸ್ಮಿತೆಯ ಬದಲಿಗೆ ತಮಿಳು ಅಸ್ಮಿತೆ ಮುಖ್ಯವಾಗಿರಬಹುದು. ಜಾತಿ-ಧರ್ಮ-ವರ್ಗ ಮೀರಿ ವಿಜಯ್ ಅವರನ್ನು ಆಯ್ಕೆ ಮಾಡಿಕೊಂಡಿರಬಹುದು.

ಇದನ್ನು ಓದಿದ್ದೀರಾ?: ಬೆಂಗಳೂರನ್ನು ನರಕವನ್ನಾಗಿಸುತ್ತಿರುವುದು ಮಳೆಯಲ್ಲ, ದುರ್ಬಲ ಆಡಳಿತ

ನಟ ವಿಜಯ್ ಅವರನ್ನು ಆಯ್ಕೆ ಮಾಡಿಕೊಂಡಿರುವ ತಮಿಳುನಾಡಿನ ಜನ, ನಟಿ ತ್ರಿಷಾ ಅವರನ್ನು ಆಗಲೇ ಜಯಲಲಿತಾ ಜಾಗದಲ್ಲಿ ಕಲ್ಪಿಸಿಕೊಳ್ಳುತ್ತಿದ್ದಾರೆ. ತ್ರಿಷಾ ವಿಜಯ್ ಮನೆಯಲ್ಲಿ ನಿನ್ನೆ ಕಾಣಿಸಿಕೊಂಡದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗೇನಾದರೂ ಆದರೆ, ತಮಿಳುನಾಡಿಗೆ ಮತ್ತೊಂದು ಎಂಜಿಆರ್-ಜಯಲಲಿತಾ ಜೋಡಿ ದಕ್ಕಿದಂತಾಗುತ್ತದೆ. ಆ ಜೋಡಿಯ 24 ವರ್ಷಗಳ ಆಳ್ವಿಕೆ, ತಮಿಳುನಾಡಿನ ‘ಅಭಿವೃದ್ಧಿ’ ಎಲ್ಲವೂ ತಮಿಳರಿಗೆ ತಿಳಿದಿದೆ. ಆದರೂ ಈಗ ಮತ್ತದೇ ಸಿನೆಮಾ-ರಾಜಕಾರಣಕ್ಕೆ ತಮಿಳುನಾಡು ತಲೆಬಾಗಿದೆ. ಬದಲಾವಣೆ ಬಯಸಿರುವ ತಮಿಳರ ಆಯ್ಕೆಯನ್ನು ಸ್ವಾಗತಿಸೋಣ, ವಿಜಯ್ ಅವರ ಆಡಳಿತವನ್ನು ಕಾದುನೋಡೋಣ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...