ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಅತ್ಯಂತ ಕಠಿಣ ಜಾಮೀನು ಷರತ್ತುಗಳಿದ್ದರೂ ಸಹ, ‘ಜಾಮೀನು ಹಕ್ಕು ಮತ್ತು ಜೈಲು ವಿನಾಯತಿ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯರಿಗೆ ತಮ್ಮ ಮನೆಯನ್ನು ಬಾಡಿಗೆಗೆ ನೀಡಿದ್ದಕ್ಕಾಗಿ ಬಿಹಾರದ ನಿವೃತ್ತ ಪೊಲೀಸ್ ಪೇದೆ ಜಲಾಲುದ್ದೀನ್ ಖಾನ್ ಅವರನ್ನು ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ. ಅವರು ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್, ‘ಜಾಮೀನು ಹಕ್ಕು, ಜೈಲು ಶಿಕ್ಷೆ ವಿನಾಯಿತಿ’ ಎಂಬ ನ್ಯಾಯವ್ಯವಸ್ಥೆಯ ತತ್ವವು ಯುಎಪಿಎ ಆರೋಪಿಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. ಜಾಮೀನು ಮಂಜೂರು ಮಾಡಿದ್ದಾರೆ.
“ಜಾಮೀನು ನೀಡಲು ನ್ಯಾಯಾಲಯಗಳು ಯಾವುದೇ ಹಿಂಜರಿಕೆ ಹೊಂದಿರಬಾರದು. ಪ್ರಾಸಿಕ್ಯೂಷನ್ ಆರೋಪಗಳು ತುಂಬಾ ಗಂಭೀರವಾಗಿರಬಹುದು. ಆದರೆ, ಕಾನೂನಿನ ಪ್ರಕಾರ ಜಾಮೀನು ಮಂಜೂರು ಮಾಡಲು ಪ್ರಕರಣವನ್ನು ಪರಿಗಣಿಸುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ. ‘ಜಾಮೀನು ಹಕ್ಕು ಮತ್ತು ಜೈಲು ವಿನಾಯತಿ’ ಎಂಬುದು ಇತ್ಯರ್ಥವಾಗಿರುವ ಕಾನೂನು. ಪ್ರಸ್ತುತ ಪ್ರಕರಣದಂತಹ ಪ್ರಕರಣದಲ್ಲಿ, ಸಂಬಂಧಿತ ಕಾಯ್ದೆಗಳಲ್ಲಿ ಜಾಮೀನು ಮಂಜೂರು ಮಾಡಲು ಕಠಿಣ ಷರತ್ತುಗಳಿದ್ದರೂ, ಕಾನೂನಿನಲ್ಲಿನ ಷರತ್ತುಗಳನ್ನು ಪೂರೈಸಿದರೆ ಜಾಮೀನು ನೀಡಬಹುದು,” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಪ್ರಕರಣದಲ್ಲಿ ಒಮ್ಮೆ ಜಾಮೀನು ಮಂಜೂರಾತಿಗಾಗಿ ಆದೇಶ ಮಾಡಿದರೆ, ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸುವಂತಿಲ್ಲ. ನ್ಯಾಯಾಲಯಗಳು ಅರ್ಹ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಲು ಪ್ರಾರಂಭಿಸಿದರೆ, ಅದು ನಮ್ಮ ಸಂವಿಧಾನದ 21 ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳ ಉಲ್ಲಂಘನೆಯಾಗುತ್ತದೆ” ಎಂದು ಪೀಠವು ಒತ್ತಿ ಹೇಳಿದೆ.
ಬಿಹಾರದ ಪಾಟ್ನಾ ನಗರದ ಫುಲ್ವಾರಿ ಷರೀಫ್‌ನಲ್ಲಿರುವ ಅಹ್ಮದ್ ಪ್ಯಾಲೇಸ್ ಕಟ್ಟಡದಲ್ಲಿ ಖಾನ್ ಅವರ ಪತ್ನಿಯ ಹೆಸರಿನಲ್ಲಿದ್ದ ಮೊದಲ ಮಹಡಿ ಮನೆಯನ್ನು ಪಿಎಫ್‌ಐ ಕಾರ್ಯಕರ್ತರಿಗೆ ಬಾಡಿಗೆಗೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಇದೇ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಖಾನ್ ಅವರನ್ನು ಬಂಧಿಸಿದೆ. “ತಮ್ಮ ಮನೆಯನ್ನು ಬಾಡಿಗೆಗೆ ನೀಡುವ ಮೂಲಕ ಪಿಎಫ್‌ಐನ ಆಕ್ಷೇಪಾರ್ಹ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿದ್ದಾರೆ” ಎಂದು ಎನ್‌ಐಎ ಆರೋಪಿಸಿದೆ.
ಅದಾಗ್ಯೂ, ಎನ್‌ಐಎ ಸಂರಕ್ಷಿಸಿರುವ ಸಾಕ್ಷ್ಯಗಳ ಹೇಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ಅನುಮಾ ವ್ಯಕ್ತಪಡಿಸಿದೆ. “ಆರೋಪಿಯು ಯುಎಪಿಎಯಲ್ಲಿ ವ್ಯಾಖ್ಯಾನಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಅಥವಾ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಜಾರ್ಜ್‌ಶೀಟ್‌ನಲ್ಲಿ ಗಮನಾರ್ಹ ವಿಷಯ ಏನೂ ಇಲ್ಲ. ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಆರೋಪಿಯು ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದ್ದಾರೆ ಅಥವಾ ಪ್ರಚೋದಿಸಿದ್ದಾರೆ ಎಂದು ತೋರಿಸಲು ಯಾವುದೇ ನಿರ್ದಿಷ್ಟ ದಾಖಲೆ/ಸಾಕ್ಷ್ಯಗಳಿಲ್ಲ” ಎಂದು ನ್ಯಾಯಾಲಯ ಹೇಳಿದೆ