ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆಯಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು 24ನೇ ಎಸಿಎಂಎಂ ಇನ್ಚಾರ್ಜ್ ಕೋರ್ಟ್ ಎದುರು ಹಾಜರುಪಡಿಸಲಾಗಿದ್ದು, ಮ್ಯಾಜಿಸ್ಟ್ರೇಟರ್ ದರ್ಶನ್ ಸೇರಿ ಎಲ್ಲ ಆರೋಪಿಗಳಿಗೂ ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದ್ದಾರೆ.
ಕೆಲವು ಆರೋಪಿಗಳು ಬೆಂಗಳೂರು ಜೈಲಿನಲ್ಲಿದ್ದು, ಮೂವರು ಆರೋಪಿಗಳು ತುಮಕೂರು ಜೈಲಿನಲ್ಲಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ದರ್ಶನ್ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಪೊಲೀಸರು ಮನವಿ ಮಾಡಿದ್ದು, ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಎಲ್ಲ ಆರೋಪಿಗಳಿಗೂ ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಇದನ್ನು ಓದಿದ್ದೀರಾ? ನಟ, ಆರೋಪಿ ದರ್ಶನ್‌ಗೆ ಜೈಲೂಟವೇ ಗತಿ
ಇನ್ನು ಮೂವರು ಆರೋಪಿಗಳು ಈಗ ಅಪ್ರೂವರ್ಗಳಾಗಿ ಬದಲಾಗಿದ್ದು ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ. ದರ್ಶನ್, ಪವಿತ್ರಾ ಗೌಡ ಹಾಗೂ ಇತರರ ಪಾತ್ರದ ಬಗ್ಗೆ ವಿವರಿಸಿದ್ದಾರೆ. ಆದ್ದರಿಂದ ಈ ಮೂರವನ್ನು ತುಮಕೂರಿನ ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ವರದಿಯಾಗಿದೆ.
ಜೂನ್ 11ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಇನ್ನೂ ಹಲವರನ್ನು ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ಈವರೆಗೆ ಜಾಮೀನು ಲಭ್ಯವಾಗಿಲ್ಲ.