ದೇಶದ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ‘ಏಕರೂಪ ನಾಗರಿಕ ಸಂಹಿತೆ’ (UCC) ವಿಧೇಯಕವನ್ನು ಅಸ್ಸಾಂ ವಿಧಾನಸಭೆ ಬುಧವಾರ (ಮೇ.27)ದಂದು ಅಂಗೀಕರಿಸಿದೆ.
ವಿವಾಹ, ವಿಚ್ಛೇದನ, ಆಸ್ತಿ ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳಿಗೆ ಸಂಬಂಧಿಸಿದಂತೆ ಎಲ್ಲಾ ನಾಗರಿಕರಿಗೂ ಒಂದೇ ಕಾನೂನು ಚೌಕಟ್ಟನ್ನು ತರಲು ಈ ಕಾಯ್ದೆ ರೂಪಿಸಲಾಗಿದೆ. ಈ ಮೂಲಕ ಉತ್ತರಾಖಂಡ ಮತ್ತು ಗುಜರಾತ್ ನಂತರ ಯುಸಿಸಿ ಅಂಗೀಕರಿಸಿದ ದೇಶದ ಮೂರನೇ ಹಾಗೂ ಈಶಾನ್ಯ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಅಸ್ಸಾಂ ಪಾತ್ರವಾಗಿದೆ.
ವಿಧಾನಸಭೆಯಲ್ಲಿ ವಿಪಕ್ಷಗಳು ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಕಳುಹಿಸಬೇಕೆಂದು ಪಟ್ಟು ಹಿಡಿದು ಸದನದಲ್ಲಿ ತೀವ್ರ ಗದ್ದಲ ಎಬ್ಬಿಸಿದ್ದವು. ಇದು ಕೇವಲ ಬಿಜೆಪಿಯ ರಾಜಕೀಯ ಅಜೆಂಡಾ ಎಂದು ಕಾಂಗ್ರೆಸ್ ಮತ್ತು ಎಐಯುಡಿಎಫ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದರಾದರೂ, ಗದ್ದಲದ ನಡುವೆಯೇ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿತು. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಇದನ್ನು ಅಸ್ಸಾಂ ಇತಿಹಾಸದ ಒಂದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಾಜೆದ್ ಅಲಿ ಚೌಧರಿ, “UCCಯಲ್ಲಿ ಉಲ್ಲೇಖಿಸಲಾಗಿರುವ ಬಹುಪತ್ನಿತ್ವ, ಬಾಲ್ಯವಿವಾಹ, ವಿವಾಹ ಮತ್ತು ವಿಚ್ಛೇದನದ ನೋಂದಣಿ, ಜೀವನಾಂಶ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳು ಈಗಾಗಲೇ ವಿಭಿನ್ನ ಕಾನೂನುಗಳ ರೂಪದಲ್ಲಿ ಜಾರಿಯಲ್ಲಿವೆ. ಹಾಗಿರುವಾಗ, UCCಯ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ವಿರೋಧದ ನಡುವೆಯೂ ಅಂಗೀಕರಿಸಿರುವ ಈ ಹೊಸ ಕಾಯ್ದೆಯ ಅಡಿಯಲ್ಲಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ತರಲಾಗಿದೆ. ಅದರಂತೆ ಲಿವ್-ಇನ್ ಸಂಬಂಧದಲ್ಲಿರುವವರು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಒಂದು ತಿಂಗಳ ಒಳಗಾಗಿ ನೋಂದಣಿ ಮಾಡಿಕೊಳ್ಳದಿದ್ದರೆ 3 ತಿಂಗಳ ಜೈಲು ಶಿಕ್ಷೆ ಅಥವಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಇಂತಹ ಸಂಬಂಧದಿಂದ ಜನಿಸುವ ಮಕ್ಕಳಿಗೆ ಕಾನೂನುಬದ್ಧ ಸ್ಥಾನಮಾನ ಸಿಗಲಿದ್ದು, ಸಂಗಾತಿ ಕೈಬಿಟ್ಟರೆ ಮಹಿಳೆಯು ನ್ಯಾಯಾಲಯದ ಮೂಲಕ ಜೀವನಾಂಶ ಪಡೆಯಬಹುದು.
ಇನ್ನು ವಿವಾಹದ ವಿಷಯಕ್ಕೆ ಬಂದರೆ, ವರನಿಗೆ 21 ವರ್ಷ ಹಾಗೂ ವಧುವಿಗೆ 18 ವರ್ಷ ಕಡ್ಡಾಯವಾಗಿದ್ದು, ಎಲ್ಲಾ ವಿವಾಹಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಕಾಯ್ದೆ ಜಾರಿಯಾದ ನಂತರ ಬಹುಪತ್ನಿತ್ವ ಅಥವಾ ಎರಡನೇ ಮದುವೆಯಾದರೆ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ, ತಕ್ಷಣದ ತ್ರಿವಳಿ ತಲಾಖ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ವಿಚ್ಛೇದನ ಪ್ರಕ್ರಿಯೆಗಳು ಕೇವಲ ನ್ಯಾಯಾಲಯದ ಆದೇಶದ ಮೂಲಕವೇ ನಡೆಯಬೇಕಿರುತ್ತದೆ. ಪತಿ ಅತ್ಯಾಚಾರ ಅಥವಾ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದರೆ ಮಹಿಳೆಗೆ ವಿಚ್ಛೇದನ ಪಡೆಯಲು ಹೆಚ್ಚುವರಿ ಹಕ್ಕುಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಸಿಕ್ಕಿಂ | ಮಹಿಳೆಯರಿಗಾಗಿಯೇ ವಿಶೇಷ ಬಸ್ ಸೇವೆ: ರಾಷ್ಟ್ರಪತಿ ಮುರ್ಮು ಚಾಲನೆ
ಆದರೆ, ಸಂವಿಧಾನದ ರಕ್ಷಣೆಯನ್ನು ಕಾಪಾಡುವ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಗಳನ್ನು (ST) ಹಾಗೂ 6ನೇ ವೇಳಾಪಟ್ಟಿ ವ್ಯಾಪ್ತಿಗೆ ಬರುವ ಬುಡಕಟ್ಟು ಪ್ರದೇಶಗಳನ್ನು ಈ ಕಾಯ್ದೆಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಇದರೊಂದಿಗೆ ಸಾಂಸ್ಕೃತಿಕ ವೈವಿಧ್ಯತೆಗೆ ಧಕ್ಕೆ ಬಾರದಂತೆ ವೈದಿಕ ವಿವಾಹ, ಅಹೋಂ ಚಕ್ಲಾಂಗ್, ಸಪ್ತಪದಿ, ಆಶೀರ್ವಾದ್, ನಿಕಾಹ್, ಹೋಲಿ ಯೂನಿಯನ್ ಮತ್ತು ಆನಂದ್ ಕಾರಜ್ ಸೇರಿದಂತೆ ಎಲ್ಲಾ ಧರ್ಮಗಳ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳ ಮೂಲಕವೇ ಮದುವೆಯಾಗಲು ಸಾರ್ವಜನಿಕರ ಆಯ್ಕೆಗೆ ಬಿಡಲಾಗಿದೆ.
ಕಾನೂನು ಅಂದ ಮೇಲೆ ರಾಜ್ಯದ ಅಥವಾ ದೇಶದ ಎಲ್ಲಾ ನಾಗರಿಕರಿಗೂ ಅದು ಒಂದೇ ಆಗಿರಬೇಕು. ಒಂದು ದೊಡ್ಡ ಸಮುದಾಯವನ್ನು ಇದರಿಂದ ಹೊರಗಿಟ್ಟರೆ, ಅದು ‘ಏಕರೂಪ ನಾಗರಿಕ ಸಂಹಿತೆ’ಯ ಮೂಲ ಆಶಯವನ್ನೇ ದುರ್ಬಲಗೊಳಿಸಿದಂತಾಗುತ್ತದೆ. ಬಹುಪತ್ನಿತ್ವ ನಿಷೇಧ, ವಿಚ್ಛೇದನದ ನಂತರ ಜೀವನಾಂಶ ಮತ್ತು ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕಿನಂತಹ ಪ್ರಗತಿಪರ ಸುಧಾರಣೆಗಳು ಯುಸಿಸಿಯ ಮುಖ್ಯ ಉದ್ದೇಶಗಳಾಗಿವೆ. ಬುಡಕಟ್ಟು ಸಮುದಾಯಗಳನ್ನು ಇದರಿಂದ ಹೊರಗಿಡುವುದರಿಂದ, ಆ ಸಮುದಾಯದ ಮಹಿಳೆಯರು ಈ ಕಾನೂನಾತ್ಮಕ ರಕ್ಷಣೆ ಮತ್ತು ಸುಧಾರಣೆಗಳಿಂದ ವಂಚಿತರಾಗುತ್ತಾರೆ ಎಂಬುದು ಹಲವರ ಆತಂಕ.




