ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಜರ್ಷಿ ದಶರಥ್ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಸುವ ಸೂತ್ರಗಳನ್ನು ಒಳಗೊಂಡ ಕೈಬರಹದ ದಾಖಲೆ ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲೇಜಿನ ಎಕ್ಸ್-ರೇ ಕೊಠಡಿಯ ಉಸ್ತುವಾರಿಯಿಂದ ಈ ಆತಂಕಕಾರಿ ದಾಖಲೆಯನ್ನು ವಶಪಡಿಸಿಕೊಳ್ಳಲಾಗಿದೆ. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಉತ್ತರ ಪ್ರದೇಶದ ಬಲರಾಂಪುರ ನಿವಾಸಿ, ವಿದ್ಯಾರ್ಥಿ ಸರ್ಫರಾಜ್‌ನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಆತನೊಂದಿಗೆ ಕರ್ತವ್ಯದಲ್ಲಿದ್ದ ಮತ್ತಿಬ್ಬರನ್ನೂ ಪೊಲೀಸರು ಸದ್ಯ ವಿಚಾರಣೆಗೊಳಪಡಿಸುತ್ತಿದ್ದಾರೆ.
ಪತ್ತೆಯಾಗಿರುವ ಕೈಬರಹದ ದಾಖಲೆಯಲ್ಲಿ ಸ್ಫೋಟಕಗಳನ್ನು ತಯಾರಿಸಲು ಬೇಕಾಗುವ ಗೇಜ್ ವೈರ್, ಅಮೋನಿಯಂ ಕಾರ್ಬೋನೇಟ್, ಕೆಂಪು ರಂಜಕ, ಕೆಂಪು ಸಲ್ಫೈಡ್ ಹಾಗೂ ನೈಟ್ರಿಕ್ ಆಮ್ಲ ಸೇರಿದಂತೆ ಹಲವು ರಾಸಾಯನಿಕ ಪದಾರ್ಥಗಳ ಬಳಕೆಯ ಬಗ್ಗೆ ವಿವರಿಸಲಾಗಿದೆ.
ಬಾಂಬ್ ಸೂತ್ರದ ಚೀಟಿ ಪತ್ತೆ ಕುರಿತು ಮಾತನಾಡಿರುವ ಸಂಸ್ಥೆಯ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಡಾ. ಅರವಿಂದ್ ಸಿಂಗ್, “ದಾಖಲೆ ಸಿಕ್ಕ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ,” ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಈ ದಾಖಲೆಯು ಯಾವುದೇ ಕ್ರಿಮಿನಲ್ ಉದ್ದೇಶ ಅಥವಾ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದೆಯೇ ಎಂಬುದನ್ನು ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. ಎಲ್ಲ ಆಯಾಮಗಳಿಂದಲೂ ತನಿಖೆ ಮುಂದುವರಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜು ಆಡಳಿತ ಮಂಡಳಿಯು ಇಡೀ ಕ್ಯಾಂಪಸ್‌ನ ಭದ್ರತೆಯನ್ನು ತೀವ್ರಗೊಳಿಸಿದೆ.



