ಪತಿಯು ತನ್ನ ವಯಸ್ಕ ಪತ್ನಿಯ ಮೇಲೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಅಸಹಜ ಲೈಂಗಿಕತೆಯು ಅಪರಾಧವಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.
ಮಹಳೆಯೊಬ್ಬರು ತಮ್ಮ ಪತಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದರು. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ತಮ್ಮ ವಿರುದ್ಧದ ಎಫ್‌ಐಆರ್‌ಅನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಪತಿ ಹೈಕೋರ್ಟ್‌ಅನ್ನು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿರುವ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಮಿಲಿಂದ್ ರಮೇಶ್ ಪಡ್ಕೆ, ಅರ್ಜಿಯನ್ನು ಭಾಗಶಃ ಅಂಗೀಕರಿಸಿದ್ದಾರೆ. ‘ವೈವಾಹಿಕ ಜೀವನದಲ್ಲಿ ಸಮ್ಮತಿಯು ಕಾನೂನುಬದ್ಧವಾಗಿ ಅಪ್ರಸ್ತುತವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಅತ್ಯಾಚಾರಕ್ಕೆ ಸಂಬಂಧಿಸಿದ ಎಫ್‌ಐಆರ್‌ಅನ್ನು ರದ್ದುಗೊಳಿಸಿದ್ದಾರೆ.
“ಅತ್ಯಾಚಾರದ ನಿಬಂಧನೆಗಳ ಅಡಿಯಲ್ಲಿ ಒದಗಿಸಲಾದ ವಿನಾಯಿತಿಗಳ ಹಿನ್ನೆಲೆಯಲ್ಲಿ, ಪತಿಯು ತನ್ನ ವಯಸ್ಕ ಪತ್ನಿಯ ಮೇಲೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಅದನ್ನು ಕ್ರೌರ್ಯ, ಅಸಹಜ ಅಪರಾಧಗಳು, ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು, ಅಶ್ಲೀಲ ಕೃತ್ಯಗಳು ಎಂದು ಹೇಳಲಾಗುವುದಿಲ್ಲ” ಎಂದು ಕೋರ್ಟ್ ಹೇಳಿದೆ.
“ದೂರುದಾರರು ಮಾಡಿರುವ ಬಲವಂತದ ‘ಅಸಹಜ ಕೃತ್ಯ’ಗಳ ಆರೋಪಗಳನ್ನು ಒಪ್ಪಿಕೊಂಡರೂ ಸಹ, ಅವು ವೈವಾಹಿಕ ಸಂಬಂಧದ ಒಳಗಿನ ಕೃತ್ಯಗಳಿಗೆ ಸಂಬಂಧಿಸಿವೆ. ಆದ್ದರಿಂದ ಇದು ಅಪರಾಧವಾಗುವುದಿಲ್ಲ. ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ನೀಡಲಾಗಿರುವ ವಿನಾಯಿತಿ 2ರ ಪ್ರಕಾರ, ಪತಿಯು ತನ್ನ ಪತ್ನಿಯೊಂದಿಗೆ (ಅವರು ಅಪ್ರಾಪ್ತರಲ್ಲದಿದ್ದಲ್ಲಿ) ನಡೆಸುವ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕೃತ್ಯಗಳು ಅತ್ಯಾಚಾರಕ್ಕೆ ಸಮನಾಗುವುದಿಲ್ಲ” ಎಂದು ನ್ಯಾಯಮೂರ್ತಿ ಪಡ್ಕೆ ಹೇಳಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಕೇಸರಿ ಫೈಲ್ | ಬಿಜೆಪಿ ನಾಯಕ ‘ಹರೇನ್ ಪಾಂಡ್ಯ’ರನ್ನು ಮೌನಗೊಳಿಸಿದ ಭೀಕರ ಕತೆ
ವಿಚಾರಣೆ ವೇಳೆ, ವಾದ ಮಂಡಿಸಿದ ಪ್ರಾಸಿಕ್ಯೂಷನ್, “ದಂಪತಿಗಳು ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ ವಿವಾಹವಾಗಿದ್ದರು. ಪತ್ನಿಯ ಕುಟುಂಬವು 4 ಲಕ್ಷ ರೂಪಾಯಿ ನಗದು ಜೊತೆಗೆ ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಿತ್ತು” ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಮಹಿಳೆ ಕೂಡ ತನ್ನ ಪತಿಯು 6 ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು ಮತ್ತು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು.
ವಾದವನ್ನು ಆಲಿಸಿದ ನ್ಯಾಯಾಲಯವು, “ಪ್ರಸ್ತುತ ಪ್ರಕರಣದಲ್ಲಿ, ಎಫ್‌ಐಆರ್ ಕೇವಲ ‘ಯಾವುದೇ ನಿರ್ದಿಷ್ಟ ಕೃತ್ಯವನ್ನು ಉಲ್ಲೇಖಿಸದೆ ಸಾಮಾನ್ಯ ಮತ್ತು ಸಾರಾಸಗಟು ಆರೋಪಗಳನ್ನು’ ಒಳಗೊಂಡಿದೆ. ಅತ್ಯಾಚಾರದ ವ್ಯಾಪ್ತಿಯನ್ನು ಮೌಖಿಕ ಮತ್ತು ಗುದ ಸಂಭೋಗದಂತಹ ಕೃತ್ಯಗಳನ್ನು ಒಳಗೊಳ್ಳುವಂತೆ ವಿಸ್ತರಿಸಲಾಗಿದೆ. ಆದರೂ, ಅಸ್ತಿತ್ವದಲ್ಲಿರುವ ವೈವಾಹಿಕ ಸಂಬಂಧದ ಒಳಗೆ ಇಂತಹ ಕೃತ್ಯಗಳು ಸಂಭವಿಸಿದಾಗ, ಅವುಗಳಿಗೆ ಐಪಿಸಿ ಸೆಕ್ಷನ್ 377 ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅತ್ಯಾಚಾರಕ್ಕೆ ಸಂಬಂಧಿಸಿದ ಎಫ್‌ಐಆರ್‌ಗಳನ್ನು ರದ್ದುಗೊಳಿಸಿರುವ ನ್ಯಾಯಾಲಯವು, ವರದಕ್ಷಿಣೆ ಕಿರುಕುಳ ಮತ್ತು ಇತರ ಆರೋಪಗಳಿಗೆ ಸಂಬಂಧಿಸಿದ ಎಫ್‌ಐಆರ್‌ಅನ್ನು ರದ್ದುಗೊಳಿಸಿಲ್ಲ. ಈ ಪ್ರಕರಣವನ್ನು ಮುಂದುವರೆಸಲು ಸೂಚಿಸಿದೆ.



