ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ದುರುಪಯೋಗ ವಿಚಾರದಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಬಿಜೆಪಿಯನ್ನು ಟೀಕಿಸಿದ್ದಾರೆ. “ಬಿಜೆಪಿ ತನ್ನ ‘ಹಿಂದುತ್ವ’ ಬ್ರಾಂಡ್ ಇಟ್ಟುಕೊಂಡು ಹಿಂದೂಗಳ ಭಾವನೆಗಳೊಂದಿಗೆ ಆಟವಾಡಿದೆ. ಹಿಂದೂಗಳಿಗೆ ಬಿಜೆಪಿ ದ್ರೋಹ ಬಗೆದಿದೆ” ಎಂದು ಠಾಕ್ರೆ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ “ಬಿಜೆಪಿ ಮುಕ್ತ ರಾಮ” ಎಂಬ ಘೋಷಣೆಯೊಂದಿಗೆ ಪ್ರತಿಭಟನೆಗಳನ್ನು ಮುನ್ನಡೆಸುವುದಾಗಿಯೂ ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ
ಇತ್ತೀಚೆಗೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ ಭಿನ್ನಮತೀಯ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ದೇಶಮುಖ್ ಪ್ರತಿನಿಧಿಸುವ ಯವತ್ಮಾಲ್-ವಾಶಿಮ್ ಕ್ಷೇತ್ರದಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಬಿಜೆಪಿಯು ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ರಾಜಕೀಯ ಪಕ್ಷಗಳಲ್ಲಿ ವಿಭಜನೆಯನ್ನು ರೂಪಿಸುತ್ತಿದೆ ಎಂದು ದೂರಿದರು.
“ನಿಜವಾದ ಹಿಂದುತ್ವವು ಮಾನವೀಯತೆಯನ್ನು ಕಲಿಸುತ್ತದೆ. ದೇವಾಲಯಗಳನ್ನು ಲೂಟಿ ಮಾಡುವ ನಿಮ್ಮ (ಬಿಜೆಪಿಯ) ಹಿಂದುತ್ವವನ್ನು ನಾವು ತಿರಸ್ಕರಿಸುತ್ತೇವೆ. ನಮಗೆ ‘ಬಿಜೆಪಿ ಮುಕ್ತ ರಾಮ’ ಬೇಕು ಮತ್ತು ಶಿವಸೇನೆ (ಯುಬಿಟಿ) ಅಂತಹ ಪ್ರತಿಭಟನೆಗಳನ್ನು ಮುನ್ನಡೆಸುತ್ತದೆ” ಎಂದು ಹೇಳಿದರು.
ಸದ್ಯ ದೇಶಾದ್ಯಂತ ರಾಮ ಮಂದಿರದಲ್ಲಿ ದೇಣಿಗೆಗಳ ದುರುಪಯೋಗವು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯಲ್ಲಿ ದೇಗುಲದ ದೇಣಿಗೆ ನಿರ್ವಹಣಾ ವ್ಯವಸ್ಥೆಯಲ್ಲಿನ ಲೋಪಗಳು ಬಹಿರಂಗಗೊಂಡಿವೆ.
ಸದ್ಯ ನಗದು ಮತ್ತು ಬೆಲೆಬಾಳುವ ವಸ್ತುಗಳ ಲೆಕ್ಕಾಚಾರದಲ್ಲಿ ತೊಡಗಿದ್ದ ಎಂಟು ಮಂದಿಯ ಬಂಧಿಸಲಾಗಿದೆ. ಆದರೆ ರಾಮಮಂದಿರ ಟ್ರಸ್ಟ್‌ನ ಎಲ್ಲ ಉಸ್ತುವಾರಿ ನೋಡಿಕೊಳ್ಳುವ ಆರ್‌ಎಸ್‌ಎಸ್‌ನ ಪ್ರಮುಖ ನಾಯಕರ ಹೆಸರೂ ಎಫ್‌ಐಆರ್‌ನಲ್ಲಿ ಕಾಣಿಸದ್ದು ತೀವ್ರ ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇವೆಲ್ಲವುದರ ನಡುವೆ ಈ ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿದ್ದ, ಸದ್ಯ ಶಿವಸೇನೆ ಇಬ್ಭಾಗವಾಗಿ ಎನ್‌ಡಿಎಯಿಂದ ಹೊರಬಂದಿರುವ ಉದ್ಧವ್ ಠಾಕ್ರೆ ಬಣದ ನಾಯಕರು ರಾಮನ ಹೆಸರಲ್ಲಿ ದೇಣಿಗೆ ಲೂಟಿ ಮಾಡುವ ಬಿಜೆಪಿಯ ಹಿಂದುತ್ವವನ್ನು ಪ್ರಶ್ನಿಸಲು ಆರಂಭಿಸಿದ್ದಾರೆ.




