ನವರಾತ್ರಿ ಆಚರಣೆಯ ಭಾಗವಾದ ಗರ್ಬಾ ನೃತ್ಯೋತ್ಸವದ ಸಂದರ್ಭದಲ್ಲಿ ಪ್ರತಿವರ್ಷ ದೇಶದಲ್ಲಿ ಸುಮಾರು 4.5 ಲಕ್ಷ ಹಿಂದೂ ಯುವತಿಯರು ಹಿಂದೂಯೇತರರೊಂದಿಗೆ ಪರಾರಿಯಾಗುತ್ತಿದ್ದಾರೆ ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕಿ ಹಾಗೂ ರಾಜ್ಯ ಬಿಜೆಪಿ ವಕ್ತಾರೆ ಉಷಾ ಠಾಕೂರ್ ಹೇಳಿಕೆ ನೀಡಿದ್ದು ಸದ್ಯ ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಈ ವಿವಾದಾತ್ಮಕ ಹೇಳಿಕೆಯನ್ನು ಪ್ರತಿಪಕ್ಷ ಕಾಂಗ್ರೆಸ್ ಖಂಡಿಸಿದ್ದು, ಇದು ಹಿಂದೂ ಮಹಿಳೆಯರ ಅಸ್ಮಿತೆ ಹಾಗೂ ಚಾರಿತ್ರ್ಯಕ್ಕೆ ಎಸಗಿದ ಗಂಭೀರ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇಂದೋರ್ ಜಿಲ್ಲೆಯ ಡಾ. ಅಂಬೇಡ್ಕರ್ ನಗರ್-ಮಹೌ ವಿಧಾನಸಭಾ ಕ್ಷೇತ್ರದ ಶಾಸಕೆಯಾಗಿರುವ ಉಷಾ ಠಾಕೂರ್ ಅವರು ಗರ್ಬಾ ಪಂಡಾಲ್ (ಕಾರ್ಯಕ್ರಮದ ಅಂಗಳ)ಗಳಿಗೆ ಹಿಂದೂಯೇತರರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಪ್ರತಿಪಾದಿಸುವ ವೇಳೆ ಈ ಮಾತುಗಳನ್ನು ಹೇಳಿದ್ದಾರೆ.
ಇದನ್ನೂ ಓದಿ: ಗರ್ಬಾ, ದಾಂಡಿಯಾಗೆ ಮುಸ್ಲಿಂ ಪ್ರವೇಶ ನಿರ್ಬಂಧಿಸಿದ VHP; ಭಾಗವತ್ ನಿಲುವು ಸ್ಪಷ್ಟಪಡಿಸುವಂತೆ ರಾವತ್ ಆಗ್ರಹ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದೆ ಗರ್ಬಾ ಆಚರಣೆಗಳ ಸಮಯದಲ್ಲಿ ದೇಶದಲ್ಲಿ ಪ್ರತಿವರ್ಷ ಸುಮಾರು 4.5 ಲಕ್ಷ ಯುವತಿಯರು ಅನ್ಯಧರ್ಮೀಯರೊಂದಿಗೆ ಓಡಿಹೋಗುತ್ತಿದ್ದರು. ಈ ಪ್ರವೃತ್ತಿಯಿಂದಾಗಿ ದೇಶದ ಜನಸಂಖ್ಯಾ ಸಮತೋಲನದಲ್ಲೇ ವೈಪರೀತ್ಯ ಉಂಟಾಗುತ್ತಿತ್ತು. ಈ ರೀತಿ ಹೋದ ಯುವತಿಯರು ವರ್ಷಕ್ಕೆ ಒಂದೊಂದು ಮಗುವಿಗೆ ಜನ್ಮ ನೀಡುವ ಮೂಲಕ ವರ್ಷಕ್ಕೆ 9 ಲಕ್ಷ ಮಕ್ಕಳ ಪ್ರಮಾಣದಲ್ಲಿ ಜನಸಂಖ್ಯಾ ಬದಲಾವಣೆಯಾಗುತ್ತಿತ್ತು” ಎಂದು ಯಾವುದೇ ಅಧಿಕೃತ ಅಥವಾ ವೈಜ್ಞಾನಿಕ ಆಧಾರಗಳಿಲ್ಲದೆ ವಾದಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಕೆಲವು ಅನ್ಯಧರ್ಮೀಯರು ದುರುದ್ದೇಶಪೂರ್ವಕವಾಗಿ ತಮ್ಮ ಹಣೆಗೆ ತಿಲಕ ಇಟ್ಟುಕೊಂಡು, ಕೈಗೆ ಕಾವಲುದಾರ (ಕಲಾವ) ಕಟ್ಟಿಕೊಂಡು ಹಿಂದೂಗಳಂತೆ ನಟಿಸಿ ಗರ್ಬಾ ಉತ್ಸವಗಳಿಗೆ ಪ್ರವೇಶಿಸುತ್ತಾರೆ. ನಂತರ ಅಲ್ಲಿನ ಹೆಣ್ಣುಮಕ್ಕಳನ್ನು ದಾರಿ ತಪ್ಪಿಸಿ ಅವರ ಜೀವನವನ್ನು ನರಕ ಸದೃಶಗೊಳಿಸುತ್ತಿದ್ದಾರೆ. ಇದನ್ನು ತಡೆಯಲು ಮೂರ್ತಿ ಪೂಜೆ ಮಾಡದವರಿಗೆ ಗರ್ಬಾ ಪಂಡಾಲ್‌ಗಳಿಗೆ ಜೀವಮಾನವಿಡೀ ಪ್ರವೇಶ ನಿಷೇಧಿಸಬೇಕು” ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಗರ್ಬಾ ಹಬ್ಬವು ‘ಶಕ್ತಿ’ಯ ಆರಾಧನೆಯಾಗಿದ್ದು, ಇತ್ತೀಚೆಗೆ ಇದು ಬಟ್ಟೆ, ಆಭರಣ ಮತ್ತು ಟ್ಯಾಟೂ ಪ್ರದರ್ಶಿಸುವ ವಾಣಿಜ್ಯ ರೂಪ ಪಡೆದುಕೊಂಡಿದೆ ಎಂದಿದ್ದಾರೆ.
ಶಾಸಕಿ ಉಷಾ ಠಾಕೂರ್ ಅವರ ಈ ಪ್ರಚೋದನಕಾರಿ ಮತ್ತು ಆಧಾರರಹಿತ ಹೇಳಿಕೆಗೆ ಕಾಂಗ್ರೆಸ್ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ಸಂಯೋಜಕ ನೀಲಭ್ ಶುಕ್ಲಾ ಅವರು ಶಾಸಕಿಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, “ಉಷಾ ಠಾಕೂರ್ ಅವರು ಯಾವುದೇ ಆಧಾರವಿಲ್ಲದೆ ಹಿಂದೂ ಮಹಿಳೆಯರ ಅಸ್ಮಿತೆಗೆ ಅಪಮಾನ ಮಾಡುತ್ತಿದ್ದಾರೆ ಮತ್ತು ಅವರ ಕ್ಯಾರಕ್ಟರ್ (ಚಾರಿತ್ರ್ಯ) ಮೇಲೆಯೇ ಪ್ರಶ್ನೆ ಎತ್ತುತ್ತಿದ್ದಾರೆ. ಇದು ಹಿಂದೂ ನಾರಿಯರಿಗೆ ಮಾಡಿದ ಅತಿ ದೊಡ್ಡ ಅವಮಾನ” ಎಂದು ಕಿಡಿಕಾರಿದ್ದಾರೆ. ಈ ಕೂಡಲೇ ಅವರು ತಮ್ಮ ಆಧಾರರಹಿತ ಹೇಳಿಕೆಗೆ ಸಮಸ್ತ ಹಿಂದೂ ಮಹಿಳೆಯರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ನೀಲಭ್ ಶುಕ್ಲಾ ಆಗ್ರಹಿಸಿದ್ದಾರೆ.
ಈ ವಿವಾದದ ನಡುವೆಯೇ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹಾಗೂ ಬಜರಂಗದಳದಂತಹ ಸಂಘಟನೆಗಳು ಸಹ ಗರ್ಬಾ ಆಯೋಜಕರು ಪ್ರವೇಶದ್ವಾರದಲ್ಲಿ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿ, ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ಕರೆ ನೀಡಿವೆ. ಈ ಹಿಂದೆ ಬಿಜೆಪಿಯ ಮತ್ತೊಬ್ಬ ಶಾಸಕ ರಮೇಶ್ವರ್ ಶರ್ಮಾ ಸಹ ಗರ್ಬಾಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಬಾರಿ ನವರಾತ್ರಿ ಉತ್ಸವ ಆರಂಭವಾಗುವ ಮುನ್ನವೇ ರಾಜಕೀಯ ವಾತಾವರಣ ಕಾವೇರುವಂತೆ ಮಾಡಿದೆ.




