ತನ್ನ ಪತ್ನಿಯನ್ನು ಕೊಂದು ಆಕೆ ಛಾವಣಿಯಿಂದ ಬಿದ್ದು ಮೃತಪಟ್ಟಳು ಎಂದು ಹೇಳಿಕೊಂಡು ಆಕೆಯ ಸಾವನ್ನು ಅಪಘಾತ ಎಂದು ಬಿಂಬಿಸಿ ಕತೆ ಕಟ್ಟಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕನೊಬ್ಬನನ್ನು ಬಂಧಿಸಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ.
ಆರೋಪಿಯನ್ನು ಅಮರ್‌ಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಸಿಂಗ್ ತನ್ನ ಪತ್ನಿಯ ಕುಟುಂಬಕ್ಕೆ ಆಕೆ ಛಾವಣಿಯಿಂದ ಬಿದ್ದಿದ್ದಾಳೆ. ಆಕೆಯನ್ನು ಹಾಜಿಪುರದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿಕೊಂಡಿದ್ದ. ಆಕೆಯ ತಂದೆ ರಾಮ್ ಚಂದ್ ಸೇರಿದಂತೆ ಆಕೆಯ ಕುಟುಂಬ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಆಕೆಯ ದೇಹದ ಮೇಲೆ ಹಲವು ಗಾಯದ ಗುರುತುಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಳೆದ ವರ್ಷ ಪ್ರತಿ 46 ಗಂಟೆಗಳಿಗೊಮ್ಮೆ ಒಬ್ಬ ಪೊಲೀಸ್ ಸಿಬ್ಬಂದಿ ಸಾವು: ಐಬಿ ಮುಖ್ಯಸ್ಥ ಮಾಹಿತಿ
ಈ ಗಾಯದ ಗುರುತುಗಳನ್ನು ಕಂಡು ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಮಗಳು ರಮಾಳನ್ನು ಹೊಡೆದು ಕೊಂದು, ಆಕೆ ಛಾವಣಿಯಿಂದ ಬಿದ್ದಿದ್ದಾಗಿ ಸುಳ್ಳು ಹೇಳಿರುವುದಾಗಿ ತಂದೆ ರಾಮ್ ಚಂದ್ ದೂರಿದ್ದಾರೆ.
ರಮಾ ತಂದೆಯ ದೂರಿನ ಮೇರೆಗೆ ಪೊಲೀಸರು ಅಮರ್‌ಜಿತ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸುಮಾರು 12 ವರ್ಷಗಳ ಹಿಂದೆ ಮದುವೆಯಾಗಿದ್ದು ನಿರಂತರವಾಗಿ ಪತಿ ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾಗಿ, ಆತನೇ ಹೊಡೆದು ಕೊಂದಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಆರೋಪಿ ಅಮರ್‌ಜಿತ್ ಸಿಂಗ್ ಚಿಕ್ಕಪ್ಪ ಕುಲದೀಪ್ ಕುಕಿ ಮತ್ತು ಚಿಕ್ಕಮ್ಮ ಸೋನಿಯಾ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಅವರಿಬ್ಬರೂ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. “ಸದ್ಯ ಅಮರ್‌ಜಿತ್ ಸಿಂಗ್ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಹಾಜಿಪುರ ಪೊಲೀಸ್ ಠಾಣೆ ಗೃಹ ಅಧಿಕಾರಿ ಇನ್ಸ್‌ಪೆಕ್ಟರ್ ಹರ್‌ಪ್ರೇಮ್ ಸಿಂಗ್ ತಿಳಿಸಿದ್ದಾರೆ.




