‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’

Date:

ಕೃತಿ: What Congress And Gandhi Have Done To Untouchables (ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?)
ಮೊದಲ ಮುದ್ರಣ: 1945, Thacker & Co. Ltd
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: ಜನವರಿ, 1991
ಇಂಗ್ಲಿಷ್ ಸಂಪುಟ- 9
ಕನ್ನಡ ಸಂಪುಟ- 7


ಪೂನಾ ಒಪ್ಪಂದ ತರುವಾಯ ಹೊಸದಾಗಿ ಜಾರಿಗೆ ಬಂದ ಮೀಸಲಾತಿ ಅನ್ವಯ 1937ರ ಫೆಬ್ರವರಿಯಲ್ಲಿ ಪ್ರಾಂತೀಯ ಶಾಸನ ಸಭೆಗಳಿಗೆ ಚುನಾವಣೆಗಳು ನಡೆದವು. ಡಾ. ಅಂಬೇಡ್ಕರ್ ಅವರ ‘ಸ್ವತಂತ್ರ ಕಾರ್ಮಿಕ ಪಕ್ಷ’ದ ಅಭ್ಯರ್ಥಿಗಳು ಸೋತಾಗ, ಕಾಂಗ್ರೆಸ್ ಪಕ್ಷವು ‘ನಾನೇ ಅಸ್ಪೃಶ್ಯರ ನಿಜವಾದ ಪ್ರತಿನಿಧಿ ಮತ್ತು ರಕ್ಷಕ’ ಎಂದು ಘೋಷಿಸಿತು. ಕಾಂಗ್ರೆಸ್‌ನ ಈ ಅಪಪ್ರಚಾರವನ್ನು ಖಂಡಿಸಿದ ಡಾ. ಅಂಬೇಡ್ಕರ್, ಚುನಾವಣಾ ಫಲಿತಾಂಶದ ತರುವಾಯದ ಸಮೀಕ್ಷೆಯ ಮೂಲಕ ವಾಸ್ತವಿಕ ಅಂಕಿಅಂಶಗಳ ದಾಖಲೆಯನ್ನು ಆಧರಿಸಿ ಅಧ್ಯಯನ ಮಾಡಿ, ಕಾಂಗ್ರೆಸ್‌ಗೆ ನೀಡಿದ ಉತ್ತರ ಸ್ವರೂಪದ ಕೃತಿಯೇ ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’. ಬಹಳ ಮುಖ್ಯವಾಗಿ ಡಾ. ಅಂಬೇಡ್ಕರ್ ಅವರು ಈ ಕೃತಿಯಲ್ಲಿಕಾಂಗ್ರೆಸ್ ಹಾಗೂ ಗಾಂಧೀಜಿಯವರು ಅಸ್ಪೃಶ್ಯರ ಪ್ರತಿನಿಧಿಯಲ್ಲ’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಗಾಂಧೀಜಿ ಸ್ಥಾಪಿಸಿದ ಹರಿಜನ ಸೇವಕ ಸಂಘ’ದ ಒಳರಾಜಕಾರಣವನ್ನು; ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ‍್ಯ ಹಾಗೂ ಅಧಿಕಾರವನ್ನು ಹಸ್ತಾಂತರಿಸುವಾಗ ಅದು ಯಾವುದೋ ಒಂದು ವರ್ಗದ ಪಾಲಾಗದೆ ಎಲ್ಲ ಸಮುದಾಯಗಳಿಗೆ ಹಂಚಿಕೆಯಾಗಲಿ ಎಂಬುದನ್ನು; ಅಸ್ಪೃಶ್ಯರು ಬ್ರಿಟಿಷರ ಕೈಗೊಂಬೆಗಳೂ ಅಲ್ಲ ಹಾಗೂ ಹಿಂದೂಗಳೂ ಅಲ್ಲ ಎಂಬ ಸತ್ಯವನ್ನು;ಗಾಂಧಿವಾದ’ ಎಂದರೆ ಯಾವುದು? ಅದರ ಬಿಕ್ಕಟ್ಟುಗಳೇನು? ಎಂಬುದನ್ನು ಅಧಿಕೃತ ದಾಖಲೆಗಳ ಮೂಲಕ ವಿಮರ್ಶಾತ್ಮಕವಾದ ಜಿಜ್ಞಾಸೆಗೆ ಈ ಕೃತಿ ಒಳಪಡಿಸಿದೆ. ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ ಎಂಬ ಪ್ರಶ್ನೆಯನ್ನು ಕೇವಲ ಅಂದಿನಕಾಂಗ್ರೆಸ್, ಗಾಂಧೀಜಿ’ಗೆ ಮಾತ್ರವೇ ಸೀಮಿತಗೊಳಿಸಿಕೊಳ್ಳದೆ, ವರ್ತಮಾನದಲ್ಲಿ ನಿಂತು ಇಂದಿನ ಜಾತಿವಾದಿ-ಕೋಮುವಾದಿ ಸಮಾಜ, ಧರ್ಮ, ರಾಜಕಾರಣಕ್ಕೆ `ಶತಮಾನಗಳಿಂದ ಮನುವಾದಿ ಜಾತಿ ವ್ಯವಸ್ಥೆಯು ಅಸ್ಪೃಶ್ಯ ಸಮುದಾಯಕ್ಕೆ ಮಾಡಿರುವ ದ್ರೋಹ, ವಂಚನೆ, ಕ್ರೌರ್ಯವೇನು?’ ಎಂದು ಕೇಳುವಂತೆ ಕೃತಿ ಒತ್ತಾಯಿಸುತ್ತದೆ.

- Advertisement -

ಆಧುನಿಕ ಭಾರತದ ಚರಿತ್ರೆಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಭಿನ್ನ ತಾತ್ವಿಕ ಸ್ವರೂಪವುಳ್ಳ ಎರಡು ಸಂಘರ್ಷಾತ್ಮಕ ವ್ಯಕ್ತಿತ್ವಗಳು. ಭಾರತದ ಸಾಮಾಜಿಕ ಸಂರಚನೆಯಲ್ಲಿರುವ ಹಲವು ಸಂಕೀರ್ಣ ಬಿಕ್ಕಟ್ಟು, ತೊಡಕು, ವೈರುಧ್ಯಗಳು ಅರ್ಥವಾಗಬೇಕಾದರೆ, ಈ ಎರಡೂ ವ್ಯಕ್ತಿತ್ವಗಳ ನಡುವೆ ನಡೆದಿರುವ ಗಂಭೀರವಾದ ವಾದ-ವಾಗ್ವಾದಗಳನ್ನು ಗಮನಿಸಬೇಕಾಗುತ್ತದೆ. ಭಾರತದ ಸಾಮಾಜಿಕ ಹಾಗೂ ಸೈದ್ಧಾಂತಿಕ ನಿಲುವಿನ ಸಮರ್ಥ ಪ್ರತಿಮೆ-ರೂಪಕಗಳಂತಿರುವ ಗಾಂಧಿ-ಅಂಬೇಡ್ಕರ್ ಮಹತ್ವದ ವ್ಯಕ್ತಿತ್ವವಾದಿ ಸಂಕಥನವಾಗಿದ್ದಾರೆ. ಈ ಎರಡೂ ಮಹಾನ್ ಚೇತನಗಳ ತಾತ್ವಿಕ ನಿಲುವು ಹಾಗೂ ಅವರ ಕಾಲಘಟ್ಟದ ಭಾರತೀಯ ಸಾಮಾಜಿಕ ರಾಜಕೀಯ ಧಾರ್ಮಿಕ ಆರ್ಥಿಕ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ವರ್ತಮಾನದ ಭಾರತ ಎದುರಿಸುತ್ತಿರುವ ಸಮಾಜೋರಾಜಕೀಯ ಬಿಕ್ಕಟ್ಟುಗಳನ್ನು ಮುಖಾಮುಖಿಯಾಗಲು ಬಾಬಾ ಸಾಹೇಬ್ ಅಂಬೇಡ್ಕರ್ 1945ರಲ್ಲಿ ಬರೆದ “ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?” (What Congress And Gandhi Have Done To Untouchables) ಸಮರ್ಥ ಆಕರ ಪಠ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಡಾ. ಎ. ಎಂ. ರಾಜಶೇಖರಯ್ಯ ಗುರುತಿಸಿರುವ ಹಾಗೆ: “ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಒಂದು ನೈತಿಕ ಕಳಂಕವೆಂದು ಪರಿಗಣಿಸಿ ಅದನ್ನು ಸರ್ವತ್ರ ಹಿಂದೂಗಳು ಪಶ್ಚಾತ್ತಾಪ, ಮನಃಪರಿವರ್ತನೆ ಮತ್ತು ಪ್ರಾಯಶ್ಚಿತ್ತದ ಮೂಲಕ ನಿವಾರಿಸಬೇಕೆಂದು ಪ್ರತಿಪಾದಿಸಿದರೆ, ಡಾ. ಅಂಬೇಡ್ಕರ್ ಅವರು ಅಸ್ಪೃಶ್ಯರ ಸಮಸ್ಯೆಗಳನ್ನು ಕಾನೂನು ಮತ್ತು ಸಂವಿಧಾನಾತ್ಮಕ ಸಂರಕ್ಷಣೆಗಳ ಮೂಲಕ ನಿವಾರಿಸಬೇಕೆಂದು ವಾದಿಸಿದರು. ಎಂದರೆ ಈ ಸಮಸ್ಯೆಯನ್ನು ಕೇವಲ ಧಾರ್ಮಿಕ ಸಮಸ್ಯೆ ಎಂದು ಪರಿಗಣಿಸದೆ, ಇದು ಒಂದು ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಯಾಗಿದ್ದು ಇದನ್ನು ರಾಜಕೀಯ ಸಾಧನಗಳ ಮೂಲಕವೇ ನಿವಾರಿಸಬೇಕು ಎಂಬುದು ಅವರ ತರ್ಕ ಹಾಗೂ ನಿಲುವಾಗಿತ್ತು. ಆದ್ದರಿಂದಲೇ ಅವರು ಈ ಸಮಸ್ಯೆಯನ್ನು ರಾಜಕೀಯ ಚೌಕಟ್ಟಿನಲ್ಲಿ ಚರ್ಚಿಸುವ ಉದ್ದೇಶದಿಂದ ಈ ಗ್ರಂಥವನ್ನು ಪ್ರಕಟಿಸಿದರು” (ಪು-xxi). ಭಾರತೀಯ ವ್ಯಕ್ತಿತ್ವಕ್ಕೆ ಬಹುದೊಡ್ಡ ಕಳಂಕವಾಗಿರುವ, ಶತಮಾನಗಳ ಸಾಮಾಜಿಕ, ಮಾನಸಿಕ ರೋಗವಾಗಿರುವ ‘ಅಸ್ಪೃಶ್ಯತೆ’ಯನ್ನು ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಗ್ರಹಿಸಿರುವ ಕ್ರಮದಲ್ಲಿರುವ ಭಿನ್ನ ಧೋರಣೆಯನ್ನು ಹಾಗೂ ಗಾಂಧೀಜಿಯವರ ದ್ವಂದ್ವ ಹಾಗೂ ಡಾ. ಅಂಬೇಡ್ಕರ್ ಅವರ ಖಚಿತ ನಿಲುವಿನ ಸ್ವರೂಪವೇನು ಎಂಬುದನ್ನು ಈ ಕೃತಿ ಅಧಿಕೃತವಾಗಿ ನಿರೂಪಿಸುತ್ತದೆ. ‘ಅಸ್ಪೃಶ್ಯತೆ’ಯನ್ನು ‘ಧಾರ್ಮಿಕ ಅಥವಾ ಸಾಮಾಜಿಕ ರಾಜಕೀಯ ಸಮಸ್ಯೆ’ಯಾಗಿ ಗ್ರಹಿಸಿದಾಗ ನಮ್ಮ ದೃಷ್ಟಿಕೋನದಲ್ಲಾಗುವ ಪಲ್ಲಟವನ್ನು ಸ್ಪಷ್ಟಪಡಿಸುತ್ತದೆ. ಜೊತೆಗೆ, ಅಸ್ಪೃಶ್ಯತಾ ನಿವಾರಣೆಗೆ ನಾವು ಕ್ರಮಿಸಬೇಕಾಗಿರುವ ಪರಿಣಾಮಕಾರಿಯಾದ ಮಾರ್ಗ ಯಾವುದು ಎಂಬುದನ್ನು ಸೂಚಿಸುತ್ತದೆ. ಸಾಮಾಜಿಕ, ರಾಜಕೀಯವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ ಹಲವು ಬಗೆಯ ಸಮಸ್ಯಾತ್ಮಕ ರೂಪಾಂತರಗಳನ್ನು ಪಡೆದುಕೊಳ್ಳಬಲ್ಲ ಅಪಾಯಕಾರಿ ಗುಣ ಅಸ್ಪೃಶ್ಯತೆಯ ರೋಗಕ್ಕಿದೆ ಎಂಬುದನ್ನು ಈ ಕೃತಿಯಲ್ಲಿನ ಡಾ. ಅಂಬೇಡ್ಕರ್ ಅವರ ಚಿಂತನೆ ಮನಗಾಣಿಸುತ್ತದೆ.

1932 ಸೆಪ್ಟಂಬರ್ 24ರಂದು ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಅವರ ನಡುವೆ ನಡೆದ ‘ಪೂನಾ ಒಪ್ಪಂದ’ದ ತರುವಾಯ, ಬ್ರಿಟಿಷ್ ಸಂಸತ್ತು ಅಂಗೀಕರಿಸಿ ಜಾರಿಗೊಳಿಸಿದ ‘ಭಾರತ ಸರ್ಕಾರ ಕಾಯ್ದೆ 1935’ರ ಪ್ರಕಾರ 1937ರ ಫೆಬ್ರವರಿಯಲ್ಲಿ ಪ್ರಾಂತೀಯ ಶಾಸನ ಸಭೆಗಳಿಗೆ ಚುನಾವಣೆಗಳು ನಡೆದವು. ಪರಿಶಿಷ್ಟ ಜಾತಿಗಳವರಿಗೆ ಕಾಯ್ದಿರಿಸಲಾಗಿದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಪ್ರತಿನಿಧಿಗಳು ಹಾಗೂ ಡಾ. ಅಂಬೇಡ್ಕರ್ ಅವರ ‘ಸ್ವತಂತ್ರ ಕಾರ್ಮಿಕ ಪಕ್ಷ’ದ ಪರಿಶಿಷ್ಟ ಜಾತಿ ಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣಾ ಫಲಿತಾಂಶ ಪ್ರಕಟವಾದಾಗ, ಕಾಂಗ್ರೆಸ್ ಪಕ್ಷವು ‘ತಮ್ಮ ಪಕ್ಷವೇ ಜಯಶಾಲಿಯಾಗಿದ್ದು, ಕಾಂಗ್ರೆಸ್ಸೇತರ ಅಸ್ಪೃಶ್ಯರ ಅಭ್ಯರ್ಥಿಗಳು ಸೋತಿರುವುದರಿಂದ ಕಾಂಗ್ರೆಸ್ ಪಕ್ಷವೇ ಅಸ್ಪೃಶ್ಯರ ನಿಜವಾದ ಪ್ರತಿನಿಧಿ ಮತ್ತು ರಕ್ಷಕ. ಡಾ. ಅಂಬೇಡ್ಕರ್ ಅವರ ಪಕ್ಷ ದಯನೀಯ ಸೋಲು ಅನುಭವಿಸಿದೆ’ ಎಂದು ಘೋಷಿಸಿತು. ಕಾಂಗ್ರೆಸ್ ಪಕ್ಷದ ಈ ಅಭಿಪ್ರಾಯವನ್ನು ಅಪಪ್ರಚಾರ, ಅಸತ್ಯ ಎಂದು ಖಂಡಿಸಿದ ಡಾ. ಅಂಬೇಡ್ಕರ್, ಚುನಾವಣಾ ಫಲಿತಾಂಶದ ತರುವಾಯದ ಸಮೀಕ್ಷೆಯ ಮೂಲಕ ವಾಸ್ತವಿಕ ಅಂಕಿಅಂಶಗಳ ದಾಖಲೆಯನ್ನು ಆಧರಿಸಿ ಅಧ್ಯಯನ ಮಾಡಿ, ಕಾಂಗ್ರೆಸ್‌ಗೆ ನೀಡಿದ ಉತ್ತರ ಸ್ವರೂಪದ ಕೃತಿಯೇ “ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?”. ಬಹಳ ಮುಖ್ಯವಾಗಿ ಡಾ. ಅಂಬೇಡ್ಕರ್ ಅವರು ಈ ಕೃತಿಯಲ್ಲಿ ‘ಕಾಂಗ್ರೆಸ್ ಹಾಗೂ ಗಾಂಧೀಜಿಯವರು ಅಸ್ಪೃಶ್ಯರ ಪ್ರತಿನಿಧಿಯಲ್ಲ’ ಎಂಬುದನ್ನು ಸಾಬೀತುಪಡಿಸಿದ್ದಾರೆ.

gandhi 1 1

ಡಾ. ಅಂಬೇಡ್ಕರ್ ಈ ಕೃತಿಯ ಮೂಲಕ ಕೇಳಲಾಗಿರುವ “ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?” ಎಂಬ ಪ್ರಶ್ನೆಯನ್ನು ಕೇವಲ ಅಂದಿನ ‘ಕಾಂಗ್ರೆಸ್, ಗಾಂಧೀಜಿ’ಗೆ ಮಾತ್ರವೇ ಸೀಮಿತಗೊಳಿಸಿಕೊಳ್ಳದೆ, ವರ್ತಮಾನದಲ್ಲಿ ನಿಂತು ಇಂದಿನ ಜಾತಿವಾದಿ-ಕೋಮುವಾದಿ ಸಮಾಜ, ಧರ್ಮ, ರಾಜಕಾರಣಕ್ಕೆ “ಶತಮಾನಗಳಿಂದ ಮನುವಾದಿ ಜಾತಿ ವ್ಯವಸ್ಥೆಯು ಅಸ್ಪೃಶ್ಯ ಸಮುದಾಯಕ್ಕೆ ಮಾಡಿರುವ ದ್ರೋಹ, ವಂಚನೆ, ಕ್ರೌರ್ಯವೇನು?” ಎಂದು ಕೇಳುವಂತೆ ಕೃತಿ ಒತ್ತಾಯಿಸುತ್ತದೆ. ಜೊತೆಗೆ, ಮನುವಾದಿ ಜಾತಿವ್ಯವಸ್ಥೆ ಹಾಗೂ ವ್ಯಕ್ತಿತ್ವಗಳು ಅಸ್ಪೃಶ್ಯ ಸಮುದಾಯಕ್ಕೆ ಮಾಡಿರುವ ದ್ರೋಹ, ವಂಚನೆ, ಕ್ರೌರ್ಯವನ್ನು ಬಯಲಾಗಿಸುತ್ತದೆ.

ಒಟ್ಟು ಹನ್ನೊಂದು ಅಧ್ಯಾಯಗಳನ್ನು ಒಳಗೊಂಡಿರುವ ಪ್ರಸ್ತುತ ಕೃತಿಯು, “ಜಾತಿವಾದಿ ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ ನೆಲೆಯಲ್ಲಿನ ವಂಚನೆಯ ನಿಲುವನ್ನು; ನಿಮ್ನವರ್ಗದವರ ಸಾಮಾಜಿಕ ಸುಧಾರಣೆ ಬಗೆಗೆ ಕಾಂಗ್ರೆಸ್ ಪಕ್ಷದವರಲ್ಲಿಯೇ ಇರಬಹುದಾದ ದ್ವಂದ್ವ, ವೈರುಧ್ಯದ ವಿರೋಧಿ ಧೋರಣೆಯನ್ನು; ಕಾಂಗ್ರೆಸ್ ಪಕ್ಷದ ವಿರುದ್ಧ ನಿಮ್ನವರ್ಗಗಳು ಮಂಡಿಸಿದ ಅಸ್ಪೃಶ್ಯರ ಪರವಾದ ಸಾಮಾಜಿಕ ಸುಧಾರಣಾ ಗೊತ್ತುವಳಿಯನ್ನು; ಅಸ್ಪೃಶ್ಯರ ಪ್ರಗತಿಯ ಹೆಸರೇಳಿ ಸಾರ್ವಜನಿಕರ ಹಣ ದೋಚಿದ ಕಾಂಗ್ರೆಸ್ನ ಭ್ರಷ್ಟಾಚಾರವನ್ನು; ಭವಿಷ್ಯ ಭಾರತದ ಸಂವಿಧಾನದಲ್ಲಿ ನಿಮ್ನವರ್ಗಗಳ ಸಂರಕ್ಷಣೆ ಹಾಗೂ ರಾಜಕೀಯ, ಸಾರ್ವಜನಿಕ ಸೇವಾವಲಯದಲ್ಲಿನ ಪ್ರಾತಿನಿಧ್ಯದ ಸ್ವರೂಪ ಹೇಗಿರಬೇಕೆಂಬುದನ್ನು; ಇಂಗ್ಲೆಂಡಿನಲ್ಲಿ ನಡೆದ ಮಹತ್ವದ ಐತಿಹಾಸಿಕ ‘ದುಂಡುಮೇಜಿನ ಸಮ್ಮೇಳನ’ದಲ್ಲಿ ಚರ್ಚಿಸಲ್ಪಟ್ಟ ಸಂಗತಿಗಳನ್ನು; ಭಾರತದ ನಿಮ್ನವರ್ಗಗಳ ನಿಜವಾದ ಪ್ರತಿನಿಧಿ ಡಾ. ಅಂಬೇಡ್ಕರ್ ಅವರೇ ಹೊರತು, ಕಾಂಗ್ರೆಸ್ ಅಥವಾ ಗಾಂಧಿ ಅಲ್ಲ ಎಂಬುದನ್ನು; ಬ್ರಿಟಿಷ್ ಸರ್ಕಾರ ದಲಿತರಿಗೆ ನೀಡಿದ ‘ಪ್ರತ್ಯೇಕ ಮತಕ್ಷೇತ್ರ ಅವಕಾಶ’ವನ್ನು ಖಂಡಿಸಿ ಯರವಾಡ ಜೈಲಿನಲ್ಲಿ ಉಪವಾಸ ಕುಳಿತ ಗಾಂಧೀಜಿ ದಲಿತ ಸಮುದಾಯಕ್ಕೆ ಎಸಗಿದ ವಂಚನೆಯನ್ನು; ‘ಪೂನಾ ಒಪ್ಪಂದ’ದ ಕರಾಳತೆಯನ್ನು; ಅಸ್ಪೃಶ್ಯರಿಗೆ ಸಾರ್ವಜನಿಕ ಬಾವಿ, ದೇವಾಲಯ, ಶಾಲೆ, ರಸ್ತೆ, ಸಂಸ್ಥೆಗಳಿಗೆ ಮುಕ್ತ ಪ್ರವೇಶದ ನಾಟಕವಾಡಿದ ಕಾಂಗ್ರೆಸ್‌ನ ಹುಸಿ ದಲಿತಪರ ನಿಲುವನ್ನು; ಗಾಂಧೀಜಿ ಸ್ಥಾಪಿಸಿದ ‘ಹರಿಜನ ಸೇವಕ ಸಂಘ’ದ ಒಳರಾಜಕಾರಣವನ್ನು; ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ‍್ಯ ಹಾಗೂ ಅಧಿಕಾರವನ್ನು ಹಸ್ತಾಂತರಿಸುವಾಗ ಅದು ಯಾವುದೋ ಒಂದು ವರ್ಗದ ಪಾಲಾಗದೆ ಎಲ್ಲ ಸಮುದಾಯಗಳಿಗೆ ಹಂಚಿಕೆಯಾಗಲಿ ಎಂಬುದನ್ನು; ಅಸ್ಪೃಶ್ಯರು ಬ್ರಿಟಿಷರ ಕೈಗೊಂಬೆಗಳೂ ಅಲ್ಲ ಹಾಗೂ ಹಿಂದೂಗಳೂ ಅಲ್ಲ ಎಂಬ ಸತ್ಯವನ್ನು; ಗಾಂಧೀಜಿಯವರ ಬಗೆಗೆ ಅಸ್ಪೃಶ್ಯರ ನಿಲುವೇನು?; ‘ಗಾಂಧಿವಾದ’ ಎಂದರೆ ಯಾವುದು? ಅದರ ಬಿಕ್ಕಟ್ಟುಗಳೇನು? ಅದು ಹೇಗೆ ಅರ್ಥಹೀನ ಹಾಗೂ ಅಪ್ರಸ್ತುತ” ಎಂಬುದನ್ನು ಅಧಿಕೃತ ದಾಖಲೆಗಳ ಮೂಲಕ ವಿಮರ್ಶಾತ್ಮಕವಾದ ಜಿಜ್ಞಾಸೆಗೆ ಒಳಪಡಿಸಿದೆ. ಈ ಕೃತಿಯು “ಅಂಬೇಡ್ಕರ್‌ವಾದಿ ಸಿದ್ಧಾಂತ ಹಾಗೂ ತಾತ್ವಿಕ ದೃಷ್ಟಿಕೋನ”ವನ್ನು ಸೈದ್ಧಾಂತಿಕವಾಗಿ ಕಟ್ಟಿಕೊಡುತ್ತದೆ. ಯಾವುದೇ ಸಮಾಜದಲ್ಲಿನ ಸಾಮಾಜಿಕತೆ, ರಾಜಕೀಯತೆ, ಆರ್ಥಿಕತೆ, ಧಾರ್ಮಿಕತೆಯ ನಿಲುವುಗಳನ್ನು ಸಾಮುದಾಯಿಕ ನೆಲೆಯಲ್ಲಿ, ಅಧಿಕೃತ ಆಧಾರಗಳ ಮೂಲಕ ಪ್ರಜ್ಞಾಪೂರ್ವಕವಾಗಿ, ವಸ್ತುನಿಷ್ಠವಾಗಿ, ಪಾರದರ್ಶಕವಾಗಿ ಹಾಗೂ ವಿಮರ್ಶಾತ್ಮಕವಾಗಿ ಹೇಗೆ ಗ್ರಹಿಸಬೇಕೆಂಬ ಖಚಿತ ದೃಷ್ಟಿಕೋನವೊಂದನ್ನು ಡಾ. ಅಂಬೇಡ್ಕರ್ ಈ ಕೃತಿಯಲ್ಲಿ ಪರಿಚಯಿಸಿದ್ದಾರೆ. ಕೃತಿಯ ಕೊನೆಯಲ್ಲಿ ನೀಡಲಾಗಿರುವ ಅನುಬಂಧದಲ್ಲಿನ ಹದಿನಾರು ಮಹತ್ವದ ದಾಖಲೆಗಳು ಕೃತಿಯ ಅಧಿಕೃತತೆಯನ್ನು ಸಾಬೀತುಪಡಿಸಿವೆ.

ಸೋಜಿಗದ ಸಂಗತಿಯ ಕಥನ

1917ರಂದು ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ವಾರ್ಷಿಕ ಅಧಿವೇಶನದಲ್ಲಿ ನಿಮ್ನ ವರ್ಗದವರ ಪರವಾಗಿ ಕೈಗೊಳ್ಳಲಾದ ನಿರ್ಣಯ ಕುರಿತ ಚರ್ಚೆಯ ಮೂಲಕ ಕೃತಿ ಆರಂಭವಾಗುತ್ತದೆ. “ನಿಮ್ನ ವರ್ಗದವರ ಮೇಲೆ ರೂಢಿಗತವಾಗಿ ಹೇರಲಾಗಿರುವ ನಿಷೇಧಗಳು ಅತ್ಯಂತ ಆತಂಕಕಾರಿ ಮತ್ತು ದಬ್ಬಾಳಿಕೆಯ ಸ್ವರೂಪದವುಗಳಾಗಿದ್ದು ಅವುಗಳಿಂದ ಈ ವರ್ಗಗಳವರು ಅತ್ಯಂತ ಕಷ್ಟ ಮತ್ತು ಅನಾನುಕೂಲಗಳಿಗೆ ತುತ್ತಾಗಿರುವುದರಿಂದ ಅವುಗಳನ್ನು ನಿವಾರಿಸುವ ಅವಶ್ಯಕತೆ ಮತ್ತು ನ್ಯಾಯಬದ್ಧತೆಯ ಬಗ್ಗೆ ಭಾರತದ ಜನತೆಯನ್ನು ಕಾಂಗ್ರೆಸ್ ಆಗ್ರಹಪಡಿಸುತ್ತದೆ”(ಪು-1) ಎಂಬ ಕಾಂಗ್ರೆಸ್ನ ನಿರ್ಣಯವನ್ನು ಡಾ. ಅಂಬೇಡ್ಕರ್ ಅವರು “ಸೋಜಿಗದ ಸಂಗತಿ” ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷದವರೆ ಈ ನಿರ್ಣಯಕ್ಕೆ ತದ್ವಿರುದ್ಧ ನಿಲುವುಳ್ಳವರಾಗಿದ್ದರು ಹಾಗೂ ‘ಈ ಗೊತ್ತುವಳಿ ಕಾಂಗ್ರೆಸ್ಸಿನ ಘೋಷಿತ ನೀತಿಗೆ ವಿರುದ್ಧವಾಗಿದೆ”(ಪು-7) ಎಂಬುದನ್ನು ಅಂಬೇಡ್ಕರ್ ಸಾಬೀತುಪಡಿಸುತ್ತಾರೆ. ದಲಿತ ವಿರೋಧಿ ಮನಸ್ಥಿತಿಯುಳ್ಳ ಕಾಂಗ್ರೆಸ್ಸಿಗರಿಂದ, ಕಾಂಗ್ರೆಸ್ ಪಕ್ಷದಿಂದ ದಲಿತ ಪರವಾದ ನಿಲುವನ್ನು ನಿರೀಕ್ಷಿಸಲು ಸಾಧ್ಯವೆ? ಎಂಬ ಮೂಲಭೂತ ಪ್ರಶ್ನೆಯನ್ನು ನಿಷ್ಠುರವಾಗಿ ಕೇಳಿರುವ ಅಂಬೇಡ್ಕರ್, ಕಾಂಗ್ರೆಸ್ಸಿನಲ್ಲಿರುವ ದಲಿತಪರ ಹಾಗೂ ದಲಿತ ವಿರುದ್ಧದ ನಿಲುವಿನ ವ್ಯಕ್ತಿತ್ವಗಳನ್ನು ವಸ್ತುನಿಷ್ಠವಾದ ವಿವೇಚನೆಗೆ ಒಳಪಡಿಸಿದ್ದಾರೆ.

ಅಧಿವೇಶನದಲ್ಲಿ ನಿರ್ಣಯವನ್ನು ಮಂಡಿಸಿ ಮಾತನಾಡಿದ ಮದರಾಸಿನ ಜಿ. ಎ. ನಟೇಶನ್ ಅವರು, ಭಾರತಕ್ಕೆ ಸ್ವಯಂ ಆಡಳಿತ ದಕ್ಕಿದ ಮೇಲೆ ಕಾಂಗ್ರೆಸ್ ಪಕ್ಷವು “ಎಲ್ಲ ವಿಧದ ಅಸಮಾನತೆ, ಅನ್ಯಾಯಗಳನ್ನು ನಿವಾರಿಸಿ, ಸಾರ್ವಜನಿಕ ಬಾವಿ ಶಾಲೆಗಳಿಗೆ ನಿಮ್ನವರ್ಗದವರ ಮುಕ್ತ ಪ್ರವೇಶವನ್ನು ನಿಷೇಧಿಸಿರುವ ನಿರ್ಬಂಧಗಳನ್ನು ನಿವಾರಿಸಿ ಮಾನವೀಯತೆಯನ್ನು ಮೇಲೆತ್ತುವ ಕರ್ತವ್ಯ ನಿರ್ವಹಿಸಬೇಕಿದೆ” ಎಂದು ಹೇಳಿದ; ನಿರ್ಣಯವನ್ನು ಅನುಮೋದಿಸಿದ ಮುಂಬಯಿಯ ಶ್ರೀ ಭೂಲಾಭಾಯಿ ದೇಸಾಯಿ ಅವರು, ‘ಅಸ್ಪೃಶ್ಯತೆಯು ಹಿಂದೂ ಧರ್ಮಕ್ಕೆ ಅಂಟಿದ ದೊಡ್ಡ ಜಾಡ್ಯ, ಕಳಂಕ. ನಿಮ್ನವರ್ಗಗಳ ಸಾಮಾಜಿಕ ಅವನತಿಯನ್ನು ತೊಡೆದುಹಾಕದ ಹೊರತು, ಸಮಾನತೆ ಹಾಗೂ ಭ್ರಾತೃತ್ವಕ್ಕೆ ಅರ್ಥವಿಲ್ಲ. ಬ್ರಿಟಿಷ್ ಪ್ರಭುತ್ವವನ್ನು ಪ್ರಶ್ನಿಸಲಿಕ್ಕೆ ಅಥವಾ ಸ್ವಯಂ ಆಡಳಿತಕ್ಕೆ ಆಗ್ರಹಿಸಲು ನಮಗೆ ಯಾವ ನೈತಿಕತೆಯೂ ಇಲ್ಲ’ ಎಂಬ ನಿಲುವಿನ; ಮಲಬಾರ್‌ನ ರಾಮ ಐಯ್ಯರ್ ‘ನಿಮ್ನವರ್ಗಗಳನ್ನು ಸಂಕೋಲೆಗಳಿಂದ ಬಿಡಿಸಿದಾಗ ಮಾತ್ರ ನಮಗೆ ಸ್ವರಾಜ್ಯ ದೊರಕುತ್ತದೆ. ಏಕಕಾಲದಲ್ಲಿ ನಾವು ರಾಜಕೀಯ ಪ್ರಜಾಪ್ರಭುತ್ವವಾದಿ ಹಾಗೂ ಸಾಮಾಜಿಕ ನಿರಂಕುಶವಾದಿಗಳಾಗಿರಲು ಸಾಧ್ಯವಿಲ್ಲ. ರಾಜಕೀಯ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವದಿಂದ ಮಾತ್ರ ಸಮಾನತೆಯ ಏಕೀಕೃತ ಭಾರತ ಸ್ಥಾಪಿಸಲು ಸಾಧ್ಯ. ಬ್ರಾಹ್ಮಣರನ್ನೂ ಒಳಗೊಂಡಂತೆ ಎಲ್ಲ ಉಚ್ಚವರ್ಗದವರೂ ಹಳ್ಳಿಗಳಿಗೆ ಹೋಗಿ ಕೆಳವರ್ಗದವರನ್ನು ಸಂಕೋಲೆಗಳಿಂದ ಬಿಡಿಸಬೇಕಾಗಿದೆ’ ಎಂಬ ಧೋರಣೆಯ; ದೆಹಲಿಯ ಅಸಫ್ ಅಲಿ ಅವರು, ‘ನಿಮ್ನವರ್ಗಗಳವರ ಸಮಸ್ಯೆ ಎಲ್ಲ ಸಮಸ್ಯೆಗಳಿಗಿಂತಲೂ ಅತ್ಯಂತ ಕಠಿಣ ಸಮಸ್ಯೆ. ಅಸ್ಪೃಶ್ಯರು ಶತಮಾನಗಳಿಂದ ಕೀಳು ವೃತ್ತಿಗಳನ್ನು ಮೂಕರಾಗಿ ಪಾಲಿಸಿಕೊಂಡು ಬರುತ್ತಿರುವ ದೌರ್ಭಾಗ್ಯರಾಗಿದ್ದಾರೆ. ಅಸ್ಪೃಶ್ಯರೂ ಮನುಷ್ಯರೆ. ತಮ್ಮನ್ನು ತಾವೇ ಶ್ರೇಷ್ಠರೆಂದು ತಿಳಿದುಕೊಂಡಿರುವವರ ನರನಾಡಿಗಳಲ್ಲಿ ಹರಿಯುತ್ತಿರುವ ಕೆಂಪುರಕ್ತವೇ ಅಸ್ಪೃಶ್ಯರ ಮೈಯಲ್ಲೂ ಹರಿಯುತ್ತಿದೆ. ಅಸ್ಪೃಶ್ಯರನ್ನು ಅವಮಾನಿಸುವ ಮೂಲಕ ಭಾರತದ ಜನತೆ ತಮ್ಮನ್ನು ತಾವೇ ಅವಮಾನಿಸಿಕೊಂಡಿದೆ’ ಎಂಬ ಆತ್ಮಾವಲೋಕನದ ಮಾತನಾಡುತ್ತಾರೆ. ಅಧಿವೇಶನದ ತರುವಾಯ ಕಾಂಗ್ರೆಸ್ ಈ ಬಗೆಯ ಚಿಂತನೆಯ ಹಿನ್ನೆಲೆಯಲ್ಲಿ ದಲಿತಪರವಾಗಿ ಯಾಕೆ ನಡೆದುಕೊಳ್ಳಲಿಲ್ಲ ಎಂಬುದು ಅಂಬೇಡ್ಕರ್ ಅವರ ಮೂಲಭೂತ ಪ್ರಶ್ನೆಯಾಗಿದೆ.

Ani Besent
ಆ್ಯನಿ ಬೆಸಂಟ್

ಇದಕ್ಕೆ ವ್ಯತಿರಿಕ್ತ ಎನ್ನುವ ಹಾಗೆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಆ್ಯನಿ ಬೆಸಂಟರು ಹೇಗೆ ಅಸ್ಪೃಶ್ಯರನ್ನು ಅವಮಾನಿಸುತ್ತ ದ್ವೇಷಿಸುತ್ತಿದ್ದರು ಎಂಬುದನ್ನು ಡಾ. ಅಂಬೇಡ್ಕರ್ ವಿವರಿಸಿದ್ದಾರೆ. 1909ರ ‘ಇಂಡಿಯನ್ ರಿವ್ಯು’ದಲ್ಲಿ ಪ್ರಕಟಿಸಿದ್ದ ‘ನಿಮ್ನವರ್ಗದ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿ ಪ್ರವೇಶ ನೀಡಬೇಕೆ ಬೇಡವೆ’ ಎಂಬ ವಿಷಯದ ಮೇಲೆ ಆ್ಯನಿ ಬೆಸಂಟರು ಬರೆದ ‘ನಿಮ್ನವರ್ಗಗಳ ಉದ್ಧಾರ’ ಎಂಬ ಬರಹದಲ್ಲಿನ ‘ನಿಮ್ನವರ್ಗದವರು ಕೀಳುಮಟ್ಟದ ಅಪರಾಧಿಗಳು, ಕೊಲೆಪಾತಕರು, ವ್ಯಸನಿಗಳು, ಸ್ವಚ್ಛತೆಯ ಕಲ್ಪನೆ ಇಲ್ಲದವರು. ಉಚ್ಚವರ್ಗದ ಮಕ್ಕಳು ಹೋಗುತ್ತಿರುವ ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳಿಗೆ ಪ್ರವೇಶ ದೊರಕಿಸಿಕೊಡುವ ಆತುರದಲ್ಲಿ …ಭವಿಷ್ಯದ ಪ್ರಗತಿಗೆ ಆಪತ್ತು ಎಸಗಿದಂತಾಗುತ್ತದೆ. ಮೊಟ್ಟಮೊದಲು ಈ ನಿಮ್ನವರ್ಗದ ಮಕ್ಕಳಿಗೆ ಸ್ವಚ್ಛತೆ, ಹೊರ ನಡವಳಿಕೆಯಲ್ಲಿ ಸಭ್ಯತೆ ಮತ್ತು ಶಿಕ್ಷಣ, ಧರ್ಮ, ನೀತಿಯ ಪ್ರಥಮ ಪಾಠಗಳನ್ನು ಕಲಿಸುವ ಅವಶ್ಯಕತೆ ಇದೆ. ಸದ್ಯದಲ್ಲಿ ಅವರ ದೇಹವು ಸಾರಾಯಿ ಮತ್ತು ಅಶುದ್ಧ ಆಹಾರದ ದುರ್ವಾಸನೆಯಿಂದ ನಾರುತ್ತಿದೆ. ಈ ಮಕ್ಕಳಲ್ಲಿ ಸಾಂಕ್ರಾಮಿಕ ರೋಗಗಳಿವೆ. ಪ್ರತಿನಿತ್ಯ ಎಚ್ಚರಿಕೆಯಿಂದಿರುವ ತಂದೆತಾಯಿಗಳ ಮಕ್ಕಳನ್ನು ಶಾಲೆಗಳಲ್ಲಿ ಇಂತಹ ಸೋಂಕು ಜಾಡ್ಯಕ್ಕೆ ಗುರಿಮಾಡುವುದು ಸರಿಯೆ? ಈ ನಿರ್ಗತಿಕ ಮಕ್ಕಳ ನಡತೆ ಮತ್ತು ಆಚರಣೆಗಳು ಸುಧಾರಿತ ವಾತಾವರಣಗಳ ಮಕ್ಕಳು ಅನುಕರಿಸುವುದು ಅಪೇಕ್ಷಣೀಯವಲ್ಲ. ಸ್ವಚ್ಛವಾಗಿರುವ ಮಕ್ಕಳನ್ನು ಹಾಗೂ ಕೊಳಕರ ಮಕ್ಕಳನ್ನು ಒಂದೇ ಶಾಲೆಯಲ್ಲಿ ಒಟ್ಟಿಗೆ ಕೂರಿಸುವುದಕ್ಕೆ ಬರುವುದಿಲ್ಲ’ ಎಂಬಂತಹ ಮಾತುಗಳು ಅವರ ದಲಿತ ವಿರೋಧಿ ಅಸಹನೆಯ ನಿಲುವನ್ನು ಸಾಕ್ಷೀಕರಿಸುತ್ತದೆ. ದಲಿತ ವಿರೋಧಿ ನಿಲುವಿರುವವರನ್ನು ಹೊಂದಿರುವ ಕಾಂಗ್ರೆಸ್ ಪಕ್ಷವೂ ದಲಿತ ವಿರೋಧಿಯೆ. ಹೀಗಿರುವಾಗ ಕಾಂಗ್ರೆಸ್ನಿಂದ ನಿಮ್ನವರ್ಗದವರು ಏನನ್ನು ನಿರೀಕ್ಷಿಸಲಿಕ್ಕೆ ಸಾಧ್ಯ? ಎಂಬುದು ಡಾ. ಅಂಬೇಡ್ಕರ್ ಅವರ ಪ್ರಶ್ನೆಯಾಗಿದೆ.

‘ಸಾಮಾಜಿಕ ಸುಧಾರಣೆ’ ಬಗೆಗೆ ಪಕ್ಷದೊಳಗೆ ಒಮ್ಮತ ಅಭಿಪ್ರಾಯವನ್ನು ರೂಪಿಸಲಿಕ್ಕೆ ಸಾಧ್ಯವಿಲ್ಲದ, ಸಾಮಾಜಿಕ ಸುಧಾರಣಾ ವಿರೋಧಿ ಬಣಗಳಿಗೆ ತಲೆಬಾಗಿದ ಕಾಂಗ್ರೆಸ್ನಿಂದ ಅಸ್ಪೃಶ್ಯರು ಒಳಿತನ್ನು ಬಯಸಲು ಸಾಧ್ಯವೆ? ಎಂಬುದು ಡಾ. ಅಂಬೇಡ್ಕರ್ ಅವರ ಮತ್ತೊಂದು ತಾತ್ವಿಕ ಪ್ರಶ್ನೆ. 1886ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಎರಡನೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಶ್ರೀ ದಾದಾಭಾಯಿ ನವರೋಜಿ ‘ನಾವು ಒಂದು ರಾಜಕೀಯ ಸಂಘವಾಗಿ, ರಾಜಕೀಯ ಆಶೋತ್ತರಗಳನ್ನು ಪ್ರತಿನಿಧಿಸಲು ಇಲ್ಲಿ ಸೇರಿರುತ್ತೇವೆಯೇ ಹೊರತು ಸಾಮಾಜಿಕ ಸುಧಾರಣೆಗಳ ಚರ್ಚೆ ಮಾಡಲಿಕ್ಕಲ್ಲ’ ಎಂದಿದ್ದು; 1887ರಲ್ಲಿ ನಡೆದ ಕಾಂಗ್ರೆಸ್ಸಿನ ಮೂರನೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಬದ್ರುದ್ದೀನ್ ತ್ಯಾಬ್ಜಿ ‘ಒಂದು ನಿರ್ದಿಷ್ಟ ಭಾಗ ಅಥವಾ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾದ ಸಾಮಾಜಿಕ ಸುಧಾರಣೆಯ ಚರ್ಚೆಗಳಿಂದ ದೂರವಿರಬೇಕು’ ಎಂದಿದ್ದು; 1892ರಲ್ಲಿ ಕಾಂಗ್ರೆಸ್ಸಿನ ಎಂಟನೆಯ ಅಧಿವೇಶನದಲ್ಲಿ ಶ್ರೀ ಡಬ್ಲ್ಯು. ಸಿ. ಬ್ಯಾನರ್ಜಿ ‘ಸಾಮಾಜಿಕ ವಿಷಯಗಳ ಸಾರ್ವಜನಿಕ ಚರ್ಚೆಯ ವಿರೋಧಿಗಳಲ್ಲಿ ನಾನೊಬ್ಬ. ಆ ವಿಷಯಗಳನ್ನು ಆಯಾ ಸಮುದಾಯಗಳಿಗೆ ಬಿಟ್ಟುಬಿಡಬೇಕು. ಸಾಮಾಜಿಕ ಸುಧಾರಣೆಯನ್ನು ಮಾಡದೇ ರಾಜಕೀಯ ಸುಧಾರಣೆ ಸಾಧ್ಯವಿಲ್ಲ ಎಂದು ಹೇಳುವವರ ಮಾತನ್ನು ಕೇಳಲು ನನಗೆ ತಾಳ್ಮೆ ಇಲ್ಲ’ ಎಂದಿದ್ದು ಹಾಗೂ 1895ರಲ್ಲಿ ಪುಣೆಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸುರೇಂದ್ರನಾಥ ಬ್ಯಾನರ್ಜಿ ‘ನಮ್ಮ ಸಂಸ್ಥೆಯನ್ನು ಈಗಾಗಲೇ ಹಿಂದೂ ಕಾಂಗ್ರೆಸ್ ಎಂದು ಕರೆಯಲಾಗುತ್ತದೆ. ಇದು ಏಕೀಕೃತ ಭಾರತದ ಕಾಂಗ್ರೆಸ್ ಆಗಿದ್ದು ಹಿಂದೂಗಳು, ಮೊಹಮದೀಯರು, ಕ್ರೈಸ್ತರು, ಪಾರ್ಸಿಗಳು, ಸಿಖ್ಖರು ಮತ್ತು ತಮ್ಮ ತಮ್ಮ ಸಾಮಾಜಿಕ ರೂಢಿಗಳನ್ನು ಸುಧಾರಿಸಿಕೊಳ್ಳುವ ಹಾಗೂ ಸುಧಾರಿಸಿಕೊಳ್ಳದ ಎಲ್ಲರ ಪಕ್ಷವಾಗಿದೆ. ನಮ್ಮದು ಒಂದು ರಾಜಕೀಯ ಚಳವಳಿಯೇ ಹೊರತು ಸಾಮಾಜಿಕ ಚಳವಳಿಯಲ್ಲ’ ಎಂದಿದ್ದು ಸಾಮಾಜಿಕ ಸುಧಾರಣಾ ನಿಲುವಿಗೆ ವಿರುದ್ಧವಾದ ಹಾಗೂ ವೈರುಧ್ಯದಿಂದ ಕೂಡಿದ ಕಾಂಗೆಸ್ಸಿಗರ ಧೋರಣೆಯನ್ನು ಸಾಬೀತುಪಡಿಸುತ್ತವೆ. ಹೀಗಿರುವಾಗ ಅಸ್ಪೃಶ್ಯರ ಸಾಮಾಜಿಕ ಸುಧಾರಣೆ ಕುರಿತು ಕಾಂಗ್ರೆಸ್ ಕಾಳಜಿ ವಹಿಸಲು ಸಾಧ್ಯವೆ?” ಎಂದು ಡಾ. ಅಂಬೇಡ್ಕರ್ ಪ್ರಶ್ನಿಸಿದ್ದಾರೆ.

1885ರಲ್ಲಿ ಮುಂಬಯಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸ್ಥಾಪಿಸಿದಾಗ, ರಾಜಕೀಯ, ಸಾಮಾಜಿಕ, ಆರ್ಥಿಕ ಸುಧಾರಣೆಗೆ ಹೆಚ್ಚು ಒತ್ತುಕೊಡಲಾಗಿತ್ತು. ಮುಂಬಯಿಯಲ್ಲಿ ಜರುಗಿದ ಮೊದಲ ಕಾಂಗ್ರೆಸ್ ಅಧಿವೇಶನದಲ್ಲಿ ದಿವಾನ್ ಬಹಾದ್ದೂರ ಆರ್. ರಂಗನಾಥರಾಯರು, ನ್ಯಾಯಮೂರ್ತಿ ಎಂ. ಜೆ. ರಾನಡೆಯವರು ಸಾಮಾಜಿಕ ಸುಧಾರಣೆ ಕುರಿತು ಭಾಷಣ ಮಾಡಿದ್ದರು. ದಿವಾನ್ ಬಹಾದ್ದೂರ್ ಆರ್. ರಘುನಾಥ್ ರಾವ್, ಮಹದೇವ ಗೋವಿಂದ ರಾನಡೆ, ನರೇಂದ್ರನಾಥ್ ಸೆನ್, ನಾನಕೀನಾಥ್ ಘೋಷಾಲ್ ಪರಸ್ಪರ ಚರ್ಚಿಸಿ ಸಾಮಾಜಿಕ ಸುಧಾರಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು “ಭಾರತೀಯ ರಾಷ್ಟ್ರೀಯ ಸಾಮಾಜಿಕ ಸಮ್ಮೇಳನ”(ಇಂಡಿಯನ್ ನ್ಯಾಷನಲ್ ಸೋಷಿಯಲ್ ಕಾನ್ಫರೆನ್ಸ್) ಎಂಬ ಸಂಸ್ಥೆಯನ್ನು ಆರಂಭಿಸಬೇಕೆಂದು ನಿರ್ಣಯಿಸಿದರು. 1885ನೇ ಡಿಸೆಂಬರ್ ತಿಂಗಳಲ್ಲಿ ರಾಜಾ ಸರ್ ಟಿ. ಮಾಧವರಾವ್ ಅವರ ಅಧ್ಯಕ್ಷತೆಯಲ್ಲಿ ಮದ್ರಾಸಿನಲ್ಲಿ ಜರುಗಿದ ಮೊದಲ ಸಮ್ಮೇಳನವು ಸಾಮಾಜಿಕ ಸುಧಾರಣಾ ಮೌಲ್ಯವನ್ನು ಎತ್ತಿಹಿಡಿಯಿತು. ಮುಂದೆ ಕಾಂಗ್ರೆಸ್ ಪಕ್ಷದ ವಾರ್ಷಿಕ ಅಧಿವೇಶನ ನಡೆಯುವ ವೇದಿಕೆಯಲ್ಲಿಯೇ ಸಾಮಾಜಿಕ ಸಮ್ಮೇಳನದ ವಾರ್ಷಿಕ ಅಧಿವೇಶಗಳನ್ನು ನಡೆಸಬೇಕೆಂದು ನಿರ್ಣಯಿಸಲಾಯಿತು. ಆದರೆ, ಸಾಮಾಜಿಕ ಸುಧಾರಣೆಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಬಾಲಗಂಗಾಧರ ತಿಲಕರು ‘ಕಾಂಗ್ರೆಸ್ ಅಧಿವೇಶನದ ಚಪ್ಪರದಲ್ಲಿ ಸಾಮಾಜಿಕ ಸಮ್ಮೇಳನದ ಅಧಿವೇಶನ ನಡೆಸಲು ಅವಕಾಶ ಕೊಟ್ಟಿದ್ದೇ ಆದರೆ ಚಪ್ಪರವನ್ನೇ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದರು’. ಆನಂತರದಲ್ಲಿ ಕಾಂಗ್ರೆಸ್ ಸಾಮಾಜಿಕ ಸುಧಾರಣಾ ವಿಷಯದ ಚರ್ಚೆಯನ್ನೇ ಕೈಬಿಟ್ಟಿತು ಹಾಗೂ ಮುಂದಿನ ಕಾಂಗ್ರೆಸ್ ಅಧಿವೇಶನಗಳಲ್ಲಿ ಯಾವ ಅಧ್ಯಕ್ಷರೂ ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲೇ ಇಲ್ಲ. ಈ ಕಾರಣಕ್ಕಾಗಿಯೇ ಡಾ. ಅಂಬೇಡ್ಕರ್, ಸಾಮಾಜಿಕ ಸುಧಾರಣಾ ವಿಷಯವನ್ನು ಕೇವಲ ಚರ್ಚಿಸುವುದಕ್ಕೂ ಬಯಸದ ಕಾಂಗ್ರೆಸಿಗರು, ಅಸ್ಪೃಶ್ಯರ ಪರವಾದ ನಿಲುವನ್ನು ತಾಳಲು ಸಾಧ್ಯವೆ? ಎಂದು ಪ್ರಶ್ನಿಸುತ್ತ ಇದನ್ನೊಂದು ‘ಸೋಜಿಗದ ಸಂಗತಿ’ ಎಂದು ಕರೆದಿದ್ದಾರೆ.

ಕಾಂಗ್ರೆಸ್ ಪಕ್ಷದ ಸಾಮಾಜಿಕ ಸುಧಾರಣಾ ವಿರೋಧಿ ನಿಲುವನ್ನು ಖಂಡಿಸಿ, ಕಾಂಗ್ರೆಸ್‌ನ ಪ್ರತಿಕೃತಿಯನ್ನು ಸುಟ್ಟುಹಾಕಿದ ನಿಮ್ನವರ್ಗಗಳು, 11ನೇ ನವೆಂಬರ್ 1917ರಲ್ಲಿ ಸರ್ ನಾರಾಯಣ ಚಂದಾವರ್ಕರವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಹಾಗೂ ಒಂದು ವಾರದ ತರುವಾಯ ನವೆಂಬರ್ 1917ರಲ್ಲಿ ಬ್ರಾಹ್ಮಣೇತರ ಪಕ್ಷದ ಮುಖಂಡರಾದ ಬಾಪೂಜಿ ನಾಮದೇವ ಬಗಾಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ಅಸ್ಪೃಶ್ಯರ ಪರವಾದ ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾದ ಸಾಮಾಜಿಕ ಸುಧಾರಣಾ ಗೊತ್ತುವಳಿ’ಗಳನ್ನು(ಪು-14,15,16) ಅಂಗೀಕರಿಸಲಾಯಿತು. ಇದು ಕಾಂಗ್ರೆಸ್ ವಿರುದ್ಧ ದಲಿತರು ಸಾರ್ವಜನಿಕವಾಗಿ ಮಂಡಿಸಿದ ಪ್ರತಿರೋಧವಾಗಿದೆ. ನಿಮ್ನವರ್ಗವು ಅನುಮೋದಿಸಿದ ಗೊತ್ತುವಳಿಗಳಲ್ಲಿ ಪ್ರಮುಖವಾದದ್ದು, ‘ನಿಮ್ನವರ್ಗಗಳು ತಮ್ಮ ಜನಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ತಮ್ಮ ಪ್ರತಿನಿಧಿಗಳನ್ನು ತಾವೇ ಚುನಾಯಿಸಿ ವಿಧಾನ ಪರಿಷತ್ತಿಗೆ ಕಳುಹಿಸುವ ಹಕ್ಕನ್ನು ನೀಡಬೇಕು’ ಎಂಬುದಾಗಿತ್ತು. ಈ ಗೊತ್ತುವಳಿಯನ್ನೇ ಮುಂದೆ ಡಾ. ಅಂಬೇಡ್ಕರ್ ಇಂಗ್ಲೆಂಡಿನ ದುಂಡುಮೇಜಿನ ಪರಿಷತ್ತಿನಲ್ಲಿ ಹೋರಾಡಿ ದಲಿತರಿಗಾಗಿ ‘ಪ್ರತ್ಯೇಕ ಮತದಾನದ ಹಕ್ಕು’ ಪಡೆದುಕೊಂಡು ಬಂದಿದ್ದು.

ಕಾಂಗ್ರೆಸ್ ಪಕ್ಷವು ಸಾಮಾಜಿಕ ಒಳಿತಿಗಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿಗಳ ‘ತಿಲಕ್ ಸ್ವರಾಜ್ ನಿಧಿ’ಯನ್ನು ಸ್ಥಾಪಿಸಿತು. 1922ರ ಫೆಬ್ರವರಿಯಲ್ಲಿ ಬಾರ್ಡೋಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿಮ್ನವರ್ಗಗಳ ಪ್ರಗತಿಯ ಸಲುವಾಗಿ ಕೆಲವು ಗೊತ್ತುವಳಿಗಳನ್ನು ಅಂಗೀಕರಿಸಲಾಯಿತು. ನಿಮ್ನವರ್ಗಗಳ ಸಾಮಾಜಿಕ ಒಳಿತಿನ ರಚನಾತ್ಮಕ ಕಾರ್ಯಕ್ರಮಗಳಿಗಾಗಿ ಕಾಂಗ್ರೆಸ್ ಪಕ್ಷ ತಿಲಕ್ ಸ್ವರಾಜ್ ನಿಧಿಯಿಂದ ಮೀಸಲಿಟ್ಟ ಹಣ 5 ಲಕ್ಷ. ಆದರೆ ನಂತರದಲ್ಲಿ ದಲಿತರಿಗಾಗಿ ಇಷ್ಟು ಹಣ ಮೀಸಲಿಡುವುದು ವ್ಯರ್ಥವೆಂದು ಭಾವಿಸಿದ ಕಾಂಗ್ರೆಸ್ 5 ಲಕ್ಷದಿಂದ 2 ಲಕ್ಷಕ್ಕೆ ಸೀಮಿತಗೊಳಿಸಿತು. ಇದರಲ್ಲಿ ಅಸ್ಪೃಶ್ಯರಿಗಾಗಿ ಕಾಂಗ್ರೆಸ್ ಖರ್ಚು ಮಾಡಿದ ಹಣ ಕೇವಲ 43,381=00 ರೂ.ಗಳು ಮಾತ್ರ. ತಿಲಕ್ ಸ್ವರಾಜ್ ನಿಧಿಯಿಂದ ಕಾಂಗ್ರೆಸ್ಸಿಗರು ಅವ್ಯವಹಾರವಾಗಿ ದೋಚಿದ ಹಣಕ್ಕಿಂತಲೂ, ಅಸ್ಪೃಶ್ಯರಿಗಾಗಿ ಖರ್ಚು ಮಾಡಿದ ಹಣ ತುಂಬಾ ಕಡಿಮೆ. ‘ಯಂಗ್ ಇಂಡಿಯಾ’ದ 1921ರ ನವೆಂಬರ್ 3ರ ಸಂಚಿಕೆಯಲ್ಲಿ “ಅಸ್ಪೃಶ್ಯತೆಯ ಕಳಂಕ ಅಳಿಸದೆ ಸ್ವರಾಜ್ಯ ಅರ್ಥಹೀನ. ಸ್ವರಾಜ್ಯ ಗಳಿಸುವ ಪ್ರಕ್ರಿಯೆಯಲ್ಲಿ ಅಸ್ಪೃಶ್ಯತಾ ನಿವಾರಣೆ ಅತ್ಯಂತ ಶಕ್ತಿಶಾಲಿ ಅಂಶವೆಂದು ನಾನು ಭಾವಿಸುತ್ತೇನೆ’ ಎಂದು ಬರೆದ ಗಾಂಧೀಜಿಯವರು, ತಿಲಕ್ ಸ್ವರಾಜ್ ನಿಧಿಯ ವಿಚಾರದಲ್ಲಿ ಕಾಂಗ್ರೆಸ್ಸಿಗರು ಎಸಗಿದ ಭ್ರಷ್ಟಾಚಾರವನ್ನೇಕೆ ಪ್ರಶ್ನಿಸಲಿಲ್ಲ? ಅಸ್ಪೃಶ್ಯರ ಪ್ರಗತಿಗೆ ಹೆಚ್ಚಿನ ಹಣವನ್ನು ವಿನಿಯೋಗಿಸಿ ಎಂದು ಕಾಂಗ್ರೆಸ್ಗೆ ಯಾಕೆ ಸೂಚಿಸಲಿಲ್ಲ? ಎಂಬುದಾಗಿ ಡಾ. ಅಂಬೇಡ್ಕರ್ ತೀಕ್ಷ÷್ಣವಾಗಿ ಪ್ರಶ್ನಿಸಿದ್ದಾರೆ.

ಬ್ರಿಟಿಷ್ ಸರ್ಕಾರವು ಭಾರತದ ಹೊಸ ಸಂವಿಧಾನಕ್ಕೆ ಅಂತಿಮ ರೂಪ ಕೊಡುವ ಸಲುವಾಗಿ ಚರ್ಚಿಸಲು ಭಾರತದ ಪ್ರತಿನಿಧಿಗಳನ್ನು ಲಂಡನ್ನಿನ ‘ದುಂಡು ಮೇಜಿನ ಸಮ್ಮೇಳನ’ಕ್ಕೆ ಆಹ್ವಾನಿಸಿತು. ಈ ಸಮ್ಮೇಳನವನ್ನು ಬ್ರಿಟನ್ನಿನ 5ನೇ ಜಾರ್ಜ್ ದೊರೆ 12ನೇ ನವೆಂಬರ್ 1930ರಂದು ಉದ್ಘಾಟಿಸಿದರು. ಸಮ್ಮೇಳನದಲ್ಲಿ ಅಸ್ಪೃಶ್ಯರ ಪ್ರತಿನಿಧಿಗಳಾಗಿ ಡಾ. ಅಂಬೇಡ್ಕರ್, ದಿವಾನ್ ಬಹದ್ದೂರ್ ಆರ್. ಶ್ರೀನಿವಾಸನ್ ಭಾಗವಹಿಸಿದ್ದರು. ದುಂಡು ಮೇಜಿನ ಸಮ್ಮೇಳನದ ಕಾರ್ಯವನ್ನು ಒಟ್ಟು ಒಂಭತ್ತು ಸಮಿತಿಗಳಿಗೆ ಹಂಚಲಾಗಿತ್ತು. ಅವುಗಳಲ್ಲಿ ‘ಅಲ್ಪಸಂಖ್ಯಾತರ ಸಮಿತಿ’ ಕೂಡ ಒಂದು. ಕೋಮು ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವ ಸಲುವಾಗಿ ರಚಿಸಲಾದ ಈ ಸಮಿತಿಯ ಅಧ್ಯಕ್ಷತೆಯನ್ನು ಬ್ರಿಟನ್ನಿನ ಪ್ರಧಾನಿ ರ್ಯಾಮ್ಸೆ ಮ್ಯಾಕ್ಡೊನಾಲ್ಡ್ ವಹಿಸಿದ್ದರು. ಸ್ವತಂತ್ರ ಭಾರತದಲ್ಲಿ ಹಿಂದೂಗಳ ದಬ್ಬಾಳಿಕೆಯಿಂದ ಅಸ್ಪೃಶ್ಯರನ್ನು ಸಂರಕ್ಷಿಸುವ ಸಲುವಾಗಿ ಡಾ. ಅಂಬೇಡ್ಕರ್ ‘ಅಲ್ಪಸಂಖ್ಯಾತರ ಸಮಿತಿ’ಗೆ “ಸಮಾನ ಪೌರತ್ವ, ಮೂಲಭೂತ ಹಕ್ಕು, ಸಮಾನ ಹಕ್ಕುಗಳ ಮುಕ್ತ ಅನುಭೋಗ, ಪೌರತ್ವ ಉಲ್ಲಂಘಿಸುವ ಅಪರಾಧ, ನಿಮ್ನವರ್ಗಗಳು ಮತ್ತು ಸಾಮಾಜಿಕ ಬಹಿಷ್ಕಾರವನ್ನು ಕಾನೂನಿನನ್ವಯ ಶಿಕ್ಷೆಗೊಳಪಡಿಸಬಹುದಾದ ಅಪರಾಧ ಎಂದು ಘೋಷಿಸುವುದು, ತಾರತಮ್ಯದ ವಿರುದ್ಧ ರಕ್ಷಣೆ, ಶಾಸಕಾಂಗಗಳಲ್ಲಿ ತಕ್ಕ ಪ್ರಾತಿನಿಧ್ಯ, ಸೇವಾವರ್ಗಗಳಲ್ಲಿ ತಕ್ಕ ಪ್ರಾತಿನಿಧ್ಯ, ಪೂರ್ವಗ್ರಹದ ವರ್ತನೆ ಅಥವಾ ಹಿತಾಸಕ್ತಿಯ ಅಲಕ್ಷ್ಯದ ವಿರುದ್ಧ ಪರಿಹಾರ, ವಿಶೇಷಾ ಇಲಾಖಾ ರಕ್ಷಣೆ, ನಿಮ್ನವರ್ಗಗಳು ಮತ್ತು ಮಂತ್ರಿಮಂಡಲ” ಎಂಬ ಷರತ್ತುಗಳನ್ನು ಒಳಗೊಂಡ ಅಸ್ಪೃಶ್ಯರ ರಾಜಕೀಯ ರಕ್ಷಣೋಪಾಯದ ಮನವಿ ಪತ್ರವನ್ನು ಸಲ್ಲಿಸಿದರು. ಎರಡನೆಯ ದುಂಡು ಮೇಜಿನ ಸಮ್ಮೇಳನದಲ್ಲಿ ಕಾಂಗ್ರೆಸ್ ಪ್ರತಿನಿಧಿಯಾಗಿ ಭಾಗವಹಿಸಿದ ಗಾಂಧೀಜಿಯವರು, ನಾನು ನಿಜವಾದ ಅಸ್ಪೃಶ್ಯರ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತ ಅಂಬೇಡ್ಕರ್ ಹಾಗೂ ಅಸ್ಪೃಶ್ಯರ ವಿಚಾರದಲ್ಲಿ ವಂಚನೆಯಿಂದ ನಡೆದುಕೊಂಡ ರೀತಿಯನ್ನು ಇಲ್ಲಿ ಚರ್ಚಿಸಲಾಗಿದೆ. ಬ್ರಿಟಿಷ್ ಸರ್ಕಾರ ಭಾರತಕ್ಕೆ “ಅಧಿಕಾರ ಹಸ್ತಾಂತರ ಮಾಡಲೇಬೇಕಾದ ಪ್ರಸಂಗ ಬಂದರೆ ಅಧಿಕಾರವು ಯಾವುದೇ ಒಂದು ಗುಂಪಿನ-ಮುಸಲ್ಮಾನರೆ ಆಗಲಿ ಅಥವಾ ಹಿಂದೂಗಳೆ ಆಗಲಿ-ಅವರ ಕೆಲವೇ ಜನರ ಕೈಗೆ ಹೋಗದಂತೆ ಜಾಗ್ರತೆ ವಹಿಸಿ, ಅಧಿಕಾರದಲ್ಲಿ ಎಲ್ಲ ಕೋಮಿನವರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಪಾಲ್ಗೊಳ್ಳುವ ಅವಕಾಶ ಸಿಗಲಿ” ಎಂದು ಹೇಳಿದ ಡಾ. ಅಂಬೇಡ್ಕರ್ ಪ್ರಬಲವಾಗಿ ನಿಮ್ನವರ್ಗಗಳ ರಾಜಕೀಯ ಪ್ರಾತಿನಿಧ್ಯದ ಹಕ್ಕೊತ್ತಾಯವನ್ನು ಮಂಡಿಸಿದರು. ಅಸ್ಪೃಶ್ಯರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡಿದರೆ ‘ನನ್ನ ಪ್ರಾಣವನ್ನು ಪಣಕ್ಕೆ ಇಟ್ಟಾದರೂ ಅದನ್ನು ವಿರೋಧಿಸುತ್ತೇನೆ’ ಎಂದು ಹೇಳಿದ ಗಾಂಧೀಜಿಯವರು ಯರವಾಡ ಜೈಲಿನಲ್ಲಿ ಉಪವಾಸ ಕುಳಿತು ಅಸ್ಪೃಶ್ಯರ ಬಿಡುಗಡೆಗಾಗಿ ಡಾ. ಅಂಬೇಡ್ಕರ್ ಹೋರಾಟ ಮಾಡಿ ತಂದ ವಿಶೇಷ ಮತದಾನದ ಹಕ್ಕನ್ನು ವಿರೋಧಿಸಿ, ವಿಶೇಷ ಮತದಾನದ ಹಕ್ಕನ್ನು ಹಿಂಪಡೆಯುವಲ್ಲಿ ‘ಪೂನಾ ಒಪ್ಪಂದ’ದ(24ನೇ ಸೆಪ್ಟೆಂಬರ್ 1932) ಮೂಲಕ ಯಶಸ್ವಿಯಾಗುತ್ತಾರೆ. ಗಾಂಧೀಜಿಯವರ ಈ ಉಪವಾಸ ಸತ್ಯಾಗ್ರಹವನ್ನು “ಅದೊಂದು ಕೀಳು, ಹೊಲಸು ಕ್ರಿಯೆಯಾಗಿತ್ತು. ಅದು ಅಸ್ಪೃಶ್ಯರ ಒಳಿತಿಗಾಗಿರದೆ ಅವರ ಅವನತಿಯ ಉದ್ದೇಶ ಹೊಂದಿತ್ತು” ಎಂಬುದಾಗಿ ಡಾ. ಅಂಬೇಡ್ಕರ್ ಕಟುವಾಗಿ ವಿರೋಧಿಸುತ್ತಾರೆ.

dundumeju
ಎರಡನೇ ದುಂಡುಮೇಜಿನ ಸಭೆಯಲ್ಲಿ ಗಾಂಧೀಜಿ

ಬಹುಶಃ ಪೂನಾ ಒಪ್ಪಂದದ ಮೂಲಕ ಡಾ. ಅಂಬೇಡ್ಕರ್ ಹಾಗೂ ದಲಿತರಿಗೆ ತಾವು ಎಸಗಿದ ವಂಚನೆಯ ಅರಿವಾದ ಗಾಂಧೀಜಿ ಹಾಗೂ ಕಾಂಗ್ರೆಸ್ ಪಕ್ಷವು ಪಾಪಪ್ರಜ್ಞೆಯಿಂದ ನಾವು ನಿಮ್ಮ ಪರ ಎಂದು ದಲಿತರನ್ನು ನಂಬಿಸಲು ಮಾಡಿದ ಹಗಲು ವೇಷದ ನಾಟಕವನ್ನು ಈ ಕೃತಿ ಬಯಲಾಗಿಸಿದೆ. 25ನೇ ಸೆಪ್ಟೆಂಬರ್ 1932ರಂದು ಬೊಂಬಾಯಿಯಲ್ಲಿ ನಡೆದ ಸಭೆಯಲ್ಲಿ, ಹಿಂದೂ ಸವರ್ಣೀಯರು ದಲಿತರಿಗೆ ಸಾರ್ವಜನಿಕ ಬಾವಿ, ಶಾಲೆ, ರಸ್ತೆ, ಸಂಸ್ಥೆ, ದೇವಾಲಯಗಳಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೆಂಬ ಗೊತ್ತುವಳಿ ಹೊರಡಿಸುತ್ತಾರೆ. ಇದರಂತೆ ದಲಿತರಿಗೆ ಎಲ್ಲೆಲ್ಲಿ ಮುಕ್ತ ಪ್ರವೇಶವಕಾಶವನ್ನು ಕಲ್ಪಿಸಲಾಯಿತು ಎಂಬುದನ್ನು ಗಾಂಧೀಜಿಯವರು ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ‘ವಾರದಿಂದ ವಾರಕ್ಕೆ’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸುತ್ತಾರೆ. ವ್ಯಂಗ್ಯವೆಂದರೆ, ದಲಿತರ ಪ್ರವೇಶಕ್ಕಾಗಿ ತೆರೆದದ್ದು ಹಾಳುಬಿದ್ದ, ನಾಯಿ ಕತ್ತೆಗಳಿಗೆ ಆಶ್ರಯ ನೀಡಿದ್ದ ಕೆಲವು ದೇವಾಲಯಗಳನ್ನು. ಗಾಂಧೀಜಿಯವರ ಹುಟ್ಟೂರಾದ ಗುಜರಾತಿನಲ್ಲಿ ಒಂದು ದೇವಾಲಯವೂ ಅಸ್ಪೃಶ್ಯರಿಗಾಗಿ ತೆರೆಯಲಿಲ್ಲ ಎಂಬುದು ದುರಂತದ ಸಂಗತಿ. ಇದನ್ನರಿತ ಡಾ. ಅಂಬೇಡ್ಕರ್ ‘ನಿಮ್ನವರ್ಗದವರಿಗೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಹಂಬಲವಿದೆಯೇ ಹೊರತು, ಪೊಳ್ಳು ದೇವಾಲಯಗಳನ್ನು ಪ್ರವೇಶಿಸುವುದಲ್ಲ. ನಿಮ್ನವರ್ಗದವರಿಗೆ ಬೇಕಾದ ಧರ್ಮ ಎಂದರೆ ಸರಿಸಮಾನತೆಯನ್ನು ಸಮಾಜದಲ್ಲಿ ನೀಡಬಹುದಾದ ಧರ್ಮ. ನಿಮ್ನವರ್ಗದವರು ಅಸಮಾನತೆಯನ್ನು ಎತ್ತಿಹಿಡಿಯುವ ಧರ್ಮವನ್ನು ಸಹಿಸಲಾರರು. ಹಿಂದೂ ಸಮಾಜವು ವರ್ಗ, ಶ್ರೇಣಿಗಳಿಂದ ಕೂಡಿದೆ. ಅಸಮಾನತೆಯೇ ಅದರ ತಳಹದಿ. ಸ್ವಾಭಿಮಾನಕ್ಕೆ ಕಳಂಕಪ್ರಾಯವಾಗಿರುವ ಚಾತುರ್ವರ್ಣ ಪದ್ಧತಿಯಿಂದಲೇ ಅಸಮಾನತೆ, ಜಾತಿ ಪದ್ಧತಿ, ಅಸ್ಪೃಶ್ಯತೆ ತಲೆ ಎತ್ತಿದ್ದು, ಆ ಪದ್ಧತಿಯನ್ನು ಬೇರು ಸಹಿತ ಕಿತ್ತುಬಿಸಾಡಲೇಬೇಕು. ನಿಮ್ನವರ್ಗದವರು ದೇವಾಲಯ ಪ್ರವೇಶವನ್ನು ತಿರಸ್ಕರಿಸುವರಲ್ಲದೆ, ಹಿಂದೂಧರ್ಮವನ್ನೇ ತಿರಸ್ಕರಿಸಿದರೂ ಅಚ್ಚರಿಪಡಬೇಕಾಗಿಲ್ಲ’ ಎಂದು ಕಿಡಿಕಾರುತ್ತಾರೆ.
ಅಸ್ಪೃಶ್ಯರನ್ನು ಕರುಣೆಯಿಂದಲೇ ಕೊಲ್ಲುವ ಕಾಂಗ್ರೆಸ್‌ನ ಕುತಂತ್ರದ ಭಾಗವಾಗಿ ಗಾಂಧೀಜಿಯವರ ಯೋಜನೆಯಂತೆ 30ನೇ ಸೆಪ್ಟಂಬರ್ 1932ರಂದು ಬೊಂಬಾಯಿಯ ಕೌಸಜೀ ಜಹಂಗೀರ ಸಭಾಂಗಣದಲ್ಲಿ ಮದನಮೋಹನ ಮಾಳವೀಯರ ಅಧ್ಯಕ್ಷತೆಯಲ್ಲಿ ನಡೆದ ಹಿಂದೂಗಳ ಸಭೆಯಲ್ಲಿ “ಅಖಿಲ ಭಾರತ ಅಸ್ಪೃಶ್ಯತಾ ನಿವಾರಣೆ ಸಂಘ”ವನ್ನು ಸ್ಥಾಪಿಸಲಾಯಿತು. ಈ ಸಂಘದ ಪ್ರಧಾನ ಕಚೇರಿಯನ್ನು ದೆಹಲಿಯ ಬರ್ಲಾ ಭವನದಲ್ಲಿ ಸ್ಥಾಪಿಸಿ, ಜಿ. ಡಿ. ಬರ್ಲಾ ಅದರ ಅಧ್ಯಕ್ಷರಾಗಿ, ಅಮೃತಲಾಲ್ ವಿ. ಠಕ್ಕರ್ ಕಾರ್ಯದರ್ಶಿಯಾಗಿ ನೇಮಕವಾದರು. ಗಾಂಧೀಜಿಯವರು 9ನೇ ಡಿಸೆಂಬರ್ 1932ರಂದು ಈ ಸಂಘದ ಹೆಸರನ್ನು “ಅಸ್ಪೃಶ್ಯರ ಸೇವಾ ಸಂಘ” ಎಂದು ಬದಲಿಸಿದರು. ಈ ಹೆಸರೂ ಸರಿಕಾಣದೆ, ಕೊನೆಗೆ ಗಾಂಧೀಜಿಯವರು “ಹರಿಜನ ಸೇವಕ ಸಂಘ” ಎಂದು ಹೆಸರಿಟ್ಟರು. ಮೊದಲಿಗೆ ಸಂಘಕ್ಕೆ ‘ಅಸ್ಪೃಶ್ಯತಾ ನಿವಾರಣೆ ಸಂಘ’ ಎಂದು ಹೆಸರಿಟ್ಟ ಗಾಂಧೀಜಿಯವರು, ನಂತರದಲ್ಲಿ ಸಂಘದ ಹೆಸರನ್ನು ಬದಲಾಯಿಸುತ್ತ, ‘ಅಸ್ಪೃಶ್ಯತಾ ನಿವಾರಣೆ’ಗೆ ಬದಲಾಗಿ ‘ಅಸ್ಪೃಶ್ಯರ/ಹರಿಜನರ ಸೇವಾ’ ಎಂಬ ಪರಿಭಾಷೆಯನ್ನು ಬಳಸುತ್ತಾರೆ. ಅಸ್ಪೃಶ್ಯತೆಯನ್ನು ನಿವಾರಿಸಬೇಕೆಂಬುದು ಕಾಂಗ್ರೆಸ್‌ನ ಮುಖ್ಯ ಕಾಳಜಿಯಾಗಿರಲಿಲ್ಲ ಎಂಬುದನ್ನು ಇದು ಹೇಳುತ್ತದೆ. ಅಸ್ಪೃಶ್ಯರ ಸೇವೆ ಮಾಡುವುದು ಸಂಘದ ಉದ್ದೇಶವಾಗಿದೆ ಎಂಬುದಾಗಿ ದಲಿತರ ಕಣ್ಣೊರೆಸುವ ನಾಟಕವಾಡುತ್ತಾರೆ. ವಾಸ್ತವದಲ್ಲಿ ದಲಿತರು ಬಯಸಿದ್ದು ‘ಅಸ್ಪೃಶ್ಯತೆಯ ನಿವಾರಣೆಯನ್ನೇ ಹೊರತು, ಸೇವೆಯನ್ನಲ್ಲ ಎಂಬುದು ಸ್ಪಷ್ಟ. 3ನೇ ನವೆಂಬರ್ 1932ರಂದು ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಪತ್ರಿಕಾ ಹೇಳಿಕೆ ಮೂಲಕ “ಸಂಘದ ಉದ್ದೇಶ ನಿಮ್ನವರ್ಗದವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟವನ್ನು ಸುಧಾರಿಸುವುದಾಗಿದೆ. ಜಾತಿ ನಿರ್ಮೂಲನೆ, ಸಹಭೋಜನ, ಅಂತರಜಾತಿ ವಿವಾಹ ಇದರ ವ್ಯಾಪ್ತಿಗೆ ಬರುವುದಿಲ್ಲ” ಎಂದು ತಮ್ಮ ಜಾತಿವಾದಿ ಧೋರಣೆಯನ್ನು ಖಚಿತಪಡಿಸುತ್ತಾರೆ. ಸಂಘದ ಕಾರ್ಯಚಟುವಟಿಕೆಗಾಗಿ 8 ಲಕ್ಷ ಹಣವನ್ನು ಸಂಗ್ರಹಿಸಲಾಯಿತು. ಆದರೆ ಖರ್ಚು ಮಾಡಿದ ಹಣ ಅರ್ಧಕ್ಕಿಂತಲೂ ಕಡಿಮೆ. ಪರಿಶಿಷ್ಟವರ್ಗಕ್ಕೆ ಸೇರಿದ ಕೆಲವರು ‘ಹರಿಜನ ಸೇವಕ ಸಂಘ’ದ ಆಡಳಿತ ಮಂಡಳಿಯಲ್ಲಿ ನಮಗೂ ಪ್ರಾತಿನಿಧ್ಯ ನೀಡಿ ಎಂದು ಮಾಡಿದ ಮನವಿಯನ್ನು ನಿರಾಕರಿಸಿದ ಗಾಂಧೀಜಿಯವರು ‘ಹರಿಜನ ಸೇವಕ ಸಂಘಕ್ಕಾಗಿ ಬೇಕಾದ ಧನಸಹಾಯವು ಹಿಂದೂಗಳಿಂದಲೇ ಬಂದಿರುವುದರಿಂದ ಅಸ್ಪೃಶ್ಯರಿಗೆ ಕಾರ್ಯಕಾರಿ ಸಮಿತಿಯಲ್ಲಿ ಯಾವ ಅಧಿಕಾರವೂ ಇಲ್ಲ’ ಎನ್ನುತ್ತಾರೆ. ‘ಹರಿಜನ ಸೇವಕ ಸಂಘ’ (ಅಸ್ಪೃಶ್ಯತಾ ನಿವಾರಣಾ ಲೀಗ್)ದ ಕಾರ್ಯದರ್ಶಿಗಳಾದ ಎ. ವಿ. ಠಕ್ಕರ್ ಅವರಿಗೆ ಪತ್ರ ಬರೆದ, ಸಂಘದ ಸದಸ್ಯರಾಗಿದ್ದ ಡಾ. ಅಂಬೇಡ್ಕರ್, ಸಂಘವು ಮಾಡಬೇಕಾಗಿರುವ ಕಾರ್ಯಗಳ ಕುರಿತು ಚರ್ಚಿಸುತ್ತ “ನಾಗರಿಕ ಹಕ್ಕುಗಳನ್ನು ದೊರಕಿಸಲು ಚಳವಳಿ ಮಾಡುವುದು, ನಿಮ್ನವರ್ಗದವರಿಗೆ ಸಮಾನ ಅವಕಾಶಗಳನ್ನು ಒದಗಿಸುವುದು, ಸಾಮಾಜಿಕ ಸಂಪರ್ಕದ ಮೂಲಕ ಸವರ್ಣೀಯ ಹಿಂದೂಗಳು ತಮ್ಮ ಮನೆಗಳಲ್ಲಿ ನಿಮ್ನವರ್ಗದವರನ್ನು ಸೇವಕರಂತೆ ನೇಮಿಸಿಕೊಳ್ಳುವುದು, ನಿಮ್ನವರ್ಗಗಳ ವಿಕಾಸಕ್ಕೆ ಮೀಸಲಾದ ಸಂಸ್ಥೆಗಳನ್ನು ಏಜೆನ್ಸಿಗಳನ್ನಾಗಿ ನೇಮಕ ಮಾಡಿಕೊಳ್ಳುವುದು” ಎಂಬ ಸಲಹೆಗಳನ್ನು ನೀಡುತ್ತಾರೆ. ಆದರೆ, ಕಾರ್ಯದರ್ಶಿಗಳಿಂದ ತಮ್ಮ ಪತ್ರಕ್ಕೆ ಯಾವುದೇ ಉತ್ತರ ಬರದೆ ಇದ್ದ ಕಾರಣ ಹಾಗೂ ತಮ್ಮ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ತಾವು ಸಂಘದಲ್ಲಿರುವುದು ವ್ಯರ್ಥವೆಂದು ಭಾವಿಸಿದ ಡಾ. ಅಂಬೇಡ್ಕರ್ ಸಂಘದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತ, ‘ಹರಿಜನ ಸೇವಕ ಸಂಘ’ವು ಅಸ್ಪೃಶ್ಯರನ್ನು ಕಾಂಗ್ರೆಸ್ ಪರ ತರಬೇತಿಗೊಳಿಸುವ, ಸ್ವತಂತ್ರದಿಂದ ತಲೆ ಎತ್ತಿ ಬಾಳುವೆ ನಡೆಸದಂತೆ, ಹಿಂದೂ ಸಮಾಜದ ಬಾಲಬಡುಕರಂತೆ ಮಾಡುವ ಉದ್ದೇಶದ ಸಂಘಟನೆಯಾಗಿತ್ತು’ ಎಂಬುದಾಗಿ ಟೀಕಿಸಿದ್ದಾರೆ.

1937ರ ಪ್ರಾಂತೀಯ ಚುನಾವಣೆಯ ಫಲಿತಾಂಶದ ಅಂಕಿಅಂಶಗಳನ್ನು ಸಮೀಕ್ಷೆಗೆ ಒಳಪಡಿಸುವ ಮೂಲಕ ಕಾಂಗ್ರೆಸ್ ಪಕ್ಷವು ಹೇಗೆ ಅಸ್ಪೃಶ್ಯರ ಪರವೂ ಅಲ್ಲ, ಪ್ರತಿನಿಧಿಯೂ ಅಲ್ಲ ಎಂಬುದನ್ನು ಚರ್ಚಿಸಲಾಗಿದೆ. ಅಂದಿನ ಪತ್ರಿಕಾ ಮಾಧ್ಯಮವು ಕಾಂಗ್ರೆಸ್, ಗಾಂಧೀಜಿ ಪರವಾಗಿ ವಕಾಲತ್ತು ವಹಿಸುತ್ತ, ದಲಿತರನ್ನು ಹಾಗೂ ಕಾಂಗ್ರೆಸ್ಸೇತರರನ್ನು ಬ್ರಿಟಿಷರ ದಲ್ಲಾಳಿಗಳೆಂದು ಅಪಪ್ರಚಾರ ಮಾಡುವ ಮೂಲಕ ಹೇಗೆ ದ್ರೋಹ ಎಸಗಿದವು ಎಂಬುದನ್ನು ವಿವರಿಸಲಾಗಿದೆ. ಅಸ್ಪೃಶ್ಯರನ್ನು ಹಾಗೂ ಡಾ. ಅಂಬೇಡ್ಕರ್ ಅವರನ್ನು ಬ್ರಿಟಿಷರ ಕೈಗೊಂಬೆಗಳು ಎಂಬ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸಿದ ಕಾಂಗ್ರೆಸ್‌ನ “ಸ್ವಾತಂತ್ರ‍್ಯ ಹೋರಾಟ” ಆಂದೋಲನವನ್ನು ಕೇವಲ ಹಿಂದೂಗಳಿಂದ ಮಾತ್ರ ನಡೆಸಲಾಗಿದ್ದು, ಅಸ್ಪೃಶ್ಯರು ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸದಿರುವುದಕ್ಕೆ ಕಾರಣ, ಸ್ವತಂತ್ರ ಭಾರತದಲ್ಲಿ ಹಿಂದೂಗಳ ಪ್ರಾಬಲ್ಯಕ್ಕೆ ಗುರಿಯಾಗಬಹುದೆಂಬ ಅಂಜಿಕೆ. ಹಾಗಾಗಿ ಅಸ್ಪೃಶ್ಯರಿಗೆ ರಕ್ಷಣೆ ನೀಡುವ ಸಂವಿಧಾನ ಬೇಕು. ಇಲ್ಲವಾದಲ್ಲಿ ಇವರು ಹಿಂದೂಗಳ ದಬ್ಬಾಳಿಕೆಗೆ ಗುರಿಯಾಗುತ್ತಾರೆ ಎಂಬ ವಾದವನ್ನು ಡಾ. ಅಂಬೇಡ್ಕರ್ ಮಂಡಿಸುತ್ತಾರೆ.

Yaravada jail 1
ಯರವಾಡ ಜೈಲಿನಲ್ಲಿ ಡಾ.ಅಂಬೇಡ್ಕರ್ ಮತ್ತು ಗಾಂಧಿ (ಸಾಂದರ್ಭಿಕ ಚಿತ್ರ)

ಅಸ್ಪೃಶ್ಯರು ಹಿಂದೂ ಜನಾಂಗದ ಅವಿಭಾಜ್ಯ ಅಂಗವೆಂದು ಹೇಳುವ ಕಾಂಗ್ರೆಸ್‌ನ ವಾದವನ್ನು ನಿರಾಕರಿಸುವ ಡಾ. ಅಂಬೇಡ್ಕರ್, ಅಸ್ಪೃಶ್ಯರು ಹಿಂದೂ ಸಮಾಜದ ಪ್ರತ್ಯೇಕ ಅಂಗ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಸ್ಪೃಶ್ಯರನ್ನು ಹಿಂದೂ ಸಮಾಜದ ಅಂಗವೆಂದು ಪರಿಗಣಿಸಲು ಸಾಧ್ಯವಿಲ್ಲ, ಕಾರಣ ಆ ಧರ್ಮದಲ್ಲಿ ಸಹಭೋಜನಕ್ಕೆ, ಅಂತರಜಾತಿ ವಿವಾಹಕ್ಕೆ ಅವಕಾಶವೇ ಇಲ್ಲ. ಹಿಂದೂ ಧರ್ಮವೇ ಬೇರ್ಪಡೆಯನ್ನು ಬೋಧಿಸುತ್ತದೆ. ಜಾತೀಯತೆ, ಅಸ್ಪೃಶ್ಯತೆಗಳೂ ಹಿಂದೂಗಳು ಆಚರಿಸಲೇಬೇಕಾದ ಸಿದ್ಧಾಂತಗಳು. ಹಿಂದುತ್ವ ಮತ್ತು ಸಾಮಾಜಿಕ ಐಕ್ಯತೆಗಳೆರಡೂ ಕೂಡಿರಲು ಸಾಧ್ಯವೇ ಇಲ್ಲ. ಸಾಮಾಜಿಕ ಅನೈಕ್ಯ ಹಿಂದುತ್ವದ ಮತ್ತೊಂದು ಹೆಸರು. ಬ್ರಿಟಿಷರು ಅಸ್ಪೃಶ್ಯರಿಗೆ ಸೈನ್ಯದಲ್ಲಿ ಅವಕಾಶ ಹಾಗೂ ಶಿಕ್ಷಣ ಸೌಲಭ್ಯವನ್ನು ಕಲ್ಪಿಸಿಕೊಟ್ಟ ಕಾರಣದಿಂದಾಗಿ ಅವರು ಹಿಂದುತ್ವದಿಂದ ಬಿಡುಗಡೆಗೊಳ್ಳಲು ಸಾಧ್ಯವಾಗಿದ್ದು. ‘ರಾಜಕೀಯ ಅಧಿಕಾರವು ಆಳುವ ವರ್ಗದವರ ಕೈಗೆ ಬೀಳದಂತೆ ತಡೆಯಲು ದೇಶದ ಸಾಮಾಜಿಕ ಸಂಸ್ಥೆಗಳೊಡನೆ ಸಂವಿಧಾನವನ್ನು ಜೋಡಿಸುವುದು ಮೀಸಲಾತಿ ಬೇಡಿಕೆಯ ಮುಖ್ಯೋದ್ದೇಶ’ ಎಂದು ಹೇಳುವ ಡಾ. ಅಂಬೇಡ್ಕರ್, ಜಾತಿ ವ್ಯವಸ್ಥೆಯಲ್ಲಿ ನಿಮ್ನವರ್ಗಗಳಿಗೆ ಮೀಸಲಾತಿ ಹಾಗೂ ಶಾಸಕಾಂಗ, ಆಡಳಿತಾಂಗ, ಸಾರ್ವಜನಿಕ ಸೇವಾವಲಯಗಳಲ್ಲಿ ಪ್ರಾತಿನಿಧ್ಯ ಎಷ್ಟು ಮುಖ್ಯ ಎಂಬುದನ್ನು ವಿಶ್ಲೇಷಿಸಿದ್ದಾರೆ. ಅಸ್ಪೃಶ್ಯತೆ ನೈತಿಕ ಅಪರಾಧವೆಂದು ತಿಳಿಯದ ಹಿಂದೂಗಳಿಗೆ ಆತ್ಮಸಾಕ್ಷಿ ಇರಲು ಸಾಧ್ಯವಿಲ್ಲ ಎಂಬುದಿಲ್ಲಿ ಚರ್ಚೆಗೆ ಒಳಗಾಗಿದೆ.

‘ಗುಲಾಮರನ್ನಾಗಿಸುವ ಸರ್ವಾಧಿಕಾರಕ್ಕೆ ಸ್ವೇಚ್ಛಾಧಿಕಾರ ನೀಡದಿರಿ’ ಎಂದು ಬ್ರಿಟಿಷರಿಗೆ ಮನವಿ ಮಾಡುವ ಡಾ. ಅಂಬೇಡ್ಕರ್, ರಾಷ್ಟ್ರದ ಸ್ವಾತಂತ್ರ‍್ಯ ಹಾಗೂ ಜನತೆಯ ವಿಮೋಚನೆಯ ನಡುವಿನ ವ್ಯತ್ಯಾಸವನ್ನು ಗ್ರಹಿಸದ ಹೊರತು, ಕಾಂಗ್ರೆಸ್ ಇಂಡಿಯಾದ ಆಳುವ ವರ್ಗದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದೆಯೋ? ಅಥವಾ ಜನತೆಯ ಸ್ವಾತಂತ್ರ್ಯಕ್ಕಾಗಿಯೊ? ಎಂಬ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ. ಅಸಮಾನತೆಯನ್ನು ತನ್ನ ಅಧಿಕೃತ ಸಿದ್ಧಾಂತವನ್ನಾಗಿಸಿಕೊಂಡಿರುವ ಬ್ರಾಹ್ಮಣವಾದವು ಹೇಗೆ ಆಳುವ ವರ್ಗವನ್ನು ಸೃಷ್ಟಿಸಿ ಅಸ್ಪೃಶ್ಯ ಸಮುದಾಯಗಳನ್ನು ಗುಲಾಮರನ್ನಾಗಿಸಿದೆ ಎಂಬುದನ್ನು ವಿವರಿಸಲಾಗಿದೆ. 1918ರಲ್ಲಿ ಬ್ರಾಹ್ಮಣೇತರರು ಮತ್ತು ಹಿಂದುಳಿದ ವರ್ಗದ ಜನರು ತಮಗೂ ಶಾಸನ ಸಭೆಗಳಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ಸಿಗಬೇಕೆಂದು ಚಳವಳಿ ಮಾಡುತ್ತಾರೆ. ಆ ಸಂದರ್ಭದಲ್ಲಿ ತಿಲಕ್ ಅವರು ಬ್ರಾಹ್ಮಣೇತರರು ಮತ್ತು ಹಿಂದುಳಿದ ವರ್ಗದ ಜನರನ್ನು ಗಾಣಿಗರು, ತಂಬಾಕನ್ನು ಮಾರುವವರು, ಅಗಸರು ಎಂದು ಕರೆದು ಅವಮಾನಿಸುತ್ತ, ಇಂಥವರಿಗೆ ಶಾಸನ ಸಭೆಗಳಲ್ಲಿ ಕೆಲಸವೆ? ಎಂದು ಹಂಗಿಸುತ್ತಾರೆ. ಇಂತಹ ಧೋರಣೆವುಳ್ಳವರಿಗೆ ಅಧಿಕಾರ ಸಿಕ್ಕರೆ ನಿಮ್ನವರ್ಗಗಳನ್ನು ಹೇಗೆ ನಡೆಸಿಕೊಳ್ಳಬಹುದೆಂದು ಚರ್ಚಿಸಿದ್ದಾರೆ.

ಗಾಂಧೀಜಿಯವರ ಬಗೆಗೆ ಅಸ್ಪೃಶ್ಯರ ನಿಲುವೇನು? ಅಸ್ಪೃಶ್ಯರ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರವೇನು? ಎಂಬ ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಚರ್ಚಿಸಲಾಗಿದೆ. ಸನಾತನ ವಾತಾವರಣದಲ್ಲಿ ಬೆಳೆದ ಗಾಂಧೀಜಿಯವರು ಅಸ್ಪೃಶ್ಯತೆ ಒಂದು ಕಳಂಕ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿಯೇ ಅರ್ಥಮಾಡಿಕೊಂಡಿದ್ದರು, ಆಗಾಗ ಜಾತಿ ಕಟ್ಟಳೆಗಳನ್ನು ಉಲ್ಲಂಘಿಸುತ್ತಿದ್ದರು. ಆದರೆ, ತರುವಾಯದಲ್ಲಿ ಅಸ್ಪೃಶ್ಯತೆಯ ನಿವಾರಣೆಗಾಗಿ ಗಾಂಧೀಜಿ ಕೈಗೊಂಡ ಕ್ರಮಗಳಾವುವು? ಅಸ್ಪೃಶ್ಯರ ಪರವಾಗಿ ಮಾತನಾಡುತ್ತಿದ್ದ ಗಾಂಧೀಜಿ ಅಸ್ಪೃಶ್ಯತೆಯ ನಿವಾರಣೆಯ ಬಗೆಗೆ ಚಿಂತಿಸಲಿಲ್ಲ ಏಕೆ? ಹಿಂದೂ-ಮುಸ್ಲಿಂ ಸೌಹಾರ್ದತೆಯ ಸಲುವಾಗಿ, ಆಶ್ರಮವಾಸಿಗಳ ಅನೈತಿಕ ಕಾರ್ಯಗಳ ಪ್ರಾಯಶ್ಚಿತ್ತಕ್ಕಾಗಿ ಹಾಗೂ ದಲಿತರಿಗೆ ವಿಶೇಷ ಮತದಾನದ ಹಕ್ಕು(ಕಮ್ಯುನಲ್ ಅವಾರ್ಡ್) ಸಿಗಬಾರದೆಂದು ಹೀಗೆ ಹಲವು ಉದ್ದೇಶಗಳಿಗಾಗಿ 21 ಬಾರಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡ ಗಾಂಧೀಜಿ ಒಮ್ಮೆಯೂ ಅಸ್ಪೃಶ್ಯತೆಯ ನಿವಾರಣೆಯನ್ನು ಒತ್ತಾಯಿಸಿ ಉಪವಾಸ ಕೈಗೊಳ್ಳಲಿಲ್ಲ ಏಕೆ? ಅಸ್ಪೃಶ್ಯರು ರಾಜ್ಯದ ಅಧಿಕಾರ ಅಂತಸ್ತನ್ನು ಪಡೆಯಲೇಬಾರದೆಂಬ ಅಭಿಪ್ರಾಯ ಹೊಂದಿದ್ದ ಗಾಂಧೀಜಿ ಅಸ್ಪೃಶ್ಯರ ಸ್ನೇಹಿತರಾಗಬಹುದೆ? ಕಾಂಗ್ರೆಸ್ ಪಕ್ಷದ ಸದಸ್ಯರು ಅಸ್ಪೃಶ್ಯತೆಯನ್ನು ಆಚರಿಸದಂತೆ ಕಡ್ಡಾಯ ನಿಯಮವನ್ನು ರೂಪಿಸಲಿಲ್ಲ ಏಕೆ? ಗುರುವಾಯೂರು ದೇವಾಲಯಕ್ಕೆ ಅಸ್ಪೃಶ್ಯರ ಪ್ರವೇಶವನ್ನು ಕಲ್ಪಿಸದಿದ್ದರೆ ಆಮರಣಾಂತ ಉಪವಾಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ ಗಾಂಧೀಜಿ ಉಪವಾಸ ಕೂರಲು ಇಲ್ಲ, ಅಸ್ಪೃಶ್ಯರಿಗಾಗಿ ಗುರುವಾಯೂರು ದೇವಾಲಯದ ಬಾಗಿಲು ತೆರೆಯಲೂ ಇಲ್ಲ. ಇದೊಂದು ವಿಪರ್ಯಾಸದ ಸಂಗತಿಯಾಗಿದ್ದು, ಗಾಂಧೀಜಿಯವರು ಅಸ್ಪೃಶ್ಯರ ಪರವಾಗಿ ಒಮ್ಮೆಯೂ ಉಪವಾಸ ವ್ರತ ಕೈಗೊಳ್ಳಲಿಲ್ಲ ಏಕೆ? ಅಸ್ಪೃಶ್ಯರು 1929ರಲ್ಲಿ ಸಾರ್ವಜನಿಕ ಬಾವಿ, ಮಂದಿರಗಳ ಪ್ರವೇಶಕ್ಕಾಗಿ ಒತ್ತಾಯಿಸಿ ಸತ್ಯಾಗ್ರಹ ಪ್ರಾರಂಭಿಸಿದಾಗ ಅದನ್ನು ಗಾಂಧೀಜಿ ಖಂಡಿಸಿದ್ದೇಕೆ? ಹರಿಜನ ಸೇವಕ ಸಂಘದಿಂದ ಅಸ್ಪೃಶ್ಯರನ್ನು ಗಾಂಧೀಜಿ ದೂರವಿಟ್ಟದ್ದು ಏಕೆ? ಕೇಂದ್ರೀಯ ಪ್ರಾಂತ್ಯದ ಡಾ. ಖರೆ ಅವರ ನೇತೃತ್ವದ ಕಾಂಗ್ರೆಸ್ ಮಂತ್ರಿ ಮಂಡಳಕ್ಕೆ ಪರಿಶಿಷ್ಟ ಜಾತಿಯ ಸದಸ್ಯರಾದ ಅಗ್ನಿಭೋಜ್ ಅವರ ಸೇರ್ಪಡೆಯನ್ನು ಗಾಂಧೀಜಿ ವಿರೋಧಿಸಿದ್ದೇಕೆ? ಎಂಬ ಬಹಳ ಮುಖ್ಯ ಪ್ರಶ್ನೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಈ ಎಲ್ಲ ಕಾರಣಕ್ಕಾಗಿಯೇ ಅಸ್ಪೃಶ್ಯರು ಗಾಂಧೀಜಿಯವರನ್ನು ನಂಬಿಕೆಗೆ ಯೋಗ್ಯರಾದ ವ್ಯಕ್ತಿಯೆಂದು ಪರಿಗಣಿಸುವುದಿಲ್ಲ. ‘ಜಾತಿ ವ್ಯವಸ್ಥೆಯನ್ನು ಉಳಿಸಿಕೊಂಡು ಅಸ್ಪೃಶ್ಯತೆಯನ್ನು ಅಳಿಸಿಹಾಕಬೇಕೆಂಬ ಅಭಿಪ್ರಾಯ ಹೊಂದಿದ ಗಾಂಧೀಜಿಯವರನ್ನು ಅಸ್ಪೃಶ್ಯರು ಸ್ನೇಹಿತರೆಂದು ನಂಬಲಾರರು. ಅಸ್ಪೃಶ್ಯತೆಯು ಜಾತಿ ವ್ಯವಸ್ಥೆಯ ಫಲಶೃತಿಯಾದ್ದರಿಂದ ಜಾತಿ ವ್ಯವಸ್ಥೆಯನ್ನು ಅಳಿಸಿಹಾಕದೆ ಅಸ್ಪೃಶ್ಯತೆಯ ನಿವಾರಣೆಯಾಗದು ಎಂಬ ಸರಳ ಸತ್ಯವನ್ನು ಗಾಂಧಿ ಅರಿಯುವುದು ಅವಶ್ಯಕ’ ಎಂಬುದು ಡಾ. ಅಂಬೇಡ್ಕರ್ ಅವರ ನಿಲುವಾಗಿತ್ತು.

‘ದಿ ಬಾಂಬೆ ಕ್ರಾನಿಕಲ್’ ಪತ್ರಿಕೆಯು 27ನೇ ಆಗಸ್ಟ್ 1940ರ ಸಂಚಿಕೆಯಲ್ಲಿ ಪ್ರಕಟಿಸಿದಂತೆ, ‘ಗೊಧವಿಯೆಂಬ ಅಹಮದಾಬಾದ್ನಲ್ಲಿನ ಸ್ಥಳದ ಹರಿಜನರು ತಮ್ಮ ಮಕ್ಕಳನ್ನು ಲೋಕಲ್ ಬೋರ್ಡ್ ಶಾಲೆಗೆ ಕಳುಹಿಸಿದ್ದಕ್ಕಾಗಿ ಸವರ್ಣೀಯರಿಂದ ಶಿಕ್ಷೆಯನ್ನು ಅನುಭವಿಸಬೇಕಾಯಿತು. ಸುಮಾರು 42 ಹರಿಜನ ಕುಟುಂಬಗಳು ಊರನ್ನು ಬಿಟ್ಟು ತಾಲ್ಲೂಕು ಕೇಂದ್ರವಾದ ಸಾನಂದ ಪಟ್ಟಣಕ್ಕೆ ಗುಳೆ ಹೋದರು’. ‘ಮುಂಬೈ ಪ್ರಾಂತದ ಥಾನೆಯ ಅಸ್ಪೃಶ್ಯರ ನಾಯಕ, ಮುನ್ಸಿಪಾಲಿಟಿಯ ಮಾಜಿ ಉಪಾಧ್ಯಕ್ಷ ಎಂ. ಎಂ. ನಂದಗಾಂವಕರ್ ಅವರಿಗೆ 27ನೇ ಆಗಸ್ಟ್ 1943ರಲ್ಲಿ ಹಿಂದೂಗಳ ಫಲಾಹಾರಮಂದಿರದಲ್ಲಿ ಚಹಾ ನೀಡಲು ನಿರಾಕರಿಸಲಾಯಿತು’. ‘1935ರಲ್ಲಿ ಗುಜರಾತಿನ ಅಹಮದಾಬಾದ್ ಜಿಲ್ಲೆಯ ಕವಿತಾ ಗ್ರಾಮದ ಅಸ್ಪೃಶ್ಯರು ತಮ್ಮ ಮಕ್ಕಳನ್ನು ಆ ಗ್ರಾಮದ ಸಾರ್ವಜನಿಕ ಶಾಲೆಗೆ ಸೇರಿಸಲು ಸವರ್ಣೀಯರನ್ನು ಅನುಮತಿ ಕೇಳುತ್ತಾರೆ. ಇದರಿಂದ ಕೆರಳಿದ ಸವರ್ಣೀಯರು ಅಸ್ಪೃಶ್ಯರಿಗೆ ಸಾಮಾಜಿಕ ಬಹಿಷ್ಕಾರ ಹಾಕುತ್ತಾರೆ. ಇದಲ್ಲದೆ, ಅಸ್ಪೃಶ್ಯರು ಕುಡಿಯುವ ಬಾವಿಯ ನೀರಿಗೆ ಸೀಮೆ ಎಣ್ಣೆ ಬೆರೆಸಿ ಅವರಿಗೆ ಕುಡಿಯಲು ನೀರಿಲ್ಲದೆ ಸಂಕಟಪಡುವಂತೆ ಮಾಡುತ್ತಾರೆ. ಈ ಘಟನೆಗಳನ್ನು ಪ್ರಶ್ನಿಸದ ಗಾಂಧೀಜಿ, ಅಸ್ಪೃಶ್ಯರು ಕವಿತಾ ಗ್ರಾಮ ತೊರೆದು ಗುಳೆ ಹೊರಡುವುದು ಸೂಕ್ತವೆಂಬ ಉಚಿತ ಸಲಹೆ ನೀಡುತ್ತಾರೆ. ತಿರುವಾಂಕೂರಿನ ಸಾರ್ವಜನಿಕ ರಸ್ತೆಯನ್ನು ಉಪಯೋಗಿಸಲು ಅಸ್ಪೃಶ್ಯರಿಗೂ ಅವಕಾಶ ನೀಡಬೇಕೆಂದು 1924ರಲ್ಲಿ ವೈಕೊಮ್ ಚಳವಳಿ ನಡೆಯುತ್ತದೆ. ಈ ಚಳವಳಿಯಲ್ಲಿ ಭಾಗವಹಿಸಿದವರಿಗೆ ಸಿಖ್ಖರು ಊಟದ ವ್ಯವಸ್ಥೆ ಮಾಡಿದ ವಿಚಾರ ತಿಳಿದ ಗಾಂಧೀಜಿಯವರು ವಿನಾಕಾರಣ ವಿರೋಧಿಸುತ್ತಾರೆ. ದಲಿತ ವಿರೋಧಿಯಾದ ಗಾಂಧೀಜಿಯವರ ಈ ಬಗೆಯ ನಿಲುವನ್ನು ಮಹಾಭಾರತದಲ್ಲಿ ಬರುವ ‘ರಾಕ್ಷಸಿ ಪೂತನಿ’ ಹಾಗೂ ‘ಭೀಷ್ಮ, ಕಚ’ರು ನೈತಿಕ ಅಧಃಪತನದಿಂದ ಎಸಗಿದ ವಂಚನೆಗೆ ಹೋಲಿಸುತ್ತ, ಆಮೂಲಕ ಗಾಂಧೀಜಿ ದಲಿತರಿಗೆ ಎಸಗಿದ ವಿಶ್ವಾಸ ದ್ರೋಹ ಎಂತಹದ್ದು ಎಂಬುದನ್ನು ವಿಶ್ಲೇಷಿಸಿದ್ದಾರೆ. ‘ಸ್ವರಾಜ್ಯ ಸಿಗದೇ ಹೋದರೂ ಹೋಗಲಿ, ಆದರೆ ಅಸ್ಪೃಶ್ಯರಿಗೆ ಮಾತ್ರ ರಾಜಕೀಯ ಸ್ವಾತಂತ್ರ‍್ಯವನ್ನು ನೀಡಬಾರದೆಂಬ ಅಭಿಪ್ರಾಯ ಗಾಂಧಿಯವರಿಗಿತ್ತು’ ಎಂಬುದನ್ನು ಡಾ.ಅಂಬೇಡ್ಕರ್ ಹಲವು ಸಂದರ್ಭಗಳನ್ನು ಉಲ್ಲೇಖಿಸುವ ಮೂಲಕ ಸಾಬೀತುಪಡಿಸಿದ್ದಾರೆ. ‘ಶ್ರೀಮಾನ್ ಗಾಂಧಿಯವರು ಇಂದಿಗೂ ಅಸ್ಪೃಶ್ಯರ ವಿರುದ್ಧ ಯುದ್ಧದಲ್ಲಿ ತೊಡಗಿದ್ದಾರೆ. ಅವರು ಯಾವುದೇ ಗಳಿಗೆಯಲ್ಲಿ ಅಶ್ಯರನ್ನು ಪೇಚಿಗೆ ಸಿಲುಕಿಸಬಹುದು. ಗಾಂಧಿಯವರನ್ನು ನಂಬಲು ಇನ್ನೂ ಸಮಯ ಬಂದಿಲ್ಲ. ಅಸ್ಪೃಶ್ಯರು ತಮ್ಮನ್ನು ತಾವೇ ಕಾಪಾಡಿಕೊಳ್ಳುವುದು ಉತ್ತಮ. ಅದಕ್ಕಾಗಿ ಶ್ರೀಮಾನ್ ಗಾಂಧಿಯವರ ಬಗ್ಗೆ ಎಚ್ಚರದಿಂದಿರಿ’ ಎಂದು ಡಾ. ಅಂಬೇಡ್ಕರ್ ಅಸ್ಪೃಶ್ಯರನ್ನು ಎಚ್ಚರಿಸಿದ್ದಾರೆ.

‘ಗಾಂಧೀವಾದ ಎಂದರೇನು? ಅದರ ಉದ್ದೇಶವೇನು? ಆರ್ಥಿಕ, ಸಾಮಾಜಿಕ ಸಮಸ್ಯೆಗಳ ಬಗೆಗಿನ ಅದರ ನಿಲುವೇನು? ಎಂಬ ಪ್ರಶ್ನೆಗಳ ಮೂಲಕ, ಗಾಂಧಿವಾದದ ಮಿತಿ, ದೌರ್ಬಲ್ಯವನ್ನು ವಿವೇಚನೆಗೆ ಒಳಪಡಿಸಲಾಗಿದೆ. ಸಾಮಾಜಿಕ ಸಮಸ್ಯೆಯಾದ ಜಾತಿ ವ್ಯವಸ್ಥೆಯನ್ನು ಕುರಿತು ಗಾಂಧೀಜಿಯವರು 1921-22ರಲ್ಲಿ ‘ನವಜೀವನ’ ಎಂಬ ಗುಜರಾತಿ ಪತ್ರಿಕೆಯಲ್ಲಿ ಹೀಗೆ ಬರೆಯುತ್ತಾರೆ:

“ಹಿಂದೂ ಸಮಾಜವು ಇಂದಿನವರೆಗೂ ಗಟ್ಟಿಯಾಗಿ ನಿಲ್ಲಲು ಕಾರಣ ಅದು ಜಾತಿ ವ್ಯವಸ್ಥೆಯ ಮೇಲೆ ಸ್ಥಾಪಿತವಾಗಿರುವುದರಿಂದ. ಸ್ವರಾಜ್ಯದ ಬೀಜಗಳನ್ನು ಜಾತಿ ವ್ಯವಸ್ಥೆಯಲ್ಲಿಯೇ ಕಾಣಬಹುದು. ಜಾತಿ ವ್ಯವಸ್ಥೆಯನ್ನು ಸೃಷ್ಟಿಸುವ ಸಮುದಾಯವು ಅನನ್ಯ ಸಂಘಟನಾ ಚಾತುರ್ಯವನ್ನು ಪಡೆದಿರುತ್ತದೆ. ಪ್ರಾಥಮಿಕ ಶಿಕ್ಷಣದ ಪ್ರಸಾರಕ್ಕೆ ಜಾತಿ ವ್ಯವಸ್ಥೆ ಸಿದ್ಧ ಸಾಧನವನ್ನು ಹೊಂದಿದೆ. ಜಾತಿಗೆ ರಾಜಕೀಯ ಆಧಾರವಿದೆ. ಅದು ನ್ಯಾಯಾಂಗದ ಕೆಲಸವನ್ನು ಮಾಡಬಲ್ಲದು. ರಾಷ್ಟ್ರೀಯ ಐಕ್ಯತೆಯನ್ನು ಸ್ಥಾಪಿಸಲು ಸಹಭೋಜನ ಮತ್ತು ಅಂತರ್ಜಾತಿ ವಿವಾಹಗಳು ಅವಶ್ಯಕವಲ್ಲ. ಸಹಭೋಜನ ಮತ್ತು ಅಂತರ್ಜಾತಿ ವಿವಾಹಕ್ಕೆ ಅವಕಾಶವಿಲ್ಲದ ಮಾತ್ರಕ್ಕೆ ಜಾತಿವ್ಯವಸ್ಥೆ ಕೆಟ್ಟದ್ದೆಂದು ಹೇಳಬಾರದು. ನಿಯಂತ್ರಣಕ್ಕೆ ಜಾತಿ ಇನ್ನೊಂದು ಹೆಸರು. ವಂಶಪರಂಪರೆಯಾಗಿ ಒಂದೇ ಉದ್ಯೋಗಕ್ಕೆ ಜೋತು ಬೀಳುವುದು ಜಾತಿವ್ಯವಸ್ಥೆಯ ಅತಿ ಮುಖ್ಯ ಲಕ್ಷಣ. ಪ್ರತಿದಿವಸ ಒಬ್ಬ ಬ್ರಾಹ್ಮಣ ಶೂದ್ರನಾಗಿಯೂ, ಶೂದ್ರರು ಬ್ರಾಹ್ಮಣನಾಗಿಯೂ ಪರಿವರ್ತನೆಯಾಗತೊಡಗಿದರೆ ಎಲ್ಲೆಲ್ಲೂ ಅರಾಜಕತೆಯುಂಟಾಗುತ್ತದೆ. ಜಾತಿ ವ್ಯವಸ್ಥೆಯು ಸಮಾಜದ ಒಂದು ನೈಸರ್ಗಿಕ ವ್ಯವಸ್ಥೆ. ಇಂಡಿಯಾದಲ್ಲಿ ಅದಕ್ಕೆ ಧರ್ಮದ ಕವಚ ನೀಡಲಾಗಿದೆ. ಈ ಮೇಲಿನವು ನನ್ನ ಅಭಿಪ್ರಾಯಗಳಾಗಿದ್ದು, ಜಾತಿ ವ್ಯವಸ್ಥೆಯನ್ನು ನಾಶಮಾಡಬೇಕೆನ್ನುವವರನ್ನು ನಾನು ವಿರೋಧಿಸುತ್ತೇನೆ”.

-ಎಂದು ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ಪ್ರತಿಪಾದಿಸುವ ಗಾಂಧೀಜಿ, 1925ರ ಫೆಬ್ರವರಿ 3ರಂದು ‘ಅಂತರ್ಜಾತಿ ವಿವಾಹಗಳನ್ನು ನಿರ್ಬಂಧಿಸಲಾಗಿದೆ. ಇದು ಏಳ್ಗೆಯನ್ನು ಉತ್ತೇಜಿಸುವ ಅಂಶವಲ್ಲ. ಅದು ಅವನತಿಯ ಮುನ್ಸೂಚಿ’ ಎಂದು ಜಾತಿ ವ್ಯವಸ್ಥೆಯನ್ನು ಟೀಕಿಸುತ್ತಾರೆ. ಆದರೆ ಇದೇ ಗಾಂಧೀಜಿಯವರು, ‘ಚಿಕ್ಕ-ಪುಟ್ಟ ಜಾತಿಗಳೂ ಒಂದು ದೊಡ್ಡ ಜಾತಿಯಲ್ಲಿ ಸಂಯೋಜನೆ ಹೊಂದಬೇಕು. ಒಟ್ಟಾರೆಯಾಗಿ ನಾಲ್ಕು ವಿಶಾಲ ಜಾತಿಗಳಷ್ಟೆ ಇರಬೇಕು. ಇದರಿಂದ ನಾವು ಸನಾತನ ವರ್ಣವ್ಯವಸ್ಥೆಯನ್ನು ಪುನರ್ ಸ್ಥಾಪನೆ ಮಾಡಬಹುದು’ ಎಂದು ಹೇಳುತ್ತಾರೆ. ಇಂತಹ ವೈರುಧ್ಯದ ವ್ಯಕ್ತಿತ್ವದವರಾದ ಗಾಂಧೀಜಿಯವರನ್ನು ಡಾ. ಅಂಬೇಡ್ಕರ್, “‘ಹಿಂದ್ ಸ್ವರಾಜ್’ ಕೃತಿ ಬರೆದ ಗಾಂಧಿ ಆಧುನಿಕ ನಾಗರಿಕತೆಯ ವಿರೋಧಿ ಹಾಗೂ ವರ್ಣವ್ಯವಸ್ಥೆಯ ಪ್ರತಿಪಾದಕರು” ಎಂಬುದನ್ನು ಉದಾಹರಣೆ ಸಹಿತ ಸ್ಪಷ್ಟಪಡಿಸಿದ್ದಾರೆ. ಗಾಂಧಿವಾದ ಪ್ರತಿಪಾದಿಸುವ ಸರಳತೆಯನ್ನು ಒಳಿತೆಂದು ಒಪ್ಪಿಕೊಳ್ಳುವ ಡಾ. ಅಂಬೇಡ್ಕರ್, “ಸನಾತನ ಮಾರ್ಗವನ್ನು ಪ್ರತಿಪಾದಿಸುವ ‘ಗಾಂಧಿವಾದದ ತಿರುಳು ಪ್ರಾಣಿಸಮಾನ ಜೀವನ ವಿಧಾನಕ್ಕೆ ಹಿಂತಿರುಗುವುದಾಗಿದೆ. ಇದರ ಅರ್ಥಶಾಸ್ತ್ರವು ಅನೇಕ ನ್ಯೂನತೆಗಳನ್ನು ಹೊಂದಿದೆ. ಇದರಲ್ಲಿ ಜನಸಾಮಾನ್ಯರಿಗೆ ಯಾವ ಭರವಸೆಯೂ ಸಿಗದು. ಇದು ಬಡವ-ಶ್ರೀಮಂತ, ಮೇಲು-ಕೀಳು, ಮಾಲೀಕ-ಸೇವಕ ಎಂಬ ತಾರತಮ್ಯದ ವರ್ಗವ್ಯವಸ್ಥೆಯು ಸಹಜ ಎಂಬುದನ್ನು ಪ್ರತಿಪಾದಿಸುತ್ತದೆ. ಪ್ರಜಾಪ್ರಭುತ್ವವನ್ನು ವಿರೋಧಿಸುವ ಸಮಾಜ ಮಾತ್ರ ಗಾಂಧಿವಾದವನ್ನು ಸ್ವೀಕರಿಸಬಲ್ಲದು” ಎಂಬುದಾಗಿ ಕಟುವಾಗಿ ಟೀಕಿಸಿದ್ದಾರೆ.

Hindu swaraj

ಆಳುವ ವರ್ಗವು ಒತ್ತಾಯಪೂರ್ವಕವಾಗಿ ಶ್ರಮಿಕವರ್ಗದ ಮೇಲೆ ಹೇರಿದ ಜಾತಿವ್ಯವಸ್ಥೆಯು ಇಲ್ಲಿಯವರೆಗೂ ಉಳಿದುಕೊಂಡು ಬಂದಿರುವುದಕ್ಕೆ- ‘1. ಜನಸಮುದಾಯವು ಆಯುಧ ಹೊಂದುವುದನ್ನು ನಿಷೇಧಿಸಿದ್ದು. 2. ಶಿಕ್ಷಣ ಪಡೆಯುವ ಅಧಿಕಾರದಿಂದ ಸಮುದಾಯವನ್ನು ಹೊರಗಿಟ್ಟಿದ್ದು. 3. ಜನಸಮುದಾಯವು ಸಂಪತ್ತು-ಆಸ್ತಿ ಹೊಂದುವುದನ್ನು ನಿಷೇಧಿಸಿದ್ದು’ ಕಾರಣ ಎಂಬುದನ್ನು ಹಾಗೂ ಬೌದ್ಧರು ವಿರೋಧಿಸಿದ ವರ್ಣವ್ಯವಸ್ಥೆಯು ಉಳಿದುಕೊಂಡು ಬರಲು ಭಗವದ್ಗೀತೆ ಕಾರಣವಾಗಿದ್ದನ್ನು ಡಾ. ಅಂಬೇಡ್ಕರ್ ಗುರುತಿಸಿದ್ದಾರೆ. ಗಾಂಧಿವಾದವು ಹಲವು ವಿರೋಧಾಭಾಸಗಳಿಂದ ತುಂಬಿಹೋಗಿದೆ ಎಂದು ಹೇಳುವ ಡಾ. ಅಂಬೇಡ್ಕರ್, ‘ಗಾಂಧಿವಾದವು ಈಗಾಗಲೇ ಅಧಿಕಾರ ಪಡೆದಿರುವ ವ್ಯಕ್ತಿಗಳಿಗೆ ತಾವು ಪಡೆದಿರುವುದನ್ನು ಉಳಿಸಿಕೊಳ್ಳುವ ಸಿದ್ಧಾಂತ ಬೋಧಿಸುತ್ತ, ನಿರ್ಲಕ್ಷಿಸಲ್ಪಟ್ಟ ಉಪೇಕ್ಷಿತರು ತಮಗೆ ನ್ಯಾಯಬದ್ಧವಾಗಿ ಸಿಗಬೇಕಾದದ್ದನ್ನು ಪಡೆಯದ ಹಾಗೆ ತಡೆಯುವುದನ್ನು ಎತ್ತಿಹಿಡಿಯುತ್ತದೆ. ಇದು ಶ್ರೀಮಂತರ, ಬಿಡುವು ಹೊಂದಿದ ವರ್ಗದ ಜನರ ಸಿದ್ಧಾಂತವಾಗಿದೆ. ಇದು ಸನಾತನವಾದವಾಗಿದ್ದು, ಕರ್ಮಸಿದ್ಧಾಂತವನ್ನು ನಂಬುತ್ತದೆ’ ಎನ್ನುತ್ತಾರೆ. ‘ಯಾವುದೇ ಆಸ್ತಿಪಾಸ್ತಿಯ ಪ್ರತಿಫಲವನ್ನು ಅಪೇಕ್ಷಿಸದೆ ಉಚ್ಚಜಾತಿಯ ಸೇವೆಯನ್ನು ಒಂದು ಧಾರ್ಮಿಕ ಆಚರಣೆಯ ಪರಿಯಲ್ಲಿ ಭಕ್ತಿಯಿಂದ ಮಾಡುತ್ತಿರುವ ಶೂದ್ರನಿಗೆ ಸಹಸ್ರ ಪ್ರಣಾಮಗಳು… ದೇವದೇವತೆಗಳು ಆತನ ಮೇಲೆ ಪುಷ್ಪವೃಷ್ಟಿಗರೆಯುವರು. ನನಗೆ ಮೋಕ್ಷ ಬೇಡ, ಪುನರ್ಜನ್ಮವೂ ಬೇಡ. ಪುನರ್ಜನ್ಮವೇ ಇದ್ದರೆ ನಾನೊಬ್ಬ ಅಸ್ಪೃಶ್ಯನಾಗಿ ಹುಟ್ಟಿ ಅವರ ದುಃಖ, ಕಷ್ಟ-ಕೋಟಲೆಗಳನ್ನು ಅನುಭವಿಸಿ ಅಂತಹ ಪರಿಸ್ಥಿತಿಯಿಂದ ಅವರನ್ನು ಮತ್ತು ನನ್ನನ್ನು ಮುಕ್ತಗೊಳಿಸಬಯಸುತ್ತೇನೆ. ಆದುದರಿಂದ ನನ್ನ ಪ್ರಾರ್ಥನೆಯಿಷ್ಟೆ; ನಾನು ಮತ್ತೆ ಜನ್ಮ ಪಡೆಯುವುದೇ ಇದ್ದರೆ ನಾನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರನ ಜನ್ಮ ಪಡೆಯದೆ ಅತಿಶೂದ್ರನಾಗಿ ಹುಟ್ಟಬಯಸುತ್ತೇನೆ’ ಎಂದು ಹೇಳುವ ಗಾಂಧಿಯವರದು ಯಥಾಸ್ಥಿತಿವಾದದ ನಿಲುವಾಗಿದೆ ಎಂಬುದನ್ನು ಡಾ. ಅಂಬೇಡ್ಕರ್ ಖಚಿತವಾಗಿ ವಿಶ್ಲೇಷಿಸಿದ್ದಾರೆ.

ಒಟ್ಟಾರೆ, ಸ್ವಾತಂತ್ರ‍್ಯ ಪೂರ್ವ ಭಾರತದ ಸಾಮಾಜಿಕ, ರಾಜಕೀಯ ಸ್ವರೂಪವನ್ನು ಹಾಗೂ ಗಾಂಧೀಜಿ, ಕಾಂಗ್ರೆಸ್ ಪಕ್ಷದ ನಿಮ್ನವರ್ಗ ವಿರೋಧಿ ಧೋರಣೆಯನ್ನು ದಲಿತತ್ವದ ನೆಲೆಯಲ್ಲಿ ವಿವೇಚನೆಗೆ ಒಳಪಡಿಸುವ ಡಾ. ಅಂಬೇಡ್ಕರ್ ಅವರ ಈ ಕೃತಿಯು; ಪ್ರಸ್ತುತ ಭಾರತೀಯ ರಾಜಕಾರಣದ ಸಂದರ್ಭದಲ್ಲಿ ದಲಿತರು, ಮನುವಾದಿಗಳ ಒಡೆದು-ಆಳುವ ಜಾತಿವಾದಿ ಕುತಂತ್ರದ ಹುನ್ನಾರಕ್ಕೆ ಬಲಿಯಾಗಿ ಛಿದ್ರವಾಗದೆ, ಪ್ರಬಲ ಸಂಘಟನಾತ್ಮಕ ಸಮುದಾಯವಾಗಿ ತಮ್ಮ ಪ್ರಾತಿನಿಧ್ಯದ ಹಕ್ಕೊತ್ತಾಯವನ್ನು ಹೇಗೆ ಮಂಡಿಸಬೇಕು? ದಲಿತ ಸಮುದಾಯಕ್ಕೆ ‘ರಾಜಕೀಯ ಪ್ರಜ್ಞೆ-ಅರಿವು-ಎಚ್ಚರ’ (Political Consciousness-Awareness-Alertness) ಎಷ್ಟು ಮುಖ್ಯ? ಜಾತಿ ಪ್ರಣೀತ ಹಿಂದುತ್ವವಾದಿ ಸಾಮಾಜಿಕ ಹಾಗೂ ಮಾನಸಿಕ ಗುಲಾಮಗಿರಿಯಿಂದ ದಲಿತರು ಯಾಕಾಗಿ ಬಿಡುಗಡೆಗೊಳ್ಳಬೇಕು? ಭಾರತದ ಜಾತಿನಿಷ್ಠ ರಾಜಕೀಯ, ಸಾಮಾಜಿಕ ಧಾರ್ಮಿಕ ಪರಂಪರೆಯಿಂದ ದಲಿತರು ಕಲಿಯಬೇಕಾಗಿರುವ ಪಾಠವೇನು? ಎಂಬುದನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ.

WhatsApp Image 2025 07 26 at 17.59.44
ಡಾ. ಅಪ್ಪಗೆರೆ ಸೋಮಶೇಖರ್
+ posts

ಡಾ.ಅಪ್ಪಗೆರೆ ಸೋಮಶೇಖರ್ ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಸೋಮಶೇಖರ್ ಅವರು ಮೈಸೂರು ವಿವಿಯಿಂದ ಕನ್ನಡ ಎಂ.ಎ. ಪದವಿ, 'ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ: ಒಂದು ಅಧ್ಯಯನ' ವಿಷಯದ ಸಂಶೋಧನೆಗೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ, ಮೌನ ಮಾತು ಪ್ರತಿಭಟನೆ, ಸುಟ್ಟಾವು ಬೆಳ್ಳಿ ಕಿರಣ, ಸಂಬಂಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ- ಡಾ.ಸಿದ್ದಲಿಂಗಯ್ಯ, ಡಾ.ರಾಜ್‌ಕುಮಾರ್, ಅಂತಃಕರಣ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಅಪ್ಪಗೆರೆ ಸೋಮಶೇಖರ್
ಡಾ. ಅಪ್ಪಗೆರೆ ಸೋಮಶೇಖರ್
ಡಾ.ಅಪ್ಪಗೆರೆ ಸೋಮಶೇಖರ್ ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಸೋಮಶೇಖರ್ ಅವರು ಮೈಸೂರು ವಿವಿಯಿಂದ ಕನ್ನಡ ಎಂ.ಎ. ಪದವಿ, 'ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ: ಒಂದು ಅಧ್ಯಯನ' ವಿಷಯದ ಸಂಶೋಧನೆಗೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ, ಮೌನ ಮಾತು ಪ್ರತಿಭಟನೆ, ಸುಟ್ಟಾವು ಬೆಳ್ಳಿ ಕಿರಣ, ಸಂಬಂಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ- ಡಾ.ಸಿದ್ದಲಿಂಗಯ್ಯ, ಡಾ.ರಾಜ್‌ಕುಮಾರ್, ಅಂತಃಕರಣ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’

ಕೃತಿ: ANNIHILATION OF CASTE (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...

‘ಅನಾಇಲೇಷನ್ ಆಫ್ ಕ್ಯಾಸ್ಟ್’- ಜಾತಿ ಮೂಲಗಳ ಶೋಧಿಸುತ್ತಾ…

ಕೃತಿ: Annihilation of Caste (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...