ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾಚಾರ-ಕೊಲೆ ಪ್ರಕರಣವನ್ನು ಸದ್ದಿಲ್ಲದೆ ಮುಚ್ಚಿಹಾಕಲು ಯತ್ನಿಸಲಾಗಿದೆ, ದೊಡ್ಡ ಪಿತೂರಿಯನ್ನು ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಕೋಲ್ಕತ್ತಾ ಹೈಕೋರ್ಟ್ ಗುರುವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಕೇಂದ್ರ ತನಿಖಾ ದಳದ (ಸಿಬಿಐ) ಪೂರ್ವ ವಲಯದ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಮೂವರು ಸದಸ್ಯರ ತಂಡವನ್ನು ರಚಿಸಿದೆ.
ನ್ಯಾಯಮೂರ್ತಿಗಳಾದ ಶಂಪಾ ಸರ್ಕಾರ್ ಮತ್ತು ತೀರ್ಥಂಕರ ಘೋಷ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜೂನ್ 25ರಂದು ನ್ಯಾಯಾಲಯದ ಮುಂದೆ ವರದಿಯನ್ನು ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಿದೆ. 2024ರ ಆಗಸ್ಟ್ 9ರ ರಾತ್ರಿ ಅತ್ಯಾಚಾರ ನಡೆದಾಗಿನಿಂದ ಅಂತ್ಯಕ್ರಿಯೆಯವರೆಗೆ ಏನೆಲ್ಲ ನಡದಿದೆ ಎಂಬ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸುವಂತೆ ಸಿಬಿಐಗೆ ನ್ಯಾಯಾಲಯವು ನಿರ್ದೇಶಿಸಿದೆ.
ಇದನ್ನು ಓದಿದ್ದೀರಾ? ಕೋಲ್ಕತ್ತಾ ಆರ್‌ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲರ ಮನೆ ಮೇಲೆ ಇಡಿ ದಾಳಿ
ಇನ್ನು 2024ರ ಅಕ್ಟೋಬರ್ 7ರಂದು ಆರೋಪಪಟ್ಟಿ ಸಲ್ಲಿಸಿದ ನಂತರದ ಒಂದು ವರ್ಷ ಮತ್ತು ಏಳು ತಿಂಗಳಲ್ಲಿ ಸಿಬಿಐ ಯಾವ ತನಿಖೆ ನಡೆಸಿದೆ? ಈಗ ತನಿಖೆ ಎಲ್ಲಿಗೆ ತಲುಪಿದೆ ಎಂದೂ ಪೀಠ ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ತನಿಖೆಯ ಸಂದರ್ಭದಲ್ಲಿ ಸುಮಾರು 70 ರಿಂದ 80 ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.
2024ರ ಆಗಸ್ಟ್ 9ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ಈ ಹಿಂದೆ ಹೈಕೋರ್ಟ್ ಈ ಪ್ರಕರಣವನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿತ್ತು. ಅದಾದ ಬಳಿಕ ಪ್ರಮುಖ ಆರೋಪಿ ಸಂಜಯ್ ರಾಯ್ ಅನ್ನು ಕೋರ್ಟ್ ದೋಷಿ ಎಂದು ಘೋಷಿಸಿದೆ. ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೆ ಸಾಕ್ಷ್ಯಗಳ ನಾಶ ಮತ್ತು ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದೆ. ಈ ಹಿನ್ನಲೆ ಆರ್‌ಜಿ ಕರ್‌ನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಕೆಲವು ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.




