ಸಮೀಪದ ವೆಂಗಸಂದ್ರ ಕ್ರಾಸ್‌ನಿಂದ ಕೋಡಿಗೇನಹಳ್ಳಿ ಗ್ರಾಮದ ಮೂಲಕ ಮುಳಬಾಗಿಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
13.75, ಕೋಟಿ ವೆಚ್ಚದ ಯೋಜನೆ
ಪ್ರತಿಷ್ಠಿತ ಚೆನ್ನೈ ಎಕ್ಸ್‌ಪ್ರೆಸ್ ಹೈವೇಗೆ (ರಾಷ್ಟ್ರೀಯ ಹೆದ್ದಾರಿ) ಸಂಪರ್ಕ ಕಲ್ಪಿಸುವ ಪ್ರಮುಖ ಉದ್ದೇಶದಿಂದ ಮುಳಬಾಗಿಲಿನಿಂದ ಈ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ಒಟ್ಟು 13.75, ಕೋಟಿ ರೂಪಾಯಿಗಳ ಭಾರಿ ಅನುದಾನದಲ್ಲಿ ಈ ರಸ್ತೆಯ ನವೀಕರಣ ಕಾರ್ಯ ನಡೆಯುತ್ತಿದೆ.
ಶೇ. 80ರಷ್ಟು ಕಾಮಗಾರಿ ಮುಕ್ತಾಯ:
ಪ್ರಸ್ತುತ ರಸ್ತೆಯ ಶೇ. 80ರಷ್ಟು ಭಾಗದ ಕೆಲಸಗಳು ಯಶಸ್ವಿಯಾಗಿ ಮುಗಿದಿದ್ದು, ಈಗಾಗಲೇ ಸಂಪೂರ್ಣ ಡಾಂಬರೀಕರಣ ಮಾಡಲಾಗಿದೆ. ಇನ್ನುಳಿದ ಶೇ. 20ರಷ್ಟು ಭಾಗದ ಕಾಮಗಾರಿಗಳಾದ ರಸ್ತೆಯ ಅಕ್ಕಪಕ್ಕದಲ್ಲಿ ಮಣ್ಣು ಹಾಕುವುದು ಹಾಗೂ ಇತರೆ ಸಣ್ಣಪುಟ್ಟ ಪೂರಕ ಕೆಲಸಗಳು ಮಾತ್ರ ಬಾಕಿ ಉಳಿದಿವೆ ಎಂದು ಇಲಾಖೆಯ ಮೂಲಗಳು ತಿಳಿಸಿದರು.
ಸ್ಥಳೀಯರ ಒತ್ತಾಯದ ಹಿನ್ನೆಲೆಯಲ್ಲಿ ಮುಳಬಾಗಿಲು ತಾಲೂಕಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಯಾದ ಮೂಡಲಗಿರಿ ಅವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಬಾಕಿ ಇರುವ ರಸ್ತೆ ಅಕ್ಕಪಕ್ಕದ ಮಣ್ಣು ಹಾಕುವ ಕೆಲಸ ಸೇರಿದಂತೆ ಉಳಿದ ಎಲ್ಲಾ ಕಾಮಗಾರಿಗಳನ್ನು ಅತ್ಯಂತ ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸ್ಥಳೀಯ ಗ್ರಾಮಸ್ಥರಿಗೆ ಹಾಗೂ ಮುಖಂಡರಿಗೆ ಭರವಸೆ ನೀಡಿದರು.
ರಸ್ತೆ ಕಾಮಗಾರಿ ಶೀಘ್ರ ಮುಗಿದರೆ ಚೆನ್ನೈ ಹೆದ್ದಾರಿ ಹಾಗೂ ಮುಳಬಾಗಿಲಿಗೆ ಸಂಪರ್ಕಿಸುವ ವಾಹನ ಸವಾರರಿಗೆ ಭಾರಿ ಅನುಕೂಲವಾಗಲಿದ್ದು, ಅಧಿಕಾರಿಗಳು ನೀಡಿದ ಭರವಸೆಯಂತೆ ಕೆಲಸ ಬೇಗ ಮುಗಿಯಲಿ ಎಂದು ಗ್ರಾಪಂ ಮಾಜಿ ಸದಸ್ಯರಾದ ನಾಗೇಂದ್ರ ಬುಜ್ಜಿ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ..? ಚಿಂತಾಮಣಿ | 10 ವರ್ಷ ಅಭಿವೃದ್ಧಿ ಮಾಡಲಿಲ್ಲ,ಮಾಡಿದ್ದು ಕುಚೇಷ್ಟೆ ಕುತಂತ್ರ
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ವರುಣ್, ಗ್ರಾಪಂ ಮಾಜಿ ಸದಸ್ಯರಾದ ನಾಗೇಂದ್ರ ಬುಜ್ಜಿ, ಕೃಷ್ಣೇಗೌಡ ಹಾಗೂ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.




