ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿರುವ ಆರೋಪ ಕೇಳಿ ಬಂದಿದೆ. ಪೊಲೀಸ್ ವಶದಲ್ಲಿದ್ದ ವ್ಯಕ್ತಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದು, ಮೃತ ಖಲೀಲ್ ಬೆನ್ನು ಹಾಗೂ ತಲೆಗೆ ಬಲವಾದ ಏಟು ಬಿದ್ದು ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಮೃತ ಖಲೀಲ್ ಪತ್ನಿ ಶೈನಾಜ್ ದೂರಿನ ಅನ್ವಯ ಹೆಡ್ ಕಾನ್‌ಸ್ಟೆಬಲ್ ಸೇರಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಹಗರಿಬೊಮ್ಮನಹಳ್ಳಿ ಠಾಣಾ ಹೆಡ್ ಕಾನ್‌ಸ್ಟೆಬಲ್ ಇಟಗಿ ರಾಘವೇಂದ್ರ ಎಐ ಹಾಗೂ ಕಾನ್‌ಸ್ಟೆಬಲ್ ವೆಂಕಟೇಶ್ ವಿರುದ್ಧ ಎಫ್‌ಐಆರ್ ರೆಜಿಸ್ಟರ್ ಮಾಡಲಾಗಿದೆ.
ಶನಿವಾರ ರಾತ್ರಿ ಮೃತ ಖಲೀಲ್ ಹಾಗೂ ಶೈನಾಜ್ ಮಧ್ಯೆ ಜಗಳ ಆಗಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಖಲೀಲ್‌ನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು. ರಾತ್ರಿ ವೇಳೆ ವಿಚಾರಣೆಗೆಂದು ಕರೆದಾಗ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬಲವಾದ ಏಟು ಬಿದ್ದ ಹಿನ್ನೆಲೆಯಲ್ಲಿ ಖಲೀಲ್ ತಲೆ, ಕಿವಿಯಲ್ಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಪೊಲೀಸರೇ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿ ಪತ್ನಿ ಶೈನಾಜ್ ದೂರು ನೀಡಿದ್ದಾರೆ. ಆದರೆ ಪೊಲೀಸರು, ಖಲೀಲ್ ಪಿಟ್ಸ್ ಬಂದು ಮೃತಪಟ್ಟಿದ್ದಾರೆಂದು ಸಬೂಬು ಹೇಳಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿದ್ದೀರಾ? ತುಮಕೂರು | ಜನ ಚಳುವಳಿಗಳ ಅನ್ನದಾತೆ ಉಮಕ್ಕಾ ನಿಧನ
ಲಾಕಪ್‌ಡೆತ್ ಹಿನ್ನೆಲೆಯಲ್ಲಿ ಎಸ್‌ಪಿ ಜಾಹ್ನವಿ ಅವರು ನಿನ್ನೆ ಇಡೀ ದಿನ ಹಗರಿಬೊಮ್ಮನಹಳ್ಳಿ ಠಾಣೆಯಲ್ಲೇ ಮೊಕ್ಕಾಂ ಹೂಡಿದ್ದರು. ಸ್ಟೇಷನ್ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾವಣೆ ಆಗಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರು.
ಮೃತ ವ್ಯಕ್ತಿ ಪತ್ನಿ ನೀಡಿದ ದೂರಿನ ಮೇರೆಗೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಅಡಿ ಪ್ರಕರಣ ದಾಖಲಾಗಿದೆ. ಲಾಕಪ್ ಡೆತ್ ಹಿನ್ನೆಲೆ ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆ ಮುಂದುವರೆಯಲಿದೆ.




