ಮುಂಬೈನ ಐಐಟಿ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ, ಇನ್ಸ್ಟಿಟ್ಯೂಟ್‌ನ ಪ್ರೊಫೆಸರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ಮತ್ತು ಜಾತಿ ಕಿರುಕುಳ ಆರೋಪದಲ್ಲಿ ಮುಂಬೈನ ಪೋವೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಐಟಿ-ಬಾಂಬೆ ಇತಿಹಾಸದಲ್ಲೇ ಪ್ರೊಫೆಸರ್ ಒಬ್ಬರ ವಿರುದ್ಧ ಇಂತಹ ಗಂಭೀರ ಪ್ರಕರಣ ದಾಖಲಾಗಿರುವುದು ಇದೇ ಮೊದಲು ಎನ್ನಲಾಗಿದೆ.
ಇನ್ಸ್ಟಿಟ್ಯೂನ್‌ನಲ್ಲಿ ಎನರ್ಜಿ ಸೈನ್ಸ್ ವಿಭಾಗದಲ್ಲಿ 2ನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ (20) ಅವರು ಶುಕ್ರವಾರ ರಾತ್ರಿ ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಶುಕ್ರವಾರ ಬೆಳಗ್ಗೆ ನಡೆದ ಪರೀಕ್ಷೆಯ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸಿ, ಎಐ ಪ್ಲಾಟ್‌ಫಾರ್ಮ್ ಮೂಲಕ ಪ್ರಶ್ನೆಗಳಿಗೆ ಉತ್ತರ ಹುಡುಕಲು ಯತ್ನಿಸಿದ್ದರು. ಅದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಣೆಯಲ್ಲಿದ್ದ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರು ಸಾಹಿಲ್‌ಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರೊಫೆಸರ್ ದೂಲ್ಲಾ ಅವರು ಕಳೆದ ಮೂರು ತಿಂಗಳುಗಳಿಂದ ಸಾಹಿಲ್ ಅವರಿಗೆ ಜಾತಿ ಆಧಾರದ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದರು ಮತ್ತು ಪರೀಕ್ಷೆಯ ವೇಳೆ ಅವರನ್ನು ಹೊರಗೆ ಕರೆದೊಯ್ದು ಸಸ್ಪೆಂಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಪ್ರೊಫೆಸರ್ ನೀಡಿದ ಕಿರುಕುಳದಿಂದಲೇ ಸಾಹಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಸಾಹಿಲ್ ಪೋಷಕರು ನೀಡಿದ ದೂರಿನನ್ವಯ, ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ‘ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ’ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಯ ನಂತರ, ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಸಾಹಿಲ್ ಪೋಷಕರು ರಾಜವಾಡಿ ಆಸ್ಪತ್ರೆಯ ಶವಾಗಾರದಿಂದ ಮೃತದೇಹವನ್ನು ಪಡೆಯಲು ನಿರಾಕರಿಸಿ ಹಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. “ಐಐಟಿ ಕ್ಯಾಂಪಸ್‌ನಲ್ಲಿ ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಿದ್ದು, ಈ ವರ್ಷದಲ್ಲೇ ಇದು ಮೂರನೇ ಆತ್ಮಹತ್ಯೆ ಪ್ರಕರಣವಾಗಿದೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳಲೇಬೇಕು” ಎಂದು ಸಾಹಿಲ್ ತಂದೆ ರವೀಂದ್ರ ಆಗ್ರಹಿಸಿದ್ದರು. ಬಳಿಕ, ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸುವುದಾಗಿ ಪೊಲೀಸ್ ಉನ್ನತಾಧಿಕಾರಿಗಳು ಭರವಸೆ ನೀಡಿದ ಬಳಿಕ ಪೋಷಕರು ಮೃತದೇಹವನ್ನು ಪಡೆದುಕೊಂಡರು.
ಮತ್ತೊಂದೆಡೆ, ಕ್ಯಾಂಪಸ್‌ನಲ್ಲಿನ ಸರಣಿ ಆತ್ಮಹತ್ಯೆ ಮತ್ತು ಅದಕ್ಕೆ ಕ್ಯಾಂಪಸ್‌ನಲ್ಲಿನ ಕಿರುಕುಳವೇ ಕಾರಣವೆಂಬ ಗಂಭೀರ ಆರೋಪಗಳನ್ನು ಐಐಟಿ-ಬಾಂಬೆ ಆಡಳಿತ ಮಂಡಳಿ ನಿರಾಕರಿಸಿದೆ.
“ಕ್ಯಾಂಪಸ್‌ನಲ್ಲಿ ಯಾವುದೇ ರೀತಿಯ ಜಾತಿ ಆಧಾರಿತ ತಾರತಮ್ಯವಿಲ್ಲ. ವಿದ್ಯಾರ್ಥಿಗಳ ಜಾತಿಯ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ. ಅಲ್ಲದೆ, ಪರೀಕ್ಷೆಯಲ್ಲಿ ನಿಯಮ ಉಲ್ಲಂಘಿಸಿದರೂ ಸಾಹಿಲ್ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಂಡಿರಲಿಲ್ಲ. ಅವರಿಗೆ ಕೌನ್ಸೆಲಿಂಗ್ ನೀಡಲಾಗಿತ್ತು” ಸಂಸ್ಥೆಯ ಡೈರೆಕ್ಟರ್ ಪ್ರೊ. ಶಿರೀಶ್ ಕೇದಾರೆ ಹೇಳಿದ್ದಾರೆ.



