ರಾಜ್ಯದ ಹೊರಗುತ್ತಿಗೆ, ದಿನಗೂಲಿ ಹಾಗೂ ಗುತ್ತಿಗೆ ನೌಕರರ ಕನಿಷ್ಠ ವೇತನ ಪರಿಷ್ಕರಣೆಯನ್ನು ತಡೆಹಿಡಿದಿದ್ದ ವಿವಿಧ ಇಲಾಖೆಗಳ ಸುತ್ತೋಲೆಗಳಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಕನಿಷ್ಠ ವೇತನ ಪರಿಷ್ಕರಿಸಿ ಸರ್ಕಾರ ಹೊರಡಿಸಿದ್ದ ಆದೇಶದ ಜಾರಿಯನ್ನು ಅಮಾನತುಗೊಳಿಸಿದ್ದ ಆಡಳಿತಾತ್ಮಕ ಸುತ್ತೋಲೆಗಳು ಕಾನೂನುಬಾಹಿರ ಎಂದು ವಾದಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಆ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಪೀಠ ವಿಚಾರಣೆ ನಡೆಸಿದೆ. 2026ರ ಜುಲೈ 29 ಮತ್ತು ಆಗಸ್ಟ್ 10ರಂದು ಹೊರಡಿಸಲಾಗಿದ್ದ ಇಲಾಖಾ ಆಡಳಿತಾತ್ಮಕ ಸುತ್ತೋಲೆಗಳಿಗೆ ತಡೆ ನೀಡಿದೆ. ಜೊತೆಗೆ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕನಿಷ್ಠ ವೇತನ ಕಾಯ್ದೆ-1948ರ ಅಡಿಯಲ್ಲಿ ರಾಜ್ಯ ಸರ್ಕಾರವು 2026ರ ಮೇ 22ರಂದು ಅಧಿಸೂಚನೆ ಹೊರಡಿಸಿ 83 ನಿಗದಿತ ಉದ್ಯೋಗಗಳಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸಿತ್ತು. ಈ ಅಧಿಸೂಚನೆಯಂತೆ ನೌಕರರಿಗೆ ಈಗಾಗಲೇ ಒಂದು ತಿಂಗಳ ಪರಿಷ್ಕೃತ ವೇತನವೂ ಪಾವತಿಯಾಗಿತ್ತು. ಆದರೆ, ಹಣಕಾಸು ಇಲಾಖೆಯ ‘ಮೌಖಿಕ ಸೂಚನೆ’ಯ ನೆಪವೊಡ್ಡಿ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯ ಸೇರಿದಂತೆ ವಿವಿಧ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸಿ ಪರಿಷ್ಕೃತ ವೇತನ ಪಾವತಿಯನ್ನು ತಡೆಹಿಡಿದಿದ್ದವು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, “ಕನಿಷ್ಠ ವೇತನ ಕಾಯ್ದೆಯಡಿ ಹೊರಡಿಸಲಾದ ಅಧಿಸೂಚನೆಯು ಶಾಸನಬದ್ಧ ಬಲ ಹೊಂದಿದ್ದು, ಅದನ್ನು ಸರಳ ಆಡಳಿತಾತ್ಮಕ ಸುತ್ತೋಲೆಗಳ ಮೂಲಕ ಬದಿಗೊತ್ತಲು ಅಥವಾ ಅಮಾನತುಗೊಳಿಸಲು ಅಧಿಕಾರಿಗಳಿಗೆ ಯಾವುದೇ ಅಧಿಕಾರವಿಲ್ಲ” ಎಂದು ಪ್ರತಿಪಾದಿಸಿದರು.
“ಕನಿಷ್ಠ ವೇತನ ಪಡೆಯುವುದು ಕಾರ್ಮಿಕರ ಮೂಲಭೂತ ಹಕ್ಕಾಗಿದ್ದು, ಅದಕ್ಕಿಂತ ಕಡಿಮೆ ವೇತನ ನೀಡುವುದು ಸಂವಿಧಾನದ 23ನೇ ವಿಧಿಯಡಿ ನಿಷೇಧಿಸಲಾಗಿರುವ ‘ಬಲವಂತದ ಕಾರ್ಮಿಕತೆ’ಗೆ ಸಮನಾಗುತ್ತದೆ ಮತ್ತು ಗೌರವಯುತ ಜೀವನ ನಡೆಸುವ ಹಕ್ಕನ್ನು ಪ್ರತಿಪಾದಿಸುವ 21ನೇ ವಿಧಿಯ ಉಲ್ಲಂಘನೆಯಾಗುತ್ತದೆ” ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.
ಈ ಎಲ್ಲ ವಾದಗಳನ್ನು ಪುರಸ್ಕರಿಸಿದ ಹೈಕೋರ್ಟ್, ಸುತ್ತೋಲೆಗಳಿಗೆ ತಡೆ ನೀಡಿದೆ. ಕಾರ್ಮಿಕರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.



