ರೇಖಾರಾಣಿ ಅವರ ಕತೆ | ಪ್ರೀತಿಯಲ್ಲಿ ಕ್ಷಮೆಯಿರಲಿ…

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

”ಶೀಲಾ ಮರಳಿ ಬರುತ್ತಾಳಾ ಚಿನ್ನಾ?”

- Advertisement -

ಮನು ಭೂತಕಾಲದ ಪ್ರೇಯಸಿಯ ಕುರಿತು ವರ್ತಮಾನದ ಪ್ರೇಯಸಿಯನ್ನು ಕೇಳುತಿದ್ದಾನೆ. ಮುಂಜಾನೆಯ ಮಂಜಿನ ನಡುವೆ, ಮರಗಳ ನಡುವೆ, ಹುಲ್ಲಂಚಿನಿಂದ, ಭೂಮಿಯೊಳಗಿಂದ ಬಿರಿದ ಈ ಪ್ರಶ್ನೆ ಪದೇ ಪದೇ ಅವನ ಮುಂದೆ ನಿಲ್ಲುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

“ನಿಮ್ಮಂತಹ ಒಳ್ಳೆಯ ಗಂಡಸನ್ನು ಕಳೆದುಕೊಳ್ಳುವಷ್ಟು ಮೂರ್ಖಳಲ್ಲ. ತನ್ನ ಕಾರ್ಯ ಸಾಧಿಸಿದ ನಂತರ ತಿರುಗಿ ಬಂದೇ ಬರುತ್ತಾಳೆ” ರೇವತಿಯ ಈ ಉತ್ತರದಲ್ಲಿ ನೋವಿತ್ತೋ, ಅಸಹಾಯಕತೆಯಿತ್ತೋ, ಬಾರದಿರಲಿ ಎಂಬ ಆಸೆಯಿತ್ತೋ- ಮನುಗಂತೂ ಹೊಳೆಯಲಿಲ್ಲ.

“ಅಕಸ್ಮಾತ್ ಆಕೆ ಬಂದರೆ ನೀನೇನು ಮಾಡುತ್ತಿ?” ಚೇಷ್ಟೆ ಮಾಡಲೆಂಬಂತೆ ಕೇಳಿದ.

“ಏನ್ಮಾಡೋದು? ಕೆರೆ ಬಾವಿಗಳೆಲ್ಲಾ ಬತ್ತಿಹೋಗಿವೆ. ಬೋರ್‌ವೆಲ್‌ಗಳಲ್ಲಿ ನಾನು ತೂರೋಲ್ಲ, ಲಾರಿ ಬಸ್ಸಿಗೆ ಸಿಕ್ಕಿ ಸಾಯೋಣ ಅಂದ್ರೆ, ಹಾಳಾದ್ದು ಬೆಂಗಳೂರಿನಲ್ಲಿ ಯಾವಾಗ್ಲೂ ಟ್ರಾಫಿಕ್ ಜಾಮ್. 20 ಕಿ.ಮೀ.ಗಿಂತಾ ಸ್ಪೀಡಾಗಿ ಯಾರೂ ವಾಹನ ಓಡಿಸೋಕ್ಕೆ ಆಗೊಲ್ಲ. ನೇಣು ಹಾಕ್ಕೋಳ್ಳೋಣ ಅಂದ್ರೆ ನನ್ನ ಹತ್ತಿರ ಇರುವುದೆಲ್ಲ ಚೂಡೀದಾರ್‌ಗಳು. ಛೆ, ಸತಿ ಸಾಧ್ವಿಮಣಿಯಂತೆ ಸಾಯಲೂ ಸಹಾ ಈ ಕಾಲದಲ್ಲಿ ಕಷ್ಟವಾಗಿಬಿಟ್ಟಿದೆ. ಏನ್ಮಾಡೋದೂ, ಹಾಂ, ಐಡಿಯಾ, ಕಾಡಿನಲ್ಲಿ ಓಡಿ ಹೋಗಿ ತಪ್ಪಿಸಿಕೊಳ್ಳೋದು.”

“ಕಾಡು… ಅದೆಲ್ಲಿದೆ?” ಮನು ಆಶ್ಚರ್ಯದಿಂದ ಕೇಳಿದ.

ಮನುವಿನ ರೋಮ ತುಂಬಿದ ಎದೆಯಲ್ಲಿ ಮುಖ ಹುದುಗಿಸುತ್ತಾ ಹೇಳಿದಳು, ”ಇಲ್ಲಿ, ಈ ನನ್ನ ನಲ್ಲನ ಎದೆಯ ಮೇಲೆ ಪುಟ್ಟ ಚಿಟ್ಟೆಯಾಗಿ ಇಲ್ಲೇ ಹಾರಾಡುತ್ತಾ ನುಗ್ಗಿ ಬೇಕೆಂದೇ ತಪ್ಪಿಸಿಕೊಳ್ಳುತ್ತೇನೆ.”

ಇದನ್ನು ಓದಿದ್ದೀರಾ?: ಜಿ.ಬಿ. ಜೋಶಿ ಅವರ ಕತೆ | ಡೂಗಜ್ಜನ ಬಹಿಷ್ಕಾರ

ಮನು ಅವಳನ್ನು ಹಾಗೇ ಬಲವಾಗಿ ಎದೆಗಪ್ಪಿ ಹೇಳಿದ, ”ರೇವತಿ, ನನ್ನ-ನಿನ್ನನ್ನು ಅಗಲಿಸುವಷ್ಟು ಶಕ್ತಿ ಯಾರಿಗೂ ಇಲ್ಲ. ಯಾವುದಕ್ಕೂ ಇಲ್ಲ. ಏಕೆಂದರೆ ನಾನು ಕುಸಿದು ಪ್ರಪಾತದಲ್ಲಿದ್ದಾಗ ನನ್ನನ್ನು ಮೇಲೆತ್ತಿ ಆತ್ಮವಿಶ್ವಾಸ ತುಂಬಿದವಳು ನೀನು, ನಿನ್ನನ್ನು ಬಿಟ್ಟು ಬದುಕಿರಲಾರೆ.”

“ಅದು ನನಗೆ ಬಹಳ ಚೆನ್ನಾಗಿ ಗೊತ್ತು. ಆದರೆ ಈ ನನ್ನ ನಂಬಿಕೆ ಶೀಲಾ ಬರುವವರೆಗೆ ಮಾತ್ರ…”

*

ವಾಕಿಂಗ್ ಮುಗಿಸಿ ಮನೆಗೆ ಬರುವಾಗ ರೇವತಿ ತನ್ನ-ಮನುವಿನ ನಡುವೆ ನಡೆಯುವ ಇಂತಹ ಎಮೋಷನಲ್ ಡೈಲಾಗ್‌ಗಳನ್ನು ಮತ್ತೆ ಮತ್ತೆ ನೆನೆದು ನಗುತ್ತಾಳೆ. ಪ್ರತಿನಿತ್ಯ ಜೀವನದಲ್ಲಿ ಹೀಗೆಲ್ಲಾ ಮಾತನಾಡುವುದು ಎಷ್ಟೊಂದು ಅಸಹ್ಯ. ಆದರೆ ಇಂತಹ ಮಾತುಗಳನ್ನೇ ಸದಾ ಅಪೇಕ್ಷಿಸುವ, ಶೃಂಗಾರಭರಿತ, ಕಾವ್ಯಮಯ, ಮಾತುಗಳಿಲ್ಲದಿದ್ದರೆ ‘ಪ್ರೀತಿಯಲ್ಲಿಂದು ಏನೋ ಕೊರತೆಯಾಗಿದೆ’ ಎಂದೇ ನಂಬುವ ಮನುವಿಗಾಗಿ ಹೀಗೆಲ್ಲಾ ಬಲವಂತವಾಗಿ ಮಾತನಾಡುತ್ತಾಳೆ.

*

ಶೀಲಾ ಯಾರು? ರೇವತಿ ಯಾರು? ಮನುವಿನ ಜೀವನದಲ್ಲಿ ಇವರಿಬ್ಬರ ಸ್ಥಾನಗಳೇನು? ಇದೊಂದು ಹಳೇ ಫಾರ್ಮುಲಾ ತ್ರಿಕೋಣ ಪ್ರೇಮದ ಕಥೆಯೇ.

ಮನು-ಶೀಲಾ ಪ್ರೇಮ ಪ್ರಕರಣ ಯಾರಿಗೆ ಗೊತ್ತಿಲ್ಲ? ಇಡೀ ಬೆಂಗಳೂರಿನಲ್ಲಿ ಅವರಿಬ್ಬರೂ ಸುತ್ತಾಡದ ಸ್ಥಳಗಳಿಲ್ಲ. ಡ್ಯುಯೆಟ್ ಹಾಡುತ್ತಾ ಸುತ್ತದ ಮರಗಳಿಲ್ಲ. ಪ್ರೇಮ ಸಂಭಾಷಣೆಗಳನ್ನು ಆಲಿಸದ ಪಾರ್ಕುಗಳಿಲ್ಲ. ಅವನವಳ ಸ್ಪರ್ಶಿಸಿದಾಗ ಅವಳ ಮೈಯ ಜೊತೆಗೆ ಅರಳಿ ನಗದ ಹೂಗಿಡಗಳಿಲ್ಲ. ಇಬ್ಬರ ಲವಲವಿಕೆಯ ಪ್ರೀತಿಯ ಅಪ್ಪುಗೆಯ ಬಿಸಿ ಸೋಂಕದ ಹುಲ್ಲುಹಾಸಿಲ್ಲ. ಇಷ್ಟೆಲ್ಲಾ ಹೇಳಿದ ಮೇಲೆ ಪಾಪ ಟಾರ್ ರಸ್ತೆಯನ್ಯಾಕೆ ಈ ಲಿಸ್ಟಿನಿಂದ ದೂರ ಇಡಬೇಕು? ಅವರಿಬ್ಬರನ್ನು ಹೊತ್ತು ದ್ವಿಚಕ್ರ ವಾಹನ ಚಲಿಸದ ರಸ್ತೆಯೇ ಇಲ್ಲ. ಅಂತಹ ಅಮರ ಪ್ರೇಮಿಗಳು.

ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಬಹುಶಃ ಈ ಪ್ರೇಮ ಪರಾಕಾಷ್ಠೆಗೆ ತಲುಪಿರಬೇಕು. ಶೀಲಾಳಿಗೆ ಈ ಅಗಾಧ ಪ್ರೇಮ ತೃಪ್ತಿ ತಂದಿರಬೇಕು. ಈ ತೃಪ್ತಿಯ ಹಂತ ತಲುಪಿತೆಂದರೆ ಪ್ರೇಮ ಬದುಕಿನ ಕೊನೆಯ ಹಂತ ತಲುಪಿದೆ ಎಂದೆ ಅರ್ಥ. ತೃಪ್ತಿಯಾಯಿತೆಂದರೆ ಇನ್ನು ಬೇಕೆಂಬುದು ಏನೂ ಇಲ್ಲವೆಂದೇ ಅರ್ಥ.

ಶೀಲಾ ಇನ್ನು ಹೆಚ್ಚಿಗೆ ಓದಬೇಕೆಂದು ಆಸೆಪಡುತ್ತಿದ್ದಾಳೆ. ಅವಳ ಯಾವ ಆಸೆ-ಆಕಾಂಕ್ಷೆಗಳನ್ನು ಬೇಡ ಎನ್ನದೆ ಇದ್ದುದರಿಂದಲೇ ಆಕೆ ಮನುವಿಗಿಂತಾ ಹೆಚ್ಚಾಗಿ ಓದಿದ್ದಾಳೆ. ಓದುತ್ತಿದ್ದಾಳೆ. ಮುಂದೆ ದೇಶ-ವಿದೇಶಗಳಿಗೆಲ್ಲಾ ಹೋಗಿ ವ್ಯಾಸಂಗ ಮಾಡಬೇಕೆನ್ನುವ ಹಂಬಲ ವಿಪರೀತವಾಗಿದೆ.

ಆದರೆ… ಆದರೆ ಮನುವಿಗೆ, ಆಕೆ ತನ್ನ ಎದುರಿಗೆ ಇದ್ದು ಎಷ್ಟಾದರೂ ಓದಲಿ ಅಡ್ಡಿಯಿಲ್ಲ. ಆದರೆ ಈ ನೆವದಿಂದ ಬೇರೆ ಊರಿಗೆ ಹೋಗುವುದಾದರೆ ಖಂಡಿತಾ ಒಪ್ಪಲಾರ. ಈ 12 ವರ್ಷಗಳ ಪ್ರಣಯವನ್ನು ಒಂದು ಪುಟ್ಟ ಮನೆಯಲ್ಲಿಟ್ಟು ಅದಕ್ಕೆ ತಾನೇ ಯಜಮಾನನಾಗಿ ಮೆರೆಯುವ ಆಸೆ. ಆಕೆಯ ಸೌಂದರ್ಯ, ವಿದ್ಯೆಬುದ್ದಿಯನ್ನೆಲ್ಲಾ ತನ್ನ ದೇಹದಡಿ ತಳ್ಳಿ ಆಕೆಯನ್ನು ಗೆಲ್ಲುವ ಆಸೆ. ತನ್ನ ಪ್ರೀತಿಯ ಕಾದಾಟದಲ್ಲಿ ಆಕೆ ನರಳಬೇಕು-ಸೋಲಬೇಕು…

ಶೀಲಾ ಹೇಳಿದ್ದಳು- “ಮನು, ಯೂನಿವರ್ಸಿಟಿಗೆ ಬಸ್ಸಿನಲ್ಲಿ ಹೋಗೋಕ್ಕೆ ಬೋರಾಗುತ್ತೆ ತುಂಬಾ ದೂರ ಅನ್ನಿಸುತ್ತೆ, ಕಾರಿದ್ದಿದ್ರೆ ಇಬ್ಬರೂ ಸುಖವಾಗಿ ಹೋಗಿರಬಹುದಲ್ಲಾ?

ಮುಂದಿನ ತಿಂಗಳು ಮನುವಿಗೆ ಕಾರ್ ಬಂದಿತ್ತು. ಶೀಲಾಳ ಡೈವರ್ ಆಗಿ ತನ್ನನ್ನೇ ಸಂತೋಷದಿಂದ ಅಪಾಯಿಂಟ್ ಮಾಡಿಕೊಂಡಿದ್ದ. ಆಕೆ ಕೇಳಿದ್ದೆಲ್ಲಾ ಈಡೇರಿಸಲೇಬೇಕೆಂದು ಹುಚ್ಚು ಆಸೆ. ಮಿತಿಯಿಲ್ಲದ ಪ್ರೇಮ. ಕೊನೆಯಿಲ್ಲದ ಬಯಕೆಗಳು. ಆ ಶೀಲಾ, ಅವಳ ಉಡುಪು, ವಯ್ಯಾರ, ಅಪಾರ ಬುದ್ದಿಶಕ್ತಿ… ಇವೆಲ್ಲಾ ತನ್ನದು ಎಂದು ಹೆಮ್ಮೆಪಡುತ್ತಿದ್ದ. ಆಕೆ ಮುಟ್ಟಿದರೆ ಕರಗಿ ಹೋಗುತ್ತಿದ್ದ ಮನು ಶೀಲಾಳ ದಾಸ. ‘ಈ ಯುಗದ ಪ್ರಣಯದ ದಾಸಾನುದಾಸ’ ಎಂದು ತನಗೇ ತಾನೇ ಬಿರುದು ನೀಡಿಕೊಂಡಿದ್ದ.

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

ಈ ಪ್ರೇಮದ ತೀವ್ರತೆ ಎಂದೆಂದಿಗೂ ಬತ್ತಲಾರದು ಎಂದೇ ಶೀಲಾ ಒಂದು ಮುಖ್ಯ ನಿರ್ಧಾರಕ್ಕೆ ಬಂದಿದ್ದಳು. ‘ಬುಡಕಟ್ಟು ಜನಾಂಗಗಳ ಅಧ್ಯಯನಕ್ಕಾಗಿ ಎರಡು ವರ್ಷ ಅಸ್ಸಾಂಗೆ ಹೋಗಬೇಕಾಗಿತ್ತು. ಆಕೆಯ ಬುದ್ಧಿವಂತಿಕೆಗೆ ಸರ್ಕಾರ ನೀಡಿದ ಸವಲತ್ತಿದು. ಅಪರೂಪಕ್ಕೆ ಸಿಗುವ ಈ ಅವಕಾಶದಿಂದ ವಂಚಿತಳಾಗಲೂ ಆಕೆಗೆ ಇಷ್ಟವಿಲ್ಲ. ಈ ಅಧ್ಯಯನದ ಜೊತೆಗೆ ತಾನು ಡಾಕ್ಟರೇಟ್ ಗಳಿಸಿ, ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಪುಸ್ತಕಗಳನ್ನು ಬರೆಯಬೇಕೆಂಬಾಸೆ.

ಆದರೆ… ಮನು ಶೀಲಾಳನ್ನು ಕಳುಹಿಸಲು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟ. ಅದಕ್ಕುತ್ತರವಾಗಿ ಶೀಲಾಳ ಮನೆಯವರು, ಪ್ರೊಫೆಸ‌ರ್‍‌ಗಳು, ಸ್ನೇಹಿತರು ಎಲ್ಲಾ ಬಂದು ‘ಎಂದಿದ್ದರೂ ಶೀಲಾ ನಿನ್ನ ಹೆಂಡತಿಯಾಗುವಳೇ. ನಿನ್ನ ಪ್ರೀತಿ ಆಕೆಗೆ ಮಾರಕವಾಗಬಾರದು. ಆಕೆ ಜೀವನದಲ್ಲಿ ಅದ್ಭುತವನ್ನು ಸಾಧಿಸಲು ನೀನಲ್ಲದೆ ಮತ್ತ್ಯಾರು ಸಹಾಯ ಮಾಡಬಲ್ಲರು?’ ಎಂದಿದ್ದಕ್ಕೆ- ಮನು ‘ಬೇಕಿದ್ದರೆ ನಿಮ್ಮ ನಿಮ್ಮ ಹೆಂಡತಿಯರನ್ನು ಎರಡಲ್ಲ, ಇಪ್ಪತ್ತು ವರ್ಷಗಳ ಕಾಲ ಅಂಡಮಾನಿಗೆ ಕಳುಹಿಸಿರಿ. ಆದರೆ ನನ್ನ ಹೆಂಡತಿಯಾಗುವವಳು ನನ್ನನ್ನು ಬಿಟ್ಟು ಎಲ್ಲಿಗೂ ಹೋಗಬಾರದು. ಹಾಗೆ ಹೋಗಲೇಬೇಕಾಗಿದ್ರೆ ನನ್ನನ್ನು ಸಂಪೂರ್ಣವಾಗಿ ಬಿಟ್ಟು ಹೊರಟುಹೋಗಲಿ’ ಎಂದು ರೇಗಿದ್ದ.

ಶೀಲಾಳಿಗೆ ಅಪಮಾನವಾಗಿತ್ತು. ತಾನು ಕೇಳಿದ್ದನ್ನೆಲ್ಲಾ ತಂದು ಕಾಲಡಿ ಬಿಸಾಡುವ ಮೂಲಕ ಮನು ತನ್ನನ್ನು ಗುಲಾಮಳನ್ನಾಗಿ ಮಾಡಿಕೊಂಡಿದ್ದಾನೆ ಎಂದೇ ಅರ್ಥೈಸಿಕೊಂಡಳು. ಪ್ರಥಮ ಬಾರಿಗೆ ಇಬ್ಬರಲ್ಲಿ ಭಿನ್ನಾಭಿಪ್ರಾಯ ತಲೆದೋರಿತ್ತು. ಸಮಾನವಾಗಿ ಪ್ರೀತಿಸುವ ಇಬ್ಬರಲ್ಲಿ ಮನು ‘ಪ್ರೀತಿಯ ಮುಂದೆ ಎಲ್ಲವೂ ಕ್ಷುಲ್ಲಕ’ ಎಂದರೆ, ಶೀಲಾ ‘ಸಾಧನೆಯ ಮುಂದೆ ಎಲ್ಲವೂ ಕ್ಷುಲ್ಲಕ’ ಎಂದುಬಿಟ್ಟಳು.

ಇದನ್ನು ಓದಿದ್ದೀರಾ?: ಕಾಳೇಗೌಡ ನಾಗವಾರ ಅವರ ಕತೆ | ಕೂಡಿಕೆ

ಶೀಲಾ ಹೊರಡುವುದು ಸತ್ಯವಾದಾಗ ಮನು ಅವಳ ಬಳಿ ಕುಳಿತು ಬಿಕ್ಕಿಬಿಕ್ಕಿ ಅತ್ತಿದ್ದ. ರೇಗಿದ್ದ, ಹೊಡೆಯಲು ಕೈ ಎತ್ತಿದ ಕಡೆಗೆ ಕಾಲು ಹಿಡಿದು ಹೋಗಬೇಡವೆಂದು ಬೇಡಿಕೊಂಡ.

”ಶೀಲಾ ನಿನಗೆಂದಾದರೂ, ಏನಾದರೂ ಕಡಿಮೆ ಮಾಡಿದ್ದೀನಾ?” ಅತ್ಯಂತ ದುಃಖದಲ್ಲಿ ಕೇಳಿದ.

“ಖಂಡಿತಾ ಇಲ್ಲ ಮನು, ಆದರೆ, ಈ ಪ್ರೀತಿ ನನ್ನ ಪ್ರಗತಿಗೆ ತಡೆಯಾಗಬಾರದಲ್ಲ. 2 ವರ್ಷ, ಕೇವಲ 2 ವರ್ಷಗಳು, ನೀನು ಸಂತೋಷವಾಗಿ ನನ್ನನ್ನು ಕಳಿಸಿಕೊಟ್ಟರೆ ಇನ್ನು ಇಡೀ ಜೀವನ ಹಾಗೇ… ಒಟ್ಟಿಗೆ ಇನ್ನೂ ತೀವ್ರವಾಗಿ ಪ್ರೀತಿಸುತ್ತಾ ಕಳೆಯಬಹುದಲ್ಲ?” ಶೀಲಾ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಳು. ಅದುವರೆಗೆ ದೈನ್ಯದಿಂದ ಬೇಡುತ್ತಿದ್ದ ಮನು ತಟಕ್ಕನೆ ಸಿಡಿದ, ‘ಮುಂದೆಂದೋ ಸಿಗುತ್ತಿಯಾ ಅಂತ ನಾನು ನನ್ನ 2 ವರ್ಷಗಳ ಸುಖ, ಸಂತೋಷಗಳನ್ನು ಕಳೆದುಕೊಳ್ಳಲು ತಯಾರಿಲ್ಲ. ನನಗೆ ನಿನ್ನ ಡಿಗ್ರಿಯೂ ಬೇಡ, ಗೋಲ್ಡ್ ಮೆಡಲ್ಲೂ ಬೇಡ. ಮರ್ಯಾದೆಯಾಗಿ ನಾನು ತಂದು ಹಾಕಿದ್ದು ತಿಂದು ಮನೆಯಲ್ಲಿ ಬಿದ್ದಿರು. ಯಾವನ್ಯಾವನ ಹಿಂದೆ ಹೋಗಿ ಡಾಕ್ಟರೇಟ್ ಗಳಿಸೋದು ಬೇಕಾಗಿಲ್ಲ” ಸ್ಪಷ್ಟವಾಗಿ ಹೇಳಿದ.

ಶೀಲಾ ತೀರಾ ನೊಂದು ಹೋದಳು, “ಏನೇ ಆದರೂ ನಿನ್ನ ಗಂಡಸು ಬುದ್ದಿ ತೋರಿಸಿಬಿಟ್ಟೆ, ನಿನ್ನಿಂದ ದೂರವಾಗಿದ್ದ ಮಾತ್ರಕ್ಕೆ ಯಾವನ ಜೊತೆಗಾದರೂ ಓಡಿ ಹೋಗ್ತಿನಿ ಅಂತ ಅನುಮಾನಾನಾ?”

ಮನು ತೀವ್ರವಾಗಿ ”ಹೌದಾ, ಖಂಡಿತಾ ಹೋಗ್ತಿಯಾ” ಎಂದುಬಿಟ್ಟ. ಅವನು ಹೀಗೆಲ್ಲಾ ಯೋಚನೆ ಮಾಡಬಹುದೆಂದು ಆಕೆ ಕನಸುಮನಸ್ಸಿನಲ್ಲಿಯೂ ಕಲ್ಪಿಸಿಕೊಂಡಿರಲಿಲ್ಲ. “ಹಾಗಿದ್ರೆ ನಿನ್ನ ಪ್ರೀತಿಯಲ್ಲಿ ನಂಬಿಕೆಗೆ ಸ್ಥಳವೇ ಇಲ್ಲವಲ್ಲ ಮನು”, ಶೀಲಾ ಬಿಕ್ಕುತ್ತಾ ಹೇಳಿದಳು.

“ನಿನ್ನ ಪ್ರೀತಿಯಲ್ಲಿ ತ್ಯಾಗಕ್ಕೆ ಸ್ಥಳವೇ ಇಲ್ಲ” ಪ್ರತಿ ಸವಾಲೆಸೆದ.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ಹತ್ತು ನಿಮಿಷಗಳ ದೀರ್ಘಾಲೋಚನೆಯ ನಂತರ ಶೀಲಾ “So, ನಂಬಿಕೆ ಮತ್ತು ತ್ಯಾಗ ಈ ಮುಂಬಾಗಿಲು, ಹಿಂಬಾಗಿಲುಗಳನ್ನು ಕಳೆದುಕೊಂಡ ಈ ನಮ್ಮ ಪ್ರೀತಿಗೆ ವಿದಾಯ ಹೇಳೋಣವೇ?” ಎಂದಳು.

ಮನು ಮಾತನಾಡದೆ ಎದ್ದು ಹೋದ.

*

ಹೇಗಾದರೂ ಮಾಡಿ ಮನುವನ್ನು ಒಪ್ಪಿಸಬೇಕೆಂದು ಹೊರಟ ಶೀಲಾ ಮತ್ತು ಎಲ್ಲ ಹಿತೈಷಿಗಳ ಪ್ರಯತ್ನಗಳೂ ವ್ಯರ್ಥವಾದವು. ‘ಪ್ರೀತಿ’ ಎಂಬುದನ್ನೇ ನೆಪಮಾಡಿ ಅವಳು ಹೊರಡುವುದನ್ನು ತಪ್ಪಿಸುವ ಮನು ಮತ್ತು ಅವನ ಹಿತೈಷಿಗಳ ಪ್ರಯತ್ನಗಳೂ ವಿಫಲವಾದವು.

ಶೀಲಾ ಕಡೆಗೂ ಹೊರಟು ನಿಂತಾಗ ಬೀಳ್ಕೊಡಲು ಮನು ಬರಲಿಲ್ಲ. ಶೀಲಾ ಕಾಯಲೂ ಇಲ್ಲ.

“ಕಂಡು ಕೇಳಿದ್ದನ್ನೆಲ್ಲಾ ಕೊಟ್ಟು ನನ್ನ ಪ್ರೀತಿಯನ್ನು ನಿನ್ನ ಮನೆಯ ಸಾಕು ನಾಯಿಯನ್ನಾಗಿ ಮಾಡಿಕೊಂಡ ನಿನ್ನ ಮನೋಭಾವಕ್ಕೆ ಧಿಕ್ಕಾರವಿರಲಿ” ಎಂದವಳು ಪತ್ರ ಬರೆದರೆ,

“ಬೇಕಾದ್ದನ್ನೆಲ್ಲಾ ಪಡೆದೂ ಸಹಾ, ಎಲ್ಲಾ ಸಮಯದಲ್ಲೂ ಪ್ರಿಯನನ್ನು ಕೋಡಂಗಿಯಂತೆ ಕುಣಿಸಬಯಸುವ ನಿನ್ನಂತಹವರ ಮನೋಧರ್ಮಕ್ಕೆ ನನ್ನ ತಿರಸ್ಕಾರ” ಎಂದವನು ಪ್ರತ್ಯುತ್ತರ ಬರೆದ.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಕಡೆಗೊಂದು ದಿನ ಆಕೆ ”ನಾನಿಲ್ಲದೆ ಅರೆಕ್ಷಣವೂ ಬದುಕಿರಲಾರೆ ಎಂದು ಹೇಳಿದವ, ಆಶ್ಚರ್ಯ, ಇಷ್ಟು ತಿಂಗಳ ನಂತರವೂ ಬದುಕಿಯೇ ಪತ್ರ ಬರೆಯುತ್ತಿದ್ದೀಯಾ. ಇದನ್ನೇ ನಾನು ವಾಸ್ತವ ಎಂದು ಕರೆಯುವುದು” ಎಂದು ವ್ಯಂಗ್ಯವಾಗಿ ಸೂಚಿಸಿದ್ದಳು.

”ಇಂದೋ ನಾಳೆಯೋ ಮನುವಿಲ್ಲದ ಶೀಲಾಳ ಬದುಕು ಯಾವ ದುರ್ಗತಿಗೆ ಇಳಿಯುತ್ತದೆ ಎಂದು ಸ್ವತಃ ಕಣ್ಣಾರೆ ನೋಡುವ ಆಸೆಯಿಂದ ಬದುಕಿದ್ದೇನೆ ಅಷ್ಟೆ. ಇನ್ನು ಕೆಲವೇ ದಿನಗಳಲ್ಲಿ ಕಣ್ತುಂಬಾ ಅದನ್ನು ನೋಡುತ್ತೇನೆ” ಎಂದು ಆಶಾವಾದ ತೋರಿದ್ದ.

ಇಬ್ಬರ ಈ ಜಗಳ ಕೊನೆಗೊಳ್ಳಲು ಮನುವಿನ ಜೀವನದಲ್ಲಿ ರೇವತಿ ಪ್ರವೇಶಿಸಬೇಕಾಯಿತು. ರೇವತಿ ಮನುವಿನ ದೂರದ ಸಂಬಂಧಿ. ಹಿಂದೊಮ್ಮೆ ಹಿರಿಯರು ರೇವತಿ ಮತ್ತು ಮನುವಿನ ಮದುವೆಯ ಪ್ರಸ್ತಾಪ ಮಾಡಿದಾಗ ಆಸೆಯಿಂದ ಅವನ ಉತ್ತರಕ್ಕಾಗಿ ಕಾದವಳು. ಆದರೆ ಮನು ನೇರವಾಗಿ ಅವಳ ಬಳಿ ಬಂದು ಶೀಲಾಳ- ತನ್ನ ಪ್ರೇಮ ಪ್ರಕರಣ ತಿಳಿಸಿ, ಅವಳನ್ನು ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ನೇರವಾಗಿ ಹೇಳಿ ಹೋಗಿದ್ದ. ಅವನ ಈ ನೇರನುಡಿ, ಶೀಲಾಳ ಬಗೆಗೆ ಅವನು ತೋರುತಿದ್ದ ಪ್ರೀತಿ- ಇವುಗಳಿಂದಲೇ ರೇವತಿಯಲ್ಲಿ ಮೆಚ್ಚುಗೆ ಆಸೆ ಹುಟ್ಟಿಸಿದ್ದ. ಎಂದಾದರೂ ಎದುರಿಗೆ ಸಿಕ್ಕಿದ್ದಾಗ “ಶೀಲಾ ಹೇಗಿದ್ದಾಳೆ?” “ಅಯ್ಯೋ, ನಿನ್ನನ್ನು ಮದುವೆಯಾಗಿದ್ದಿದ್ದರೆ ಅರ್ಧ ಡಜನ್ ಮಕ್ಕಳಾದರೂ ಉದುರುತ್ತಿದ್ದವು. ಆಕೆ ನೋಡು, ಆ ಓದುವ ನೆಪದಲ್ಲಿ ಸುಮ್ಮನೆ ಮದುವೆಯನ್ನು ಮುಂದೂಡುತ್ತಲೇ ಇದ್ದಾಳೆ” ಎಂದು ಚಾಡಿ ಹೇಳಿ ನಗುತ್ತಿದ್ದ.

ರೇವತಿಗೆ ನಂತರ ಹಲವಾರು ಸಂಬಂಧಗಳು ಬಂದಿದ್ದವು. ಆಕೆಗೆ ಮನುವಿನಂತಹ ವಿಶಾಲಹೃದಯದ ಆದರ್ಶ ಪ್ರೇಮಿ ಬೇಕಿತ್ತು. ಮನುವಿನ ಗುಣವುಳ್ಳ ಯಾವುದೇ ಹುಡುಗನನ್ನು ವರಿಸಲು ಸಿದ್ಧವಿದ್ದರೂ ಅಂತಹ ವರಗಳು ಬರಲೇ ಇಲ್ಲ. ಬಂದವರೆಲ್ಲಾ ಹೊಸಲು ತುಳಿಯುವ ಮುನ್ನವೇ ಆಕೆಯ ಸಂಬಳ, ವರದಕ್ಷಿಣೆ ಇತ್ಯಾದಿಗಳಿಂದ ಪ್ರಾರಂಭಿಸಿ, ಆಕೆಯ ಸರಳತೆಯನ್ನೇ ಬಡತನವೆಂದು ಆಕ್ಷೇಪಿಸಿ ಹೊರಟುಹೋಗುತ್ತಿದ್ದರು.

ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹೀಗೆ… ಒಂದು ದಿನ ರೇವತಿ ಮನುವಿನ ಆಫೀಸ್ ಮುಂದೆ ಹೋಗುವಾಗ “ಶೀಲಾಳಿಲ್ಲದ ಮನುವಿನ ಸ್ಥಿತಿಯನ್ನು ಒಂದೆರಡು ಕ್ಷಣ ಆಸ್ವಾದಿಸಿದರೆ ಹೇಗೆ?” ಎಂಬ ಪುಟ್ಟ ಆಸೆ ಹುಟ್ಟಿತ್ತು. ಒಳಹೊಕ್ಕಳು. ಊಟದ ಸಮಯ ಎಲ್ಲರೂ ಹೊರಗಡೆ ಹೋಗಿದ್ದರೆ, ಮನು ಮಾಮೂಲಿ ಭಗ್ನಪ್ರೇಮಿಯಂತೆ ಶೂನ್ಯವನ್ನು ದಿಟ್ಟಿಸುತ್ತಾ ಕುಳಿತಿದ್ದ. ತಾನು ಎಂದೋ ಬಯಸಿದ್ದ ವಸ್ತುವೊಂದು ನೋವು ತಿನ್ನುತ್ತಾ ಕುಳಿತಿದೆ. ಆ ಕ್ಷಣಕ್ಕೆ ರೇವತಿಗೆ ತಡೆಯಲಾಗಲಿಲ್ಲ.

“ಮನು” ಎಂದು ಕರೆದಳು- ಅವನು ಬೆಚ್ಚಿ ತಲೆ ಎತ್ತಿದ. ಯಾವ ಪೀಠಿಕೆಯೂ ಇಲ್ಲದೆ “ಇವತ್ತು ನಿನ್ನನ್ನು ಊಟಕ್ಕೆ ಕರೆದುಕೊಂಡು ಹೋಗೋಣಾಂತ ಬಂದಿದ್ದೀನಿ ಬಾ” ಎಂದು ಕೈಹಿಡಿದು ಎಬ್ಬಿಸಲು ನೋಡಿದಳು. ಮನು ಮೇಲೇಳಲಿಲ್ಲ. ಅವಳು ಮತ್ತೂ ಹತ್ತಿರ ಹೋಗಿ ಆತನ ತಲೆಕೂದಲಲ್ಲಿ ಕೈಯಾಡಿಸುತ್ತಾ ”ಮನು, ಪ್ರೀತಿಗೆ ಮಾತ್ರ ಕ್ಷಮಿಸುವ ಗುಣವಿದೆ, ಶಕ್ತಿಯಿದೆ. ಪ್ರೀತಿ ಎಷ್ಟು ಕ್ಷಮೆಗಳನ್ನು ನೀಡುತ್ತದೋ ಅಷ್ಟು ಹೆಚ್ಚು ವರ್ಷಗಳನ್ನು ಬೋನಸ್ ಆಗಿ ಪಡೆಯುತ್ತದೆ. ಆಗಬಾರದ್ದು ಏನೂ ಆಗಿಲ್ಲ. ಕೇವಲ ಇನ್ನೊಂದು ವರ್ಷ ತಾಳ್ಮೆಯಿಂದ ಕಾದಿರು” ಎಂದು ಹೇಳುತ್ತಾ ಕೈಯನ್ನು ಹಿಂತೆಗೆದುಕೊಂಡಳು.

ಮನುವಿಗೆ ಅಷ್ಟೂ ದಿನದ ನೋವು ಎದುರಿಗೆ ನಿಂತಂತಾಗಿ ಬಿಕ್ಕಳಿಸಿ ರೇವತಿಯ ಕೈಯಲ್ಲಿ ಮುಖವಿಟ್ಟು ಅಳಲು ಶುರುಮಾಡಿದ. ಬಹುಶಃ ಈ ಒಂದು ಘಟನೆ ಅವರಿಬ್ಬರನ್ನು ಎಷ್ಟೋ ವರ್ಷಗಳ ಆತ್ಮೀಯರಂತೆ ಹತ್ತಿರಕ್ಕೆ ತಂದಿತ್ತು. ಮನುವಿಗೆ ರೇವತಿ ಅಪರಿಚಿತಳಲ್ಲ, ರೇವತಿಗೆ ಮನುವೂ ಅಪರಿಚಿತನಲ್ಲ. ಆದರೆ ಭಾವನಾತ್ಮಕ ಸಂಬಂಧ ಹೊಂದಲು ಇಬ್ಬರ ಮಧ್ಯೆ ಯಾವುದೇ ಕಾರಣವಾಗಲಿ, ಘಟನೆಗಳಾಗಲಿ ನಡೆದಿರಲಿಲ್ಲ, ಅಷ್ಟೆ!

ರೇವತಿಗೆ ಚೆನ್ನಾಗಿ ಗೊತ್ತು. ತಾನು ಆರಾಧಿಸುವ ಮನು ಈಗ ಒಬ್ಬಂಟಿ. ಶೀಲಾ ಇಲ್ಲದ ಖಾಲಿ ಮನೆಯಲ್ಲಿ ಕುಳಿತಿದ್ದಾನೆ. ತಾನು ಅಪ್ಪಣೆ ಕೇಳಿ ಮೆಲ್ಲನೆ ಒಳಗೆ ಪ್ರವೇಶಿಸಬಹುದು. ಆದರೆ ಒಳಮನೆ ಎಷ್ಟು ಅಸ್ತವ್ಯಸ್ತವಾಗಿದೆಯೋ? ಎಷ್ಟು ವರ್ಷಗಳ ನೆನಪಿನ ಜೇಡರಬಲೆಗಳು ಗೂಡುಗಟ್ಟಿವೆಯೋ? ತಾನದನ್ನೆಲ್ಲಾ ಹೊರತೆಗೆದು ಸ್ವಚ್ಛ ಮಾಡಲು ಸಾಧ್ಯವೇ? ಮನು ತನಗೆ ಮನೆಯ ಕೀಲಿ ಕೊಡುವನೇ?

ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಮನುವಿನ ನೆಂಟರು, ಸ್ನೇಹಿತರೆಲ್ಲಾ ಶೀಲಾ ಹೊರಟುಹೋಗಿದ್ದ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದರು. “ತಲೆಯ ಮೇಲೆ ಮೆರೆಸ್ತಾ ಇದ್ದ. ಹಾಗೇ ಆಗಬೇಕು.” “ಹೆಣ್ಣನ್ನು ಗಂಡಸಿನ ಹಾಗೆ ಓಡಾಡಿಸಿದ್ರೆ ಹೀಗೇ ಆಗೋದು.” “ನಾಯಿಮರಿ ಥರ ಅವಳ ಹಿಂದೆ ಸುತ್ತುತ್ತಿದ್ದ. ಈಗ ಅವನಿಗ್ಯಾರು ಹೆಣ್ಣು ಕೊಡುತ್ತಾರೆ?…” ಇಂಥ ಮಾತುಗಳನ್ನು ಕೇಳುವಾಗ ರೇವತಿಗೆ ವೇದನೆಯಾಗುತ್ತಿತ್ತು. ತನ್ನ ಪಾಡಿಗೆ ತಾನು ಯಾರನ್ನೋ ಪ್ರೀತಿಸಿದ್ದಕ್ಕೆ ಮನುವಿಗೇಕೆ ಈ ಶಿಕ್ಷೆ? ಆತ ಯಾರ ಮಗಳನ್ನೂ ಅಪಹರಿಸಿಲ್ಲ. ಯಾರದ್ದೇನನ್ನೂ ಕದ್ದಿಲ್ಲ. ಆದರೆ ಎಲ್ಲರೂ ಅವರ ಮನೆ ಕೊಳ್ಳೆ ಹೋದಂತೆ ಆಡುತ್ತಾರೇಕೆ?

ರೇವತಿ ನಿಧಾನವಾಗಿ ಮನುವಿನ ಜೀವನದೊಳಗೆ ಪ್ರವೇಶಿಸುತ್ತಿದ್ದಳು. ಆಕೆಗೆ ಅಂದಿಗೂ ಇಂದಿಗೂ ಇದೇ ಮನುವೇ ಬೇಕಾಗಿದ್ದ. ಈಗ ಅವನನ್ನು ಪಡೆಯುವ ಅರ್ಹತೆ ಹೆಚ್ಚಾಗಿದೆ ಅಷ್ಟೇ.

ರೇವತಿ ಬರುತ್ತಿದ್ದಂತೆ ಮೊದಮೊದಲು ಮನು ಶೀಲಾಳ ವಿಷಯ, ಹೇಳಿ ಅಳುತಿದ್ದ. ಎದ್ದರೆ, ಕೂತರೆ ಶೀಲಾ. ಕಡೆಕಡೆಗೆ ಅವಳು “ನಾನು ಬಂದಾಗಲೆಲ್ಲಾ ಬರೀ ಶೀಲಾ ಪುರಾಣವೇ ಆಗಿಹೋಯ್ತು. ಕೇಳಿಕೇಳಿ ತಲೆಚಿಟ್ಟು ಹಿಡಿದಿದೆ. ಹೋಗ್ತಿನಿ” ಎಂದು ಕೋಪ ತೋರಿದರೆ- “ಇಲ್ಲ ತಪ್ಪಾಯ್ತು. ದಯವಿಟ್ಟು ನೀನು ಸ್ವಲ್ಪ ಕಾಲ ಇರು. ನೀನಿದ್ದರೆ ಏನೋ ಸಮಾಧಾನ ಸಿಗುತ್ತದೆ” ಎಂದು ಹೇಳಿ ಹತ್ತಿರ ಕುಳ್ಳಿರಿಸಿಕೊಳ್ಳುತ್ತಿದ್ದ.

ಒಂದು ದಿನ ಮನು ಭದ್ರವಾಗಿ ತಲೆ ಹಿಡಿದು ಕುಳಿತಿದ್ದ. ಒಳಬಂದ ರೇವತಿ “ಯಾಕೆ ಮನು ತಲೆನೋವಾ? ಏನಾದ್ರೂ ಮಾತ್ರೆ ಕೊಡಲಾ? ಅಮೃತಾಂಜನ್?” ಎಂದು ವ್ಯಾಕುಲತೆಯಿಂದ ಪ್ರಶ್ನಿಸಿದಳು.
ಮನುವಿನ ಕಣ್ಣಲ್ಲಿ ನೀರು.

”ರೇವತಿ, ನಾನು ಈ ಯೋಚನೆಗಳಿಂದ ಹೊರಬರ್‍ತೀನಾ?”

ಇದನ್ನು ಓದಿದ್ದೀರಾ?: ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

“ಖಂಡಿತಾ ಬರ್‍ತೀಯಾ?”

“ಯಾವಾಗ?”

”ನೀನಾಗಿ ಪ್ರಯತ್ನಿಸಿದಾಗ, ಅಂತಹ ಸಂದರ್ಭಗಳಲ್ಲಿ ನಿನಗೆ ಯಾರಾದ್ದಾದರೂ ಅಗತ್ಯವಿದೆ ಅನ್ನಿಸಿದ್ದಲ್ಲಿ ಅದಕ್ಕಾಗಿ ನಾನಿದ್ದೀನಿ. ಮನು, ನೀನಿಷ್ಟೊಂದು ಸಂಕಟ ಅನುಭವಿಸುತ್ತಿರುವುದನ್ನು ನೋಡಲಾಗುತ್ತಿಲ್ಲ. ಹೇಳು, ಹೇಗೆ ನಿನ್ನನ್ನು ಈ ನೋವಿನಿಂದ ಪಾರುಮಾಡಲಿ?” ಮನು ಏನೂ ಮಾತನಾಡದೆ ಅವಳ ಕಣ್ಣುಗಳನ್ನಷ್ಟೇ ದಿಟ್ಟಿಸಿದ.
ರೇವತಿಯ ತಾಳ್ಮೆ ಅದ್ಭುತ. ಆಕೆ ಮನುವನ್ನು ನಿಧಾನವಾಗಿ ಶೀಲಾಳಿಂದ ಹೊರ ತಂದಳು. ಪ್ರತಿಕ್ಷಣವನ್ನು ಅವನಿಗಾಗಿ ವ್ಯಯಿಸಿದಳು. ಅವಳ ಸಮಯೋಚಿತ ಮಾತು. ಕರಾರುವಾಕ್ಕು ಯೋಚನೆಗಳೊಳಗೆ ಮನು ನಿಧಾನವಾಗಿ ಕರಗುತ್ತಾ ಬಂದ. ಕಡೆಗೊಂದು ದಿನ ಅವನಿಗನ್ನಿಸಿದ್ದು- ಶೀಲಾಳನ್ನು ಮರೆಯಲು ರೇವತಿಯ ಸಾನ್ನಿಧ್ಯದಿಂದ ಮಾತ್ರ ಸಾಧ್ಯ!

ರೇವತಿ ಈ ಒಂದು ಅವಕಾಶಕ್ಕಾಗಿ ವರ್ಷಾನುಗಟ್ಟಲೆ ಕಾದಿದ್ದಾಳೆ. ”ಮನುವಿನಂತಹವರು ಸಿಗಲಿ” ಎಂದು ಕಾದಿದ್ದರೆ ಮನುವೇ ಸಿಕ್ಕಿಬಿಟ್ಟಿದ್ದಾನೆ. ಕೂಡಲೇ ಮದುವೆಯಾಗಿ ಬಿಡಬಹುದಾದರೂ- ಸ್ವಲ್ಪ ಸಮಯ ಕೊಟ್ಟು ಸಂಪೂರ್ಣವಾಗಿ ಅವನ ಮನಸ್ಸಿನಿಂದ ಶೀಲಾಳನ್ನು ಹೊರತಂದು ನಂತರ ತನ್ನ ಪ್ರತಿಷ್ಠಾಪನೆ ಆಗಬೇಕೆಂದು ಅವಳ ಹಠ. ನಂತರ ಮದುವೆ!

ಮನು ಈಗ ಸದಾ ತಕ್ಕಡಿಯ ಮುಂದೆಯೇ ಕುಳಿತಿರುತ್ತಾನೆ. ರೇವತಿ, ಶೀಲಾ ಇಬ್ಬರನ್ನು ತೂಗಿಸುವುದೇ ಅವನ ಕೆಲಸ. ಶೀಲಾ- ಸಮುದ್ರ, ತನ್ನ ಅಲೆಗಳಲ್ಲಿ ಎಲ್ಲವನ್ನೂ, ಎಲ್ಲರನ್ನೂ ಕೊಚ್ಚಿಸಿಕೊಂಡು ಹೋಗಬಲ್ಲಳು. ಅಬ್ಬರ, ಅಟ್ಟಹಾಸದ ಪ್ರೀತಿ. ಪ್ರತಿಯೊಂದರಲ್ಲೂ ಗಂಡಸಿಗೆ ಸರಿಸಮ. ಅವಳನ್ನು ಯಾರೂ ಸೋಲಿಸಲಾರರು. ಪ್ರೀತಿ ಮತ್ತು ಅರ್ಥಮಾಡಿಕೊಳ್ಳುವಿಕೆಯಿಂದ ಮಾತ್ರ ತನ್ನನ್ನು ಪಡೆಯಲು ಸಾಧ್ಯ ಎಂದವಳ ನಂಬಿಕೆ.

ಇದನ್ನು ಓದಿದ್ದೀರಾ?: ವಿವೇಕ ಶಾನಭಾಗ ಅವರ ಕತೆ | ಲಂಗರು

ರೇವತಿ- ಮೌನಕ್ರಾಂತಿ. ಗಂಭೀರವಾಗಿ, ತನ್ನ ಪಾತ್ರವರಿತು ನಿಶ್ಚಿತ ಎಲ್ಲೆಯಲ್ಲಿ ಪ್ರವಹಿಸುವ ಮಹಾನದಿ, ‘ಪ್ರೀತಿ ಮತ್ತು ಅರ್ಥ ಮಾಡಿಕೊಳ್ಳುವಿಕೆ’ ಎಂಬ ಬಗ್ಗೆ ಭಾಷಣ ಹೊಡೆಯದೆ ‘ಪ್ರೀತಿ ಮತ್ತು ಹೊಂದಾಣಿಕೆ’ ಎಂಬ ತತ್ವಕ್ಕೆ ಬದ್ಧ. ಶೀಲಾ ಇದ್ದಲ್ಲಿ ಉತ್ಸಾಹ ಪುಟಿಯುತ್ತಿದ್ದರೆ, ರೇವತಿ ಇದ್ದಲ್ಲಿ ಆತ್ಮವಿಶ್ವಾಸ! ಉಡುಪು, ವೈಯ್ಯಾರ, ಬುದ್ಧಿವಂತಿಕೆ, ಸೌಂದರ್ಯ- ಶೀಲಾಳದು. ಅತ್ಯಂತ ಆಕರ್ಷಕ ವ್ಯಕ್ತಿತ್ವ, ತೀರಾ ಹತ್ತಿರದಿಂದ ನೋಡಿದರೆ ಮಾತ್ರ ಅರ್ಥವಾಗುವ ಸುಗಂಧ ಬೀರುತ್ತಾ ತಂಪುನೀಡುವ ಆಂತರಿಕ ಸೌಂದರ್ಯ- ರೇವತಿಯದು. ಆಕೆಯ ಸನಿಹವಿದ್ದರೆ ಧ್ಯಾನದಿಂದ ಎದ್ದುಬಂದಂತಹ ನೆಮ್ಮದಿ.

ಶೀಲಾ- ವ್ಯಕ್ತಿಗಳನ್ನು ತನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುತ್ತಿದ್ದಳು. ಅವಳು ತನ್ನ ವ್ಯಕ್ತಿತ್ವ ಒಪ್ಪಿಸಿ, ಎಂದೂ ಸ್ವಂತ ಅಭಿಪ್ರಾಯ ಸೂಚಿಸದೆ, ಅವಳಾಸೆ ಪಟ್ಟಿದನ್ನು ಕ್ಷಣ ಮಾತ್ರದಲ್ಲಿ ನೆರವೇರಿಸಿ ಕೃತಾರ್ಥನಾಗಿ, ಸ್ವರ್ಗ ಸೇರುತ್ತಿದ್ದ.

ರೇವತಿ ಅವನ ಜೀವನ ಪ್ರವೇಶಿಸಿದ ನಂತರವೇ ಅವನಿಗೆ ಹೊಳೆದದ್ದು ಅವಳಿಗೆ ತನ್ನದೇ ಆದ ನಿಶ್ಚಿತ ವ್ಯಕ್ತಿತ್ವ, ಅಭಿಪ್ರಾಯಗಳಿಲ್ಲವೆಂದು! ತಾನಾಸೆಪಟ್ಟಂತೆಲ್ಲಾ ಮೃದುವಾಗಿ ತನಗೆ ಬೇಕಾದ ಆಕಾರಕ್ಕೆ ಬರುತ್ತಿದ್ದ ರೇವತಿಯನ್ನು ನೋಡಿ ಆತನಿಗೆ ಆಶ್ಚರ್ಯ! ಪ್ರೀತಿ ಇಷ್ಟೊಂದು flexible ಆಗಿರುತ್ತದಾ? ಗಂಡಸಿಗೆ ಇಷ್ಟೆಲ್ಲಾ ಆಯ್ಕೆಯ ಸ್ವಾತಂತ್ರ್ಯಗಳು ಇರುತ್ತವೆಯೇ? ರೇವತಿ ಈ ಮೊದಲೇ ತನಗೇಕೆ ಸಿಗಲಿಲ್ಲ?

ರೇವತಿ-ಮನುವಿನ ಪ್ರೀತಿಯ ಮಧ್ಯೆ ಯಾವುದೇ ಯೂನಿವರ್ಸಿಟಿಯಾಗಲಿ, ಪ್ರೊಫೆಸರ್‌ಗಳಾಗಲಿ, ಸಂಶೋಧನೆ-ಸಾಧನೆಗಳಾಗಲಿ ಇರಲಿಲ್ಲ. ಇದ್ದುದು ಬರೀ ಚರ್ಮ-ಮಾಂಸಗಳ ಅಂತರವಷ್ಟೆಯಲ್ಲಿ. ಹೀಗಾಗಿ ಈ ಮೆತ್ತನೆಯ ಪ್ರೀತಿಯಲ್ಲಿ ಮನು ನಿಶ್ಚಿಂತ ಪ್ರೇಮಿ.

ಇದನ್ನು ಓದಿದ್ದೀರಾ?: ಉಮಾ ರಾವ್ ಅವರ ಕತೆ | ಅಗಸ್ತ್ಯ

ರೇವತಿ ಹತ್ತಿರವಾಗುತ್ತಿದ್ದಂತೆ ಮನುವಿಗೆ ಶೀಲಾ ಬಗ್ಗೆ ಸೇಡು ಹೆಡೆಯೆತ್ತುತ್ತಿತ್ತು. ತನ್ನ 12 ವರ್ಷಗಳ ಉತ್ಸಾಹ, ಯೌವನ, ಆಕಾಂಕ್ಷೆ ಎಲ್ಲವನ್ನೂ ಸುಟ್ಟು ಬೂದಿ ಮಾಡಿಬಿಟ್ಟಳಲ್ಲ, ಶೀಲಾಳಿಗೆ ತನ್ನಂತಹವನ ಪ್ರೇಮ ದೊರೆತಿದ್ದರಿಂದ ಆಕೆ ಜೀವನದಲ್ಲಿ ಏನೇನೆಲ್ಲಾ ಸಾಧಿಸಲು ಸಾಧ್ಯವಾಯಿತು. ಹಾಗೆ ತನಗೂ ರೇವತಿಯಂತಹ ಪ್ರೇಮ ಮೊದಲೇ ಸಿಕ್ಕಿದ್ದಾದರೆ ತಾನೂ ಅವಳಿಗಿಂತಾ ಹೆಚ್ಚಿನದೇನನ್ನಾದರೂ ಸಾಧಿಸಬಹುದಿತ್ತು.

ರೇವತಿ-ಮನುವಿನ ನಡುವೆ ನಡೆಯುವ ಎಲ್ಲಾ ಕ್ರಿಯೆಗಳಲ್ಲಿ ಶೀಲಾ ಅನಿಯಂತ್ರಿತವಾಗಿ ನುಗ್ಗುತ್ತಿದ್ದಳು.

”ರೇವತಿ- ನೀನು ಶೀಲಾಳಂತೆ ಕೂದಲನ್ನು ಕತ್ತರಿಸಿಬಿಡು. ಅವಳಿಗಿಂತಾ ಚೆನ್ನಾಗಿ ಕಾಣುತ್ತೀಯ.'”

“ಅಸಹ್ಯ- ಆಕೆಯಂತೆ ಲಿಪ್‌ಸ್ಟಿಕ್ ಹಾಕಬೇಡ. ಗಂಡಸರೆಲ್ಲಾ ನಿನ್ನನ್ನು ಸೂಳೆ ಅಂದುಕೊಂಡುಬಿಡ್ತಾರೆ.”

“ಶೀಲಾ ದಪ್ಪಗಿದ್ದರೂ ಸೆಕ್ಸಿಯಾಗಿದ್ದಳು. ನೀನು ಸಣ್ಣಕ್ಕಿದ್ದೀಯ. ಸೊಂಟ ಕಾಣುವ ಹಾಗೆ ಸೀರೆ ಉಡಬೇಕು. ಸೆಕ್ಸಿಯಾಗಿರುತ್ತೆ…” ಹೀಗೆ ರೇವತಿಯನ್ನು ತನಗಿಷ್ಟ ಬಂದಂತೆ ರೂಪಿಸಿಕೊಳ್ಳುತ್ತಿದ್ದ.

”ಇಷ್ಟು ಹೊತ್ತಿಗೆ ಶೀಲಾ ತೊಡೆಯೇರಿ ಕುಳಿತು, ಮೈಮೇಲೆ ಕಚ್ಚಿ ಗಾಯ ಮಾಡುತಿದ್ದಳು. ನೀನ್ಯಾಕೆ ಸುಮ್ಮನೆ ಕುಳಿತಿದ್ದೀಯಾ?”

”ನನ್ನ ಈ ತೋಳುಗಳ ಅಳತೆಗೆ ಶೀಲಾ ಸರಿಯಾಗಿ ತುಂಬಿಕೊಳ್ಳುತ್ತಿದ್ದಳು. ನೀನು ತುಂಬಾ ಪೀಚು.”

ಶೀಲಾ ಆಗಿದ್ದಿದ್ದರೆ… ಶೀಲಾ ಇದ್ದಿದ್ರೆ… ಅವರಿಬ್ಬರ ಪ್ರೇಮ ಪ್ರಾರಂಭವಾಗುತಿದ್ದುದೇ ಶೀಲಾಳಿಂದ, ಮುಗಿಯುತ್ತಿದ್ದುದೂ ಶೀಲಾಳಿಂದ.

ಇದನ್ನು ಓದಿದ್ದೀರಾ?: ಬಿ.ಟಿ. ಜಾಹ್ನವಿ ಅವರ ಕತೆ | ದೂಪ್ದಳ್ಳಿ ಸೆಕ್ಸಿ ದುರುಗ

ತೀರಾ ಬೇಸರವಾದಾಗ ರೇವತಿ ”ನಿನ್ನ-ಶೀಲಾಳ ಪ್ರಣಯ ನನಗೆ ತಿಳಿದಿದೆ ಅಂದಮಾತ್ರಕ್ಕೆ ನೀನು ಶೀಲಾಳ ಬಗ್ಗೆ ನನ್ನ ಹತ್ತಿರ ಇಷ್ಟು ಓಪನ್ ಆಗಿರಬೇಡ. ನಿನ್ನ ಹೋಲಿಕೆಗಳಿಂದ ನನಗೆ ಒಂಥರಾ ನೋವಾಗುತ್ತೆ. ನನ್ನನ್ನು ನಾನೇ ಆಗಿ ನೋಡು” ಎಂದು ನೊಂದು ಹೇಳುತ್ತಿದ್ದಳು.

ಆಗೆಲ್ಲಾ ಮನು ಅವಳಿಗಿಂತಾ ಹೆಚ್ಚಾಗಿ ನೊಂದು ”ಇನ್ನೊಮ್ಮೆ ಶೀಲಾ ಬಗ್ಗೆ ಮಾತನಾಡೋಲ್ಲ” ಎಂದು ಪ್ರತಿಬಾರಿ ಪ್ರಮಾಣ ಮಾಡುತ್ತಿದ್ದ!

ರೇವತಿ ನಿಧಾನವಾಗಿ ಮನುವನ್ನು ಆಕ್ರಮಿಸಿಕೊಳ್ಳುತ್ತಿದ್ದ ಹಾಗೆ ಮನು ಶೀಲಾಳನ್ನು ದ್ವೇಷಿಸಿ ಬಯ್ಯಲು ಶುರುಮಾಡುತ್ತಿದ್ದ.

“ಏನೆಲ್ಲಾ ತ್ಯಾಗ ಮಾಡಿದೆ. ಓಡಿಹೋದಳು. ಅವಳು ಯಾವ ಸಂಶೋಧನೆಯನ್ನೂ ಮಾಡೋಲ್ಲ. ಜೀವನದಲ್ಲಿ ಸಕ್ಸಸ್ ಕಾಣೋದೇ ಇಲ್ಲ. ಅವಳ ಓದಿಗೆ ನನ್ನ ಶಾಪ ಇದೆ! ಸೆಕ್ಸ್‌ನಲ್ಲಿ ಆಕೆ ಪರಿಪೂರ್ಣ! ಅದ್ಭುತ! ಓಹ್! ನಾನೇ ಕೊಚ್ಚಿಕೊಂಡು ಹೋಗಿಬಿಡುತ್ತಿದ್ದೆ. ಅಂತಹ ರಭಸ ಇರುವವಳು ಈಗ ಎರಡು ವರ್ಷ ಹೇಗೆ ಸುಮ್ಮನಿದ್ದಾಳೆ, ಬಹುಶಃ ನನಗಿಂತಾ ಹೆಚ್ಚು ಸಾಮರ್ಥ್ಯವಿರುವ ಗಂಡಸು ಸಿಕ್ಕಿರಬೇಕು?”

ಸಿಕ್ಕಿದ್ದಾಗ ಸುಖವನ್ನೆಲ್ಲಾ ಬಾಚಿಕೊಂಡು ಅನುಭವಿಸಿದ್ದ ಮನು ಸಿಕ್ಕದಿದ್ದಾಗ ಇಂತಹ ತುಚ್ಛ ಮಾತುಗಳನ್ನಾಡುವಾಗ ರೇವತಿಗೆ ತಡೆಯಲಾರದ ಸಿಟ್ಟು ಬರುತ್ತಿತ್ತು. ಇದುವರೆಗೂ ಕಂಡಿರದ ಈ ವ್ಯಕ್ತಿತ್ವವನ್ನು ತಾನು ನೋಡಬೇಕಾಯಿತೇ ಎಂದು ಪರಿತಪಿಸುತ್ತಿದ್ದಳು. ಆದ್ದರಿಂದಲೇ ಆತ ಇಂತಹ ಮಾತುಗಳನ್ನಾಡದಂತೆ ತಡೆಯಲು ಪ್ರಯತ್ನಿಸುತ್ತಿದ್ದಳು. ಆಗ ಅವನು “ನನ್ನನ್ನು ಧಾರಾಳವಾಗಿ ಬಯ್ಯಲು ಬಿಟ್ಟುಬಿಡು. ಆ ಮೂಲಕ ನನ್ನ ಕೋಪ, ಹತಾಶೆ, ತಿರಸ್ಕಾರ- ಎಲ್ಲಾ ಹೊರಬಂದುಬಿಡಬೇಕು” ಎಂದು ಕೇಳಿಕೊಳ್ಳುತ್ತಿದ್ದ.

ಇದನ್ನು ಓದಿದ್ದಿರಾ?: ಜಯಶ್ರೀ ದಿವಾಕರ್ ಅವರ ಕತೆ | ನೆಲೆ ಕಾಣದ ನೆರಳು

ರೇವತಿಯೊಡನೆ ಮದುವೆ ಎಂದು ನಿಶ್ಚಯಿಸಿದ ನಂತರವಂತೂ ಮನು ಶೀಲಾಳ ಬಗ್ಗೆ ಎಲ್ಲರೆದುರಿನಲ್ಲಿ ಬಾಯಿಗೆ ಬಂದ ಹಾಗೆ ಬಯ್ಯುವುದರ ಮೂಲಕ ತನ್ನ ಮದುವೆಯನ್ನು ಸಮರ್ಥಿಸಿಕೊಳ್ಳುತ್ತಿದ್ದ. ತನ್ನನ್ನು ಮದುವೆಯಾಗುವ ಈ ನಿರ್ಧಾರದ ಹಿಂದೆ ಅವನಿಗೆ ಕಾಡುತ್ತಿದ್ದ ಪಾಪಪ್ರಜ್ಞೆಯ ಅರಿವು ಅವಳಿಗಾಗುತ್ತಿತ್ತು.

ಬೆಳಿಗ್ಗೆ ವಾಕಿಂಗ್ ಹೋಗುವಾಗ ರೇವತಿ ಮನುವಿಗೆ ”ಮದುವೆ ಇನ್ನೊಂದಾರು ತಿಂಗಳು ಮುಂದೆ ಹಾಕೋಣ. ನೀನು ಶೀಲಾಳಿಂದ ಸಂಪೂರ್ಣವಾಗಿ ಹೊರಬಂದ ನಂತರವಷ್ಟೇ ಈ ಮದುವೆ” ಎಂದು ನಿಷ್ಠುರವಾಗಿ ಹೇಳಿಬಿಟ್ಟಳು. ಅಂದಿನ ದಿನದ ಮಟ್ಟಿಗೆ ಏನಿದೆಯೋ, ಅದನ್ನಷ್ಟೇ ಸ್ವೀಕರಿಸಿ ಸರಳವಾಗಿ ಬದುಕಲು ಇಚ್ಛಿಸುವ ರೇವತಿಗೆ ಮನು, ಅವಳೇ ಪ್ರೀತಿಸಿದ ಮೇರು ವ್ಯಕ್ತಿತ್ವದ ವಿಶಾಲಹೃದಯಿ, ಮನು ಕಗ್ಗಂಟಾಗಿ ತೋರುತ್ತಿದ್ದ.

ಮನುವಿಗೆ ಅನ್ನಿಸುತ್ತಿತ್ತು: 12 ವರ್ಷಗಳ ದೀರ್ಘ ಪ್ರಣಯದ ಪ್ರೇಯಸಿ ಶೀಲಾಳನ್ನು ಮರೆಯುವುದು ಅಷ್ಟೊಂದು ಸುಲಭ ಸಾಧ್ಯವೇ? ಅಷ್ಟಕ್ಕೂ ತಾನು ಶೀಲಾಳನ್ನು ಅದೆಷ್ಟು ದ್ವೇಷಿಸುತ್ತಿದ್ದೇನೆ. ರೇವತಿಗ್ಯಾಕೆ ಇದೆಲ್ಲಾ ಅರ್ಥವಾಗುತ್ತಿಲ್ಲ?

ನಾಲ್ಕು ಜನ ಗೆಳೆಯರು ಕುಡಿದು, ತಮಾಷೆಗಾಗಿ ಕಾಲ ಕಳೆಯುತ್ತಿದ್ದಾಗ ಮನು ಶುರುಮಾಡಿದ.

”ಬಹುಶಃ ಇಷ್ಟು ಹೊತ್ತಿಗೆ ಶೀಲಾ ತನ್ನ ನಾಲೈದು ಸಹಪಾಠಿಗಳೊಡನೆ ಒಟ್ಟಿಗೆ ಮಲಗಿ ಮಜಾ…” ಗೆಳೆಯರೆಲ್ಲಾ ಕೇಕೆ ಹಾಕಿ ನಗುತ್ತಿದ್ದಾರೆ.

ಇದನ್ನು ಓದಿದ್ದೀರಾ?: ನೇಮಿಚಂದ್ರ ಅವರ ಕತೆ | ಹೊಸ ಹುಟ್ಟು

ಯಾರೋ ಒಬ್ಬ ಎಲ್ಲಾ ಬಲ್ಲವನಂತೆ ಹೇಳಿದ. “ಸ್ಪೂಡೆಂಟ್ಸ್ ಜತೆ ಪ್ರಯೋಜನ ಇಲ್ಲ. ಅವಳು ತುಂಬಾ ಅವಕಾಶವಾದಿಯಾದ್ದರಿಂದ ಖಂಡಿತಾ ಈ ಸಂಡೇ ಪ್ರೊಫೆಸರ್ ಜೊತೆ.”

“ಅಸ್ಸಾಂನಲ್ಲಿ ಬರೀ ಹಾವುಗಳು. ಹಾವು ಕಚ್ಚಿ ಅವಳು ನಳಮಹಾರಾಜನಂತೆ ಕುರೂಪಿಯಾಗಿಬಿಡಬೇಕು.”

“ಅಲ್ಲಿ ಇಲ್ಲಿ ಓಡಾಡುತ್ತ ಇರ್‍ತಾಳಲ್ಲ, ಆಕ್ಸಿಡೆಂಟ್ ಆಗಿ ಸಾಯಬೇಕು. ಇಲ್ಲ, ಕೈಕಾಲುಮುರಿದು ಸಾಯೋವರೆಗೂ ನರಳ್ತಾ ಮೂಲೇಲಿ ಬಿದ್ದಿರಬೇಕು…” ಎಲ್ಲರ ನಗು, ಕೇಕೆಯ ಮಧ್ಯೆ ರೇವತಿ ರಭಸವಾಗಿ ಒಳನುಗ್ಗಿ ಮನುವಿನ ಮುಂದೆ ನಿಂತು “ಸ್ವಾರ್ಥಿ, ಕೊಳಕ, ನೀಚ ನಿನ್ನದೇ ಆಗಿದ್ದ ವಸ್ತುವಿನ ಬಗ್ಗೆ ಈ ರೀತಿ ಮಾತನಾಡಲು ನಿನಗೆ ನಾಚಿಕೆ ಆಗೊಲ್ವಾ? ನಿನ್ನ ವ್ಯಕ್ತಿತ್ವದಲ್ಲಿ, ಪ್ರೀತಿಯ ಹಿಂದೆ ಇಷ್ಟು ದೊಡ್ಡ ಕೊಚ್ಚೆ ಗುಂಡಿ ಇದೆ ಎಂದು ನನಗೆ ತಿಳಿದೇ ಇರಲಿಲ್ಲ. ನೀನು ಸುಂದರವಾಗಿ ಬದುಕುವುದನ್ನು ಮರೆತಿದ್ದೀಯ. ಆ ಬಗ್ಗೆ ಪ್ರಯತ್ನ ಕೂಡಾ ಮಾಡುತ್ತಿಲ್ಲ. ನಿನ್ನದೇ ಭ್ರಮೆಗಳು, ದ್ವೇಷ- ಉಹೂಂ. ಇವೆಲ್ಲ ಜೀವನದಲ್ಲಿ ಎಂದೂ ಪ್ರಯೋಜನಕ್ಕೆ ಬಾರದವು. ಬೇಡದ ನಿನ್ನೆಗಳನ್ನು ಅಳಿಸಿಹಾಕಲು ಬಾರದ ನೀನು ನಾಳೆಗಳನ್ನು ಹೇಗೆ ಸೃಷ್ಟಿಸುತ್ತೀಯ? ನಿನ್ನ ಬಗ್ಗೆ ನನಗೆ ನಂಬಿಕೆಯಿಲ್ಲ” ಎಂದು ಹೇಳಿ ಹೊರಟೇಹೋದಳು.

ಎರಡು ದಿನ ಇಬ್ಬರ ಮಧ್ಯೆ ಮಾತುಗಳಿಲ್ಲ. ಪ್ರೀತಿಯಲ್ಲಿ ಸೋಲಾದಾಗ ಅದು ದ್ವೇಷಕ್ಕೆ ತಿರುಗಲೇಬೇಕಲ್ಲವೇ ಎಂಬ ತತ್ವದಲ್ಲಿ ಬಲವಾದ ನಂಬಿಕೆಯುಳ್ಳವನು ಮನು. ಬೇಡದ ನಿನ್ನೆಗಳನ್ನು ಹೇಗೆ ಅಳಿಸಬೇಕು? ಎರಡು ದಿನದಿಂದ ರೇವತಿ ವಾಕಿಂಗ್ ಬರುತ್ತಿಲ್ಲ, ಫೋನ್ ಸಹಾ ಮಾಡಿಲ್ಲ. ಹಠ ಮಾಡುವ ಶೀಲಾ ಅರ್ಧಗಂಟೆಗಿಂತ ಹೆಚ್ಚು ಕೋಪ ಮಾಡಿಕೊಳ್ಳಲು ಸಾಧ್ಯವಾಗದೆ ಓಡಿ ಬಂದು ಸೇರುತ್ತಿದ್ದಳು. ಈ ಹುಡುಗಿಗೆ ತಾನೇ ಸೋಲಬೇಕೇನೊ.

ಇದನ್ನು ಓದಿದ್ದೀರಾ?: ಜಯಂತ ಕಾಯ್ಕಿಣಿ ಅವರ ಕತೆ | ಅಮೃತಬಳ್ಳಿ ಕಷಾಯ

ಹಿಂದೆಂದೋ ಮನು ಸೋತು ಬಂದಾಗ ರೇವತಿ ಅವನನ್ನು ಎದೆಗೊತ್ತಿ ಹೇಳಿದ್ದಳು ”ಮನು… ಪ್ರೀತಿಯಲ್ಲಿ ಕ್ಷಮೆಯಿರಲಿ, ತಾಳ್ಮೆ ಇರಲಿ!” ಶೀಲಾಳ ವಿಷಯ ಬಂದರೆ ಸಿಡಿಯುತ್ತಿದ್ದ ಮನು “ಕ್ಷಮೆ, ತಾಳ್ಮೆ ಅವೆಲ್ಲಾ ಎಂದೋ ಮುಗಿದುಹೋದ ಕಥೆ, ಅವಳನ್ನು ಕ್ಷಮಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ.”

ರೇವತಿ ಅವನ ಈ ಸ್ವಭಾವದ ಬಗ್ಗೆ ಬಹಳ ದಿನಗಳಿಂದ ಯೋಚಿಸುತ್ತಿದ್ದಳು. ಮನು ಶೀಲಾಳನ್ನು ದ್ವೇಷಿಸುತ್ತಿದ್ದಾನೋ, ತಿರಸ್ಕರಿಸುತ್ತಿದ್ದಾನೋ ಆಕೆಗೆ ಯಾವುದೂ ಸ್ಪಷ್ಟವಿರಲಿಲ್ಲ. ಆತ ಶೀಲಾಳನ್ನು ತಿರಸ್ಕರಿಸಿದರೆ ತಮ್ಮಿಬ್ಬರ ಸಂಬಂಧ ಸ್ಪಷ್ಟವಾಗಿ ಮುಂದುವರೆಯಬಹುದು. ಆದರೆ ದ್ವೇಷ ಯಾವಾಗ ಪ್ರೀತಿಯಾಗಿ ಮಾರ್ಪಾಡಾಗುತ್ತದೋ ಏಕೆಂದರೆ ಇಷ್ಟು ತೀವ್ರ ದ್ವೇಷ ಕೆಲವು ತಿಂಗಳ ಹಿಂದೆ ಹುಚ್ಚು ಪ್ರೇಮವಾಗಿಯೂ ಇತ್ತಲ್ಲ!

”ಮನು, ನನಗನ್ನಿಸತ್ತೆ, ಶೀಲಾ ಮೇಲಿನ ಪ್ರೀತಿಯನ್ನು ನೀನು ವ್ಯಕ್ತಪಡಿಸುತ್ತಿರುವುದು ದ್ವೇಷದ ಮೂಲಕ. ನೀನವಳನ್ನು ಇನ್ನೂ ಅಪಾರವಾಗಿ ಪ್ರೀತಿಸುತ್ತಿದ್ದೀಯ. ಇಡೀ ದಿನ ಒಂದಲ್ಲ ಒಂದು ವಿಷಯದಲ್ಲಿ ಆಕೆ ನಿನ್ನೊಳಗಿನಿಂದ ಪ್ರವೇಶ ಮಾಡುತ್ತಿರುತ್ತಾಳೆ. ಅವಳಿಂದ ನೀನು ಸಂಪೂರ್ಣವಾಗಿ ಹೊರಬಂದೆ ಎನ್ನಿಸಿದ ದಿನ ನಮ್ಮ ಮದುವೆ. ನೀನು ಬೇಗ ಶೀಲಾಳಿಂದ ಬಿಡುಗಡೆ ಹೊಂದು. ಎಲ್ಲಿಯವರೆಗೆ ನೀನು ಅವಳನ್ನು ದ್ವೇಷಿಸುತ್ತಿಯೋ ಅಲ್ಲಿಯವರೆಗೂ ಆಕೆ ನಿನ್ನಲ್ಲೇ ಭದ್ರವಾಗಿ ಇರುತ್ತಾಳೆ. ಸಾಧ್ಯವಾದಷ್ಟು ಬೇಗ ಶೀಲಾ ಸನ್ನಿವೇಶಗಳಿಂದ ಹೊರ ಬಾ. ಕೊಳಕುತನವಿಲ್ಲದ, ಸಣ್ಣತನವಿಲ್ಲದ ಸುಂದರ ಬದುಕನ್ನು ಪಡೆಯೋಣ” ರೇವತಿ ನಿಷ್ಠುರವಾಗಿ ನುಡಿದಿದ್ದಳು.

ಮನು ಮಾನಸಿಕವಾಗಿ ರೇವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದ.

ರೇವತಿ ತನ್ನೆದುರಿಗಿನ ಸತ್ಯ. ಇಲ್ಲದ ವಸ್ತುವಿಗಾಗಿ ಕೊರಗಿ ಇರುವ ವಸ್ತುವನ್ನು ಕಳೆದುಕೊಳ್ಳಬಾರದು. ಇವಳ ಪ್ರೀತಿಯಲ್ಲಿ ಶೀಲಾಳನ್ನು ಮರೆಯಬಲ್ಲೆನೆಂಬ ಆತ್ಮವಿಶ್ವಾಸ. ತಾನು ಸಂಪೂರ್ಣ ಹೊಸ ಮನುಷ್ಯನಾದಂತಹ ಭಾವನೆ, ರೇವತಿ ಬಯ್ಯುತ್ತಿದ್ದಳು. ”ದೇಹದ ಪ್ರತಿಯೊಂದು ಅಂಗಗಳಿಗೂ ಅದರದೇ ಆದ ಕಾರ್ಯಗಳಿವೆ. ಹೊಲಸನ್ನು ಹೊರಹಾಕಲು ಒಂದು ದಾರಿಯಿದೆ. ಮಾತನಾಡಲೂ ಒಂದು ದಾರಿಯಿದೆ. ನೀನು ನಿನ್ನ ಬಾಯಿಯ ಮೂಲಕ ದಯವಿಟ್ಟು ಹೊಲಸನ್ನು ಹೊರಹಾಕಿ ನನ್ನಲ್ಲಿ ಅಸಹ್ಯ ಹುಟ್ಟಿಸಬೇಡ. ಕೊಳಕನ್ನು ದೇಹದಿಂದ, ಮನಸ್ಸಿನಿಂದ ಹೊರ ಬಿಸಾಕು.”

ಇದನ್ನು ಓದಿದ್ದೀರಾ?: ಕುಂ. ವೀರಭದ್ರಪ್ಪ ಅವರ ಕತೆ | ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ

ಮನು ಈ ಬಗ್ಗೆ ರಾತ್ರಿಯಿಡೀ ಯೋಚಿಸುತ್ತಿದ್ದ. ಬೆಳಿಗ್ಗೆ ರೇವತಿ ಕಂಡೊಡನೆ ಅವಳನ್ನಪ್ಪಿ ಹೇಳಿದ, ”ಏನೋ ಹಗುರವಾದ ಭಾವನೆ ಚಿನ್ನ. ನೀನು ಎಷ್ಟೊಂದು ಆತ್ಮವಿಶ್ವಾಸ ತುಂಬಿದೆ. ನಿನಗೆ ಗೊತ್ತೆ? ನಾನು-ಶೀಲಾ ಯಾವಾಗಲೂ ಅಗಲಿಕೆಯ ಮಾತು ಬಂದಾಗ ಯಾರು ಹೆಚ್ಚು ವಿಷ ಸೇವಿಸಿ, ಯಾರು ಬೇಗ ಸಾಯ್ತಿವಿ ಅಂತ ಪಂದ್ಯ ಕಟ್ತಾ ಇದ್ವಿ. ಆದರೆ ಜೀವನ ಅದೆಷ್ಟು ವಿಚಿತ್ರ ಅಂದ್ರೆ ಅದೇ ದೇಹ-ಮನಸ್ಸು ಶೀಲಾಳಿಲ್ಲದೆ ಬದುಕಿದೆ. ನಿನ್ನ ಬರುವಿಕೆಯ ಮುಂಚೆ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳು ಸಾಕಷ್ಟಿದ್ದವು. ಈಗ ನೀನು ಬಂದನಂತರ ಬದುಕಲು ಸಾಕಷ್ಟು ಕಾರಣಗಳನ್ನು ನೀಡಿದೆ. ಅದೂ ನಾನೇ- ಇದೂ ನಾನೇ. ನನ್ನಲ್ಲಿ ವಿಚಿತ್ರವಾದ ಸಂವೇದನೆ ಉಂಟಾಗುತ್ತಿದೆ. ನನ್ನನ್ನು ಈ ಸ್ಥಿತಿಗೆ ತಂದ ನಿನಗೆಷ್ಟು ಕೃತಜ್ಞನಾಗಿದ್ದರೂ ಸಾಲದು” ಎಂದು ಮುದ್ದಾಡಿದ.

“ಶೀಲಾಗೆ ಸುದೀರ್ಘವಾದ ಪತ್ರ ಬರೆಯಬೇಕೆಂದಿದ್ದೀನಿ, ಲವ್‌ ಲೆಟರ್, ಆಕೆ ಮರಳಿ ಬರುತ್ತಾಳ ಚಿನ್ನಾ?” ತಮಾಷೆಗೆ ಕೇಳಿದ. ರೇವತಿ ಅಷ್ಟೇನೂ ಮೂರ್ಖಳಲ್ಲ. ”ಶೀಲಾ ವಾಪಸ್ ಬಂದೇ ಬರ್‍ತಾಳೆ. ಆದರೂ ಈ ಬಗ್ಗೆ ನೀನು ನನ್ನಲ್ಲಿ ಕೇಳುವುದು ಒಬ್ಬ ಕುರುಡ ಇನ್ನೊಬ್ಬ ಕುರುಡನಿಗೆ ದಾರಿ ತೋರಿದಂತೆ” ಎಂದಳು.

ರೇವತಿಯಿಂದ ಪ್ರೀತಿಯ ಕೊಡ ತುಂಬಿದಾಗ ಅವನಿಗೆ ಶೀಲಾ ಜ್ಞಾಪಕಕ್ಕೆ ಬಂದೇ ಬರುತ್ತಿದ್ದಳು. ಅವನಿಗರಿವಿಲ್ಲದಂತೆ ಅವಳ ಬಗ್ಗೆ ಅನುಕಂಪ ಉಕ್ಕಿ ಹರಿಯುತ್ತಿತ್ತು.

ಹಿಂದೆ ಕೋಪ ಹೆಚ್ಚಾದಾಗ ಶೀಲಾಳನ್ನು ಅತಿಯಾಗಿ ದ್ವೇಷಿಸುತ್ತಿದ್ದ ಮನು ಪ್ರೀತಿ ಹೆಚ್ಚಾದಾಗ ಅತಿಯಾಗಿ ಕನಿಕರಿಸುವುದನ್ನು ರೇವತಿ ಗಮನಿಸಿದ್ದಳು.

ದ್ವೇಷಿಸಿದರೆ ಸಂಪೂರ್ಣ ದ್ವೇಷ- ಪ್ರೀತಿಸಿದರೆ ಸಕಲ ತ್ಯಾಗಗಳಿಗೂ ಸಿದ್ಧವಾಗುವ ಪ್ರೀತಿ- ಬರೀ ಇವಿಷ್ಟೇ ಬದುಕು ಎಂದುಕೊಂಡಿದ್ದ ಮನುವಿನ ಬಗ್ಗೆ ರೇವತಿ ಭೀತಳಾಗಿದ್ದಳು. ಕಪ್ಪು ಮತ್ತು ಬಿಳುಪಿನ ಮಧ್ಯದ ಬದುಕು ಅವನಿಗೆ ಗೋಚರಿಸುತ್ತಲೇ ಇರಲಿಲ್ಲ. ಪ್ರೀತಿ ಮತ್ತು ದ್ವೇಷಗಳ ಮಿಶ್ರಣದ ಹದವಾದ ಸಂಬಂಧಗಳ ಬಗ್ಗೆ ಆತನಿಗೆ ಕಲ್ಪನೆಯೂ ಇರಲಿಲ್ಲ.

ಇದನ್ನು ಓದಿದ್ದೀರಾ?: ಬೊಳುವಾರು ಮಹಮ್ಮದ್‌ ಕುಂಞಿ ಅವರ ಕತೆ | ಒಂದು ತುಂಡು ಗೋಡೆ

ರೇವತಿ ತನ್ನೊಳಗಿನ ರೇವತಿಯನ್ನು ಮನುವಿಗೆ ಒಪ್ಪಿಸಿದ್ದಳಾದರೂ, ತನ್ನ ಮತ್ತವನ ಮಾತಿನ ಸೇತುವೆ, ಪ್ರೀತಿಯ ಸೇತುವೆ ಎಲ್ಲವೂ ಶೀಲಾಳೇ ಆಗಿರುವುದನ್ನು ಗಮನಿಸಿದ್ದಳು. ಆದರೆ ತಾನಾಗಿ ಆರಿಸಿಕೊಂಡ ಬದುಕು ಹಗಲು ಕಂಡ ಬಾವಿಯಲ್ಲಿ ರಾತ್ರಿ ಬೀಳುತ್ತಿದೆ ಏಕೆ ಎಂದು ಪದೇಪದೇ ಪ್ರಶ್ನಿಸಿಕೊಳ್ಳುತ್ತಿದ್ದಳು.

ಮನುವನ್ನು ತಾನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಸಾಧ್ಯವೇ? ಮನು ಅವನಿಗರಿವಿಲ್ಲದಂತೆ ತನ್ನನ್ನು ಶೀಲಾಳಿಂದ ಹೊರಬರುವ ಏಣಿಯಾಗಿ ಉಪಯೋಗಿಸುತ್ತಿದ್ದಾನೇನೋ ಎಂದೆನ್ನಿಸಿದಾಗ ಒಂಟಿಯಾಗಿ ಕುಳಿತು ಅಳುತ್ತಿದ್ದಳು. ಆದರೆ ಆತ ಎದುರು ಬಂದಾಕ್ಷಣ ನಂಬಿಕೆ, ಭರವಸೆಗಳೂ ಹುಟ್ಟಿ ಆತನನ್ನು ಪ್ರಶ್ನೆ ಕೇಳದಂತೆ ಮಾಡುತ್ತಿದ್ದವು. ಹೀಗಾಗಿ ಈ ಪ್ರಣಯ ಶುರುವಾದಾಗಿನಿಂದ ಉಂಟಾದ ತಳಮಳ, ಅಸಹಾಯಕತೆ, ಅಭದ್ರತೆ- ಎಲ್ಲವನ್ನೂ ಮೌನವಾಗಿ ಸ್ವೀಕರಿಸಿ ತಾನೇ ಹೊರನಿಂತು ಪ್ರೇಕ್ಷಕಳಾಗಿ ನೋಡುತ್ತಿದ್ದಳು.

ಮನು ಫೋನಿನಲ್ಲಿ ಯಾರಿಗೋ ಹೇಳುತ್ತಿದ್ದ “ಇಲ್ಲಪ್ಪ, ಈಗ ಶೀಲಾ ಎದುರಿಗೆ ಬಂದರೆ ಯಾವ ಭಾವನೆಯೂ ಇಲ್ಲದೆ ಮಾತಾಡ್ತೀನಿ. ಆಗಬಾರದ್ದು ಏನಾಗಿದೆ? ದೇವತೆಯಂಥ ಹೆಂಡತಿ ನನಗೆ ಸಿಗುತ್ತಿದ್ದಾಳೆ. ಜೀವನಪೂರ್ತಿ ಹಾಯಾಗಿ ಮಗು ಥರ ಇದ್ದುಬಿಡ್ತೀನಿ…”

“…” ಅತ್ತ ಕಡೆಯಿದ್ದವರು ಏನು ಕೇಳಿದರೋ, ಮನು ಸರಾಗವಾಗಿ ”ಇಲ್ಲ, ಇಲ್ಲ ಶೀಲಾಳಷ್ಟು ಓದಿಲ್ಲ, ಅವಳಷ್ಟು ಸುಂದರವಾಗಿಯೂ ಇಲ್ಲ. ಆದರೆ ತುಂಬಾ ಒಳ್ಳೆಯವಳು. ಅರ್ಥಮಾಡಿಕೊಂಡು ಬದುಕೋಕ್ಕೆ ಗೊತ್ತಿರೋಳು… ಇಲ್ಲ, ಇಲ್ಲ, ಏನೂ ಡಿಮ್ಯಾಂಡೇ ಇಲ್ಲ…” ಎಂದ.

ಆ ರಾತ್ರಿಯೆಲ್ಲಾ ರೇವತಿಗೆ ತನ್ನ ಬಗ್ಗೆಯೇ ಯೋಚನೆ: ತನ್ನ ಒಳ್ಳೆಯತನ ಅತಿಯಾಯಿತೆ? ಹೊಂದಿಕೊಂಡು ಹೋಗುವವಳು ಎಂಬುದರ ಅರ್ಥ- ಬಯಕೆಗಳು, ಕೋರಿಕೆಗಳು ಇಲ್ಲವೆಂದೆ? ಈ ದಿನದವರೆಗೂ ಮನು “ನಿನಗಾಗಿ ಏನು ಮಾಡಲಿ” ಎಂದು ಕೇಳೇ ಇಲ್ಲ. ಅದೇ ಶೀಲಾಳ ಬೇಕು-ಬೇಡಗಳನ್ನೆಲ್ಲಾ ತುದಿಗಾಲಿನಲ್ಲಿ ನಿಂತು ಪೂರೈಸುತ್ತಿದ್ದುದನ್ನು ತಾನೇ ಕಂಡಿರಲಿಲ್ಲವೆ? ಬಹುಶಃ ಅಳುವ ಮಗುವಿಗೆ ಮಾತ್ರ ಹಾಲು ಸಿಗುತ್ತದೇನೋ. ಪ್ರಾರಂಭದಿಂದಲೇ “ಬರೀ ಮನುವಿಗಾಗಿ” ಎಂದೆಲ್ಲಾ ಬದುಕಿ, ಈಗ ತನ್ನವೂ ಆಸೆ-ಆಕಾಂಕ್ಷೆಗಳಿವೆ ಎಂದರೆ ಯಾರಾದರೂ ಒಪ್ಪುತ್ತಾರಾ?

ಇದನ್ನು ಓದಿದ್ದೀರಾ?: ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ

ರೇವತಿ, ಮನು ಎಂದಿನಂತೆ ವಾಕಿಂಗ್ ಹೊರಟಿದ್ದಾರೆ. ಅದೇ ಪಾರ್ಕು, ಗಿಡ ಮರಗಳು, ಸಣ್ಣಕೆರೆ. ಕೆರೆಯ ಅಂಚಿನಲ್ಲಿ ಇಬ್ಬರೂ ಮಾತನಾಡುತ್ತಾ ಬರುತ್ತಿದ್ದಂತೆ ಮನು ಚೀರುತ್ತಾನೆ. ರೇವತಿ ಹಿಂತಿರುಗಿ ನೋಡುವಷ್ಟರಲ್ಲಿ ಆತ ಜೌಗುಮಣ್ಣಿನಲ್ಲಿ ಹಾಗೇ ಹೂತು ಹೋಗಿದ್ದಾನೆ. ಎರಡೂ ಕೈಗಳನ್ನು ಮುಂದೆ ಚಾಚಿ ”ಹೆಲ್ಫ್” ಎಂದು ಕೂಗುತ್ತಿದ್ದಾನೆ. ರೇವತಿ ದಿಗ್ಭ್ರಾಂತಳಾಗಿ ನೋಡುತ್ತಿದ್ದಾಳೆ. ತನ್ನ ಕೈಯನ್ನು ಚಾಚಲು ಹೋದರೆ ಕೈಗಳಿಗೆ ಸ್ವಾಧೀನವೇ ಇಲ್ಲ. ಏನೂ ಮಾಡಲಾರದೆ ಅಸಹಾಯಕಳಾಗಿ ನಿಂತಿದ್ದರೆ ಮೇಲಿನಿಂದ- ಮರವೇ ಇಲ್ಲ ಆದರೂ ಕೊಂಬೆಯೊಂದು ಅವನತ್ತ ಸರಿಯುತ್ತಿದೆ. ಆತ ಅದನ್ನ ಹಿಡಿದು ಮೇಲೆ ಬರುತ್ತಿದ್ದಂತೆ ರೇವತಿ ನಿಟ್ಟುಸಿರುಬಿಡುತ್ತಾ ನೋಡುತ್ತಾಳೆ. ಶೀಲಾ! ಬಿಟ್ಟ ಉಸಿರು ಮತ್ತೆ ಹಾಗೆಯೇ ಸಿಕ್ಕಿಹಾಕಿಕೊಳ್ಳುತ್ತದೆ. ಉಸಿರಾಡಲು ಕಷ್ಟವಾಗಿ ಆ…ಆ… ಎಂದು ತಲೆ ಜೋರಾಗಿ ಅಲ್ಲಾಡಿಸುವಷ್ಟರಲ್ಲಿ… ಎಚ್ಚರವಾಯಿತು ಕನಸು!

ರೇವತಿ ಎದ್ದು ಕುಳಿತಳು. ನಿದ್ರೆ ಬರಲಿಲ್ಲ. ಕನಸಿನ ಅರ್ಥ ತಿಳಿಯಲಿಲ್ಲ.

ಹಾಗೂ ಹೀಗೂ ಬೆಳಗಾಯಿತು.

ಎಂದಿಗಿಂತಾ ಬೇಗನೆ ಹೊರಟು ಪಾರ್ಕ್ ಸೇರಿದಳು. ಮಾಮೂಲಿ ಸಮಯವಾದರೂ ಮನು ಬರಲಿಲ್ಲ. ಎದೆಯೊಳಗೆ ಏನೋ ಅಳುಕು. ಏನೋ ನಡೆಯಲಿದೆ… ಒಳ್ಳೆಯದಕ್ಕೋ, ಕೆಟ್ಟದಕ್ಕೋ ಅರ್ಥವಾಗುತ್ತಿಲ್ಲ…

ಎಂಟು ಗಂಟೆಗೆ ಅಂಗಡಿಗಳು ತೆರೆಯುತ್ತವೆ. ಅಲ್ಲಿಯವರೆಗೂ ರೇವತಿ ಸುಮ್ಮನೆ ಪಾರ್ಕಿನಲ್ಲಿ ಕಾಲಾಡಿಸುತ್ತಿದ್ದಳು. ಅಂಗಡಿ ಬಾಗಿಲು ತೆರೆಯುವುದನ್ನು ಕಂಡಕೂಡಲೆ ಫೋನ್ ಮಾಡುವುದಕ್ಕಾಗಿ ಪಾರ್ಕಿನಿಂದ ಹೊರಕ್ಕೆ ಓಡಿದಳು.

ಈ ಮೊದಲು ಹಲೋ ಎಂದು ಮಾತಾಡುವುದಕ್ಕೆ ಮುಂಚೆಯೇ ಮನು “ನೀನು ಉಸಿರು ಬಿಟ್ಟರೆ ನನಗೆ ಗೊತ್ತಾಗುತ್ತೆ. ಏನು ರೇವತಿ?” ಎಂದೇ ಹೇಳಿ ಫೋನ್ ಸಂಭಾಷಣೆ ಶುರುಮಾಡುತ್ತಿದ್ದ. ಆದರೆ ಈ ದಿನ ರೇವತಿಯೇ ಎರಡು ಬಾರಿ ”ಹಲೋ ಹಲೋ” ಎಂದು ಕೂಗಿದಳು.

ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು

“ಹಲೋ” ಅತ್ತ ಕಡೆಯಿಂದ ಭಾರವಾದ ಧ್ವನಿ.

“ನಾನು”

”ಹೂಂ ಹೇಳು.”

“ಯಾಕೆ ಮನು ವಾಕಿಂಗ್‌ಗೆ ಬರಲಿಲ್ಲ?”

ಸ್ವಲ್ಪ ಹೊತ್ತು ಮೌನ. ನಂತರ ಮನು “ಇಲ್ಲಿ… ಇಲ್ಲಿ ನಿನ್ನ ಅನಿಸಿಕೆಯಂತೆ ಶೀಲಾ ವಾಪಸ್ ಬಂದಿದ್ದಾಳೆ.”

”ವಾವ್? ಶೀಲಾ?” ರೇವತಿ ಆಶ್ಚರ್ಯದಿಂದ ಕಣ್ಣರಳಿಸಿದಳು. ತಾನು ಫೋನಿನಲ್ಲಿ ಕೇಳುತ್ತಿರುವುದು ಸತ್ಯವೆಂದು ಅವಳಿಗೆ ನಂಬಿಕೆಯೇ ಆಗಲೊಲ್ಲದು.

“ಹೂ, ನಮ್ಮಿಬ್ಬರ ಬಗ್ಗೆ ಯಾರೋ ಪತ್ರ ಬರೆದಿದ್ದಾರೆ. ಪತ್ರ ಓದಿದ್ದಾಳೆ. ಅವಳ ಮೇಲಿನ ನನ್ನ ಕೋಪ ಬೇರೆಯವರನ್ನು ಪ್ರೀತಿ ಮಾಡುವಷ್ಟರ ಮಟ್ಟಿಗೆ ಹೋಗುತ್ತದೆಂದು ಅವಳೆಣಿಸಿರಲಿಲ್ಲವಂತೆ. ಓದಿದ ತಕ್ಷಣ ಶಾಕ್ ಆಗಿ, ಎಲ್ಲವನ್ನು ಬಿಟ್ಟು ಹುಚ್ಚಿಯ ಹಾಗೆ ಓಡಿಬಂದಿದ್ದಾಳೆ. ರಾತ್ರಿ ಅವಳಿಲ್ಲಿ ಬಂದಾಗ ನೀನವಳನ್ನು ನೋಡಬೇಕಿತ್ತು. ಮನು ಎಂದು ಕೂಗಿಕೊಂಡೇ ಒಳಬಂದಳು. ನಾನು ಆಶ್ಚರ್ಯದಿಂದ ನೋಡುತ್ತಿದ್ದಂತೆಯೇ ನನ್ನ ಕೆನ್ನೆಗೆ ಒಂದೇ ಸಮನೆ ಬಾರಿಸತೊಡಗಿದಳು. ‘ರೇವತಿ-ನಿನ್ನ ಮದುವೆ ವಿಷಯ ನಿಜಾನಾ?’ ಅಂದ್ಲು. ಸೀರಿಯಸ್ಸಾಗಿ ‘ಹೌದು’ ಅಂದೆ ಅಷ್ಟೆ!”

“ಆಮೇಲೆ… ಆಮೇಲೆನಾಯ್ತು ಮನು?” ರೇವತಿ ಆತಂಕದಿಂದ ಕೇಳಿದಳು.

”ಆಮೇಲೆ…’ನಾವಿಬ್ಬರೂ ಪ್ರಮಾಣ ಮಾಡಿಕೊಂಡಂತೆ ಬೇರೆಯಾಗುವ ದಿನ ಯಾರು ಮೊದಲು ಸಾಯ್ತಾರೆ ಅಂತ ಮಾತಾಡಿಕೊಂಡಿದ್ವಿ ಅಲ್ವಾ? ಇಗೋ, ನಾನೇ ಮೊದಲು ನಿನಗಾಗಿ ಸಾಯ್ತಿದ್ದೀನಿ’ ಎಂದವಳೇ ವಿಷವನ್ನು ನನ್ನೆದುರು ಕುಡಿದೇಬಿಟ್ಟಳು…” ಹೇಳುತ್ತಿದ್ದಂತೆ ಮನು ಬಿಕ್ಕಿ ಬಿಕ್ಕಿ ಅತ್ತ.

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

ರೇವತಿಗೆ ಎದೆ ಒಡೆದುಹೋಯ್ತು. ಶೀಲಾ, ಅಮರಪ್ರೇಮಿ ಶೀಲಾ? ಅದೂ ವಿಷದ ಬಾಟಲಿಯೊಂದಿಗೆ! “ಹೀಗಾಗಬಾರದಿತ್ತು ಮನು. ಹೆದರಬೇಡ ನಾನಿದೀನಿ ನಿನ್ನ ಜೊತೆ ಯಾರ್‍ಯಾರಿದ್ದಾರೆ? ಒಂಟಿಯಾಗಿ ಹೆಣದ ಮುಂದೆ ಕುಳಿತುಕೊಳ್ಳಬೇಡ. ಪೋಲಿಸ್‌ಗೆ… ಡಾಕ್ಟರಿಗೆ….” ರೇವತಿ ಹೇಳುತ್ತಿದ್ದಂತೆ ಮನು ನಡುವೆ,

“ಡಾಕ್ಟರ್ ರಾತ್ರಿಯಿಂದ ಇಲ್ಲೇ ಇದ್ದಾರೆ. Drip ಹಾಕಿದ್ದಾರೆ. ಶೀಲಾ ಸತ್ತಿಲ್ಲ. ನನ್ನ ಶೀಲಾ ಸತ್ತಿಲ್ಲ. ಇಲ್ಲೆ ನನ್ನ ಎದುರಿಗೇ ನನ್ನ ತೊಡೆಯ ಮೇಲೇ ಮಲಗಿದ್ದಾಳೆ. ಅಕಸ್ಮಾತ್ ಸತ್ತರೆ ನಿನ್ನ ಮನೆಯಲ್ಲಿ ನಿನ್ನ ಎದುರಿಗೆ ಸಾಯ್ತಿನಿ ಎಂದು ಹಠ ಹಿಡಿದಿದ್ದಾಳೆ. ಆಸ್ಪತ್ರೆಗೆ ತೆಗೆದುಕೊಂಡು ಹೋಗಲೂ ಬಿಡಲಿಲ್ಲ.”

ಓಹ್… “ಈಗ… ಈಗ ಶೀಲಾ ಹೇಗಿದ್ದಾಳೆ?”

“ಡಾಕ್ಟರ್ ಏನೂ ತೊಂದರೆ ಇಲ್ಲಾಂತ ಹೇಳಿದ್ದಾರೆ.”

“ಮನು… ಮನು ಮುಂದೇನು ಮಾಡ್ತೀಯಾ?”

ಮನು ಬಿಕ್ಕಿಬಿಕ್ಕಿ ಅಳುತ್ತಿದ್ದಾನೆ. “ನಂಗೇನೂ ಗೊತ್ತಾಗ್ತಿಲ್ಲ ರೇವತಿ. ಏನೂ ತೋಚುತ್ತಿಲ್ಲ. ನನಗೆ ನನ್ನ ಶೀಲಾ ಬದುಕಿ ಉಳಿಯಬೇಕು ಅಷ್ಟೇ. ಅದಷ್ಟೇ ಈಗ ಸದ್ಯಕ್ಕೆ ಬೇಕಾಗಿರೋದು”.

ರೇವತಿಗೆ ಪರಿಸ್ಥಿತಿ ನಿಚ್ಚಳವಾಗಿ ಕಾಣಿಸುತ್ತಿದೆ. ಶೀಲಾ ಮರಳಿ ಬಂದಿದ್ದಾಳೆ. ಪ್ರೀತಿಯನ್ನು ಸಾಬೀತು ಮಾಡಲು, ಮನುವನ್ನು ಪುನಃ ಪಡೆಯಲು ವಿಷದೊಡನೆ ಬಂದಿದ್ದಾಳೆ. ಅವಳು ವಿಷ ತೆಗೆದುಕೊಂಡ ಕ್ಷಣ ತನಗಾಗಿ ತನ್ನ ಪ್ರೀತಿಗಾಗಿ ಆಕೆ ತನ್ನ ಪ್ರಾಣ ಕೊಡಲು ಸಿದ್ದವಾದ ಕ್ಷಣ ಮನು ಆಕೆಯ ಬಗೆಗಿನ ಕಲ್ಮಶವನ್ನೆಲ್ಲ ಕಳೆದುಕೊಂಡುಬಿಟ್ಟ, ಶೀಲಾ ಬದುಕಬೇಕು, ತನಗಾಗಿ ಆಕೆ ಬೇಕು ಎಂಬ ಹಂಬಲ ಆತನಲ್ಲಿ ತೀವ್ರವಾಗಿ ಕಾಣಿಸುತ್ತಿದೆ.

”ರೇವತಿ, ನೀನು ತಾಯಿಯಂತೆ ಎಲ್ಲವನ್ನೂ ಹೊರಬಲ್ಲವಳು. ಶೀಲಾ ಮಗುವಿನಂತೆ. ಹಠಮಾರಿ ತಾನೇನು ಮಾಡ್ತೀನಂತ ಅದಕ್ಕೆ ಗೊತ್ತಿಲ್ಲ. ನೀನು… ಹೇಗೆ ಈ ಸನ್ನಿವೇಶವನ್ನು ನಿಭಾಯಿಸ್ತಿಯೋ ನಿನಗೆ ಬಿಟ್ಟಿದ್ದು” ಮನು ಅಸಹಾಯಕನಾಗಿ ಅಳುತ್ತಿದ್ದಾನೆ.

ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ

”ಯೋಚಿಸಬೇಡ. ಶೀಲಾ ಎಂದೆಂದಿಗೂ ನಿನ್ನವಳೇ, ನೀನವಳನ್ನು ಖಂಡಿತವಾಗಿ ಉಳಿಸಿಕೊಳ್ತೀಯಾ” ಎಂದವಳೇ ರೇವತಿ ಫೋನ್ ಇಟ್ಟಳು.

ಅವಳಿಗಿದು ಗೊತ್ತಿತ್ತು. ಶೀಲಾಳಿಗೆ ಪತ್ರ ಬರೆದಿದ್ದು ಬೇರೆ ಯಾರೂ ಅಲ್ಲ ತಾನೇ! ಅವರಿಬ್ಬರ ಪ್ರೀತಿಯ ಮುಂದೆ ಎಲ್ಲೋ ತಾನು ಬಲಿಪಶು ಆಗುತ್ತಿದ್ದೇನೆಂಬ ಅನುಮಾನ. ಅದಕ್ಕಾಗಿಯೇ ಕತ್ತಲಲ್ಲಿ ಗುರಿ ಇಟ್ಟು ಬಾಣ ಎಸೆದಿದ್ದಳು. ಗುರಿ ತಲುಪಿತ್ತು. ಶೀಲಾ ಮರಳಿ ಬಂದಳು. ಮತ್ತೆ ಮನು ಮೊದಲಿನಂತಾಗುತ್ತಾನೆ. ನೀಚನಲ್ಲದ ಮನುವಾಗುತ್ತಾನೆ. ಕಳೆದದ್ದು ಸಿಕ್ಕಿದುದರಿಂದ ಇಬ್ಬರಿಗೂ ಈಗವರ ಬೆಲೆ ತಿಳಿದಿರುತ್ತದೆ.

ರೇವತಿ ಅತ್ಯಂತ ಹಗುರವಾದ ಮನಸ್ಸಿನಿಂದ ನಡೆಯುತ್ತಿದ್ದಳು. ಈ ಸಂಬಂಧದಿಂದ ಬಿಡುಗಡೆ ಬೇಕೆಂದು ತನಗೆ ಇಷ್ಟೊಂದು ತೀವ್ರವಾಗಿ ಅನ್ನಿಸಿತೆ? ತಾನು ಮನುವನ್ನು ಪ್ರೀತಿಸಿದ್ದು ನಿಜವಾದರೂ, ವಿಕೃತತೆಯನ್ನೆಲ್ಲಾ ತೋರುತ್ತಿದ್ದ ಮನು ಬೇಡವಾಗಿದ್ದ; ಅಂತಹವನೊಡನೆ ಜೀವನಪೂರ್ತಿ ಬಾಳುವುದಕ್ಕಿಂತ ಈಗಲೇ ಕಡಿದುಕೊಳ್ಳುವುದು ಒಳ್ಳೆಯದೆಂದು ವಿವೇಚನೆ ಹೇಳುತ್ತಿತ್ತಲ್ಲವೇ?

ಏನೇ ಆದರೂ, ಎಲ್ಲರ ದೃಷ್ಟಿಯಲ್ಲಿ ತಾನು ಮಹಾತ್ಯಾಗಿ! ಇನ್ನು ಮನು-ಶೀಲಾ-ಸ್ನೇಹಿತರೆಲ್ಲಾ ತನ್ನನ್ನು ಪೂಜಿಸುತ್ತಾರೆ. ತಾನದಕ್ಕೆ ಅರ್ಹಳೆ?

ಮನು, ಪ್ರೀತಿಯಲ್ಲಿ ಕ್ಷಮೆಯಿರಲಿ- ಶೀಲಾ ಸ್ಥಾನವನ್ನು ನಾನು ಪಡೆದುದ್ದಕ್ಕೆ ಕ್ಷಮೆಯಿರಲಿ- ನಿನ್ನಿಂದ ಸಾಧ್ಯವಾದಷ್ಟು ಬೇಗ ಕಳಚಿಕೊಳ್ಳಬೇಕೆಂಬ ನನ್ನ ಬಯಕೆಗೆ ಕ್ಷಮೆಯಿರಲಿ, ಪ್ರೀತಿ ಎಂಬ ಹೆಸರಿನಲ್ಲಿ ಜಗತ್ತಿನ ಸೌಂದರ್ಯ, ಜಗತ್ತಿನ ಕೊಳಕನ್ನೆಲ್ಲಾ ಹೊರಹಾಕುವ ನಿಮ್ಮಿಬ್ಬರ ಭಾವನೆಗಳಿಗೆ ಕ್ಷಮೆಯಿರಲಿ- ಗುಡ್ ಬೈ ಮನೂ! ಗುಡ್ ಬೈ ಶೀಲಾ!

Rekharani

ರೇಖಾರಾಣಿ (1963): ಲೇಖಕಿ, ಪತ್ರಕರ್ತೆ, ಸಾಕ್ಷ್ಯಚಿತ್ರ ನಿರ್ಮಾಪಕಿ. ಇವರು ಜನಿಸಿದ್ದು, ಪ್ರಾಥಮಿಕ ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಿ. ನಂತರ ಮೈಸೂರಿನಲ್ಲಿ ಸಮಾಜಶಾಸ್ತ್ರ ಎಂಎ ಪದವಿ. ಅಮ್ಮ ಹೋಂ ಸೈನ್ಸ್ ಪ್ರೊಫೆಸರ್, ಮನೆಯಲ್ಲಿ ಕಲೆ, ಸಿನೆಮಾ, ಫೋಟೋಗ್ರಫಿಗೆ ಪ್ರೋತ್ಸಾಹ. ಚಿಕ್ಕಂದಿನಲ್ಲಿಯೇ ಬರೆಯುವ ಗೀಳು ಹತ್ತಿಸಿಕೊಂಡ ಇವರು, ಕಾಲೇಜು ಓದುತ್ತಿರುವಾಗಲೇ ‘ಚಿತ್ರ ಕಡಲ ಅಲೆಗಳು’ ಎಂಬ ಕಾದಂಬರಿ ರಚಿಸಿದ್ದರು. ನಂತರ ‘ಅರ್ಥವಾಗದವರು-ಮನ ಒಲಿಸಿದವರು’ ಎಂಬ ಕಿರು ಕಾದಂಬರಿ ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟವಾಗುವ ಮೂಲಕ ಲೇಖಕಿಯಾಗಿ ನಾಡಿಗೆ ಪರಿಚಯವಾಗಿದ್ದರು. ಆನಂತರ ಬಿಡಿ ಕತೆಗಳನ್ನು ಒಟ್ಟುಗೂಡಿಸಿ ‘ಪ್ರೀತಿಯಲ್ಲಿ ಕ್ಷಮೆಯಿರಲಿ’ ಎಂಬ ಕಥಾ ಸಂಕಲನ ಹೊರತಂದರು. ಸದ್ಯಕ್ಕೆ ‘ಸಂಗಾತಿ’ ಮತ್ತು ‘ಶವಯಾತ್ರೆ’ ಎಂಬ ಎರಡು ಕಾದಂಬರಿಗಳು ಅಚ್ಚಿನಲ್ಲಿವೆ. ಇವರ ಕತೆಗಳು ತೆಲುಗು ಮತ್ತು ಇಂಗ್ಲಿಷ್ ಭಾಷೆಗೆ ಅನುವಾದವಾಗಿವೆ. 1980ರಿಂದ ಲಂಕೇಶ್ ಪತ್ರಿಕೆಯೊಂದಿಗೆ ಗುರುತಿಸಿಕೊಂಡ ಇವರು, ಹಲವಾರು ಗಂಭೀರ ಸಿನೆಮಾ ಲೇಖನಗಳನ್ನು ಬರೆದಿದ್ದಾರೆ. 40 ವರ್ಷಗಳ ಕಾಲ ಪತ್ರಕರ್ತೆಯಾಗಿ, ಆನಂತರ, ಸಾಕ್ಷ್ಯಚಿತ್ರ ನಿರ್ಮಾಪಕಿಯಾಗಿ, ನಾಡಿನ ಗಣ್ಯ ವ್ಯಕ್ತಿಗಳ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ತದನಂತರ ಹಲವು ಟಿವಿ ಧಾರಾವಾಹಿಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಐದು ಚಲನಚಿತ್ರಗಳಿಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಕೇರಳ ಸರ್ಕಾರ ನೀಡುವ ಅತ್ಯುತ್ತಮ ಸಿನೆಮಾ ಪತ್ರಕರ್ತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯ ಸರ್ಕಾರದ ಸಬ್ಸಿಡಿ ಸಮಿತಿ, ಸಾಕ್ಷ್ಯಚಿತ್ರಗಳ ಆಯ್ಕೆ ಸಮಿತಿ, ಸೆನ್ಸಾರ್ ಸಮಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.








eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ವಿವೇಕ ಶಾನಭಾಗ ಅವರ ಕತೆ | ಲಂಗರು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಉಮಾ ರಾವ್ ಅವರ ಕತೆ | ಅಗಸ್ತ್ಯ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...