ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಭಾರೀ ವಿವಾದಕ್ಕೆ ಗುರಿಯಾಗಿದೆ. ದೆಹಲಿಯ ಮತದಾರರ ಪೈಕಿ ಬರೋಬ್ಬರಿ 50% ಮತದಾರರನ್ನೇ ಮತಪಟ್ಟಿಯಿಂದ ಹೊರಹಾಕುವ ಆತಂಕ ಎದುರಾಗಿದೆ. ಇದೇ ವೇಳೆ, ಕರಡು ಪಟ್ಟಿಯಲ್ಲಿ ಹೆಸರಿದ್ದರೂ, ನಾನಾ ಕಾರಣಗಳಿಗಾಗಿ 32 ಲಕ್ಷ ಮತದಾರರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಅದರಲ್ಲಿ, ಮಾಜಿ ಉಪ ಪ್ರಧಾನಿ, ಆರ್‌ಎಸ್‌ಎಸ್ ನಾಯಕ ಎಲ್.ಕೆ ಅಡ್ವಾಣಿ, ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಸೇರಿದ್ದಾರೆ.
ನೋಟಿಸ್ ನೀಡಲಾದ 32 ಲಕ್ಷ ಮಂದಿಯ ಹೆಸರುಗಳಿ ಮತದಾರರ ಕರಡು ಪಟ್ಟಿಯಲ್ಲಿ ಇದ್ದರೂ, ಅರ್ಹತೆಯನ್ನು ದೃಢೀಕರಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಆಯೋಗ ಸೂಚಿಸಿದೆ.
ಕರಡು ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ತಾಂತ್ರಿಕ ಲೋಪಗಳು, 2002ರ ಮತದಾರರ ಪಟ್ಟಿಯೊಂದಿಗೆ ಮಾಹಿತಿ ತಾಳೆಯಾಗದಿರುವುದು (unmapping), ಹೆಸರುಗಳಲ್ಲಿನ ವ್ಯತ್ಯಾಸ ಹಾಗೂ ಪೋಷಕರು ಮತ್ತು ಮಕ್ಕಳ ವಯಸ್ಸಿನ ಅಂತರದಲ್ಲಿ ಕಂಡುಬಂದ ವ್ಯತ್ಯಾಸಗಳ ಆಧಾರದ ಮೇಲೆ ಈ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಆಯೋಗ ಹೇಳಿಕೊಂಡಿದೆ.
ಹೊಸ ದೆಹಲಿ ವಿಧಾನಸಭಾ ಕ್ಷೇತ್ರದ ಮತದಾರರಾಗಿರುವ 98 ವರ್ಷದ ಎಲ್.ಕೆ. ಅಡ್ವಾಣಿ, ಅವರ ಮಗಳು ಪ್ರತಿಭಾ ಮತ್ತು ಸೊಸೆ ಗೀತಿಕಾ ಅವರ ವಿವರಗಳು 2002ರ ಪಟ್ಟಿಗೆ ತಾಳೆಯಾಗದ ಕಾರಣ ನೋಟಿಸ್ ಪಡೆದಿದ್ದಾರೆ. ಅದೇ ರೀತಿ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಅವರ ಪತ್ನಿ ಸುದೇಶ್ ಹಾಗೂ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕುಟುಂಬದ ಸದಸ್ಯರ ಹೆಸರುಗಳು 2002ರ ಪಟ್ಟಿಯೊಂದಿಗೆ ಮ್ಯಾಪ್ ಆಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಆಯೋಗ ಹೇಳಿದೆ.
ಇವರಷ್ಟೇ ಅಲ್ಲದೆ, ಪ್ರಸ್ತುತ ಚುನಾವಣಾ ಆಯುಕ್ತ ಎಸ್.ಎಸ್. ಸಂಧು, ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸಂಸದರಾದ ಅಭಿಷೇಕ್ ಸಿಂಘ್ವಿ, ಕಪಿಲ್ ಸಿಬಲ್, ಬಾನ್ಸುರಿ ಸ್ವರಾಜ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಪ್ರಧಾನಿ ಮೋದಿಯವರ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ದಿವಂಗತ ಬಿಬೇಕ್ ದೆಬ್ರಾಯ್ ಸೇರಿದಂತೆ ಹಲವರು ನೋಟಿಸ್ ನೀಡಲಾದ ಪಟ್ಟಿಯಲ್ಲಿದ್ದಾರೆ.
ದೆಹಲಿ ಸಿಎಂ ರೇಖಾ ಗುಪ್ತಾ ಅವರ ವಯಸ್ಸಿನ ವ್ಯತ್ಯಾಸದ ಕುರಿತು ದಾಖಲೆಗಳನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ನವೆಂಬರ್ 4 ರಂದು ಪ್ರಕಟವಾಗಲಿರುವ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಲಿದೆ ಎಂದು ಆಯೋಗ ಹೇಳಿದೆ.
ಚುನಾವಣಾ ಆಯೋಗದ ಮೇ 14ರ ನಿರ್ದೇಶನದಂತೆ ನ್ಯಾಯಾಂಗ ವ್ಯವಸ್ಥೆಯ ಪ್ರಮುಖರು, ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಹಾಗೂ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳನ್ನು ಕರಡು ಪಟ್ಟಿಯಲ್ಲಿ ಕಾಯ್ದುಕೊಳ್ಳಲಾಗಿದ್ದು, ಹಕ್ಕುಗಳು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿಯಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ ತಮ್ಮ ಅರ್ಹತೆಯನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.



