ಜೈಪುರದ ಶಹೀದ್ ಸ್ಮಾರಕದ ಬಳಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆ ‘ಕಾಕ್ರೋಚ್ ಜನತಾ ಪಾರ್ಟಿ’ ( CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಜೈಲಿನಿಂದ ಹೊರಬಂದವರನ್ನು ಬೆಂಬಲಿಗರು ಹೂಮಾಲೆ ಹಾಕಿ ಸ್ವಾಗತಿಸಿದ್ದು, ಈ ಬೆಳವಣಿಗೆಯು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ನೀಟ್ ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, ಶಿಕ್ಷಣ ವಲಯದ ಸಮಸ್ಯೆಗಳು ಹಾಗೂ ನಿರುದ್ಯೋಗವನ್ನು ಖಂಡಿಸಿ ಸಿಜೆಪಿ ವತಿಯಿಂದ ಜೈಪುರದಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರೊಂದಿಗೆ ಹೆಗಲ ಮೇಲೆ ಕುಳಿತು ಸಾಗುತ್ತಿದ್ದ ಅಭಿಜೀತ್ ದೀಪ್ಕೆ ಅವರ ಬಳಿ ಏಕಾಏಕಿ ನುಗ್ಗಿ ಕುತ್ತಿಗೆಯಲ್ಲಿದ್ದ ಬಟ್ಟೆ ಹಿಡಿದು ಎಳೆದಾಡಿ ನಿರಂತರವಾಗಿ ಕಪಾಳಮೋಕ್ಷ ಮಾಡಿದ್ದರು. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.
ಇದನ್ನು ಓದಿದ್ದೀರಾ? ಪಂಜಾಬ್ ಸಿಎಂಗೆ ‘ಗುರುದ್ರೋಹಿ’ ಪಟ್ಟ: ಚುನಾವಣಾ ಹೊತ್ತಲ್ಲೇ ಆಪ್‌ಗೆ ನುಂಗಲಾರದ ತುತ್ತು
ಇದೀಗ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿರುವ ಆರೋಪಿಗಳನ್ನು, ಆತನ ಬೆಂಬಲಿಗರು ಹಾರತುರಾಯಿಗಳೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಹಿಂದೆ ತನ್ನ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದ ಆತ, ‘ನಾನೊಬ್ಬ ರಾಷ್ಟ್ರೀಯವಾದಿ’ ಎಂದು ಹೇಳಿಕೊಂಡಿದ್ದ. ಇದು ಕೇವಲ ಆಕಸ್ಮಿಕ ಹಲ್ಲೆಯಲ್ಲ, ಬದಲಾಗಿ ವಿದ್ಯಾರ್ಥಿಗಳ ನೈಜ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಹಾಗೂ ಸೈದ್ಧಾಂತಿಕ ಕಾರಣಗಳಿಗಾಗಿ ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ ಎಂದು ದೀಪ್ಕೆ ಈ ಹಿಂದೆ ಆರೋಪಿಸಿದ್ದರು.
ತಮ್ಮ ಮೇಲಿನ ಹಲ್ಲೆಯನ್ನು ಖಂಡಿಸಿದ್ದ ದೀಪ್ಕೆ, ‘ದೈಹಿಕ ಹಲ್ಲೆಗಳು ಭಯ ಮತ್ತು ಹೇಡಿತನದ ಸಂಕೇತ. ನಾವು ಗಾಂಧಿ ಮತ್ತು ಅಂಬೇಡ್ಕರ್ ಅವರ ಅನುಯಾಯಿಗಳಾಗಿದ್ದು, ನಮ್ಮ ಹೋರಾಟವನ್ನು ಶಾಂತಿಯುತವಾಗಿ ಮುಂದುವರಿಸಲಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಹಲ್ಲೆಕೋರನಿಗೆ ಹೂಮಾಲೆ ಹಾಕಿ ಸ್ವಾಗತಿಸಿರುವ ಈ ಘಟನೆಯು, ಭಿನ್ನಮತವನ್ನು ಹತ್ತಿಕ್ಕುವ ಯತ್ನಗಳು ಹಾಗೂ ಅಸಹಿಷ್ಣುತೆಯ ಕುರಿತು ಹೊಸ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ.




