ಹಳಿಯಾಳ: ಪಟ್ಟಣದ ಮೌರ್ಯ ಬಾರ್ ಆಂಡ್ ರೆಸ್ಟೋರೆಂಟ್ ಎದುರು ನಡೆದ ಪೊಲೀಸರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳಿಯಾಳ ಪೊಲೀಸ್ ಠಾಣೆಯ PSI ಬಸವರಾಜ್ ಅವರನ್ನು ಅಮಾನತುಗೊಳಿಸಲಾಗಿದ್ದು, ಎಂಟು ಪೊಲೀಸ್ ಕಾನಸ್ಟೇಬಲ್‌ಗಳನ್ನು ವರ್ಗಾವಣೆ ಮಾಡಲಾಗಿದೆ.
ಜೊತೆಗೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಆದೇಶ ನೀಡಿದ್ದಾರೆ. ಕಳೆದ ಭಾನುವಾರ ತಡರಾತ್ರಿ ಹಳಿಯಾಳದ ಮೌರ್ಯ ಬಾರ್‌ನಲ್ಲಿ ಮಂಚ್ ಮಂಜಾ ಎಂಬ ರೌಡಿ ಶೀಟರ್ ಮದ್ಯದ ಅಮಲಿನಲ್ಲಿ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿದ್ದಾನೆ
ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಕಾನ್ಸ್ಟೇಬಲ್‌ಗಳಾದ ನಂದೀಶ್ ಮತ್ತು ಅಶೋಕ್ ಅವರು ಗಲಾಟೆ ತಡೆಯಲು ಯತ್ನಿಸಿದ್ದಾರೆ. ಆದರೆ ಉದ್ಧಟತನ ಪ್ರದರ್ಶಿಸಿದ ರೌಡಿ ಮಂಜಾ, ಇಬ್ಬರು ಕಾನ್ಸ್ಟೇಬಲ್‌ಗಳ ಮೇಲೆಯೇ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾನೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಜೇನುನೊಣ ದಾಳಿಗಿಂತ ಭಯಾನಕ ಅವ್ಯವಸ್ಥೆ: ಮೊರಾರ್ಜಿ ವಸತಿ ಶಾಲೆ ವಿರುದ್ಧ ಗಂಭೀರ ಆರೋಪ
ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಅರಿತ ಕಾನ್ಸ್ಟೇಬಲ್‌ಗಳು ತಕ್ಷಣವೇ ಪಿಎಸ್‌ಐ ಬಸವರಾಜ ಮಬನೂರ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಬಸವರಾಜ್ ಅವರು ರೌಡಿಯ ಆರ್ಭಟವನ್ನು ಕಂಡು ವಾಹನದಿಂದ ಕೆಳಗಿಳಿಯದೇ ಅಲ್ಲಿಂದ ವಾಪಸ್ ತೆರಳುವ ಮೂಲಕ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಮಾರನೇ ದಿನ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಕೇವಲ ಬಾರ್‌ನಲ್ಲಿ ಗಲಾಟೆ ನಡೆದಿದೆ ಎಂಬ ಸಣ್ಣ ಪ್ರಕರಣವನ್ನು (ಪಿಟಿ ಕೇಸ್) ದಾಖಲಿಸಲಾಗಿದ್ದೇ ವಿನಃ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಕುರಿತು ಯಾವುದೇ ಉಲ್ಲೇಖ ಮಾಡಿರಲಿಲ್ಲ.
ರೌಡಿಯ ಧಾಂದಲೆ ಹಾಗೂ ಪೊಲೀಸರ ನಿಷ್ಕ್ರಿಯತೆಯ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಕ್ಷಣೆ ನೀಡಬೇಕಾದ ಪೊಲೀಸರೇ ರೌಡಿಗೆ ಹೆದರಿ ಓಡಿದರೆ ಸಾಮಾನ್ಯ ಜನರ ಗತಿಯೇನು ಎಂಬ ಪ್ರಶ್ನೆ ಎದ್ದಿತ್ತು. ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಇಲಾಖೆ, ರೌಡಿ ಮಂಜಾ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದೆ.
ಈ ಇಡೀ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದು, ಇಲಾಖಾ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.




