ಯುವಜನರ ಒಂದು ತಿಂಗಳ ನಿರಂತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಕಾಕ್ರೋಚ್‌ಗಳ ಎಲ್ಲ ಬೇಡಿಕೆಗಳ ಈಡೇರಿಕೆಗೆ ಮೋದಿ ಸರ್ಕಾರ ಒಪ್ಪಿಕೊಂಡಿದೆ. ಈ ಬೆನ್ನಲ್ಲೇ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರಿಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಧನ್ಯವಾದ ಅರ್ಪಿಸಿದ್ದಾರೆ.
“ನಾನು ಸಿಜೆಐ ಸೂರ್ಯ ಕಾಂತ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನಮ್ಮನ್ನು ‘ಕಾಕ್ರೋಚ್’ ಎಂದು ಕರೆಯದಿದ್ದರೆ, ನಾನು ಭಾರತಕ್ಕೆ ಹಿಂತಿರುಗುತ್ತಿರಲಿಲ್ಲ. ಈ ಬೃಹತ್ ಆಂದೋಲನವು ಪ್ರಾರಂಭವಾಗುತ್ತಲೇ ಇರಲಿಲ್ಲ,” ಎಂದು ದೀಪ್ಕೆ ಹೇಳಿದ್ದಾರೆ.
ಮೇ 15 ರಂದು, ಪ್ರಕರಣವೊಂದರ ವಿಚಾರಣೆ ವೇಳೆ ವಕೀಲರ ವಿರುದ್ಧ ಗುಡುಗಿದ್ದ ಸಿಜೆಐ ಸೂರ್ಯಕಾಂತ್ ಅವರು, “ವ್ಯವಸ್ಥೆಯ ಮೇಲೆ ದಾಳಿ ಮಾಡುವ ಕ್ರಿಮಿಗಳು/ಪರಾವಲಂಬಿಗಳು ಸಮಾಜದಲ್ಲಿ ಈಗಾಗಲೇ ಇದ್ದಾರೆ, ನೀವು ಅವರೊಂದಿಗೆ ಕೈಜೋಡಿಸಲು ಬಯಸುತ್ತೀರಾ? ಯಾವುದೇ ಕೆಲಸವಿಲ್ಲದೆ, ವೃತ್ತಿಯಲ್ಲೂ ಜಾಗ ಸಿಗದ ‘ಕಾಕ್ರೋಚ್’ಗಳಂತಿರುವ ಯುವಜನರಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮಗಳಾಗುತ್ತಾರೆ, ಕೆಲವರು ಸೋಶಿಯಲ್ ಮೀಡಿಯಾ ಪ್ರಮುಖರಾಗುತ್ತಾರೆ, ಕೆಲವರು ಆರ್‌ಟಿಐ ಕಾರ್ಯಕರ್ತರಾಗುತ್ತಾರೆ, ಕೆಲವರು ಇನ್ಯಾವುದೋ ಆಂದೋಲನಕಾರರಾಗಿ ಎಲ್ಲರ ಮೇಲೆಯೂ ದಾಳಿ ಮಾಡಲು ಶುರು ಮಾಡುತ್ತಾರೆ… ಮತ್ತು ನೀವು ಅಂತವರ ಪರವಾಗಿ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸುತ್ತೀರಾ!” ಎಂದಿದ್ದರು.
ಅವರ ಈ ಹೇಳಿಕೆಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ತದನಂತರ ದೀಪ್ಕೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ‘ಸಿಜೆಪಿ’ ಯುವ ಸಂಘಟನೆಯನ್ನು ಹುಟ್ಟುಹಾಕಿದರು. ಕೆಲವೇ ದಿನಗಳಲ್ಲಿ ಇದು 22 ಮಿಲಿಯನ್‌ಗೂ ಹೆಚ್ಚು ಬೆಂಬಲಿಗರನ್ನು ಪಡೆದುಕೊಂಡಿತು. ಬಳಿಕ, ಜಂತರ್ ಮಂತರ್‌ಗೆ ಧಾವಿಸಿದ ಜೆನ್-ಜಿ ಯುವಜನರು ಒಂದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಪ್ರತಿಭಟನೆ ನಡೆಸಿ, ಸಚಿವ ಪ್ರಧಾನ್ ಅವರ ರಾಜೀನಾಮೆ ನೀಡುವಂತೆ ಮಾಡಿದರು.




