ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕೆಂದು ವಿಪಕ್ಷಗಳ ಒತ್ತಾಯಿಸಿವೆ. ಈ ದಿಸೆಯಲ್ಲಿ, ಗ್ಯಾನೇಶ್ ವಿರುದ್ಧ ಹೊಸದಾಗಿ ಮಹಾಭಿಯೋಗ (Impeachment) ಪ್ರಸ್ತಾವನೆ ಮಂಡಿಸಲು ‘ಇಂಡಿಯಾ’ ಮೈತ್ರಿಕೂಟ ಸಿದ್ಧತೆ ನಡೆಸುತ್ತಿದೆ.
ಚುನಾವಣಾ ಆಯೋಗವನ್ನು ಗ್ಯಾನೇಶ್ ಕುಮಾರ್ ಸರ್ವಾಧಿಕಾರಿಯಂತೆ ಏಕಪಕ್ಷೀಯವಾಗಿ ನಡೆಸುತ್ತಿದ್ದಾರೆ. ಸಹೋದ್ಯೋಗಿ ಆಯುಕ್ತರ ಸಲಹೆ/ಆಕ್ಷೇಪಣೆಗಳಿಗೆ ಮನ್ನಣೆ ಕೊಡದೆ ನಿರ್ಧಾರಗಳನ್ನು ಕೈಗೊಂಡು, ಜನರ ಮೇಲೆ ಹೇರುತ್ತಿದ್ದಾರೆ. ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ವಿಚಾರದಲ್ಲಿಯೂ ಗ್ಯಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಇಡೀ ದೇಶದ ಮತಪಟ್ಟಿಯನ್ನು ದೆಹಲಿಯ ಐಟಿ ಸೆಲ್‌ನಿಂದ ನಿಯಂತ್ರಿಸುತ್ತಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ತನಿಖಾ ವರದಿ ಬಹಿರಂಗಪಡಿಸಿದೆ. ಈ ಬೆನ್ನಲ್ಲೇ, ಗ್ಯಾನೇಶ್ ಕುಮಾರ್ ಅವರನ್ನು ಆಯುಕ್ತ ಹುದ್ದೆಯಿಂದ ವಜಾಗೊಳಿಸಿ, ಬಂಧಿಸಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ.
ಇದೀಗ, ವಿಪಕ್ಷಗಳನ್ನು ಒಗ್ಗೂಡಿಸಿ, ಸಂಸತ್ತಿನಲ್ಲಿ ‘ಮಹಾಭಿಯೋಗ’ ಪ್ರಸ್ತಾವನೆ ಸಲ್ಲಿಸಲು ಕಾಂಗ್ರೆಸ್ ಸಿದ್ದತೆ ನಡೆಸುತ್ತಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪನೆ ಸಲ್ಲಿಕೆಗೆ ಅಗತ್ಯವಿರುವ ನೋಟಿಸ್‌ನ ಕರಡು ಪ್ರತಿಯನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ. ಮೂಲಗಳ ಪ್ರಕಾರ, ಮುಂದಿನ ವಾರದಲ್ಲೇ ಈ ಮಹಾಭಿಯೋಗ ನೋಟಿಸ್ ಅನ್ನು ಸಂಸತ್ತಿನಲ್ಲಿ ಸಲ್ಲಿಸುವ ಸಾಧ್ಯತೆಯಿದೆ.
ಆದಾಗ್ಯೂ, ಗ್ಯಾನೇಶ್ ಕುಮಾರ್ ವಿರುದ್ಧದ ಆರೋಪಗಳನ್ನು ಚುನಾವಣಾ ಆಯೋಗವು ನಿರಾಕರಿಸಿದೆ. ಆಯೋಗದ ಒಳಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕಳೆದೊಂದು ವರ್ಷದಲ್ಲಿ ಕೈಗೊಂಡ ‘SIR’ ಸೇರಿದಂತೆ ಎಲ್ಲ ನಿರ್ಧಾರಗಳನ್ನು ಮೂವರೂ ಆಯುಕ್ತರು ಒಮ್ಮತದಿಂದಲೇ ತೆಗೆದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದೆ.
ಈ ಲೇಖನ ಓದಿದ್ದೀರಾ?: SIR ಅಕ್ರಮ | ಗ್ಯಾನೇಶ್ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?
ಅಂದಹಾಗೆ, ಗ್ಯಾನೇಶ್ ಕುಮಾರ್ ಅವರ ವಿರುದ್ಧ ವಿಪಕ್ಷಗಳು ಈ ಹಿಂದೆಯೂ ‘ಮಹಾಭಿಯೋಗ’ ಪ್ರಸ್ತಾವನೆ ಇಟ್ಟಿದ್ದರು. ಗ್ಯಾನೇಶ್ ಅವರು ‘ಅಸಿಸ್ತಿನಿಂದ ವರ್ತಿಸುತ್ತಿದ್ದಾರೆ. ಒಂದು ಪಕ್ಷದ ಪರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿಹೊರಿಸಿ, ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಏಪ್ರಿಲ್ 24ರಂದು ರಾಜ್ಯಸಭೆಯ 73 ವಿಪಕ್ಷ ಸಂಸದರು ಮಹಾಭಿಯೋಗ ಪ್ರಸ್ತಾಪ ಸಲ್ಲಿಸಿದ್ದರು. ಆದರೆ, ಆ ಪ್ರಸ್ತಾಪನೆ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ.
ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆಯು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ವಜಾಗೊಳಿಸುವ ಸಂವಿಧಾನಾತ್ಮಕ ನಿಯಮಕ್ಕೇ ಸಮಾನವಾಗಿರುತ್ತದೆ. ಈ ಪ್ರಸ್ತಾವನೆಗೆ ಸಂಸತ್ತಿನಲ್ಲಿ ಮನ್ನಣೆ ಸಿಗಬೇಕಾದರೆ ಲೋಕಸಭೆಯಲ್ಲಿ ಕನಿಷ್ಠ 100 ಅಥವಾ ರಾಜ್ಯಸಭೆಯಲ್ಲಿ ಕನಿಷ್ಠ 50 ಸಂಸದರ ಬೆಂಬಲ ಬೇಕಾಗುತ್ತದೆ. ಅದಾದ ನಂತರ, ಸಂಸತ್ತಿನ ಸಭಾಪತಿಗಳು ನೋಟಿಸ್ ಅನ್ನು ಅಂಗೀಕರಿಸಿದರೆ, ಆರೋಪಗಳ ಪರಿಶೀಲನೆಗೆ ತನಿಖಾ ಸಮಿತಿ ರಚಸಿ, ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು (2/3) ವಿಶೇಷ ಬಹುಮತದೊಂದಿಗೆ ಪ್ರಸ್ತಾಪ ಅಂಗೀಕಾರವಾಗಬೇಕಾಗುತ್ತದೆ.



