2020ರ ಈಶಾನ್ಯ ದೆಹಲಿ ಗಲಭೆ ಆರೋಪದಲ್ಲಿ ಯುಎಪಿಎ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಯುವ ಹೋರಾಟಗಾರ ಉಮರ್ ಖಾಲಿದ್‌ಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ. ಖಾಲಿದ್ ಕಳೆದ ಐದು ವರ್ಷದಿಂದ ಅತ್ತ ವಿಚಾರಣೆಯೂ ಇಲ್ಲದೆ ಜಾಮೀನೂ ಇಲ್ಲದೆ ಜೈಲಿನಲ್ಲಿದ್ದಾರೆ.
ತಮ್ಮ ದಿವಂಗತ ಚಿಕ್ಕಪ್ಪನ ನಂತರ ಚೆಹ್ಲಮ್ ಆಚರಣೆಯಲ್ಲಿ ಭಾಗವಹಿಸಲು ಮತ್ತು ಜೂನ್ 02ರಂದು ನಿಗದಿಯಾಗಿದ್ದ ತನ್ನ ತಾಯಿಯ ಪೂರ್ವ ಮತ್ತು ನಂತರದ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಹಾಜರಾಗಲು 15 ದಿನಗಳ ಮಧ್ಯಂತರ ಜಾಮೀನು ಕೋರಿ ಖಾಲಿದ್ ಸಲ್ಲಿಸಿದ್ದ ಅರ್ಜಿಯನ್ನು ಕರ್ಕಾರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್‌ಪೈ ವಜಾಗೊಳಿಸಿದ್ದಾರೆ.
ಇದನ್ನು ಓದಿದ್ದೀರಾ? BREAKING NEWS | ಜಾಮೀನು ನಿರಾಕರಣೆ ಪ್ರಶ್ನಿಸಿ ಉಮರ್ ಖಾಲಿದ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ
ಉಮರ್ ಖಾಲಿದ್ ಮತ್ತು ಇತರ ಆರೋಪಿಗಳಿಗೆ ಈ ಹಿಂದೆ ಮಧ್ಯಂತರ ಜಾಮೀನು ನೀಡಲಾಗಿದೆ. ಎಂದಿಗೂ ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂಬ ಕಾರಣಕ್ಕಾಗಿ, ಆರೋಪಿಗಳು ಜಾಮೀನು ಕೋರಿದಾಗಲೆಲ್ಲಾ ಅದೇ ರೀತಿ ನೀಡಲಾಗದು. ಚಿಕ್ಕಪ್ಪನ ಚೆಹ್ಲಮ್ ಸಮಾರಂಭಕ್ಕೆ ಹಾಜರಾಗುವುದು ಅಷ್ಟು ಅಗತ್ಯವಿಲ್ಲ. ಅಷ್ಟೊಂದು ಗಾಢವಾದ ಸಂಬಂಧವಾಗಿದ್ದರೆ ಚಿಕ್ಕಪ್ಪ ಸಾವನ್ನಪ್ಪಿದಾಗಲೇ ಜಾಮೀನು ಕೋರಬೇಕಾಗಿತ್ತು ಎಂದು ಕೋರ್ಟ್ ಹೇಳಿದೆ.
ಇನ್ನು ಖಾಲಿದ್‌ಗೆ ತಾಯಿಯನ್ನು ನೋಡಿಕೊಳ್ಳಬಹುದಾದ ಇತರ ಸಹೋದರಿಯರಿದ್ದಾರೆ ಮತ್ತು ತಂದೆ ಕೂಡ ಇದ್ದಾರೆ. ಹಾಗಾಗಿ ಖಾಲಿದ್ ಹೋಗುವ ಅಗತ್ಯವಿಲ್ಲ. ಇದಲ್ಲದೆ, ಪ್ರಾಸಿಕ್ಯೂಷನ್ ಹೇಳಿದಂತೆ, ಶಸ್ತ್ರಚಿಕಿತ್ಸೆ ತುಂಬಾ ಸರಳವಾಗಿದೆ, ಅಂದರೆ ಗಡ್ಡೆಗಳನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಯಷ್ಟೆ. ಅರ್ಜಿದಾರರು ಅಲ್ಲಿ ಇರಲೇಬೇಕಾದ ಅಗತ್ಯವಿಲ್ಲ. ಈ ಅಸಮಂಜಸ ಕಾರಣಗಳಿಗೆ ಜಾಮೀನು ನೀಡಲ್ಲ ಎಂದು ಕೋರ್ಟ್ ತಿಳಿಸಿದೆ.
ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಆರೈಕೆಗಾಗಿ ಮಗ/ಮಗಳು ಇರಬೇಕಾದ ಅಗತ್ಯವನ್ನು ಕಡೆಗಣಿಸಿ, ಕುಟುಂಬದ ಇತರ ಸದಸ್ಯರು ನೋಡಿಕೊಳ್ಳಬಹುದು ಎಂದು ನ್ಯಾಯಾಲಯ ನೀಡಿರುವ ತಾರ್ಕಿಕತೆಯು ಅಮಾನವೀಯವಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. ದುಃಖದ ಸಂದರ್ಭದಲ್ಲಿ ಮತ್ತು ತಾಯಿಯ ಶಸ್ತ್ರಚಿಕಿತ್ಸೆಯಂತಹ ಕ್ಲಿಷ್ಟಕರ ಸಮಯದಲ್ಲಿ ಮಗನೊಬ್ಬ ತನ್ನ ಕುಟುಂಬದ ಜೊತೆ ಇರಬೇಕಾದ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಹಲವು ಮಾನವ ಹಕ್ಕು ಹೋರಾಟಗಾರರು ಖಂಡಿಸಿದ್ದಾರೆ.




