ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು 30ಕ್ಕೂ ಹೆಚ್ಚು ಬುಡಕಟ್ಟು ಮಕ್ಕಳು ಮೃತಪಟ್ಟಿದ್ದಾರೆ. ಅಲ್ಲದೆ, ಸಾಗರ್ ಜಿಲ್ಲೆಯ ಕಳ್ಳಭಟ್ಟಿ ದುರಂತದಲ್ಲಿ ಸುಮಾರು 13ಕ್ಕೂ ಮಂದು ಸಾವನ್ನಪ್ಪಿದ್ದಾರೆ. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ವಿರುದ್ಧ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ವಾಗ್ದಾಳಿ ನಡೆಸಿದ್ದಾರೆ. ‘ನಾನು ಮುಖ್ಯಮಂತ್ರಿ ಹುದ್ದೆಗ ರಾಜೀನಾಮೆ’ ನೀಡುತ್ತಿದ್ದಾರೆ ಎಂದು ವ್ಯಂಗ್ಯದ ಪೋಸ್ಟ್ ಹಂಚಿಕೊಂಡಿದ್ದಾರೆ.
ಎರಡೂ ದುರಂತಗಳಿಗೆ ಯಾವುದೇ ಹೊಣೆಗಾರಿಕೆ ಸರ್ಕಾರದಿಂದ ಬಾರದ ಹಿನ್ನೆಲೆಯಲ್ಲಿ ತಮ್ಮನ್ನೇ ಮಧ್ಯಪ್ರದೇಶದ ಮುಖ್ಯಮಂತ್ರಿ ಎಂದು ಕರೆದುಕೊಂಡಿರುವ ದೀಪ್ಕೆ, “ನಾನು ಸಿಎಂ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ” ಎಂದಿದ್ದಾರೆ. ‘ಎಕ್ಸ್’ನಲ್ಲಿ ನಕಲಿ ‘ರಾಜೀನಾಮೆ ಪತ್ರ’ ಒಂದನ್ನು ಹಂಚಿಕೊಳ್ಳುವ ಮೂಲಕ ಸರ್ಕಾರದ ವೈಫಲ್ಯಗಳನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ನಕಲಿ ರಾಜೀನಾಮೆ ಪತ್ರವನ್ನು ಪೋಸ್ಟ್ ಮಾಡಿರುವ ದೀಪ್ಕೆ, “ಮಧ್ಯಪ್ರದೇಶದ ಜನತೆಗೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಆದರೆ, ನಾನು ಈ ಸೇವೆಯಲ್ಲಿ ಸಂಪೂರ್ಣವಾಗಿ ವಿಫಲನಾಗಿದ್ದೇನೆ. ಬಾಲಾಘಾಟ್‌ನಲ್ಲಿ 30ಕ್ಕೂ ಹೆಚ್ಚು ಬುಡಕಟ್ಟು ಮಕ್ಕಳು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಸಚಿವರ ಅಥವಾ ಶಾಸಕರ ಮಕ್ಕಳು ಮೃತಪಟ್ಟಿದ್ದರೆ 4 ಲಕ್ಷ ರೂ. ಪರಿಹಾರ ಸಾಕಿತ್ತೇ? ‘ಹರ್ ಘರ್ ನಳ್’ ಯೋಜನೆ ಘೋಷಣೆಯಾಗಿದ್ದರೂ ಇಂದಿಗೂ ಬುಡಕಟ್ಟು ಜನರು ಕಲುಷಿತ ನದಿ ನೀರು ಕುಡಿಯುತ್ತಿದ್ದಾರೆ. 21 ವರ್ಷಗಳ ಬಿಜೆಪಿ ಆಡಳಿತದಲ್ಲಿ ರಾಜ್ಯದ 8.60% ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ನಾನು ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಬರೆದಿದ್ದಾರೆ. ಮಧ್ಯಪ್ರದೇಶ ಸರ್ಕಾರದ ಆಡಳಿತ ಯಂತ್ರದ ವಿರುದ್ಧ ವ್ಯಂಗ್ಯದ ಸರಣಿ ಆರೋಪಗಳನ್ನು ಮಾಡಿದ್ದಾರೆ.
I hereby resign as the Chief Minister of MP with immediate effect.
— Abhijeet Dipke (@abhijeet_dipke) September 13, 2026
I thank Hon’ble PM @narendramodi ji for giving me the opportunity to serve the people of MP, an opportunity in which I have clearly failed.@GovernorMP pic.twitter.com/BVhfJDIf5n
ಶನಿವಾರ ಬಾಲಾಘಾಟ್‌ನ ಅಡೋರಿ, ಕೊರ್ಕಾ ಹಾಗೂ ಬೋಂದಾರಿ ಗ್ರಾಮಗಳಿಗೆ ಭೇಟಿ ನೀಡಿದ್ದ ದೀಪ್ಕೆ, ಮೃತ ಮಕ್ಕಳ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು.
ಆ ಸಂದರ್ಭದಲ್ಲಿ ಹೊರಗಿನಿಂದ ಬಂದಿದ್ದ ಕೆಲವು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ಗುಂಪು ದೀಪ್ಕೆ ಅವರ ಕಾರನ್ನು ತಡೆದು, “ಹೆಣಗಳ ಮೇಲೆ ರಾಜಕೀಯ ಮಾಡಲು ಬಂದಿದ್ದೀರಾ” ಎಂದು ಪ್ರಶ್ನಿಸಿ ಗದ್ದಲ ಎಬ್ಬಿಸಿತ್ತು.. ಸಿಜೆಪಿ ಸಂಸ್ಥಾಪಕರ ಭೇಟಿಯನ್ನು ಕಡ್ಡಾಯವಾಗಿ ತಡೆಯಲು ಆ ಇನ್‌ಫ್ಲುಯೆನ್ಸರ್‌ಗಳನ್ನು ಯಾರೋ ಯೋಜಿತವಾಗಿ ಕಳುಹಿಸಿದ್ದಾರೆ ಎಂದು ಸ್ಥಳೀಯ ಪತ್ರಕರ್ತರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಲಾಘಾಟ್‌ನ 50 ಹಾಸಿಗೆಗಳ ಆಸ್ಪತ್ರೆಯಲ್ಲಿ 400ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕಲುಷಿತ ನೀರು ಮತ್ತು ನೈರ್ಮಲ್ಯದ ಕೊರತೆಯಿಂದ ಮಕ್ಕಳು ಸಾಯುತ್ತಿದ್ದಾರೆ ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್, ಇತ್ತೀಚೆಗೆ ರಾಜ್ಯ ಆರೋಗ್ಯ ಇಲಾಖೆ ಮತ್ತು ಬಾಲಾಘಾಟ್ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ದುರಂತ ಘಟನೆಯ ಬಗ್ಗೆ ವಿವರಣೆ ಮತ್ತು ಸ್ಪಷ್ಟನೆ ಕೇಳಿದೆ.




