ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ(ಡಿಸಿಸಿ) ಬ್ಯಾಂಕ್ 2025-26ನೇ ಸಾಲಿನಲ್ಲಿ ದಾಖಲೆ ಪ್ರಮಾಣದ ಪ್ರಗತಿ ಸಾಧಿಸಿದ್ದು, ₹29.16 ಕೋಟಿ ಸಾರ್ವಕಾಲಿಕ ಗರಿಷ್ಠ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವಾನಂದ ಎಸ್ ಪಾಟೀಲ ತಿಳಿಸಿದರು.
ವಿಜಯಪುರ ನಗರದ ಕೆ ಸಿ ನಗರದಲ್ಲಿರುವ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಬ್ಯಾಂಕ್ ಈ ಸಾಲಿನಲ್ಲಿ ₹8,076 ಕೋಟಿ ವಹಿವಾಟು ನಡೆಸಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.13.82ರಷ್ಟು ವಹಿವಾಟು ಹೆಚ್ಚಳವಾಗಿದೆ” ಎಂದರು.
“ಜಿಲ್ಲೆಯ ಸುಮಾರು 2.55 ಲಕ್ಷ ರೈತರಿಗೆ ₹2,115 ಕೋಟಿ ಕೃಷಿ ಸಾಲ ವಿತರಿಸಲಾಗಿದೆ. 51 ಶಾಖೆಗಳ ಮೂಲಕ ₹4,402.36 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ಕಳೆದ ವರ್ಷಕ್ಕಿಂತ ₹588.20 ಕೋಟಿ ಹೆಚ್ಚಳವಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳ ₹5,599.89 ಕೋಟಿ ತಲುಪಿದೆ” ಎಂದು ವಿವರಿಸಿದರು.
“2025-26ನೇ ಸಾಲಿನಲ್ಲಿ ತೆರಿಗೆ ಪೂರ್ವ ₹40.15 ಕೋಟಿ ಲಾಭ ಗಳಿಸಿದ್ದು, ₹10.99 ಕೋಟಿ ತೆರಿಗೆ ಪಾವತಿಸಿದ ಬಳಿಕ ₹29.16 ಕೋಟಿ ನಿವ್ವಳ ಲಾಭ ಉಳಿದಿದೆ. ಬ್ಯಾಂಕ್ ಸತತವಾಗಿ ‘ಆ’ ವರ್ಗದ ಆಡಿಟ್ ಮಾನ್ಯತೆ ಉಳಿಸಿಕೊಂಡಿದ್ದು, CRAR ಶೇ.12.79ರಷ್ಟಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ ಯುವಜನರು ಒಂದಾಗಬೇಕು: ಬಸವರಾಜ ಪೂಜಾರ
“1919ರಲ್ಲಿ ಸ್ಥಾಪನೆಯಾದ ಬ್ಯಾಂಕ್ 107 ವರ್ಷಗಳ ಸೇವೆ ಪೂರ್ಣಗೊಳಿಸಿ 108ನೇ ವರ್ಷಕ್ಕೆ ಕಾಲಿಟ್ಟಿದೆ. ಜಿಲ್ಲೆಯ 739 ಸಹಕಾರ ಸಂಘಗಳು ಸದಸ್ಯತ್ವ ಹೊಂದಿದ್ದು, 51 ಶಾಖೆಗಳಲ್ಲಿ 508 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಜಿಟಲ್ ಬ್ಯಾಂಕಿಂಗ್, ಯುಪಿಐ, ಎಟಿಎಂ, ಕಿಸಾನ್ ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ಆಧುನಿಕ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ” ಎಂದು ಶಿವಾನಂದ ಪಾಟೀಲ ಹೇಳಿದರು.
ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಇದ್ದರು.





