ರಾಜಕಾರಣದಲ್ಲಿ ಆಡಳಿತ, ಯೋಜನೆಗಳು ಹಾಗೂ ಜನಸಂಪರ್ಕಗಳೇ ಪ್ರಮುಖವಾಗಿದ್ದರೂ, ರಾಜಕಾರಣಿಗಳಲ್ಲಿ ಮೂಢನಂಬಿಕೆ, ಅಪಶಕುನ ಹಾಗೂ ದುರದೃಷ್ಟವೆಂಬ ಮೌಢ್ಯ ಇನ್ನೂ ಗಾಢವಾಗಿ ಬೇರೂರಿವೆ. ಅಂತಹದೊಂದು ಮೌಢ್ಯದ ಕಳಂಕ ಹೊತ್ತ ದೆಹಲಿಯ ಮುಖ್ಯಮಂತ್ರಿ ನಿವಾಸವೊಂದು ನೆಲಕಚ್ಚುತ್ತಿದೆ. ಇತಿಹಾಸ ಪುಟ ಸೇರುತ್ತಿದೆ.
ದೆಹಲಿ ಸರ್ಕಾರವು ವಿಧಾನಸಭೆ ಸಮೀಪದ ಶಾಮ್‌ನಾಥ್ ಮಾರ್ಗ್‌ನಲ್ಲಿರುವ 33ನೇ ನಂಬರ್‌ನ ‘ಬ್ರಿಟಿಷ್ ಕಾಲದ ಬಂಗಲೆ’ಯನ್ನು ಕೆಡವಲು ನಿರ್ಧರಿಸಿದೆ. ಆ ಬಂಗಲೆಯನ್ನು ನೆಲಸಮ ಮಾಡಿ, ಹೊಸ ಕಚೇರಿ ಸಂಕೀರ್ಣ ನಿರ್ಮಿಸಲು ಯೋಜಿಸಿದೆ. ಈ ಬಂಗಲೆ ಒಂದು ಕಾಲದಲ್ಲಿ ದೆಹಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿತ್ತು. ಆದರೆ, ಅಲ್ಲಿ ವಾಸಿಸಿದ ಮುಖ್ಯಮಂತ್ರಿಗಳು ಅವಧಿ ಪೂರ್ಣಗೊಳಿಸದೆ ಅಧಿಕಾರ ಕಳೆದುಕೊಂಡಿದ್ದರು. ಅವರ ಅಧಿಕಾರ ಕಳೆದುಕೊಳ್ಳುವಿಕೆಯು ಬಂಗಲೆ ಮೇಲೆ ಕಳಂಕ ಹೊರಿಸಿದೆ. ‘ಅಪಶಕುನದ ಬಂಗಲೆ’, ‘ಜಿಂಕ್ಸ್ಡ್ ಹೌಸ್’ ಅಥವಾ ‘ಭೂತ ಬಂಗಲೆ’ ಎಂಬ ಅಪಖ್ಯಾತಿಗೆ ಗುರಿಯಾಗಿದೆ.
ಈ ಬಂಗಲೆಯನ್ನು 1920ರ ದಶಕದಲ್ಲಿ ಬ್ರಿಟಿಷರು ನಿರ್ಮಿಸಿದ್ದರು. ಎರಡು ಮಹಡಿಯ ವಿಶಾಲವಾದ ಬಂಗಲೆಯು ಸುಂದರವಾದ ಸುರುಳಿ ಮೆಟ್ಟಿಲುಗಳು, ಫೌಂಟೇನ್ ಹಾಗೂ ವಿಶಾಲ ಕೈತೋಟಗಳನ್ನೂ ಒಳಗೊಂಡಿದೆ. ಸ್ವಾತಂತ್ರ್ಯದ ನಂತರ ಇದನ್ನು ದೆಹಲಿ ಮುಖ್ಯಮಂತ್ರಿಗಳ ನಿವಾಸವಾಗಿ ಬಳಸಲಾಗುತ್ತಿತ್ತು.
1952ರಲ್ಲಿ ದೆಹಲಿಯ ಮೊದಲ ಮುಖ್ಯಮಂತ್ರಿ ಚೌಧರಿ ಬ್ರಹ್ಮ ಪ್ರಕಾಶ್ ಈ ಬಂಗಲೆಯನ್ನು ಬಳಸಿದ್ದರು. ಆದರೆ, ಅವರು 1955ರಲ್ಲಿ ಜಗ್ಗರಿ ಹಗರಣದ ಆರೋಪದಲ್ಲಿ ಅಧಿಕಾರ ಕಳೆದುಕೊಂಡರು. ಆಗ, ದೆಹಲಿ ವಿಧಾನಸಭೆಯನ್ನು ವಿಸರ್ಜಿಸಲಾಯಿತು.
ಆನಂತರದ ದಶಕಗಳ ಬಳಿಕ, 1993ರಲ್ಲಿ ಅಂದಿನ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರು ಈ ಬಂಗಲೆಯನ್ನು ತಮ್ಮ ನಿವಾಸವಾಗಿ ಬಳಸಿದರು. ಅವರೂ ಕೂಡ, 1996ರಲ್ಲಿ ಜೈನ್ ಹವಾಲಾ ಹಗರಣದ ಆರೋಪದಿಂದಾಗಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ, ಅದೇ ವರ್ಷ ಮುಖ್ಯಮಂತ್ರಿಯಾದ ಸಾಹಿಬ್ ಸಿಂಗ್ ವರ್ಮಾ ಅವರು ಇದೇ ಬಂಗಲೆಯನ್ನು ಬಳಸುತ್ತಿದ್ದರು. ಅವರು ಪಕ್ಷದ ಆಂತರಿಕ ಒತ್ತಡದಿಂದಾಗಿ ತಮ್ಮ ಹುದ್ದೆಗೆ 1998ರಲ್ಲಿ ರಾಜೀನಾಮೆ ನೀಡಿದರು.
ಆ ನಂತರದ ಯಾವೊಬ್ಬ ಮುಖ್ಯಮಂತ್ರಿಯೂ ಈ ಬಂಗಲೆಯನ್ನು ತಮ್ಮ ಅಧಿಕೃತ ನಿವಾಸವಾಗಿ ಬಳಸಲು ಧೈರ್ಯ ಮಾಡಲಿಲ್ಲ. ಆದಾಗ್ಯೂ, 2003ರಲ್ಲಿ ಉದ್ಯೋಗ ಸಚಿವ ದೀಪ್ ಚಂದ್ ಬಂಧು ಅವರು ಮೂಢನಂಬಿಕೆಯನ್ನು ತಿರಸ್ಕರಿಸಿ ಇಲ್ಲಿ ವಾಸಿಸಲಾರಂಭಿಸಿದ್ದರು. ದೀರ್ಘಕಾಲದ ಅನಾರೋಗ್ಯ ಎದುರಿಸುತ್ತಿದ್ದ ಬಂಧು ಅವರು ಅದೇ ವರ್ಷ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿನೊಂದಿಗೆ ಬಂಗಲೆಗೆ ‘ಭೂತ ಬಂಗಲೆ, ‘ಅಪಶಕುನದ ಬಂಗಲೆ’ ಎಂಬ ಕಳಂಕ ಅಂಟಿಕೊಂಡಿತು. ಮೂಢನಂಬಿಕೆ ಇನ್ನಷ್ಟು ಬಲಗೊಂಡಿತು.
ಈ ಬಂಗಲೆಯಲ್ಲಿ ವಾಸಿಸಿದ ಇಬ್ಬರು ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಆರೋಪ ಹೊತ್ತು ರಾಜೀನಾಮೆ ನೀಡಿದರೆ, ಮತ್ತೊಬ್ಬರು ಬಿಜೆಪಿಯ ಆಂತಕರಿಕ ಒತ್ತಡದಿಂದ ರಾಜೀನಾಮೆ ನೀಡಿದ್ದರು. ಸಚಿವ ಬಂಧು ಅವರು ತಾವು ಎದುರಿಸುತ್ತಿದ್ದ ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆದರು. ಹಾಗೆ ನೋಡಿದರೆ, ಅವರ ರಾಜೀನಾಮೆ/ಸಾವುಗಳಿಗೂ ಈ ಬಂಗಲೆಗೂ ಅಕ್ಷರಶಃ ಸಂಬಂಧವೇ ಇಲ್ಲ. ಆದರೆ, ರಾಜಕಾರಣಿಗಳನ್ನು ಮೌಢ್ಯವು ನಿಯಂತ್ರಿಸುತ್ತಿದೆ. ಬಂಗಲೆ ಮೇಲಿನ ಮೌಢ್ಯದಿಂದ ಬಂಗಲೆ ಪಾಳು ಬಿದ್ದಿದೆ.
ಇದೇ ರೀತಿ, ಕರ್ನಾಟಕದಲ್ಲಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ದೀರ್ಘಕಾಲದಿಂದಲೂ ಹಾಸುಹೊಕ್ಕಾಗಿತ್ತು. ರಾಮಕೃಷ್ಣ ಹೆಗಡೆ ಮತ್ತು ಎಸ್.ಆರ್. ಬೊಮ್ಮಾಯಿ ಅವರು ಈ ಜಿಲ್ಲೆಗೆ 1988-89ರಲ್ಲಿ ಭೇಟಿ ನೀಡಿದ ನಂತರ ಅಧಿಕಾರ ಕಳೆದುಕೊಂಡಿದ್ದರು ಎಂಬ ವಿಚಾರವೂ ಮೌಢ್ಯವಾಗಿ ಮಾರ್ಪಟ್ಟಿತ್ತು. ಇದರಿಂದಾಗಿ ಹಲವು ಮುಖ್ಯಮಂತ್ರಿಗಳು ಈ ಜಿಲ್ಲೆಗೆ ಭೇಟಿ ನೀಡುವುದನ್ನೇ ನಿಲ್ಲಿಸಿದ್ದರು. ಪರಿಣಾಮ, ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಸಹ ನಿರ್ಲಕ್ಷಕ್ಕೆ ಒಳಗಾದವು.
ಆದರೆ, ಈ ಮೌಢ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುರಿದರು. 2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಚಾಮರಾಜನಗರಕ್ಕೆ ಭೇಟಿ ನೀಡಿದರು. 2013ರಿಂದ 2018ರವರೆಗೆ ಸುಮಾರು 15-20 ಬಾರಿ ಚಾಮರಾಜನಗರಕ್ಕೆ ಅವರು ಭೇಟಿ ನೀಡಿದ್ದರು. ಆದರೂ, ಅವರು ತಮ್ಮ ಆಡಳಿತಾವಧಿಯ ಐದು ವರ್ಷಗಳನ್ನು ಪೂರ್ಣಗೊಳಿಸಿದರು. ಮಾತ್ರವಲ್ಲದೆ, ಈಗ ಮತ್ತೆ ಮುಖ್ಯಮಂತ್ರಿಯೂ ಆಗಿದ್ದಾರೆ. ಮಾತ್ರವಲ್ಲ, ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಿ, ‘ಚಾಮರಾಜನಗರ ನನಗೆ ಅದೃಷ್ಟ ತಂದಿದೆ. ಸಮಾಜದ ಪ್ರಗತಿಗೆ ಇಂತಹ ನಂಬಿಕೆಗಳು ಅಡ್ಡಿಯಾಗುತ್ತವೆ’ ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಮಮತಾ-ಅಭಿಷೇಕ್ ಜಂಟಿ ತಂತ್ರ – ಒಂಟಿ ಪ್ರಚಾರ; ಬಿಜೆಪಿ ಅತಂತ್ರ?
ಆದರೂ, ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ, 5 ವರ್ಷ ಅಧಿಕಾರ ನಡೆಸಿದ ನಂತರವೂ 2018ರ ಬಳಿಕ ಮೂವರು ಮುಖ್ಯಮಂತ್ರಿಗಳಾದರು. ಅವರಾರೂ ಚಾಮರಾಜನಗರಕ್ಕೆ ಭೇಟಿ ನೀಡುವ ಧೈರ್ಯ ಮಾಡಲಿಲ್ಲ. ಆದರೂ, ಅವರು ಐದು ವರ್ಷಗಳ ಆಡಳಿತ ಪೂರೈಸಲಿಲ್ಲ. 2018-23ರ ನಡುವಿನ ಐದೇ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾದರು.
ಆದ್ದರಿಂದ, ಅಧಿಕಾರ/ಆಡಳಿತಕ್ಕೂ ಮೌಢ್ಯಕ್ಕೂ ಅಕ್ಷರಶಃ ಸಂಬಂಧವಿಲ್ಲ. ರಾಜಕೀಯ ವೈಫಲ್ಯಗಳು, ಪಕ್ಷಾಂತರ, ಭ್ರಷ್ಟಾಚಾರ ಆರೋಪಗಳೇ ಅಧಿಕಾರ ಕಳೆದುಕೊಳ್ಳುವುದಕ್ಕೆ ಕಾರಣವೇ ಹೊರತು, ಯಾವುದೇ ಒಂದು ಮೌಢ್ಯವಲ್ಲ. ಆದರೆ, ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ರಾಜಕಾರಣಿಗಳು ಇಂತಹ ಮೌಢ್ಯವನ್ನು ಮುಂದಿಟ್ಟು ರಾಜಕಾರಣ ನಡೆಸುತ್ತಿದ್ದಾರೆ.
ರಾಜಕಾರಣಿಗಳು ಇಂತಹ ಮೂಢನಂಬಿಕೆಗಳನ್ನು ಪೋಷಿಸುವುದು ನಾಚಿಕೆಗೇಡು. ವೈಜ್ಞಾನಿಕ ದೃಷ್ಟಿಕೋನ, ತಾರ್ಕಿಕ ಚಿಂತನೆ ಮತ್ತು ಪ್ರಾಯೋಗಿಕ ನಿರ್ಧಾರಗಳೇ ರಾಜಕೀಯ ಮತ್ತು ಸಮಾಜದ ಪ್ರಗತಿಗೆ ಅಗತ್ಯ. ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕಿಂತ ಕಳಂಕವನ್ನು ತೊಳೆದರು. ಆದರೆ, ದೆಹಲಿ ಬಂಗಲೆಗಿರುವ ಕಳಂಕವನ್ನು ತೊಡೆದುಹಾಕಲು ಅಲ್ಲಿ ಸಿದ್ದರಾಮಯ್ಯ ಅವರಂತಹ ಮತ್ತೊಂದು ರಾಜಕಾರಣಿ ಇಲ್ಲ. ಇದೀಗ, ಬಿಜೆಪಿಯ ಮೌಢ್ಯಕ್ಕೆ ಆ ಶತಮಾನದ ಸರ್ಕಾರಿ ಬಂಗಲೆ ಬಲಿಯಾಗುತ್ತಿದೆ.



