ರಸ್ತೆ ಬದಿ ನಿಂತಿದ್ದ ಸ್ಲೀಪರ್ ಬಸ್ ಒಳಗೆ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದೆಹಲಿಯಲ್ಲಿ ಸೋಮವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಚಾಲಕ ಮತ್ತು ನಿರ್ವಾಹಕನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಪೀತಾಮ್‌ಪುರದ ಕೊಳೆಗೇರಿ ನಿವಾಸಿಯಾಗಿರುವ ಸಂತ್ರಸ್ತೆ, ಮಂಗೋಲ್ ಪುರಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೋಮವಾರ ರಾತ್ರಿ ದೆಹಲಿಯ ರಾಣಿ ಬಾಗ್ ಪ್ರದೇಶದಲ್ಲಿ ಬಸ್ಸಿನೊಳಗೆ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂತ್ರಸ್ತೆ ಮೇ 11ರ ರಾತ್ರಿ ಕೆಲಸ ಮುಗಿಸಿ ಎಂದಿನಂತೆ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಸರಸ್ವತಿ ವಿಹಾರ್‌ನ ಬಸ್ ನಿಲ್ದಾಣದಲ್ಲಿ ಸ್ಲೀಪರ್ ಬಸ್ಸೊಂದು ನಿಂತಿತ್ತು. ಸಮಯ ಕೇಳಲೆಂದು ಸಂತ್ರಸ್ತೆ ಬಸ್ಸಿನ ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಯನ್ನು ಸಮೀಪಿಸಿದಾಗ, ಆಕೆಯನ್ನು ಬಲವಂತವಾಗಿ ವಾಹನದೊಳಗೆ ಎಳೆದುಕೊಂಡಿದ್ದಾರೆ. ನಂತರ ಆರೋಪಿಗಳು ಬಸ್ಸನ್ನು ನಂಗ್ಲೋಯಿ ಕಡೆಗೆ ಚಲಾಯಿಸಿದ್ದು, ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ತಮಿಳುನಾಡು | ವಿಜಯ್ ಸರ್ಕಾರಕ್ಕೆ AIADMK ಬಂಡಾಯ ಬಣ ಬೆಂಬಲ; ಮೋದಿ-ಶಾ ಕುತಂತ್ರವೇ?
ಅಪರಾಧಕ್ಕೆ ಬಳಸಲಾದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ. ಎಲ್ಲ ಸಂಭಾವ್ಯ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.



