ಪೋಷಕರ ನಡುವಿನ ವಿಚ್ಛೇದನ, ಮಗುವಿನ ಪಾಲನೆ (Custody) ಮತ್ತು ಸಂದರ್ಶನ ಹಕ್ಕುಗಳ ವಿವಾದಗಳಲ್ಲಿ ಸಿಲುಕುವ ಮಕ್ಕಳಿಗೆ ಪದೇ ಪದೇ ಮಾನಸಿಕ ತಪಾಸಣೆ (Psychological Assessment) ನಡೆಸುವ ಅಗತ್ಯವಿಲ್ಲ. ಮಗುವಿನ ಜೀವನದಲ್ಲಿ “ಕನಿಷ್ಠ ಹಸ್ತಕ್ಷೇಪ” ಇರಬೇಕು ಎಂದು ಸುಪ್ರೀಂ ಕೋರ್ಟ್ ಇವತ್ತು ಮಹತ್ವದ ತೀರ್ಪು ನೀಡಿದೆ. ವಿಶೇಷವಾಗಿ ಮಗು ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯಾಗಿದ್ದಾಗ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ನ್ಯಾಯಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ತನ್ನ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎನ್ನಲಾದ ಅಪ್ರಾಪ್ತ ಮಗುವನ್ನು ಮನಶ್ಶಾಸ್ತ್ರಜ್ಞರ ಸಮಿತಿಯ ಮುಂದೆ ಹಾಜರುಪಡಿಸಿ ತಪಾಸಣೆ ನಡೆಸಬೇಕು ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಮಾರ್ಪಡಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
ನಾವು ಲೈಂಗಿಕ ದೌರ್ಜನ್ಯದ ಆರೋಪಗಳ ಸತ್ಯಾಸತ್ಯತೆಯ ಕುರಿತು ತೀರ್ಪು ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಪೀಠವು, ಪೋಕ್ಸೋ ಕಾಯ್ದೆಯ ಮೂಲ ಉದ್ದೇಶಗಳನ್ನು ನೆನಪಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಗುವನ್ನು ಮತ್ತೆ ಮತ್ತೆ ತನಿಖೆ ಅಥವಾ ತಪಾಸಣೆಯ ಪ್ರಕ್ರಿಯೆಗಳಿಗೆ ಒಳಪಡಿಸಿ, ಅದಕ್ಕೆ ಮತ್ತಷ್ಟು ಮಾನಸಿಕ ಹಿಂಸೆ ನೀಡುವುದು ಅಥವಾ ‘ದ್ವಿತೀಯ ಹಂತದ ಸಂತ್ರಸ್ತೆಯನ್ನಾಗಿ’ ಮಾಡುವುದು ಕಾನೂನಿನ ಆಶಯಕ್ಕೆ ವಿರುದ್ಧವಾಗಿದೆ ಎಂದು ಕೋರ್ಟ್ ಹೇಳಿದೆ.
“ನ್ಯಾಯಾಲಯಗಳು ಮಗುವಿನ ರಕ್ಷಕನಾಗಿ (Parens Patriae) ಕೆಲಸ ಮಾಡಬೇಕು. ಮಗುವಿನ ತಪಾಸಣೆಗೆ ಆದೇಶಿಸುವಾಗ ಕೋರ್ಟ್‌ಗಳು ಹೆಚ್ಚು ಜಾಗರೂಕರಾಗಿರಬೇಕು. ಮಗುವಿನ ದೈನಂದಿನ ಜೀವನ ಮತ್ತು ಮಾನಸಿಕ ಸ್ಥಿತಿಗೆ ಧಕ್ಕೆಯಾಗದಂತೆ ಕನಿಷ್ಠ ಹಸ್ತಕ್ಷೇಪ ಮಾಡುವುದೇ ಇನ್ಮುಂದೆ ನಿಯಮವಾಗಬೇಕು” ಎಂದು ಕೋರ್ಟ್ ತಿಳಿಸಿದೆ.
‘ನಿಮ್ಹಾನ್ಸ್’ (NIMHANS) ಸಂಸ್ಥೆಯ ಮನೋವೈದ್ಯಕೀಯ ವಿಭಾಗ ನೀಡಿದ ವರದಿಯನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಕೇವಲ ಮಗುವಿನ ದೃಷ್ಟಿಕೋನದಿಂದ ಮಾತ್ರವಲ್ಲದೆ ಸಮಗ್ರವಾಗಿ ಪೋಷಕರ ನಡವಳಿಕೆ ಮತ್ತು ಮಾನಸಿಕ ಸ್ಥಿತಿಯನ್ನು ಪರಿಶೀಲಿಸುವುದು ಮುಖ್ಯ ಎಂದಿದೆ.
ಫ್ಯಾಮಿಲಿ ಕೋರ್ಟ್ ಮೊದಲು ಒಬ್ಬ ಮನಶ್ಶಾಸ್ತ್ರಜ್ಞರನ್ನು ನೇಮಿಸಿ, ಇಬ್ಬರೂ ಪೋಷಕರ (ವಿಶೇಷವಾಗಿ ಮಗು ಯಾರ ವಶದಲ್ಲಿದೆಯೋ ಅವರ) ಮಾನಸಿಕ ಸ್ಥಿತಿಯನ್ನು ತಪಾಸಣೆ ಮಾಡಬೇಕು. ಕೋರ್ಟ್ ನೇಮಿಸಿದ ಮನಶ್ಶಾಸ್ತ್ರಜ್ಞರು, ಪ್ರಸ್ತುತ ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಚರ್ಚಿಸಿ ಫ್ಯಾಮಿಲಿ ಕೋರ್ಟ್‌ಗೆ ವರದಿ ನೀಡಬೇಕು. ಈ ವರದಿಯನ್ನು ನೋಡಿದ ನಂತರ ಮಗುವಿನ ನೇರ ತಪಾಸಣೆ ಅಗತ್ಯವಿದೆಯೇ ಇಲ್ಲವೇ ಎಂಬುದನ್ನು ಫ್ಯಾಮಿಲಿ ಕೋರ್ಟ್ ನಿರ್ಧರಿಸಬೇಕು. ಅಗತ್ಯವಿಲ್ಲದಿದ್ದರೆ ಮಗುವನ್ನು ಯಾವುದೇ ತಪಾಸಣೆಗೆ ಒಳಪಡಿಸಬಾರದು. ಒಂದು ವೇಳೆ ಅನಿವಾರ್ಯವೆನಿಸಿದರೆ, ಸ್ವತಂತ್ರ ಬಾಲ ಮನಶ್ಶಾಸ್ತ್ರಜ್ಞರು (Child Psychologist) ಮಗುವಿಗೆ ಯಾವುದೇ ತೊಂದರೆಯಾಗದಂತೆ ಅತ್ಯಂತ ಕಡಿಮೆ ಸಮಯದಲ್ಲಿ ತಪಾಸಣೆ ಮುಗಿಸಬೇಕು ಎಂದು ಬಾಂಬೆ ಹೈಕೋರ್ಟ್ ಆದೇಶವನ್ನು ಮಾರ್ಪಡಿಸಿ, ಫ್ಯಾಮಿಲಿ ಕೋರ್ಟ್‌ಗಳಿಗೆ ಸುಪ್ರೀಂ ನಿರ್ದೇಶಿಸಿದೆ.
ಇದನ್ನೂ ಓದಿ: ಕಾಡುಕೂಸುಗಳ ಅಸ್ಮಿತೆಯ ಸಂಕೇತ ‘ಧರ್ತಿ ಆಬಾ’ ಬಿರ್ಸಾ ಮುಂಡಾ…
ಮಗು ಪ್ರಸ್ತುತ ತಾಯಿಯ ಸುರಕ್ಷಿತ ಕಸ್ಟಡಿಯಲ್ಲಿದೆ ಎಂದು ಒಪ್ಪಿಕೊಂಡ ನ್ಯಾಯಪೀಠವು, ತಂದೆಯ ವಿರುದ್ಧ ಮಗುವಿನ ಮನಸ್ಸಿನಲ್ಲಿ ದ್ವೇಷ ತುಂಬುವ ‘ಪೇರೆಂಟಲ್ ಅಲಿಯನೇಷನ್ ಸಿಂಡ್ರೋಮ್’ (Parental Alienation Syndrome) ಅಥವಾ ತಂದೆಯ ವಿರುದ್ಧ ಸುಳ್ಳು ನೆನಪುಗಳನ್ನು ಸೃಷ್ಟಿಸುವ ಪ್ರಯತ್ನಗಳಿಗೆ ಮಗು ಬಲಿಯಾಗದಂತೆ ಕೋರ್ಟ್ ಎಚ್ಚರಿಕೆ ವಹಿಸಬೇಕು ಎಂದಿದೆ. ಮಗುವನ್ನು ನೇರವಾಗಿ ಪ್ರಶ್ನಿಸದೆ, ಅದಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದಲೇ ಈ ಮಾಹಿತಿಯನ್ನು ಪಡೆಯಬಹುದು ಎಂದು ಕೋರ್ಟ್ ಸಲಹೆ ನೀಡಿದೆ.
ಮಕ್ಕಳ ಭಾವನಾತ್ಮಕ ಸ್ಪಂದನೆಗಳು ಮತ್ತು ಅಗತ್ಯಗಳು ಮಗುವಿನಿಂದ ಮಗುವಿಗೆ ಬದಲಾಗುತ್ತವೆ. ಹಾಗಾಗಿ ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಯಾವುದೇ ಕಠಿಣ ಅಥವಾ ಏಕರೂಪದ ನಿಯಮಗಳನ್ನು ಹೇರಲು ಸಾಧ್ಯವಿಲ್ಲ. ಪ್ರಕರಣವನ್ನು ಹೊಸದಾಗಿ ಪರಿಶೀಲಿಸುವಂತೆ ಫ್ಯಾಮಿಲಿ ಕೋರ್ಟ್‌ಗೆ ಮರಳಿಸಿದೆ. ತಂದೆಯ ವಿರುದ್ಧದ ಪೋಕ್ಸೋ ಪ್ರಕರಣದ ಸ್ಥಿತಿಗತಿಯನ್ನು ಕೋರ್ಟ್‌ಗೆ ಅಪ್‌ಡೇಟ್ ಮಾಡುತ್ತಿರಬೇಕು ಎಂದು ಪೋಷಕರಿಗೆ ಕೋರ್ಟ್ ಸೂಚಿಸಿದೆ.





