ಇಪ್ಪತ್ತೈದರ ಹರೆಯದಲ್ಲೇ ಇಡೀ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನ ನಡುಗಿಸಿದ ಬಿರ್ಸಾ ಮುಂಡಾ ಅವರ ಹೋರಾಟ ಮತ್ತು ಬಲಿದಾನ ವ್ಯರ್ಥವಾಗಲಿಲ್ಲ. ಅವರ ತೀವ್ರ ಪ್ರತಿರೋಧಕ್ಕೆ ಹೆದರಿದ ಬ್ರಿಟಿಷ್ ಸರ್ಕಾರ, ಆದಿವಾಸಿಗಳ ಆಕ್ರೋಶ ತಣಿಸಲು 1908ರಲ್ಲಿ ‘ಛೋಟಾನಾಗ್ಪುರ ಗೇಣಿದಾರಿ ಕಾಯ್ದೆ’ (CNTA) ತಂದು ಮೂಲನಿವಾಸಿಗಳ ಭೂಮಿಯನ್ನು ರಕ್ಷಿಸಬೇಕಾಯಿತು. ಆದರೆ, ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ದೇಶದ ವಿವಿಧ ಭಾಗಗಳಲ್ಲಿ ಇಂದಿಗೂ ಬುಡಕಟ್ಟು ಸಮುದಾಯಗಳು ಅದೇ ಜಲ-ಜಮೀನು ಹಾಗೂ ಅಸ್ಮಿತೆಯ ಬಿಕ್ಕಟ್ಟನ್ನು ಎದುರಿಸುತ್ತಿರುವುದು ವಿಷಾದನೀಯ.
ಭಾರತದಲ್ಲಿದ್ದ ಬ್ರಿಟಿಷ್ ಸಾಮ್ರಾಜ್ಯಶಾಹಿ ಹಾಗೂ ಸ್ಥಳೀಯ ಜಮೀನ್ದಾರಿ ಶೋಷಣೆಯ ವಿರುದ್ಧ ಸಿಡಿದೆದ್ದು, ಆದಿವಾಸಿಗಳ ಹಕ್ಕುಗಳು ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಹಿಡಿದೆತ್ತಿ ನಿಲ್ಲಿಸಿದ ಅದ್ವಿತೀಯ ನಾಯಕ ಬಿರ್ಸಾ ಮುಂಡ. ಕೇವಲ 25 ವರ್ಷಗಳ ಅಲ್ಪಾವಧಿಯ ಜೀವನದಲ್ಲೇ ಇಡೀ ಆದಿವಾಸಿ ಸಮುದಾಯದಲ್ಲಿ ಕ್ರಾಂತಿಯ ಕಿಚ್ಚು ಹೊತ್ತಿಸಿ, ದೇವರೆಂದೇ (‘ಧರತಿ ಆಬಾ’ – ಭೂಮಿಯ ತಂದೆ) ಪೂಜಿಸಲ್ಪಟ್ಟ ಈ ಮಹಾನ್ ಚೇತನವನ್ನು ಹಕ್ಕುಗಳಿಗಾಗಿ ಹೋರಾಡುವ ಪ್ರತಿಯೊಬ್ಬರೂ ನೆನೆಯಬೇಕಿದೆ.
1875ರ ನವೆಂಬರ್ 15ರಂದು ಇಂದಿನ ಜಾರ್ಖಂಡ್ನ ಉಲಿಹಾತು ಗ್ರಾಮದಲ್ಲಿ ʼಮುಂಡಾʼ ಎನ್ನುವ ಬುಡಕಟ್ಟು ಸಮುದಾಯದವೊಂದರಲ್ಲಿ ಜನಿಸಿದರು ಬಿರ್ಸಾ. ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನ. ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ವಲಸೆ ಹೋಗಿ, ಕೂಲಿ-ನಾಲಿ ಮಾಡಿ ಬದುಕುವ ಪರಿಸ್ಥಿತಿ. ಅಂತಹ ಪರಿಸ್ಥಿತಿಯಲ್ಲೇ ತಮ್ಮ ಸುತ್ತಮುತ್ತಲಿನ ಕಾಡು, ತಾಯ್ನೆಲದೊಂದಿಗಿನ ಗಾಢ ಒಡನಾಟ ಬೆಳೆಸಿಕೊಂಡಿದ್ದರು. ಬ್ರಿಟಿಷರ ಆಡಳಿತಾವಧಿಯಲ್ಲಿ ಜಾರಿಗೆ ಬಂದ ನಿಷ್ಕರುಣ ಅರಣ್ಯ ಕಾಯ್ದೆಗಳು, ಸಾಂಪ್ರದಾಯಿಕವಾಗಿ ಕಾಡನ್ನೇ ನಂಬಿ ಬದುಕುತ್ತಿದ್ದ ಆದಿವಾಸಿಗಳ ಬದುಕನ್ನು ಹೇಗೆ ಕಸಿದುಕೊಳ್ಳುತ್ತಿವೆ ಎಂಬುದನ್ನು ಬಿರ್ಸಾ ಹತ್ತಿರದಿಂದ ಕಂಡುಕೊಂಡರು.
ಬ್ರಿಟಿಷರ ಆಶ್ರಯದಲ್ಲಿದ್ದ ಮಿಷನರಿಗಳು ಆದಿವಾಸಿಗಳನ್ನು ಮತಾಂತರಗೊಳಿಸುತ್ತಿದ್ದುದನ್ನು ಮತ್ತು ಅವರ ಮೂಲ ಸಂಸ್ಕೃತಿಯನ್ನು ಹೀಗಳೆಯುತ್ತಿದ್ದುದನ್ನು ಕಂಡು ಬಿರ್ಸಾ ತೀವ್ರವಾಗಿ ನೊಂದುಕೊಂಡರು. ಜರ್ಮನ್ ಮಿಷನರಿ ಶಾಲೆಯಲ್ಲಿ ಕಲಿಯುತ್ತಿದ್ದ ಅವರು, ನಂತರದ ದಿನಗಳಲ್ಲಿ ತಮ್ಮದೇ ಆದಿವಾಸಿ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸಲು ಮುಂದಾದರು. ಇವರ ಪ್ರಭಾವಕ್ಕೆ ಒಳಗಾದ ಸಾವಿರಾರು ಆದಿವಾಸಿಗಳು ಬಿರ್ಸಾ ಅವರನ್ನು ತಮ್ಮ ರಕ್ಷಕ ಅಥವಾ ದೇವರೆಂದೇ ಭಾವಿಸಿದರು.


ಬಿರ್ಸಾ ಮುಂಡಾ ಅವರು ಕೇವಲ ಬ್ರಿಟಿಷರ ವಿರುದ್ಧ ಶಸ್ತ್ರ ಹಿಡಿದು ಹೋರಾಡಿದ ಯೋಧನಷ್ಟೇ ಅಲ್ಲ, ತಮ್ಮ ಸಮುದಾಯದ ಒಳಗಿದ್ದ ಪಿಡುಗುಗಳನ್ನು ನಿವಾರಿಸಲು ಶ್ರಮಿಸಿದ ಮಹಾನ್ ಸಮಾಜ ಸುಧಾರಕ ಹಾಗೂ ಅಧ್ಯಾತ್ಮಿಕ ನಾಯಕ. 1890ರ ದಶಕದ ವೇಳೆಗೆ ಆದಿವಾಸಿ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಮೂಢನಂಬಿಕೆಗಳು, ಅತಿಯಾದ ಮಾದಕ ವ್ಯಸನಗಳು ಮತ್ತು ಪಶುಬಲಿಯಂತಹ ಅನಿಷ್ಟ ಆಚರಣೆಗಳನ್ನು ಬಿರ್ಸಾ ತೀವ್ರವಾಗಿ ವಿರೋಧಿಸಿದರು. ಇಂತಹ ಸಾಮಾಜಿಕ ಪಿಡುಗುಗಳಿಂದ ತಮ್ಮ ಜನರನ್ನು ಮುಕ್ತಗೊಳಿಸಲು ಅವರು ಆದಿವಾಸಿಗಳಿಗಾಗಿ ‘ಬಿರ್ಸಾಯಿತ್’ ಎಂಬ ಹೊಸ ಧಾರ್ಮಿಕ ಆಲೋಚನಾ ಕ್ರಮವನ್ನು ಹುಟ್ಟುಹಾಕಿದರು. ಈ ಮೂಲಕ ಜನರಲ್ಲಿ ಏಕದೇವೋಪಾಸನೆ, ಉನ್ನತ ನೈತಿಕ ಮೌಲ್ಯಗಳು ಮತ್ತು ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಮಹತ್ವದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿದರು. ಇವರ ಈ ಪ್ರಭಾವಶಾಲಿ ಮಾತುಗಳು ಮತ್ತು ಕ್ರಾಂತಿಕಾರಿ ಸಮಾಜ ಸುಧಾರಣೆಯ ಕಾರ್ಯಗಳಿಂದ ಇಡೀ ಬುಡಕಟ್ಟು ಜನಾಂಗ ಪ್ರಭಾವಿತಗೊಂಡಿತು. ತಮ್ಮ ಬದುಕಿಗೆ ಹೊಸ ದಾರಿ ತೋರಿಸಿದ ಈ ಯುವ ನಾಯಕನನ್ನು ಜನ ಅತ್ಯಂತ ಪ್ರೀತಿ ಮತ್ತು ಗೌರವದಿಂದ ‘ಧರತಿ ಆಬಾ’ (ಭೂಮಿಯ ತಂದೆ) ಎಂದು ಕರೆಯಲಾರಂಭಿಸಿದರು ಹಾಗೂ ಅವರನ್ನು ಸಾಕ್ಷಾತ್ ದೇವರ ಅವತಾರವೆಂದೇ ಪೂಜಿಸಿ ಗೌರವಿಸತೊಡಗಿದರು.
‘ಉಲಗುಲಾನ್’ – ಬ್ರಿಟಿಷ್ ಸಾಮ್ರಾಜ್ಯವನ್ನೇ ನಡುಗಿಸಿದ ಮಹಾ ದಂಗೆ
ಬ್ರಿಟಿಷರು ತಂದ ಕಠಿಣ ಅರಣ್ಯ ಕಾನೂನುಗಳು ಮತ್ತು ಜಮೀನ್ದಾರರ ಕ್ರೂರ ಶೋಷಣೆ ಆದಿವಾಸಿಗಳನ್ನು ಅವರದೇ ಹೆತ್ತ ನೆಲದಲ್ಲಿ ಗುಲಾಮರನ್ನಾಗಿ ಮಾಡಿತು. ತಮ್ಮ ಬದುಕಿನ ಆಧಾರವಾಗಿದ್ದ ಅರಣ್ಯದ ಮೇಲಿನ ಹಕ್ಕನ್ನು ಕಸಿದುಕೊಂಡಾಗ ಸಿಡಿದೆದ್ದ ಆದಿವಾಸಿಗಳು, ಶೋಷಣೆಯ ವಿರುದ್ಧ ದನಿ ಎತ್ತಲು ಸಜ್ಜಾದರು. ಈ ಅನ್ಯಾಯವನ್ನು ತೀವ್ರವಾಗಿ ಪ್ರತಿಭಟಿಸಲು ನಾಯಕ ಬಿರ್ಸಾ ಮುಂಡಾ ನೇತೃತ್ವದಲ್ಲಿ 1899-1900 ರ ಅವಧಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೂಡಿದ ರಣಕಹಳೆಯೇ ‘ಉಲಗುಲಾನ್’ (ಮಹಾ ದಂಗೆ).
ಈ ಮಹಾ ಚಳವಳಿಯನ್ನು ಯಶಸ್ವಿಗೊಳಿಸಲು ಬಿರ್ಸಾ, ಮೊದಲು ತಮ್ಮ ಸಮುದಾಯದ ಒಗ್ಗಟ್ಟಿಗೆ ಆದ್ಯತೆ ನೀಡಿದರು. ಚದುರಿಹೋಗಿದ್ದ ಮುಂಡಾ, ಓರಾನ್ ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯಗಳನ್ನು ಒಂದೇ ಸೂರಿನಡಿ ಒಗ್ಗೂಡಿಸಿ, ಅವರಲ್ಲಿ ಹಕ್ಕಿನ ಜಾಗೃತಿ ಮೂಡಿಸಿದರು. ಈ ಒಗ್ಗಟ್ಟಿನ ಬಲದೊಂದಿಗೆ ಸ್ವಾವಲಂಬನೆಯ ಘೋಷಣೆ ಮೊಳಗಿಸಿದ ಬಿರ್ಸಾ, “ರಾಣಿ ವಿಕ್ಟೋರಿಯಾ ಆಡಳಿತ ಮುಗಿದಿದೆ, ನಮ್ಮದೇ ಆದ ಮುಂಡಾ ರಾಜ್ಯ ಸ್ಥಾಪನೆಯಾಗಿದೆ” ಎಂದು ಧೈರ್ಯವಾಗಿ ಸಾರಿದರು. ಅಲ್ಲದೆ, ಬ್ರಿಟಿಷ್ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ತೆರಿಗೆ ನೀಡಬಾರದು ಎಂದು ಜನರನ್ನು ಪ್ರೇರೇಪಿಸಿ, ಸತ್ಯಾಗ್ರಹದ ಕಿಚ್ಚು ಹೊತ್ತಿಸಿದರು.
ಬ್ರಿಟಿಷರ ಆಧುನಿಕ ಬಂದೂಕುಗಳು, ತೋಪುಗಳು, ಶಸ್ತ್ರಾಸ್ತ್ರಗಳ ಎದುರು ಬಿರ್ಸಾ ಮತ್ತು ಅವರ ಸೈನ್ಯ ಸಾಂಪ್ರದಾಯಿಕ ಯುದ್ಧ ತಂತ್ರವನ್ನೇ ಅಸ್ತ್ರವಾಗಿಸಿಕೊಂಡಿತು. ಕೇವಲ ಬಿಲ್ಲು-ಬಾಣ, ಈಟಿ ಮತ್ತು ಕೊಡಲಿಗಳನ್ನು ಹಿಡಿದು ಕಾಡಿನ ಮರೆಯಿಂದ ಗೆರಿಲ್ಲಾ ಮಾದರಿಯಲ್ಲಿ ಮಿಂಚಿನ ದಾಳಿ ನಡೆಸುವ ಮೂಲಕ ಬ್ರಿಟಿಷ್ ಸೈನ್ಯಕ್ಕೆ ಸಿಂಹಸ್ವಪ್ನವಾದರು. ಈ ಅದ್ವಿತೀಯ ಗೆರಿಲ್ಲಾ ಯುದ್ಧ ತಂತ್ರವು ಸಾಮ್ರಾಜ್ಯಶಾಹಿ ಬ್ರಿಟಿಷ್ ಪಡೆಗಳನ್ನೇ ಬೆಚ್ಚಿಬೀಳಿಸುವಂತೆ ಮಾಡಿತು.
ಸೆರೆವಾಸ & ನಿಗೂಢ ಸಾವು
ಬಿರ್ಸಾ ಮುಂಡಾ ಅವರ ಜನಪ್ರಿಯತೆ ಮತ್ತು ಹೋರಾಟ ಬ್ರಿಟಿಷ್ ಸರ್ಕಾರಕ್ಕೆ ನಡುಕ ಹುಟ್ಟಿಸಿತ್ತು. ಇವರನ್ನು ಜೀವಂತವಾಗಿ ಅಥವಾ ಕೊಂದು ಹಿಡಿದುಕೊಟ್ಟವರಿಗೆ ಆಗಿನ ಕಾಲಕ್ಕೇ 500 ರೂಪಾಯಿಗಳ ಭಾರಿ ಬಹುಮಾನ ಘೋಷಿಸಲಾಯಿತು. ಕೊನೆಗೆ, 1900ರ ಮಾರ್ಚ್ 3ರಂದು ಇವರದೇ ಜನಾಂಗದ ಕೆಲವರ ದ್ರೋಹದಿಂದಾಗಿ ಜಾಮಕೊಪೈ ಕಾಡಿನಲ್ಲಿ ಮಲಗಿದ್ದಾಗ ಬ್ರಿಟಿಷರು ಇವರನ್ನು ಬಂಧಿಸಿದರು.
ರಾಂಚಿಯ ಜೈಲಿನಲ್ಲಿ ಇಡಲಾಗಿದ್ದ ಬಿರ್ಸಾ ಮುಂಡಾ ಅವರು 1900ರ ಜೂನ್ 9ರಂದು ಕೇವಲ 25ನೇ ವಯಸ್ಸಿನಲ್ಲಿ ಹುತಾತ್ಮರಾದರು. ಬ್ರಿಟಿಷ್ ಸರ್ಕಾರ ಅವರು ಕಾಲರಾ ಕಾಯಿಲೆಯಿಂದ ಮೃತಪಟ್ಟರು ಎಂದು ಪ್ರಕಟಿಸಿತಾದರೂ, ಅವರಿಗೆ ಜೈಲಿನಲ್ಲಿ ನಿಗೂಢವಾಗಿ ವಿಷ ಉಣಿಸಿ ಕೊಲ್ಲಲಾಯಿತು ಎಂಬ ಶಂಕೆಯಿದೆ.
ಬಿರ್ಸಾ ಮುಂಡಾರ ಹೋರಾಟ ಇಂದಿಗೂ ಪ್ರಸ್ತುತ ಹೇಗೆ?
ಬಿರ್ಸಾ ಮುಂಡಾ ಅಂದು ನಡೆಸಿದ ‘ಉಲಗುಲಾನ್’ ಹೋರಾಟದ ಮೂಲ ಆಶಯ “ಜಲ, ಜಮೀನು ಮತ್ತು ಜಂಗಲ್” ಮೇಲಿನ ಹಕ್ಕನ್ನು ರಕ್ಷಿಸುವುದಾಗಿತ್ತು. ಇಂದಿನ ಆಧುನಿಕ ಯುಗದಲ್ಲೂ ಜಾಗತೀಕರಣ ಮತ್ತು ಕೈಗಾರಿಕೀಕರಣದ ಹೆಸರಿನಲ್ಲಿ ಬೃಹತ್ ಯೋಜನೆಗಳಿಗಾಗಿ ಬುಡಕಟ್ಟು ಜನರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಕಾಯ್ದೆಗಳಿಗೆ ತರಲಾಗುತ್ತಿರುವ ತಿದ್ದುಪಡಿಗಳು ಆದಿವಾಸಿಗಳ ಸಾಂಪ್ರದಾಯಿಕ ಹಕ್ಕುಗಳನ್ನು ಸಂಕುಚಿತಗೊಳಿಸುತ್ತಿವೆ. ಪ್ರಕೃತಿಯನ್ನು ಕೇವಲ ಸಂಪನ್ಮೂಲವಾಗಿ ನೋಡದೆ, ಅದರೊಂದಿಗೆ ಸಾಮರಸ್ಯದಿಂದ ಬದುಕಬೇಕು ಎಂದು ಸಾರಿದ ಬಿರ್ಸಾ ಮುಂಡಾ ಅವರ ಪರಿಸರ ಕೇಂದ್ರಿತ ಚಿಂತನೆಗಳು, ಇಂದಿನ ಅರಣ್ಯ ಹಕ್ಕುಗಳ ರಕ್ಷಣೆಯ ಹೋರಾಟಗಳಿಗೆ ಅತ್ಯಂತ ಪ್ರಸ್ತುತ ಎನಿಸುತ್ತವೆ.

ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ದೇಶದ ಬುಡಕಟ್ಟು ಸಮುದಾಯಗಳು ಮುಖ್ಯವಾಹಿನಿಗೆ ಬರಲು ನಿರಂತರವಾಗಿ ಸಂಘರ್ಷ ನಡೆಸುತ್ತಲೇ ಇವೆ. ಗಣಿಗಾರಿಕೆ, ಬೃಹತ್ ಅಣೆಕಟ್ಟುಗಳು ಮತ್ತು ಅಭಿವೃದ್ಧಿ ಯೋಜನೆಗಳ ನೆಪದಲ್ಲಿ ಲಕ್ಷಾಂತರ ಆದಿವಾಸಿಗಳು ಇಂದಿಗೂ ತಮ್ಮ ಮೂಲ ನೆಲೆಗಳಿಂದ ಒಕ್ಕಲೆಬ್ಬಿಸಲ್ಪಡುತ್ತಿದ್ದಾರೆ. ಅವರಿಗೆ ಸಿಗಬೇಕಾದ ಪುನರ್ವಸತಿ, ನ್ಯಾಯಯುತ ಪರಿಹಾರಗಳು ಮರೀಚಿಕೆಯಾಗಿಯೇ ಉಳಿದಿವೆ. ದೇಶದ ಬಹುತೇಕ ಬುಡಕಟ್ಟು ಹಳ್ಳಿಗಳಲ್ಲಿ ಇಂದಿಗೂ ಗುಣಮಟ್ಟದ ಶಿಕ್ಷಣ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆ ಇದ್ದೇ ಇದೆ. ಮತ್ತೊಂದೆಡೆ, ಆಧುನಿಕತೆಯ ಅತಿರೇಕದಿಂದಾಗಿ ಅವರ ವಿಶಿಷ್ಟ ಭಾಷೆ, ಕಲೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳು ಅಳಿವಿನಂಚಿಗೆ ತಲುಪುತ್ತಿವೆ.
ಇಷ್ಟು ಸಾಲದೆಂಬಂತೆ ಇತ್ತೀಚೆಗೆ ಶುರುವಾಗಿರುವ ‘ಡಿಲಿಸ್ಟಿಂಗ್’ (Delisting) ಪ್ರಕ್ರಿಯೆ ಕೂಡ ಅವರನ್ನು ನೆಮ್ಮದಿಯಾಗಿ ನಿದ್ದೆ ಮಾಡದಂತೆ ಮಾಡುತ್ತಿದೆ. ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬುಡಕಟ್ಟು ಜನರನ್ನು ಪರಿಶಿಷ್ಟ ಪಂಗಡದ (ST) ಪಟ್ಟಿಯಿಂದ ಮತ್ತು ಮೀಸಲಾತಿ ಸೌಲಭ್ಯದಿಂದ ಹೊರಗಿಡಬೇಕು ಎಂಬ ಬೇಡಿಕೆ ಬಲವಾಗುತ್ತಿದೆ. ಇದರ ಸಾಧಕ-ಬಾಧಕಗಳನ್ನು ನೋಡುವುದಾದರೆ, ಮತಾಂತರಗೊಂಡವರು ಮೂಲ ಬುಡಕಟ್ಟು ಆಚರಣೆಗಳನ್ನು ಬಿಟ್ಟರೂ, ಶಿಕ್ಷಣ ಮತ್ತು ಆರ್ಥಿಕವಾಗಿ ಮುಂದುವರಿದು ಮೀಸಲಾತಿಯ ಹೆಚ್ಚಿನ ಸೌಲಭ್ಯ ಪಡೆಯುತ್ತಿದ್ದಾರೆ; ಇದರಿಂದಾಗಿ ಮೂಲ ಪದ್ಧತಿಯನ್ನು ಪಾಲಿಸುವ ಹಿಂದುಳಿದ ಆದಿವಾಸಿಗಳಿಗೆ ಅನ್ಯಾಯವಾಗುತ್ತಿದೆ ಎಂಬುದು ಇದನ್ನು ಬೆಂಬಲಿಸುವವರ ವಾದ. ಆದರೆ, ಸಂವಿಧಾನದ 342ನೇ ವಿಧಿಯ ಪ್ರಕಾರ, ಎಸ್ಟಿ (ST) ಸ್ಥಾನಮಾನವನ್ನು ಸಾಮಾಜಿಕ, ಭೌಗೋಳಿಕ ಹಿಂದುಳಿದಿರುವಿಕೆ ಮತ್ತು ಜನಾಂಗೀಯತೆಯ ಆಧಾರದ ಮೇಲೆ ನೀಡಲಾಗಿದೆಯೇ ಹೊರತು ಧರ್ಮದ ಆಧಾರದ ಮೇಲಲ್ಲ. ಮತಾಂತರಗೊಂಡ ಮಾತ್ರಕ್ಕೆ ಅವರ ಸಾಮಾಜಿಕ ಅಥವಾ ಆರ್ಥಿಕ ಸ್ಥಿತಿ ತಕ್ಷಣವೇ ಸುಧಾರಿಸುವುದಿಲ್ಲವಾದ್ದರಿಂದ, ಅವರನ್ನು ಪಟ್ಟಿಯಿಂದ ತೆಗೆದುಹಾಕುವುದು ಸಂವಿಧಾನದ ಆಶಯಕ್ಕೆ ವಿರುದ್ಧ ಮತ್ತು ಇದು ಬುಡಕಟ್ಟು ಸಮಾಜದ ಒಗ್ಗಟ್ಟನ್ನು ಒಡೆಯುವ ತಂತ್ರ ಎಂಬುದು ವಿರೋಧಿಸುವವರ ಬಲವಾದ ವಾದ.
ಇದನ್ನೂ ಓದಿ: ಆದಿವಾಸಿಗಳ ಅಸ್ಮಿತೆಯ ಹರಿಕಾರ ಬಿರ್ಸಾ ಮುಂಡಾ
ಕೇವಲ ಇಪ್ಪತ್ತೈದು ವರ್ಷಗಳಲ್ಲಿ ಇಡೀ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನೇ ನಡುಗಿಸಿದ ಬಿರ್ಸಾ ಮುಂಡಾ ಅವರ ಹೋರಾಟ ಮತ್ತು ಬಲಿದಾನ ವ್ಯರ್ಥವಾಗಲಿಲ್ಲ. ಅವರ ತೀವ್ರ ಪ್ರತಿರೋಧಕ್ಕೆ ಹೆದರಿದ ಬ್ರಿಟಿಷ್ ಸರ್ಕಾರ, ಆದಿವಾಸಿಗಳ ಆಕ್ರೋಶ ತಣಿಸಲು 1908 ರಲ್ಲಿ ‘ಛೋಟಾನಾಗ್ಪುರ ಗೇಣಿದಾರಿ ಕಾಯ್ದೆ’ (CNTA) ತಂದು ಮೂಲನಿವಾಸಿಗಳ ಭೂಮಿಯನ್ನು ರಕ್ಷಿಸಬೇಕಾಯಿತು. ಆದರೆ, ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ದೇಶದ ವಿವಿಧ ಭಾಗಗಳಲ್ಲಿ ಇಂದಿಗೂ ಬುಡಕಟ್ಟು ಸಮುದಾಯಗಳು ಅದೇ ಜಲ-ಜಮೀನು ಹಾಗೂ ಅಸ್ಮಿತೆಯ ಬಿಕ್ಕಟ್ಟನ್ನು ಎದುರಿಸುತ್ತಿರುವುದು ವಿಷಾದನೀಯ.
ಮಧ್ಯ ಭಾರತದ ಸಾಂತಾಲ್, ಹೋ, ಓರಾನ್, ಗೊಂಡ ಬುಡಕಟ್ಟುಗಳಿಂದ ಹಿಡಿದು ನಮ್ಮ ಕರ್ನಾಟಕದ ಜೇನುಕುರುಬ, ಕಾಡುಕುರುಬ ಮತ್ತು ಸೋಲಿಗ ಸಮುದಾಯಗಳವರೆಗೆ ಇಂದಿಗೂ ಒಕ್ಕಲೆಬ್ಬಿಸುವಿಕೆ ಮತ್ತು ಹಕ್ಕುಗಳ ವಂಚನೆಯ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಇದರ ನಡುವೆ ಕೇಳಿಬರುತ್ತಿರುವ ‘ಡಿಲಿಸ್ಟಿಂಗ್’ ಚರ್ಚೆಗಳು ಆದಿವಾಸಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. ಪ್ರಕೃತಿಯನ್ನು ನಂಬಿ ಬದುಕುವ ಮೂಲನಿವಾಸಿಗಳ ಸಾಂಸ್ಕೃತಿಕ ಅಸ್ಮಿತೆಯನ್ನು ಗೌರವಿಸುವ, ಅವರ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸುವ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆತ್ಮಗೌರವದ ಬದುಕು ನೀಡುವ ಪ್ರಾಮಾಣಿಕ ಸಂಕಲ್ಪವನ್ನು ಇಂದಿನ ಆಡಳಿತ ವ್ಯವಸ್ಥೆ ಮತ್ತು ಸಮಾಜ ಮಾಡಬೇಕಾಗಿದೆ. ಅದೇ ನಾವು ಆ ‘ಧರತಿ ಆಬಾ’ಗೆ ಸಲ್ಲಿಸುವ ನಿಜ ಗೌರವ.





