ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಮೂಲಕ ವಿವಿಧ ಬಲಗೈ ಸಮುದಾಯಗಳ ಹಿತಾಸಕ್ತಿಗೆ ಎಲ್ಲರೂ ಬದ್ಧರಾಗಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಜಿಲ್ಲೆಯ ವಿವಿಧ ಸಮುದಾಯಗಳ ಮುಖಂಡರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಗಲಕೋಟೆ ನಗರದ ನವನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ನಡೆದ ಸಭೆಯಲ್ಲಿ ಚಲವಾದಿ, ಚನ್ನದಾಸರ ಹಾಗೂ ಹೊಲೆದಾಸರ ಸಮುದಾಯಗಳ ಮುಖಂಡರು ಭಾಗವಹಿಸಿ, ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಚರ್ಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಸಂಗಿ ಅವರು ಸಂಘಟಿತ ಪ್ರಯತ್ನದ ಮೂಲಕ ಸಮುದಾಯಗಳ ಹಕ್ಕು ಹಾಗೂ ಹಿತಾಸಕ್ತಿಗಾಗಿ ಧ್ವನಿ ಎತ್ತುವ ಅಗತ್ಯವಿದೆ ಎಂದು ತಿಳಿಸಿದರು.
ಜಮಖಂಡಿ ತಾಲೂಕಿನ ರವೀಂದ್ರ ಬಬಲೇಶ್ವರ ಮಾತನಾಡಿ, ಕೆಲವು ಗೆಳೆಯರ ಸಹಕಾರದೊಂದಿಗೆ ಜಮಖಂಡಿ ತಾಲೂಕಿನಲ್ಲಿ ಖಾಸಗಿಯಾಗಿ ನಿಖರವಾದ ಸಮೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಮುದಾಯಗಳ ವಾಸ್ತವ ಸ್ಥಿತಿ ಹಾಗೂ ಜನಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವುದು ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದರು.
This video cannot be played in your browser. Open the video directly
ಶಿರೂರಿನ ನ್ಯಾಯವಾದಿ ಯಮನಪ್ಪ ಚಲವಾದಿ ಅವರು ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು. ಚನ್ನದಾಸರ ಸಮಾಜದ ಮುಖಂಡ ಎಚ್.ಕೆ. ದಾಸರ ಮಾತನಾಡಿ, “ನಮ್ಮದು ಸಣ್ಣ ಸಮಾಜವಾಗಿದ್ದು, ಎಲ್ಲರೂ ಕಡೆಗಣಿಸುತ್ತಿದ್ದಾರೆ. ಈವರೆಗೂ ನಮ್ಮ ಸಮಾಜದ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಆಯ್ಕೆಯಾಗಿಲ್ಲ. ನಮ್ಮನ್ನು ಅತಂತ್ರ ಸ್ಥಿತಿಯಲ್ಲಿ ಇಡಬೇಡಿ” ಎಂದು ಮನವಿ ಮಾಡಿದರು.
ಬನಹಟ್ಟಿಯ ಶಿವಲಿಂಗ ಗುಬ್ಬೆವಾಡ ಅವರು ಮಾತನಾಡಿ, ಸಮಾಜದ ಹಿತಾಸಕ್ತಿಗಾಗಿ ತಾವು ಸದಾ ಬದ್ಧರಾಗಿರುವುದಾಗಿ ತಿಳಿಸಿದರು. ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಶೀತಲ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಒಕ್ಕೂಟದ ಉದ್ದೇಶಗಳು, ಸಂಘಟನೆಯ ಅಗತ್ಯತೆ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬೀಳಗಿಯ ಬಸವರಾಜ ಹಳ್ಳದಮನಿ, ಹುನಗುಂದದ ಗ್ರಾಮೀಣ ಅಧ್ಯಕ್ಷ ಸಂಗಮೇಶ ಚಲವಾದಿ, ಪರಸುರಾಮ ಕಾಳೆ, ರಾಜು ಈಟಿ, ಬಾಗಲಕೋಟೆಯ ಶೀಲಾದೇವಿ ಗೆಜ್ಜಗಟ್ಟಿ, ಮಹೇಶ ಬೀಳಗಿ, ಅಂಬರೀಶ ಹಿರೇಮನಿ, ನ್ಯಾಯವಾದಿ ಬಾಬಾಸಾಹೇಬ ಕಾಂಬಳೆ, ಮನೋಹರ ಗರಸಂಗಿ, ಗ್ಯಾನಪ್ಪ ನಾರಾಯಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ, ಬದಾಮಿ, ಹುನಗುಂದ, ಇಳಕಲ್, ಬೀಳಗಿ, ಮುಧೋಳ, ಜಮಖಂಡಿ, ತೇರದಾಳ ಹಾಗೂ ರಬಕವಿ-ಬನಹಟ್ಟಿ ತಾಲೂಕುಗಳಿಂದ ಚಲವಾದಿ, ಚನ್ನದಾಸರ ಹಾಗೂ ಹೊಲೆದಾಸರ ಸಮುದಾಯಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.





