ವಿದೇಶಗಳಲ್ಲಿರುವ ಭಾರತೀಯ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಆಘಾತಕಾರಿ ಅಂಕಿಅಂಶಗಳು ಹೊರಬಿದ್ದಿದೆ. ಕಳೆದ ಐದು ವರ್ಷಗಳಲ್ಲಿ ಪ್ರತಿದಿನ ಸರಾಸರಿ 20ಕ್ಕೂ ಹೆಚ್ಚು ಕಾರ್ಮಿಕರು ವಿದೇಶಿ ನೆಲದಲ್ಲಿ ಮೃತಪಟ್ಟಿದ್ದಾರೆ. ಇವುಗಳಲ್ಲಿ ಹೆಚ್ಚಿನ ಸಾವುಗಳು ಗಲ್ಫ್ ರಾಷ್ಟ್ರಗಳಲ್ಲಿ ಸಂಭವಿಸಿವೆ ಎಂದು ಕೇಂದ್ರ ಸರ್ಕಾರದ ದತ್ತಾಂಶ ವಿವರಿಸಿದೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಲಿಖಿತ ಮಾಹಿತಿ ನೀಡಿದ್ದಾರೆ. ಅದರಂತೆ, 2021 ಮತ್ತು 2025ರ ನಡುವೆ ವಿದೇಶಗಳಲ್ಲಿ ಮೃತಪಟ್ಟ ಒಟ್ಟು ಭಾರತೀಯ ಕಾರ್ಮಿಕರ ಸಂಖ್ಯೆ 37,740ಕ್ಕೆ ತಲುಪಿದೆ. ಆದಾಗ್ಯೂ, ಈ ಸಾವುಗಳ ಹಿಂದಿನ ಕಾರಣಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸರ್ಕಾರ ಒದಗಿಸಲಾಗಿಲ್ಲ.
ದತ್ತಾಂಶದ ಪ್ರಕಾರ, 2021ರಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಆ ವರ್ಷ, 8,234 ಭಾರತೀಯ ಕಾರ್ಮಿಕರು ವಿದೇಶಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 2022ರಲ್ಲಿ ಈ ಸಂಖ್ಯೆ 6,614 ಕ್ಕೆ ಇಳಿಕೆಯಾಗಿದೆ. ಆದಾಗ್ಯೂ, ನಂತರದ, ಪ್ರತಿ ವರ್ಷವೂ ಸಾವುಗಳ ಸಂಖ್ಯೆ ಸ್ಥಿರವಾಗಿ ಏರಿಕೆಯಾಗಿದೆ. 2023ರಲ್ಲಿ 7,291, 2024ರಲ್ಲಿ 7,747 ಹಾಗೂ 2025ರಲ್ಲಿ 7,854 ಸಾವುಗಳು ಸಂಭವಿಸಿವೆ.
ಈ ಒಟ್ಟು ಸಾವುಗಳಲ್ಲಿ 86%ಗಿಂತ ಹೆಚ್ಚಿನ ಸಾವುಗಳು ಗಲ್ಫ್ ರಾಷ್ಟ್ರಗಳಲ್ಲಿ ಸಂಭವಿಸಿವೆ. ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ ಅತಿ ಹೆಚ್ಚು ಸಾವುಗಳು ದಾಖಲಾಗಿದ್ದು, ಐದು ವರ್ಷಗಳಲ್ಲಿ ಕ್ರಮವಾಗಿ 12,380 ಮತ್ತು 11,757 ಕಾರ್ಮಿಕರು ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ಕುವೈತ್ (3,890), ಓಮನ್ (2,821), ಮಲೇಷ್ಯಾ (1,915) ಹಾಗೂ ಕತಾರ್ (1,760) ಇವೆ.
ಇದೇ ಅವಧಿಯಲ್ಲಿ, ವಿದೇಶಗಳಲ್ಲಿರುವ ಭಾರತೀಯ ನಿಯೋಗಗಳು ಭಾರತೀಯ ಪ್ರಜೆಗಳ ಮೇಲಿನ ದೌರ್ಜನ್ಯ, ಶೋಷಣೆ ಹಾಗೂ ಕೆಲಸದ ಸ್ಥಳದ ದೂರುಗಳಿಗೆ ಸಂಬಂಧಿಸಿದಂತೆ ಒಟ್ಟು 80,985 ದೂರುಗಳನ್ನು ಸ್ವೀಕರಿಸಿವೆ. ಈ ಪೈಕಿ ಯುಎಇಯಿಂದ ಅತಿ ಹೆಚ್ಚು ಅಂದರೆ 16,965 ದೂರುಗಳು ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ಕುವೈತ್ (15,234), ಓಮನ್ (13,295) ಹಾಗೂ ಸೌದಿ ಅರೇಬಿಯಾ (12,988) ಇವೆ.
ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (CHRI) ಸಂಸ್ಥೆಯು ಮಾಹಿತಿ ಹಕ್ಕು (RTI) ಪ್ರತಿಕ್ರಿಯೆಗಳು ಮತ್ತು ಸಂಸದೀಯ ದಾಖಲೆಗಳನ್ನು ವಿಶ್ಲೇಷಣೆ ಮಾಡಿದ್ದು, ಅದರಂತೆ, 2012 ಮತ್ತು 2018ರ ನಡುವೆ ಗಲ್ಫ್ ಪ್ರದೇಶದಲ್ಲಿ ಪ್ರತಿದಿನ ಸರಾಸರಿ 10 ಭಾರತೀಯ ಕಾರ್ಮಿಕರು ಮೃತಪಡುತ್ತಿದ್ದರು. ಆ ಏಳು ವರ್ಷಗಳಲ್ಲಿ ಬಹ್ರೇನ್, ಓಮನ್, ಕತಾರ್, ಕುವೈತ್, ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿ ಕನಿಷ್ಠ 24,570 ಭಾರತೀಯ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಇದಕ್ಕೆ ಹೋಲಿಸಿದರೆ, ಇತ್ತೀಚಿನ ಸರ್ಕಾರಿ ದತ್ತಾಂಶವು 2021 ಮತ್ತು 2025ರ ನಡುವೆ (ಬಹ್ರೇನ್ ಹೊರತುಪಡಿಸಿ) ಗಲ್ಫ್ ರಾಷ್ಟ್ರಗಳಲ್ಲಿ 32,608 ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತೋರಿಸುತ್ತದೆ. ಅಂದರೆ, ಕಳೆದ ಐದು ವರ್ಷಗಳಲ್ಲಿ ಗಲ್ಫ್ ರಾಷ್ಟ್ರಗಳಲ್ಲಿಯೇ ಪ್ರತಿದಿನ ಸರಾಸರಿ 18 ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ.
ಗಲ್ಫ್ ರಾಷ್ಟ್ರಗಳನ್ನು ಹೊರತುಪಡಿಸಿ, ಮಲೇಷ್ಯಾ ಮತ್ತು ಮಾಲ್ಡೀವ್ಸ್‌ನಲ್ಲಿಯೂ ಗಮನಾರ್ಹ ಸಂಖ್ಯೆಯ ಕಾರ್ಮಿಕ ಸಮಸ್ಯೆಗಳು ದಾಖಲಾಗಿವೆ. ಈ ರಾಷ್ಟ್ರಗಳಲ್ಲಿ ಕ್ರಮವಾಗಿ 8,333 ಮತ್ತು 2,981 ದೂರುಗಳು ಬಂದಿವೆ.
ಇದೇ ವೇಳೆ, ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಕಡಿಮೆ ಇದ್ದರೂ, ಅಲ್ಲಿಂದ ಬರುವ ದೂರುಗಳ ಸಂಖ್ಯೆ 2024 ಮತ್ತು 2025ರಲ್ಲಿ ತೀವ್ರವಾಗಿ ಏರಿಕೆಯಾಗಿದೆ. ಮ್ಯಾನ್ಮಾರ್‌ನಲ್ಲಿ ಐದು ವರ್ಷಗಳಲ್ಲಿ ಯಾವುದೇ ಕಾರ್ಮಿಕರ ಸಾವು ವರದಿಯಾಗಿಲ್ಲವಾದರೂ, ಅಲ್ಲಿಂದ 2,548 ದೂರುಗಳು ದಾಖಲಾಗಿವೆ. ಇದರಲ್ಲಿ 2025ರಲ್ಲೇ 1,863 ದೂರುಗಳು ಬಂದಿವೆ. ಕಾಂಬೋಡಿಯಾದಲ್ಲಿ 31 ಸಾವುಗಳು ಸಂಭವಿಸಿದ್ದು, 2,531 ದೂರುಗಳು ದಾಖಲಾಗಿವೆ. ಲಾವೋಸ್‌ನಲ್ಲಿ 11 ಸಾವುಗಳು ಮತ್ತು 2,416 ದೂರುಗಳು ದಾಖಲಾಗಿವೆ.
ಕಾರ್ಮಿಕ ಸಮಸ್ಯೆಗಳ ವರದಿಗಳು ಕಳೆದ ಐದು ವರ್ಷಗಳಲ್ಲಿ ಸ್ಥಿರವಾಗಿ ಹೆಚ್ಚಾಗಿದ್ದು, 2021 ರಲ್ಲಿ 11,632 ಇದ್ದ ದೂರುಗಳ ಸಂಖ್ಯೆ 2025ರಲ್ಲಿ 22,479ಕ್ಕೆ ಏರಿಕೆ ಕಂಡಿವೆ.
ಈ ಲೇಖನ ಓದಿದ್ದೀರಾ?: ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಚೀನಾ – ಪಾಕಿಸ್ತಾನದ 5 ಅಂಶಗಳ ಮಹತ್ವದ ಪ್ರಸ್ತಾವನೆ
ಸಚಿವಾಲಯದ ಉತ್ತರದ ಪ್ರಕಾರ, ವಿದೇಶಗಳಲ್ಲಿ ಭಾರತೀಯ ಕಾರ್ಮಿಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ವೇತನ ವಿಳಂಬ, ಪಾವತಿ ಹಾಗೂ ಸೇವಾ ಅವಧಿ ಮುಗಿದ ನಂತರ ಸಿಗಬೇಕಾದ ಸೌಲಭ್ಯಗಳ ವಿಳಂಬಗಳಾಗಿವೆ.
ಉದ್ಯೋಗದಾತರು ಅನಧಿಕೃತವಾಗಿ ಪಾಸ್‌ಪೋರ್ಟ್‌ಗಳನ್ನು ಇಟ್ಟುಕೊಳ್ಳುವುದು, ರಜೆ ನೀಡದಿರುವುದು, ಹೆಚ್ಚುವರಿ ವೇತನವಿಲ್ಲದೆ ದೀರ್ಘಕಾಲ ಕೆಲಸ ಮಾಡಿಸಿಕೊಳ್ಳುವುದು ಹಾಗೂ ಕಂಪನಿಗಳ ಹಠಾತ್ ಮುಚ್ಚುವಿಕೆ ಮೂಲಕ ಉದ್ಯೋಗದಿಂದ ಹೊರಹಾಕುವುದು ಸಾಮಾನ್ಯ ದೂರುಗಳಾಗಿವೆ. ಅಲ್ಲದೆ, ಕೆಟ್ಟ ನಡವಳಿಕೆ, ಕಾನೂನುಬದ್ಧ ಕಾರ್ಮಿಕ ಹಕ್ಕುಗಳ ನಿರಾಕರಣೆ ಹಾಗೂ ಒಪ್ಪಂದ ಮುಗಿದ ನಂತರ ಭಾರತಕ್ಕೆ ಮರಳಲು ಅಗತ್ಯವಾದ ‘ಎಕ್ಸಿಟ್ ವೀಸಾ’ ನೀಡಲು ನಿರಾಕರಿಸುವ ಪ್ರಕರಣಗಳೂ ಇವೆ ಎಂಬುದನ್ನು ಸಚಿವಾಲಯ ಗಮನಿಸಿದೆ.
ಈ ಸಮಸ್ಯೆಯನ್ನು ಬಗೆಹರಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಸಿಂಗ್, “ವಿದೇಶಗಳಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಅತ್ಯಂತ ಆದ್ಯತೆ ನೀಡಲಾಗುತ್ತಿದೆ. ಯಾವುದೇ ಭಾರತೀಯ ಪ್ರಜೆ ಸಂಕಷ್ಟದಲ್ಲಿರುವ ಬಗ್ಗೆ ಮಾಹಿತಿ ಬಂದ ಕೂಡಲೇ, ವಿದೇಶಗಳಲ್ಲಿರುವ ಭಾರತೀಯ ಮಿಷನ್‌ಗಳು ತಕ್ಷಣವೇ ಆಯಾ ದೇಶದ ವಿದೇಶಾಂಗ ಸಚಿವಾಲಯಗಳು, ಕಾರ್ಮಿಕ ಇಲಾಖೆಗಳು ಹಾಗೂ ಕಾನೂನು ಜಾರಿ ಸಂಸ್ಥೆಗಳನ್ನು ಸಂಪರ್ಕಿಸುತ್ತವೆ” ಎಂದು ಹೇಳಿದ್ದಾರೆ.
“ವಿದೇಶಗಳಲ್ಲಿರುವ ಭಾರತೀಯ ಕಾರ್ಮಿಕರಿಗೆ ಕಾನ್ಸುಲರ್ ನೆರವು ಮತ್ತು ಕಾನೂನು ಸಹಾಯ ನೀಡುವುದರ ಜೊತೆಗೆ, ಅವರ ಹಿತಾಸಕ್ತಿ ಕಾಪಾಡಲು ಭಾರತ ಸರ್ಕಾರವು ಹಲವಾರು ದೇಶಗಳೊಂದಿಗೆ ಕಾರ್ಮಿಕ ಮತ್ತು ಮಾನವಶಕ್ತಿ ಸಹಕಾರದ ಕುರಿತ ಒಪ್ಪಂದಗಳಿಗೆ ಸಹಿ ಹಾಕಿದೆ” ಎಂದು ಅವರು ವಿವರಿಸಿದ್ದಾರೆ.



