ಎಲ್‌ಪಿಜಿ ಬುಕ್ಕಿಂಗ್ ಮಾಡಲು ಹೋಗಿ ನಿವೃತ್ತ ಸೇನಾಧಿಕಾರಿಯೊಬ್ಬ ದಶಕದ ಹಿಂದೆ ಮಾಡಿದ್ದ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ತೋಮರ್ ಎಂಬ ವ್ಯಕ್ತಿ 2013ರಲ್ಲಿ ಹೆಂಡತಿಯ ಹತ್ಯೆ ಮಾಡಿ ಆತ್ಮಹತ್ಯೆಯ ಎಂದು ಬಿಂಬಿಸಿದ್ದ. ಶ್ವೇತಾ ಸಿಂಗ್ ಕೊಲೆಯಾದ ಮಹಿಳೆ. ಆತ್ಮಹತ್ಯೆ ಎಂದು ಬಿಂಬಿಸಿದ ಕೃತ್ಯವೀಗ ʼಕೊಲೆʼ ಎಂದು ತನಿಖೆಗಳಿಂದ ಬಹಿರಂಗಗೊಂಡಿದೆ.
ಅಚ್ಚರಿಯೆಂದರೆ ಎಲ್‌ಪಿಜಿ ಬುಕ್ ಮಾಡಲು ಹೋಗಿ ಸಂದೀಪ್ ತೋಮರ್ ಮಧ್ಯ ಪ್ರದೇಶದ ಪಂಡುರ್ನ ಜಿಲ್ಲೆಯಲ್ಲಿ ಪೊಲೀಸರ ಬಲೆಗೆ ಸಿಲುಕಿದ್ದಾನೆ. 2013ರಲ್ಲಿ ಅಬೋಹಾರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಪತ್ನಿ ಶ್ವೇತಾ ಸಿಂಗ್ ಹತ್ಯೆ ಮಾಡಿದ್ದ ತೋಮರ್, ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತನ್ನ ಹೀನ ಕೃತ್ಯ ಮರೆಮಾಚಿದ್ದ. ಸುಧೀರ್ಘ ತನಿಖೆಯ ನಂತರ ಇದು ಆತ್ಮಹತ್ಯೆಯಲ್ಲ, ಇದೊಂದು ಯೋಜಿತ ಕೊಲೆ ಎಂಬ ಸತ್ಯ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2014ರಲ್ಲಿ ಪ್ರಾಯೋಗಿಕ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಆದೇಶ ಹೊರಡಿಸಿತ್ತು. 2019ರಲ್ಲಿ ಜಾಮೀನಿನ ಮೂಲಕ ತೋಮರ್ ಹೊರಬಂದಿದ್ದ. 2022ರಲ್ಲಿ ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯವು ಜೀವಾವಧಿ ತೀರ್ಪನ್ನು ಎತ್ತಿ ಹಿಡಿದಿತ್ತು. ಆ ನಂತರ ತಲೆಮರೆಸಿಕೊಂಡಿದ್ದ ತೋಮರ್ 2022ರಿಂದ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅಂದಿನಿಂದ ತನ್ನ ವಿಳಾಸವನ್ನು ಗೌಪ್ಯವಾಗಿರಿಸಿದ್ದ ಸಂದೀಪ್ ತೋಮರ್ ನಿರಂತರವಾಗಿ ತನ್ನ ವಾಸಸ್ಥಳ ಬದಲಿಸುತ್ತಿದ್ದ ಎಂದು ತಿಳಿದು ಬಂದಿದೆ.
2024ರಲ್ಲಿ ತೋಮರ್‌ನ ಮಾವ ಅಂದರೆ ಹತ್ಯೆಯಾದ ಶ್ವೇತಾ ಸಿಂಗ್ ತಂದೆ, ರಾಮ್ ನರೇಶ್ ಅಪರಾಧಿಯನ್ನು ಬಂಧಿಸಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಪಂಜಾಬ್‌ನ ಪೊಲೀಸ್ ಮಹಾ ನಿರ್ದೇಶಕರು ಏಪ್ರಿಲ್ 8ರ ಒಳಗಾಗಿ ತೋಮರ್‌ನ ಕಸ್ಟಡಿಗೆ ತೆಗೆದುಕೊಂಡ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸಬೇಕೆಂದು ಆದೇಶಿಸಿತು.
ಫಜಿಲ್ಕಾ ಹಿರಿಯ ಪೊಲೀಸ್ ವರಿಷ್ಟಾಧಿಕಾರಿ ಈ ಪ್ರಕರಣದ ತನಿಖೆಗೆ ಎಸ್‌ಐಟಿ ತಂಡ ರಚನೆ ಮಾಡಿ ತೋಮರ್‌ನ ಬಂಧನ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದರು.
ಪ್ರಕರಣಕ್ಕೆ ಮಹತ್ವದ ತಿರುವು ತಂದದ್ದು ಎಲ್‌ಪಿಜಿ ಬುಕ್ಕಿಂಗ್!
ತೋಮರ್‌ನ ಪಾನ್ ಕಾರ್ಡ್ ಸಂಯೋಜಿತ ಬ್ಯಾಂಕ್ ದಾಖಲೆಗಳ ಜಾಡು ಹಿಡಿದ ಪೊಲೀಸರಿಗೆ ಆತ ಎಲ್‌ಪಿಜಿ ಸಿಲಿಂಡರ್ ಕೊಳ್ಳಲು ಬಳಸುತ್ತಿದ್ದ ಬ್ಯಾಂಕ್ ಅಕೌಂಟ್‌ನ ಮಾಹಿತಿ ಲಭಿಸಿದೆ. ಇದೇ ಜಾಡು ಹಿಡಿದು ಹೊರಟ ಪೊಲೀಸರು ಆತನ ವಾಸಸ್ಥಳ ಮಧ್ಯಪ್ರದೇಶವೆಂದು ತಿಳಿದು ಬಂದಿದೆ.
ತನಿಖಾ ತಂಡ ಒದಗಿಸಿದ ಮಾಹಿತಿಯ ಪ್ರಕಾರ ತೋಮರ್ ಪಂಡೂರ್ನದ ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಸಂಪರ್ಕ ಪಡೆದಿದ್ದ ಎಂಬ ವಿಷಯವನ್ನು ಆತನ ಬ್ಯಾಂಕ್ ಖಾತೆಯ ಮಾಹಿತಿ ಕೆದಕಿದಾಗ ತಿಳಿದು ಬಂದಿದೆ. ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿದ ಅಧಿಕಾರಿಗಳಿಗೆ ಏಜೆನ್ಸಿ ಅಪರಾಧಿಯ ವಿಳಾಸವನ್ನು ಒದಗಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ಪಂಡೂರ್ನದ ಹೆಚ್ಚುವರಿ ಪೊಲೀಸ್ ನಿರ್ದೇಶಕರು ಅಫರಾಧಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ಫಜಿಲ್ಕಾ ಕೋರ್ಟಿಗೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುವುದು ಎಂದಿದ್ದಾರೆ.




