ರೂಪದರ್ಶಿ ಹಾಗೂ 1997ರ ‘ಮಿಸ್ ಇಂಡಿಯಾ’ ವಿಜೇತೆ ನಫೀಸಾ ಜೋಸೆಫ್ ಅವರ 2004ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಖಂಡೂಜಾ ಅವರನ್ನು ದೋಷಮುಕ್ತಗೊಳಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಆತನ ವಿರುದ್ಧ ಪ್ರಕರಣದ ವಿಚಾರಣೆ ಮುಂದುವರಿಸಲು ಸಾಕಷ್ಟು ಆಧಾರಗಳಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಖಂಡೂಜಾ ಮದುವೆಯಾಗಲು ನಿರಾಕರಿಸಿದ ಬಳಿಕ ನಫೀಸಾ ಜೋಸೆಫ್ ಆತ್ಮಹತ್ಯೆಗೆ ಶರಣಾಗಿದ್ದರು.
ನ್ಯಾಯಮೂರ್ತಿ ಎಂ.ಎಂ. ಸತ್ಯೆ ಅವರಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ಗುರುವಾರ ಖಂಡೂಜಾನ ಅರ್ಜಿಯನ್ನು ವಜಾಗೊಳಿಸಿದೆ. ಆರೋಪಗಳು ‘ಆತ್ಮಹತ್ಯೆಗೆ ದುಷ್ಪ್ರೇರಣೆ’ ನೀಡಿದ ವ್ಯಾಪ್ತಿಗೆ ಬರುತ್ತವೆಯೇ ಎಂಬುದನ್ನು ವಿಚಾರಣೆಯ ಹಂತದಲ್ಲಿ ಮಾತ್ರ ನಿರ್ಧರಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. “ಬಲವಾದ ಅನುಮಾನವು ಪುರಾವೆಯ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ನಿಜ, ಆದರೆ ಈ ಬಗ್ಗೆ ವಿಚಾರಣೆಯ ಹಂತದಲ್ಲಿಯೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಪಾಲಿ ಹಿಲ್ ನಿವಾಸಿಯಾಗಿರುವ, ವಾಹನಗಳ ಬಿಡಿಭಾಗಗಳ ತಯಾರಕ ಮತ್ತು ರಫ್ತುದಾರ ಗೌತಮ್ ಖಂಡೂಜಾ (ಈಗ 54 ವರ್ಷ) 2003ರಲ್ಲಿ ನಫೀಸಾ ಅವರನ್ನು ಪ್ರೀತಿಸಲು ಶುರುಮಾಡಿದಾಗ ಆತನಿಗೆ 31 ವರ್ಷ ವಯಸ್ಸಾಗಿತ್ತು. ಆಗ ನಫೀಸಾಗೆ 24 ವರ್ಷ. ಈ ಜೋಡಿ ಮೇ 2004 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.
ಪೊಲೀಸರ ಮಾಹಿತಿಯ ಪ್ರಕಾರ, ಖಂಡೂಜಾ ತಾನು ತನ್ನ ಪತ್ನಿ ನೌಶಿನ್ ಖಾನ್‌ಗೆ ವಿಚ್ಛೇದನ ನೀಡಿದ್ದೇನೆ ಎಂದು ನಫೀಸಾಗೆ ಹೇಳಿದ್ದ. ಆದರೆ, ಆತ ಇನ್ನೂ ವಿಚ್ಛೇದನ ಪಡೆದಿಲ್ಲ ಎಂದು ಆತನ ತಾಯಿ ನಫೀಸಾಗೆ ತಿಳಿಸಿದಾಗ ಇಬ್ಬರ ನಡುವೆ ಬಿರುಕು ಮೂಡಿತ್ತು. ಈ ವೇಳೆ ವಿಚ್ಛೇದನದ ಪತ್ರಗಳನ್ನು ತೋರಿಸುವಂತೆ ನಫೀಸಾ ಪಟ್ಟು ಹಿಡಿದರು. ಆದರೆ ಪತ್ರಗಳನ್ನು ನೀಡಲು ನಿರಾಕರಿಸಿದ ಖಂಡೂಜಾ, ನಫೀಸಾಗೆ ಅತಿಯಾದ ಕೋಪ ಬರುತ್ತದೆ ಎಂಬ ಕಾರಣ ನೀಡಿ ಮದುವೆಯನ್ನೇ ರದ್ದುಗೊಳಿಸಿದ.
ನಫೀಸಾ ಜೋಸೆಫ್ ಅವರ ಎರಡು ನಿಶ್ಚಿತಾರ್ಥಗಳು ಈ ಹಿಂದೆಯೇ ಮುರಿದುಬಿದ್ದಿದ್ದವು. ಮೂರನೇ ನಿಶ್ಚಿತಾರ್ಥವೂ ಮುರಿದುಬಿದ್ದ ಕಾರಣ ತೀವ್ರವಾಗಿ ಮನನೊಂದು ಅವರು ಜುಲೈ 29, 2004 ರಂದು ಆತ್ಮಹತ್ಯೆ ಮಾಡಿಕೊಂಡರು ಎಂದು ಖಂಡೂಜಾ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ದುಷ್ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಸ್ಟ್ 24, 2005 ರಂದು ವಿಚಾರಣಾ ನ್ಯಾಯಾಲಯವು ಆತನನ್ನು ದೋಷಮುಕ್ತಗೊಳಿಸುವ ಅರ್ಜಿಯನ್ನು ತಿರಸ್ಕರಿಸಿತ್ತು.
ಬಳಿಕ ಖಂಡೂಜಾ ಹೈಕೋರ್ಟ್ ಮೆಟ್ಟಿಲೇರಿದ್ದ. ಆತನ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಶೋಕ್ ಮುಂಡರಗಿ, “ಚಾರ್ಜ್ ಶೀಟ್‌ನಲ್ಲಿ ಖಂಡೂಜಾ ಪ್ರಚೋದನೆ, ಬೆದರಿಕೆ, ಬಲವಂತ, ಅವಮಾನ ಅಥವಾ ಉದ್ದೇಶಪೂರ್ವಕವಾಗಿ ಆತ್ಮಹತ್ಯೆಗೆ ಸಹಾಯ ಮಾಡಿದ ಯಾವುದೇ ಕೃತ್ಯವನ್ನು ಉಲ್ಲೇಖಿಸಿಲ್ಲ. ಕೇವಲ ಮದುವೆಯಾಗಲು ನಿರಾಕರಿಸಿದ್ದು ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಆಧಾರವಾಗುವುದಿಲ್ಲ” ಎಂದು ವಾದಿಸಿದ್ದರು.
ಈ ಅರ್ಜಿಯನ್ನು ಕಟುವಾಗಿ ವಿರೋಧಿಸಿದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಮನೀಶಾ ಆರ್. ಟಿಡ್ಕೆ, “ಈ ಜೋಡಿಗೆ ನಿಶ್ಚಿತಾರ್ಥವಾಗಿತ್ತು, ಮದುವೆಯ ದಿನಾಂಕ ನಿಗದಿಯಾಗಿತ್ತು ಮತ್ತು ಆಮಂತ್ರಣ ಪತ್ರಿಕೆಗಳನ್ನು ಸಹ ಹಂಚಲಾಗಿತ್ತು. ಕೊನೆ ಕ್ಷಣದಲ್ಲಿ ಆತ ಮದುವೆಯಾಗಲು ನಿರಾಕರಿಸಿದ್ದರಿಂದ ನಫೀಸಾ ತೀವ್ರವಾಗಿ ಅವಮಾನಿತರಾದರು. ತನಗೆ ಹಾಗೂ ತನ್ನ ಕುಟುಂಬಕ್ಕೆ ಅಪಖ್ಯಾತಿ ಬರುತ್ತದೆ ಎಂದು ಭಯಪಟ್ಟರು. ಆದ್ದರಿಂದ, ಆಕೆಯ ಆತ್ಮಹತ್ಯೆಗೆ ಅರ್ಜಿದಾರನೇ ನೇರ ಹೊಣೆಗಾರ” ಎಂದು ವಾದ ಮಂಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸತ್ಯೆ ಅವರು, “ಇಬ್ಬರಿಗೂ ಪರಸ್ಪರರ ಹಿಂದಿನ ಜೀವನದ ಬಗ್ಗೆ ತಿಳಿದಿತ್ತು ಎಂದು ತೋರುತ್ತದೆ. ಆದರೆ, ಅರ್ಜಿದಾರನು ಮದುವೆಯಾಗಲು ನಿರಾಕರಿಸಿದ್ದು ಮತ್ತು ವಿಚ್ಛೇದನದ ಪತ್ರಗಳನ್ನು ಒದಗಿಸದಿರುವುದು ಆಕೆಯ ತಾಳ್ಮೆಯ ಕಟ್ಟೆಯೊಡೆಯಲು ಹಾಗೂ ಇಂಥದ್ದೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಅಂತಿಮ ಕಾರಣವಾಯಿತೇ ಎಂಬುದನ್ನು ವಿಚಾರಣೆಯ ವೇಳೆ ನಿರ್ಧರಿಸಬೇಕಾಗಿದೆ” ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದರು.





