ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಸಂದರ್ಭದಲ್ಲಿ, ಅವರ ಶಾಲಾ ಶಿಕ್ಷಕ ಎಚ್.ಸಿ. ಪಟೇಲ್ ಅವರ ಸಂದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದರ ಬೆನ್ನಲ್ಲೇ, “ಮೋದಿ ಅವರಿಗೂ 76 ವರ್ಷ, ಅವರಿಗೆ ಪಾಠ ಮಾಡಿದ ಶಿಕ್ಷಕ ಪಟೇಲ್ ಅವರಿಗೂ 76 ವರ್ಷ! ಹಾಗಾದರೆ ಇಬ್ಬರೂ ಒಂದೇ ವಯಸ್ಸಿನವರಾಗಿದ್ದಾಗ ಪಟೇಲ್ ಮೋದಿಗೆ ಹೇಗೆ ಶಿಕ್ಷಕರಾಗಲು ಸಾಧ್ಯ” ಎಂಬ ಪ್ರಶ್ನೆಯೊಂದಿಗೆ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಮೇಲ್ನೋಟಕ್ಕೆ ಈ ವಾದ ಅಚ್ಚರಿ ಮೂಡಿಸಿದರೂ, ಲಭ್ಯವಿರುವ ವರದಿಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ವೈರಲ್ ಪೋಸ್ಟ್‌ನ ಈ ಪ್ರತಿಪಾದನೆ ಸಂಪೂರ್ಣ ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ.
ಪ್ರಧಾನಮಂತ್ರಿ ಕಚೇರಿಯ ಅಧಿಕೃತ ಮಾಹಿತಿಯಂತೆ ನರೇಂದ್ರ ಮೋದಿ ಅವರು 1950ರ ಸೆಪ್ಟೆಂಬರ್ 17ರಂದು ಜನಿಸಿದ್ದರು. ಅದರಂತೆ, 2026ರ ಸೆಪ್ಟೆಂಬರ್ 17ಕ್ಕೆ ಅವರಿಗೆ 76 ವರ್ಷ. ಆದರೆ, ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಅವರ ಶಿಕ್ಷಕ ಎಚ್.ಸಿ. ಪಟೇಲ್ ಅವರಿಗೆ ಈಗ 76 ವರ್ಷವಲ್ಲ, ಬದಲಿಗೆ ಅವರಿಗೆ ಸುಮಾರು 91ರಿಂದ 92 ವರ್ಷ ವಯಸ್ಸಾಗಿದೆ.
ಈ ಸತ್ಯಾಸತ್ಯತೆಗೆ ಮೊದಲ ಪುರಾವೆ; 2014ರ ಮೇ 27ರಂದು ‘ಟೈಮ್ಸ್ ಆಫ್ ಇಂಡಿಯಾ’ ಪ್ರಕಟಿಸಿದ್ದ ವರದಿ. ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ವಡನಗರದಲ್ಲಿ ನಡೆದ ಸಂಭ್ರಮದ ಕುರಿತು ಪತ್ರಿಕೆ ವರದಿ ಮಾಡಿತ್ತು. ಅಂದಿನ ವರದಿಯಲ್ಲಿ ಮೋದಿ ಅವರ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿದ್ದ ಎಚ್.ಸಿ. ಪಟೇಲ್ ಅವರ ವಯಸ್ಸನ್ನು ಸ್ಪಷ್ಟವಾಗಿ ‘79 ವರ್ಷ’ ಎಂದು ನಮೂದಿಸಿತ್ತು. 2014ರಲ್ಲೇ ಅವರಿಗೆ 79 ವರ್ಷವಾಗಿದ್ದರೆ, ಈಗ ಸುಮಾರು 11 ವರ್ಷಗಳ ನಂತರದ 2026ಕ್ಕೆ ಅವರ ವಯಸ್ಸು 91 ಅಥವಾ 92 ವರ್ಷವಾಗುತ್ತದೆ.
This video cannot be played in your browser. Open the video directly
ಅಂದರೆ, ಪ್ರಧಾನಿ ಮೋದಿ ಅವರಿಗಿಂತ ಎಚ್.ಸಿ ಪಟೇಲ್ ಅವರು ಸುಮಾರು 15 ವರ್ಷ ದೊಡ್ಡವರು.

ಇತ್ತೀಚೆಗೆ ‘ಎನ್‌ಡಿಟಿವಿ’ ನೀಡಿದ ಸಂದರ್ಶನದಲ್ಲೂ ಪಟೇಲ್ ಅವರು ತಾವು 1965ರ ಜೂನ್‌ನಿಂದ 1967ರ ಮೇ ವರೆಗೆ ವಡನಗರದ ಶಾಲೆಯಲ್ಲಿ ಮೋದಿ ಅವರಿಗೆ 10 ಮತ್ತು 11ನೇ ತರಗತಿಯಲ್ಲಿ ಪಾಠ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
1950ರಲ್ಲಿ ಹುಟ್ಟಿದ ಮೋದಿಯವರಿಗೆ 1965ರ ವೇಳೆಗೆ ಸುಮಾರು 14 ಅಥವಾ 15 ವರ್ಷ ವಯಸ್ಸಾಗಿತ್ತು. ಆ ವೇಳೆಗೆ, ಶಿಕ್ಷಕ ಪಟೇಲ್ ಅವರಿಗೆ ಸುಮಾರು 30-31 ವರ್ಷ ವಯಸ್ಸು. ಹೀಗಾಗಿ 30 ವರ್ಷದ ಶಿಕ್ಷಕರೊಬ್ಬರು 15 ವರ್ಷದ ವಿದ್ಯಾರ್ಥಿಗೆ ಪಾಠ ಮಾಡುವುದರಲ್ಲಿ ಯಾವುದೇ ಅಸಾಧ್ಯತೆ ಅಥವಾ ಗೊಂದಲವಿಲ್ಲ.
ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಮೋದಿಯವರ 76ನೇ ಜನ್ಮದಿನದ ಸಂಖ್ಯೆಯನ್ನೇ ಶಿಕ್ಷಕರ ವಯಸ್ಸಿಗೂ ಜೋಡಿಸಿ ‘ಶಿಷ್ಯನಿಗೂ 76, ಗುರುವಿಗೂ 76’ ಎಂಬ ಗೊಂದಲ ಸೃಷ್ಟಿಸಲಾಗಿದೆ.
ಒಟ್ಟಿನಲ್ಲಿ, ಪ್ರಧಾನಿ ಮೋದಿ ಮತ್ತು ಅವರ ಶಿಕ್ಷಕ ಎಚ್.ಸಿ. ಪಟೇಲ್ ಒಂದೇ ವಯಸ್ಸಿನವರು ಎಂಬ ವೈರಲ್ ದಾವೆ ಸಂಪೂರ್ಣ ಸುಳ್ಳು.
ಆದರೆ, ಎಚ್.ಸಿ ಪಟೇಲ್ ಅವರ ಹೇಳಿಕೆಯಲ್ಲಿ ವಿರೋಧಾಬಾಸ ಇರುವುದು ಮೋದಿ ಅಭಿನಯಿಸಿದ್ದರು ಎನ್ನಲಾದ ‘ಜೋಗಿದಾಸ್ ಖುಮಾನ್’ ನಾಟಕ ಮತ್ತು ಪಾತ್ರದಲ್ಲಿ. ಎಚ್.ಸಿ ಪಟೇಲ್ ಅವರು “ಶಾಲೆಯ ನಾಟಕದಲ್ಲಿ ಮೋದಿ ಜನಪದ ನಾಯಕ ಜೋಗಿದಾಸ್ ಖುಮಾನ್ ಪಾತ್ರದಲ್ಲಿ ಅಭಿನಯಿಸಿ, ಸುಮಾರು 10 ಸಾವಿರ ಪ್ರೇಕ್ಷಕರಿಂದ ಹತ್ತು ನಿಮಿಷಗಳ ಕಾಲ ಚಪ್ಪಾಳೆ ಪಡೆದಿದ್ದರು” ಎಂದು ನೆನಪಿಸಿಕೊಂಡಿದ್ದಾರೆ.
Ahmedabad, Gujarat: Teacher of Prime Minister Narendra Modi, H.C. Patel says, "I taught Narendra Modi for two years, from June 1965 to 1967 May, when he was in Classes 10 and 11. In Class 11, he would sometimes come to my house for tuition-not every day, but occasionally. There… pic.twitter.com/d7L7wCqk9N
— IANS (@ians_india) September 17, 2026
ಆದರೆ, 2001ರಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ಪ್ರಕಟಿಸಿದ್ದ ಹಳೆಯ ವರದಿಯಲ್ಲಿ ಮತ್ತೊಬ್ಬ ಶಿಕ್ಷಕ ಡಾ. ಪ್ರಹ್ಲಾದ್ಭಾಯಿ ಪಟೇಲ್ ಅವರ ಹೇಳಿಕೆ ಭಿನ್ನವಾಗಿದೆ. ಅವರ ಪ್ರಕಾರ 1965ರ ‘ಜೋಗಿದಾಸ್ ಖುಮಾನ್’ ನಾಟಕದಲ್ಲಿ ಮೋದಿ ಅವರಿಗೆ ಮೊದಲಿಗೆ ನಾಯಕ ಜೋಗಿದಾಸ್ ಪಾತ್ರ ನೀಡಲಾಗಿದ್ದರೂ, ನಂತರ ಅವರ ದೇಹದ ಮೈಕಟ್ಟಿನ ಕಾರಣದಿಂದ ಆ ಪಾತ್ರವನ್ನು ಬದಲಿಸಿ ‘ವಾಜೇಸಿಂಹ ಮಹಾರಾಜ’ ಎಂಬ ಸಣ್ಣ ಪಾತ್ರ ನೀಡಲಾಗಿತ್ತು. ಆ ವರದಿ ಪ್ರಕಾರ ಜೋಗಿದಾಸ್‌ನ ಮುಖ್ಯ ಪಾತ್ರವನ್ನು ವಿನೋದ್ ನಾಯಕ್ ಎಂಬವರು ನಿರ್ವಹಿಸಿದ್ದರು




